ಮಕ್ಕಳಲ್ಲಿ ಮಧುಮೇಹದ ಈ ಲಕ್ಷಣಗಳನ್ನೆಂದಿಗೂ ಕಡೆಗಣಿಸಬೇಡಿ

Update: 2020-09-10 18:37 GMT

ಟೈಪ್ 1 ಮಧುಮೇಹ ಅಥವಾ ಬಾಲ ಮಧುಮೇಹವು ಮಕ್ಕಳಲ್ಲಿ ಸಾಮಾನ್ಯವಾಗಿದ್ದು,ವಯಸ್ಕರಲ್ಲಿ ಅತ್ಯಂತ ಅಪರೂಪದ ಕಾಯಿಲೆಯಾಗಿದೆ. ಮಗುವಿನ ಅಥವಾ ಹದಿಹರೆಯದ ಬಾಲಕನ ಶರೀರವು ಇನ್ಸುಲಿನ್ ಪ್ರತಿರೋಧವನ್ನು ಬೆಳೆಸಿಕೊಂಡಾಗ ಅಥವಾ ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಅದು ರಕ್ತದಲ್ಲಿಯ ಸಕ್ಕರೆಯು ಚಯಾಪಚಯಗೊಳ್ಳಲು ಅವಕಾಶ ನೀಡುವುದಿಲ್ಲ. ಮಕ್ಕಳಿಗೆ ಈ ಬಾಲರೋಗದ ಲಕ್ಷಣಗಳು ಗೊತ್ತಿರುವುದಿಲ್ಲವಾದ್ದರಿಂದ ಹೆತ್ತವರು ಟೈಪ್ 1 ಮಧುಮೇಹದ ಎಚ್ಚರಿಕೆಯ ಸಂಕೇತಗಳ ಬಗ್ಗೆ ಜಾಗ್ರತರಾಗಿರಬೇಕಾಗುತ್ತದೆ. ಇಂತಹ ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ....

* ಹೆಚ್ಚಿನ ಮೂತ್ರವಿಸರ್ಜನೆ

ನಿಮ್ಮ ಮಗುವು ಎಂದಿಗಿಂತ ಹೆಚ್ಚು ಮೂತ್ರವಿಸರ್ಜನೆ ಮಾಡುತ್ತಿದ್ದರೆ ಅದರ ಹಿಂದಿನ ವೈದ್ಯಕೀಯ ಕಾರಣವನ್ನು ತಿಳಿದುಕೊಳ್ಳಲು ನೀವು ಪ್ರಯತ್ನಿಸಬೇಕಾಗುತ್ತದೆ. ಹೆಚ್ಚಿನ ಮೂತ್ರವಿಸರ್ಜನೆಯು ಮಕ್ಕಳಲ್ಲಿ ಮಧುಮೇಹದ ಮೊದಲ ಸಂಕೇತಗಳಲ್ಲೊಂದಾಗಿದೆ.

* ಹೆಚ್ಚಿನ ಬಾಯಾರಿಕೆ

ಪದೇ ಪದೇ ಮೂತ್ರವಿಸರ್ಜನೆಯಾಗುವುದರಿಂದ ಶರೀರದಲ್ಲಿಯ ದ್ರವವು ನಷ್ಟಗೊಳ್ಳುತ್ತದೆ ಮತ್ತು ದ್ರವದ ಮರುಪೂರೈಕೆಗಾಗಿ ಬಾಯಾರಿಕೆ ಉಂಟಾಗುತ್ತದೆ. ನೀರನ್ನು ಕುಡಿಯುವುದು ಒಳ್ಳೆಯ ಅಭ್ಯಾಸ ನಿಜ,ಆದರೆ ದಿಢೀರ್ ನೀರಿನ ಸೇವನೆಯನ್ನು ಹೆಚ್ಚಿಸುವುದು ಒಳ್ಳೆಯದಲ್ಲ. ನಿಮ್ಮ ಮಗುವು ಪ್ರಿಡಯಾಬಿಟಿಸ್ ಅಥವಾ ಪೂರ್ವ ಮಧುಮೇಹದ ಹಂತದಲ್ಲಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನೀವು ವೈದ್ಯರೊಂದಿಗೆ ಸಮಾಲೋಚಿಸಬೇಕಾಗುತ್ತದೆ.

