ಏನಿದು ಹೈಪರ್‌ಹೈಡ್ರಾಸಿಸ್? ಕಾರಣಗಳು ಮತ್ತು ಲಕ್ಷಣಗಳು
ಹಲವರಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೈ ಬೆವರುತ್ತಿರುತ್ತದೆ. ಕೆಲವರಿಗೆ ಎಂದಾದರೊಮ್ಮೆ ಅತಿಯಾಗಿ ಬೆವರು ಬರುತ್ತಿದ್ದರೆ ಇನ್ನು ಕೆಲವರು ಸದಾ ಕಾಲ ಬೆವರುತ್ತಲೇ ಇರುತ್ತಾರೆ. ಅತಿಯಾಗಿ ಬೆವರುವಿಕೆಯನ್ನು ಹೈಪರ್‌ಹೈಡ್ರಾಸಿಸ್ ಎಂದು ಕರೆಯಲಾಗುತ್ತದೆ. ಹೈಪರ್‌ಹೈಡ್ರಾಸಿಸ್‌ನಿಂದ ಬಳಲುತ್ತಿರುವ ವ್ಯಕ್ತಿಗಳು ಮೈಯಿಡೀ ಸುರಿಯುತ್ತಿರುವ ಬೆವರಿನಿಂದಾಗಿ ಸಾಮಾಜಿಕ ಗುಂಪುಗಳಲ್ಲಿರುವಾಗ ತೀವ್ರ ಮುಜುಗರಕ್ಕೆ ಒಳಗಾಗುತ್ತಾರೆ. ವ್ಯಾಯಾಮ ಅಥವಾ ಇತರ ಶ್ರಮದ ಕೆಲಸಗಳನ್ನು ಮಾಡದೆ ಹಾಯಾಗಿ ಕುಳಿತಿದ್ದಾಗಲೂ ಇಂತಹವರು ಬೆವರುತ್ತಲೇ ಇರುತ್ತಾರೆ. ಅತಿಯಾದ ಬೆವರು ಹೆಚ್ಚಾಗಿ ಕಂಕುಳುಗಳು,ಕೈಗಳು ಮತ್ತು ಕಾಲುಗಳಲ್ಲಿ ಉಂಟಾಗುತ್ತದೆ. ಹೆಚ್ಚಾಗಿ ವ್ಯಕ್ತಿಯ ಹದಿಹರೆಯದಲ್ಲಿಯೇ ಈ ಸಮಸ್ಯೆ ಆರಂಭಗೊಳ್ಳುತ್ತದೆ. ಹೆದರಿಕೆ,ಆತಂಕ ಈ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ.
ಹೈಪರ್‌ಹೈಡ್ರಾಸಿಸ್‌ಗೆ ಕಾರಣಗಳು
ಚಿಕ್ಕ ವಯಸ್ಸಿನಲ್ಲಿಯೇ ಅತಿಯಾಗಿ ಬೆವರುವಿಕೆ ಆರಂಭವಾಗಿದ್ದರೆ ಅದನ್ನು ಪ್ರೈಮರಿ ಫೋಕಲ್ ಹೈಪರ್‌ಹೈಡ್ರಾಸಿಸ್ ಮತ್ತು ಪ್ರಾಯಕ್ಕೆ ಬಂದ ಮೇಲೆ ಸಮಸ್ಯೆ ಆರಂಭವಾಗಿದ್ದರೆ ಅದನ್ನು ಸೆಕಂಡರಿ ಫೋಕಲ್ ಹೈಪರ್‌ಹೈಡ್ರಾಸಿಸ್ ಎಂದು ಕರೆಯಲಾಗುತ್ತದೆ. ಬೆವರು ಗ್ರಂಥಿಗಳ ಸೂಚಕ ನರಗಳು ಅತಿ ಕ್ರಿಯಾಶೀಲಗೊಂಡಾಗ ಹೆಚ್ಚು ಬೆವರು ಹರಿಯುತ್ತದೆ. ಯಾವುದೇ ದೈಹಿಕ ಚಟುವಟಿಕೆ ಇಲ್ಲದಿದ್ದರೂ ಪಾದಗಳು ಮತ್ತು ಅಂಗೈಗಳು ಬೆವರಬಹುದು. ಹೈಪರ್‌ಹೈಡ್ರಾಸಿಸ್‌ಗೆ ಗೊತ್ತಿರುವ ಯಾವುದೇ ವೈದ್ಯಕೀಯ ಕಾರಣವಿಲ್ಲ.
►ಕುಟುಂಬದ ಇತಿಹಾಸ
ಕೆಲವೊಮ್ಮೆ ಅತಿಯಾದ ಬೆವರುವಿಕೆಯು ಆನುವಂಶಿಕ ಸಮಸ್ಯೆಯೂ ಆಗಿರುತ್ತದೆ. ಕುಟುಂಬದ ಇತಿಹಾಸದಲ್ಲಿ ಯಾರಿಗಾದರೂ ಹೈಪರ್‌ಹೈಡ್ರಾಸಿಸ್ ಸಮಸ್ಯೆ ಇದ್ದಿದ್ದರೆ ಇದು ನಿಮ್ಮನ್ನೂ ಕಾಡಬಹುದು.
►ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿತ
ರಕ್ತದಲ್ಲಿಯ ಸಕ್ಕರೆ ಮಟ್ಟ ಕುಸಿದಾಗ ಶರೀರವು ಅತಿಯಾಗಿ ಅಡ್ರೆನಾಲಿನ್ ಅನ್ನು ಉತ್ಪಾದಿಸುತ್ತದೆ ಮತ್ತು ಅತಿಯಾದ ಅಡ್ರೆನಾಲಿನ್ ಸಹ ಹೈಪರ್‌ಹೈಡ್ರಾಸಿಸ್‌ಗೆ ಕಾರಣವಾಗುತ್ತದೆ. ರಕ್ತದಲ್ಲಿಯ ಸಕ್ಕರೆ ಸಹಜ ಮಟ್ಟಕ್ಕೆ ಮರಳಿದಾಗ ಬೆವರುವಿಕೆಯೂ ತನ್ನಿಂತಾನೇ ನಿಲ್ಲುತ್ತದೆ.
►ಹೃದಯಾಘಾತ
ಹೃದಯಾಘಾತವೂ ಶರೀರದಿಂದ ಅತಿಯಾಗಿ ಬೆವರುವಿಕೆಗೆ ಕಾರಣವಾಗುತ್ತದೆ. ಹೃದಯಾಘಾತವುಂಟಾದಾಗ ಉಷ್ಣತೆಯನ್ನು ಕಡಿಮೆಯಾಗಿಸಲು ಶರೀರವು ಅತಿಯಾಗಿ ಬೆವರುತ್ತದೆ.
►ನರಮಂಡಲ
ಶರೀರದ ಉಷ್ಣತೆ ಹೆಚ್ಚಾದಾಗ ನರಮಂಡಲ ವ್ಯವಸ್ಥೆಯು ಬೆವರು ಗ್ರಂಥಿಗಳನ್ನು ಪ್ರಚೋದಿಸುತ್ತದೆ ಮತ್ತು ಅತಿ ಬೆವರುವಿಕೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಅಂಗೈಗಳು ಹೆಚ್ಚಾಗಿ ಬೆವರುತ್ತವೆ.
ಮಧುಮೇಹ,ಸೋಂಕು,ಋತುಬಂಧ, ಥೈರಾಯ್ಡ್ ಸಮಸ್ಯೆ,ಕೆಲವು ವಿಧಗಳ ಕ್ಯಾನ್ಸರ್,ಬೊಜ್ಜು,ಗರ್ಭಾವಸ್ಥೆ,ಆತಂಕ ಇವೂ ಹೈಪರ್‌ಹೈಡ್ರಾಸಿಸ್‌ಗೆ ಕಾರಣಗಳಲ್ಲಿ ಸೇರಿವೆ.
ಹೈಪರ್ ಹೈಡ್ರಾಸಿಸ್‌ನ ಲಕ್ಷಣಗಳು
ಹೈಪರ್‌ಹೈಡ್ರಾಸಿಸ್‌ನಿಂದಾಗಿ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಕನಿಷ್ಠ ವಾರಕ್ಕೊಮ್ಮೆಯಾದರೂ ಅತಿಯಾಗಿ ಮೈ ಬೆವರಬಹುದು. ದಿನದಿಂದ ದಿನಕ್ಕೆ ಅತಿಯಾಗಿ ಬೆವರುವಿಕೆಯು ಆತಂಕವನ್ನುಂಟು ಮಾಡುವ ಜೊತೆಗೆ ಸಾಮಾಜಿಕ ಸಮ್ಮಿಲನಗಳಲ್ಲಿ ಮುಜುಗರದ ಭಾವನೆಯನ್ನುಂಟು ಮಾಡುತ್ತದೆ. ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾ ಸೋಂಕುಗಳು,ಗೋಚರವಾಗುವ ಬೆವರು,ಪಾದಗಳು ಮತ್ತು ಕೈಗಳು ಒದ್ದೆಯಾಗುವುದು,ಪದೇ ಪದೇ ಬೆವರುತ್ತಲೇ ಇರುವುದು ಇವು ಹೈಪರ್‌ಹೈಡ್ರಾಸಿಸ್‌ನ ಲಕ್ಷಣಗಳಲ್ಲಿ ಸೇರಿವೆ.
ಇದನ್ನು ತಡೆಯುವುದು ಹೇಗೆ?
ದೈನಂದಿನ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಹೈಡ್ರಾಸಿಸ್‌ನ್ನು ತಡೆಯಬಹುದು. ಇದಕ್ಕೆ ನೈಸರ್ಗಿಕ ಮದ್ದುಗಳು ಇವೆ ಮತ್ತು ವೈದ್ಯಕೀಯ ಚಿಕಿತ್ಸೆಯೂ ನೆರವಾಗಬಲ್ಲದು. ನೈಲಾನ್ ಮತ್ತು ಸಿಂಥೆಟಿಕ್‌ಗಳಿಂದ ನಿರ್ಮಿತ ಸಾಕ್ಸ್,ಶೂಗಳು ಮತ್ತು ಉಡುಪುಗಳನ್ನು ದೂರವಿಡಬೇಕು. ಅತಿಯಾಗಿ ಬೆವರುವಿಕೆಯನ್ನು ತಡೆಯಲು ಆ್ಯಂಟಿಪಸ್ಪಿರಂಟ್‌ಗಳನ್ನೂ ಬಳಸಬಹುದು.
ಅತಿಯಾದ ಬೆವರುವಿಕೆಯ ಬಗ್ಗೆ ಸಕಾಲದಲ್ಲಿ ಗಮನ ಹರಿಸದಿದ್ದರೆ ಅದು ಸೋಂಕುಗಳು,ದದ್ದುಗಳು,ವಾರ್ಟ್ ಅಥವಾ ನರೂಲಿಗಳಿಗೆ ಕಾರಣವಾಗುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಚರ್ಮರೋಗ ವೈದ್ಯರನ್ನು ಭೇಟಿಯಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.