ಕಬ್ಬಿಣದ ಕೊರತೆ: ನಿಮ್ಮ ಉಗುರುಗಳನ್ನು ಗಮನಿಸುತ್ತಿರಿ

Update: 2020-09-14 18:46 GMT

ಕಬ್ಬಿಣವು ನಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ. ಶರೀರದಲ್ಲಿ ಕಬ್ಬಿಣದ ಕೊರತೆಯಾದರೆೆ ಕೆಂಪು ರಕ್ತಕಣಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುವುದಿಲ್ಲ. ಕಬ್ಬಿಣವು ಶರೀರದಾದ್ಯಂತ ಆಮ್ಲಜನಕವನ್ನು ಸಾಗಿಸುವಲ್ಲಿ ಮುಖ್ಯವಾಗಿರುವ ಹಿಮೊಗ್ಲೋಬಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಬ್ಬಿಣ ಕೊರತೆ ರಕ್ತಹೀನತೆಯು ವಿಶ್ವಾದ್ಯಂತ ಅನಿಮಿಯಾದ ಹೆಚ್ಚು ಸಾಮಾನ್ಯ ವಿಧಗಳಲ್ಲೊಂದಾಗಿದೆ. ಶರೀರದಲ್ಲಿ ಕಬ್ಬಿಣದ ಮಟ್ಟದಲ್ಲಿ ತೀವ್ರ ಕುಸಿತವುಂಟಾದಾಗ ಹಲವಾರು ಲಕ್ಷಣಗಳು ಅನುಭವವಾಗಬಹುದು. ನಿರಂತರ ಬಳಲಿಕೆಯು ಕಬ್ಬಿಣದ ಕೊರತೆಯನ್ನು ಸೂಚಿಸುವ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ.

ಇಂತಹ ಸ್ಥಿತಿಯಲ್ಲಿ ನಮ್ಮ ಶರೀರದ ವಿವಿಧ ಅಂಗಾಂಶಗಳಿಗೆ ಕಡಿಮೆ ಆಮ್ಲಜನಕವು ತಲುಪುತ್ತದೆ ಮತ್ತು ಅವುಗಳನ್ನು ಶಕ್ತಿಯಿಂದ ವಂಚಿತಗೊಳಿಸುತ್ತದೆ. ಪೇಲವತೆ, ಉಸಿರಾಟದ ಸಮಸ್ಯೆ,ಕೂದಲುದುರುವಿಕೆ,ತಲೆ ಸುತ್ತುವಿಕೆ,ಅನಿಯಮಿತ ಹೃದಯ ಬಡಿತ ಮತ್ತು ವಿರಮಿಸದ ಕಾಲುಗಳು ಇವು ಕಬ್ಬಿಣ ಕೊರತೆಯನ್ನು ಸೂಚಿಸುವ ಕೆಲವು ಲಕ್ಷಣಗಳಾಗಿವೆ. ಕಬ್ಬಿಣ ಕೊರತೆಯ ಒಂದು ಲಕ್ಷಣವು ನಮ್ಮ ಉಗುರುಗಳ ಮೇಲೂ ಕಾಣಿಸಿಕೊಳ್ಳುತ್ತದೆ. ಕಬ್ಬಿಣದ ಕೊರತೆಯು ಉಗುರುಗಳನ್ನು ಹೇಗೆ ಬಾಧಿಸುತ್ತದೆ ಎನ್ನುವ ಬಗ್ಗೆ ವಿವರಗಳಿಲ್ಲಿವೆ....

 ಇದು ಕಬ್ಬಿಣದ ಕೊರತೆಯಿರುವ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬರುವ ಲಕ್ಷಣವಲ್ಲ,ಆದರೆ ಈ ಖನಿಜದ ಕೊರತೆಯಿಂದಾಗಿ ಉಗುರುಗಳು ಗಡುಸಾಗುತ್ತವೆ ಅಥವಾ ಉಗುರುಗಳು ಚಮಚದ ರೂಪವನ್ನು ತಳೆಯುತ್ತವೆ. ಇಂತಹ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಕೊಯಿಲೊನಿಚಿಯಾ ಎಂದು ಕರೆಯಲಾಗುತ್ತದೆ. ಸುಲಭವಾಗಿ ತುಂಡಾಗಬಹುದಾದ ಗಡುಸು ಉಗುರುಗಳು ಈ ಸ್ಥಿತಿಯ ಆರಂಭಿಕ ಲಕ್ಷಣವಾಗಿರುತ್ತದೆ ಮತ್ತು ಕ್ರಮೇಣ ಉಗುರುಗಳು ಚಮಚದ ರೂಪವನ್ನು ಪಡೆಯುತ್ತವೆ.

ಇದು ಸಾಮಾನ್ಯವಾಗಿ ಕೈ ಬೆರಳುಗಳ ಉಗುರುಗಳಲ್ಲಿ ಕಂಡು ಬರುತ್ತದೆ,ಆದರೆ ಕಾಲ್ಬೆರಳುಗಳ ಉಗುರುಗಳಲ್ಲಿಯೂ ಉಂಟಾಗಬಹುದು. ಕಬ್ಬಿಣದ ತೀವ್ರ ಕೊರತೆಯು ಇದಕ್ಕೆ ಕಾರಣವಾಗುತ್ತದೆ.

ನಿಮ್ಮಲ್ಲಿ ಕಬ್ಬಿಣಾಂಶ ಕೊರತೆಯ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ದ್ವಿದಳ ಧಾನ್ಯಗಳು,ಬಾದಾಮನಂತಹ ನಟ್‌ಗಳು,ಬೀಜಗಳು,ಹಸಿರು ಸೊಪ್ಪು,ಅಣಬೆ,ಆಲಿವ್,ನವಣೆ ಮತ್ತು ಇಡಿಯ ಧಾನ್ಯಗಳಲ್ಲಿ ಕಬ್ಬಿಣ ಸಮೃದ್ಧವಾಗಿರುತ್ತದೆ. ಇಂತಹ ಆಹಾರಗಳನ್ನು ಸೇವಿಸುವ ಮೂಲಕ ಕಬ್ಬಿಣಾಂಶದ ಕೊರತೆಯನ್ನು ನೀಗಬಹುದು. ಶರೀರವು ಸೇವಿಸಿದ ಆಹಾರದಿಂದ ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ವಿಟಾಮಿನ್ ಸಿ ಅನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News