* ಹಸಿವು ಹೆಚ್ಚಳ

ನಾವು ಸೇವಿಸುವ ಆಹಾರವು ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಶರೀರವು ಅದನ್ನು ವಿಭಜಿಸುವ ಮೂಲಕ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಮಧುಮೇಹಿಗಳಲ್ಲಿ ಗ್ಲುಕೋಸ್ ವಿಭಜನೆಯು ವ್ಯತ್ಯಯಗೊಳ್ಳುತ್ತದೆ ಮತ್ತು ವ್ಯಕ್ತಿಗೆ ಶಕ್ತಿಗುಂದಿದಂತಾಗುತ್ತದೆ. ಹೀಗಾಗಿ ಹಸಿವೆಯು ಹೆಚ್ಚುತ್ತದೆ ಮತ್ತು ಹೆಚ್ಚಿನ ಆಹಾರವನ್ನು ಸೇವಿಸುವಂತಾಗುತ್ತದೆ. ಮಕ್ಕಳ ಹಸಿವಿನಲ್ಲಿ ಹೆಚ್ಚಳ ಮತ್ತು ಇತರ ಎಚ್ಚರಿಕೆಯ ಸಂಕೇತಗಳಿಗೆ ಟೈಪ್ 1 ಮಧುಮೇಹ ಕಾರಣವಾಗಿರಬಹುದು.

* ಮಸುಕಾದ ದೃಷ್ಟಿ

ಮಧುಮೇಹವು ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ದ್ರವಗಳು ಕಣ್ಣಿಗೆ ಆಹಾರದಂತೆ ಕಾರ್ಯಾಚರಿಸುತ್ತವೆ. ದೃಷ್ಟಿಗೆ ಮುಖ್ಯವಾಗಿರುವ ಕಣ್ಣಿನ ಮಸೂರದ ಸುಗಮ ಹಿಗ್ಗುವಿಕೆಗೆ ಈ ದ್ರವಗಳು ನೆರವಾಗುತ್ತವೆ. ರಕ್ತದಲ್ಲಿಯ ಸಕ್ಕರೆ ಮಟ್ಟ ಅಧಿಕಗೊಂಡಾಗ ದ್ರವಗಳ ಮಟ್ಟ ಕ್ಷೀಣಿಸುತ್ತದೆ ಮತ್ತು ಇದು ದೃಷ್ಟಿಯು ಮಸುಕುಗೊಳ್ಳುವಂತೆ ಮಾಡುತ್ತದೆ. ಆದರೆ ಈ ಬದಲಾವಣೆಯು ರಕ್ತದಲ್ಲಿಯ ಸಕ್ಕರೆಯ ಮಟ್ಟಕ್ಕೆ ಅನುಗುಣವಾಗಿ ಏರಿಳಿತಗೊಳ್ಳುತ್ತಿರುತ್ತದೆ.

* ಕೆರಳುವಿಕೆ ಮತ್ತು ಮೂಡ್‌ನಲ್ಲಿ ಬದಲಾವಣೆಗಳು

ರಕ್ತದಲ್ಲಿ ಸಕ್ಕರೆ ಮಟ್ಟದ ಏರಿಳಿತಗಳು ವ್ಯಕ್ತಿಯ ಮೂಡ್ ಅಥವ ಮನಃಸ್ಥಿತಿಯ ಮೇಲೂ ಪರಿಣಾಮವನ್ನು ಬೀರುತ್ತವೆ. ಮಕ್ಕಳು ಹೆಚ್ಚಾಗಿ ಇದಕ್ಕೆ ಗುರಿಯಾಗುತ್ತಾರೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಿದ್ದಾಗ ವ್ಯಕ್ತಿಯು ಉಲ್ಲಸಿತನಾಗಿರುತ್ತಾನೆ.ಇದೇ ರೀತಿ ಸಕ್ಕರೆಯ ಮಟ್ಟ ಕುಸಿದಾಗ ಮಂಕು ಬಡಿದಂತಿರುತ್ತಾನೆ. ಸುಮ್ಮಸುಮ್ಮನೆ ಕೆರಳಬಹುದು. ಮಕ್ಕಳಲ್ಲಿ ಮೂಡ್‌ನಲ್ಲಿ ಏರಿಳಿತಗಳು ಪ್ರದರ್ಶನಗೊಂಡರೂ ಅದು ಗಮನಕ್ಕೆ ಬರದಿರಬಹುದು.

* ಬಳಲಿಕೆ

 ಮಕ್ಕಳು ಶಕ್ತಿ-ಉತ್ಸಾಹದ ಆಗರವಾಗಿರುತ್ತಾರೆ,ಆದರೆ ಟೈಪ್-1 ಮಧುಮೇಹವು ಅವರಲ್ಲಿಯ ಶಕ್ತಿ ಮಟ್ಟಗಳು ಕುಸಿಯುವಂತೆ ಮಾಡುತ್ತದೆ ಮತ್ತು ಅವರು ಬಳಲಿಕೆಯನ್ನು ಅನುಭವಿಸುತ್ತಾರೆ. ಈ ಸ್ಥಿತಿಯಲ್ಲಿ ಶರೀರವು ಸಕ್ಕರೆಯನ್ನು ಬಳಸಿಕೊಂಡಿರುವುದಿಲ್ಲ ಮತ್ತು ಶಕ್ತಿಯು ಬಿಡುಗಡೆಗೊಂಡಿರುವುದಿಲ್ಲ. ನಿಮ್ಮ ಕ್ರಿಯಾಶೀಲ ಮಗು ದಿಢೀರನೆ ಮಂಕು ಬಡಿದಂತಾಗಿ,ಚಟುವಟಿಕೆಗಳು ಕಡಿಮೆಯಾಗಿದ್ದರೆ ಮತ್ತು ನಿಶ್ಶಕ್ತಿಯ ಲಕ್ಷಣಗಳನ್ನು ತೋರಿಸುತ್ತಿದ್ದರೆ ನೀವು ಅವರನ್ನು ಮಧುಮೇಹ ಪರೀಕ್ಷೆಗೆ ಒಳಪಡಿಸುವುದು ಅಗತ್ಯವಾಗುತ್ತದೆ.

* ಹಾಸಿಗೆಯಲ್ಲಿ ಮೂತ್ರವಿಸರ್ಜನೆ

 ನಿಮ್ಮ ಮಗು ಹಿಂದೆಂದೂ ಹಾಸಿಗೆಯಲ್ಲಿ ಮೂತ್ರ ಮಾಡಿರದಿದ್ದರೆ ಮತ್ತು ಈಗ ಮೂತ್ರ ಮಾಡುವ ಘಟನೆಗಳು ದಿಢೀರಾಗಿ ಹೆಚ್ಚಾಗಿದ್ದರೆ ಅದು ಎಚ್ಚರಿಕೆಯ ಸಂಕೇತವಾಗಿರುತ್ತದೆ. ಪದೇಪದೇ ಮೂತ್ರವಿಸರ್ಜನೆ ಮಧುಮೇಹದ ಸಂಕೇತ ಎಂದು ಈಗಾಗಲೇ ಹೇಳಲಾಗಿದೆ ಮತ್ತು ಹೆಚ್ಚಿನ ಸಲ ಮಕ್ಕಳು ಹಾಸಿಗೆಯಲ್ಲಿಯೇ ಮೂತ್ರ ಮಾಡಬಹುದು.

* ಉಸಿರಿಗೆ ಹಣ್ಣಿನ ವಾಸನೆ

ಬಾಯಿಯ ಆರೋಗ್ಯವು ಶರೀರದ ಒಟ್ಟಾರೆ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಮಧುಮೇಹದ ಪ್ರಕರಣದಲ್ಲಿ ವ್ಯಕ್ತಿಯ ಉಸಿರೇ ಆತ ಮಧುಮೇಹದಿಂದ ಬಳಲುತ್ತಿದ್ದಾನೇ ಇಲ್ಲವೇ ಎನ್ನುವುದನ್ನು ತಿಳಿಸಬಹುದು. ಮಧುಮೇಹ ಸ್ಥಿತಿಯಲ್ಲಿ ಗ್ಲುಕೋಸ್‌ನ್ನು ವಿಭಜಿಸಲು ಶರೀರಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಶಕ್ತಿಯನ್ನು ಬಿಡುಗಡೆಗೊಳಿಸಲು ಅದು ಕೊಬ್ಬನ್ನು ಉಪಯೋಗಿಸಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಕೀಟೋನ್‌ಗಳು ಬಿಡುಗಡೆಗೊಳ್ಳುತ್ತವೆ ಮತ್ತು ಇವು ಉಸಿರಿಗೆ ಹಣ್ಣಿನ ವಾಸನೆಯನ್ನುಂಟು ನೀಡುತ್ತವೆ. ವಿಲಕ್ಷಣವೆನ್ನಿಸಬಹುದಾದರೂ ಮಗುವಿನ ಉಸಿರು ಹಣ್ಣಿನ ವಾಸನೆ ಬೀರುತ್ತಿದ್ದರೆ ವೈದ್ಯರ ಬಳಿಗೆ ಕರೆದೊಯ್ದು ಪರೀಕ್ಷೆ ಮಾಡಿಸುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News