ನಿಮಗೆ ಆಗಾಗ್ಗೆ ಹಸಿವಾಗುತ್ತದೆಯೇ? ಕಾರಣಗಳು ಇಲ್ಲಿವೆ
ಕೆಲವೊಮ್ಮೆ ಎಷ್ಟೊಂದು ಹಸಿವು ಕಾಡುತ್ತದೆಯೆಂದರೆ ಏನಾದರೂ ಸರಿ,ತಿನ್ನಲೇಬೇಕು ಎಂಬ ತುಡಿತವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಿಮಗೂ ಆಗಾಗ್ಗೆ ಹೀಗೆ ಅನಿಸುತ್ತಿರುತ್ತದೆಯೇ? ಕೆಲವರಿಗೆ ಸದಾ ತಿನ್ನುತ್ತಿರುವುದೇ ಬದುಕಾಗಿರುತ್ತದೆ. ಆಹಾರಪ್ರಿಯರಾಗಿರುವುದು ಒಂದಾದರೆ ಅತಿಯಾದ ಹಸಿವು ಇನ್ನೊಂದು ಕಾರಣವಾಗಿರುತ್ತದೆ. ಆತಂಕ,ಅಧೈರ್ಯ,ತೂಕದಲ್ಲಿ ಏರಿಕೆ ಇತ್ಯಾದಿಗಳು ಪದೇ ಪದೇ ಹಸಿವನ್ನು ಸೂಚಿಸುವ ಲಕ್ಷಣಗಳಾಗಿವೆ. ಅದು ಮಧುಮೇಹ ಮತ್ತು ಥೈರಾಯ್ಡ್ ನಂತಹ ಆರೋಗ್ಯ ಸಮಸ್ಯೆಗಳ ಲಕ್ಷಣವೂ ಆಗಿರಬಹುದು. ವಿಟಾಮಿನ್‌ಗಳು, ಕಾರ್ಬೊಹೈಡ್ರೇಟ್‌ಗಳು,ಕೊಬ್ಬು,ನಾರು,ಕ್ಯಾಲ್ಸಿಯಂ ಇತ್ಯಾದಿ ವಿವಿಧ ಪೋಷಕಾಂಶಗಳಿಗಾಗಿ ನಮ್ಮ ಶರೀರವು ಆಹಾರವನ್ನೇ ಅವಲಂಬಿಸಿರುತ್ತದೆ. ನಮ್ಮ ಶರೀರವು ಆಹಾರದಿಂದ ಶಕ್ತಿಯನ್ನು ಪಡೆದುಕೊಳ್ಳುತ್ತದೆ,ಹೀಗಾಗಿ ಕೆಲವು ಗಂಟೆಗಳ ಕಾಲ ಏನನ್ನೂ ತಿನ್ನದಿದ್ದಾಗ ಹಸಿವು ಕಾಡುವುದು ಸಹಜವೇ ಆಗಿದೆ. ಆದರೆ ಊಟ ಮಾಡಿದ ಬಳಿಕವೂ ಹೊಟ್ಟೆಯಿಂದ ನಿರಂತರ ಶಬ್ದ ಕೇಳಿ ಬರುತ್ತಿದ್ದರೆ ಆರೋಗ್ಯ ಎಲ್ಲೋ ಹದಗೆಟ್ಟಿದೆ ಎನ್ನುವುದನ್ನು ಅದು ಸೂಚಿಸುತ್ತದೆ. ಆರೋಗ್ಯಕರ ಜೀವನಶೈಲಿ,ಪೌಷ್ಟಿಕ ಆಹಾರ ಮತ್ತು ನಿಯಮಿತ ವ್ಯಾಯಾಮ ಇದನ್ನು ನಿಯಂತ್ರಿಸಲು ನೆರವಾಗುತ್ತವೆ. ಅತಿಯಾದ ಹಸಿವನ್ನು ವೈದ್ಯಕೀಯವಾಗಿ ‘ಪಾಲಿಫೇಜಿಯಾ ’ ಎಂದು ಕರೆಯಲಾಗುತ್ತದೆ.
ಪದೇ ಪದೇ ಹಸಿವಾಗುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಆದರೆ ಸದಾ ಕಾಲ ಹಸಿವು ನಿಮ್ಮನ್ನು ಬಾಧಿಸುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಕಾರಣವನ್ನು ತಿಳಿದುಕೊಳ್ಳಬೇಕಾಗುತ್ತದೆ.
ಒತ್ತಡ
ಅತಿಯಾದ ಹಸಿವಿಗೆ ಒತ್ತಡವೂ ಕಾರಣವಾಗುತ್ತದೆ ಎನ್ನುವುದನ್ನು ಕೆಲವು ಅಧ್ಯಯನಗಳು ತೋರಿಸಿವೆ. ನಿಮ್ಮ ಮನಸ್ಸನ್ನು ಆವರಿಸಿಕೊಂಡಿರುವ ,ನಿಮಗೆ ಹಿತವೆನ್ನಿಸುವ ಯಾವುದೋ ವಿಷಯದ ಬಗ್ಗೆ ನೀವು ಅತಿಯಾಗಿ ಆಲೋಚಿಸುತ್ತಿದ್ದರೂ ಆಗಾಗ್ಗೆ ಹಸಿವೆಯ ಭಾವನೆ ಉಂಟಾಗುತ್ತಿರುತ್ತದೆ. ನೀವು ಆತಂಕದಲ್ಲಿದ್ದಾಗ ಅಥವಾ ಉದ್ವಿಗ್ನಗೊಂಡಿದ್ದಾಗ ಶರೀರದಲ್ಲಿ ಕಾರ್ಟಿಸಾಲ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಮತ್ತೆ ಮತ್ತೆ ಹಸಿವಿನ ಭಾವನೆಯನ್ನುಂಟು ಮಾಡುತ್ತದೆ.
ಕಡಿಮೆ ಕೊಬ್ಬು, ನಾರು ಮತ್ತು ಪ್ರೋಟಿನ್ ಆಹಾರ
ನಿಮ್ಮ ಶರೀರವು ಕರಗಿಸಬಲ್ಲ ಪ್ರಮಾಣಕ್ಕಿಂತ ಕಡಿಮೆ ಕ್ಯಾಲರಿಗಳ ಸೇವನೆಯು ನಿಮ್ಮ ಶರೀರವು ೆರ್ಲಿನ್ ಎಂಬ ಹಾರ್ಮೋನ್ ಅನ್ನು ಸ್ರವಿಸುವಂತೆ ಮಾಡುತ್ತದೆ. ಇದಕ್ಕೆ ಸಾಮಾನ್ಯವಾಗಿ ಹಸಿವಿನ ಹಾರ್ಮೋನ್ ಎಂದು ಕರೆಯಲಾಗುತ್ತದೆ. ನಿಮ್ಮ ಶರೀರಕ್ಕೆ ಹೆಚ್ಚಿನ ಆಹಾರದ ಅಗತ್ಯವಿರುವಾಗ ಜಠರವು ಈ ಹಾರ್ಮೋನ್‌ನ್ನು ಬಿಡುಗಡೆಗೊಳಿಸುತ್ತದೆ. ಕಡಿಮೆ ಕ್ಯಾಲರಿಗಳಿಂದ ಕೂಡಿದ ಆಹಾರವು ೆರ್ಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯು ಊಟ ಮಾಡಿದ್ದರೂ ಹಸಿವನ್ನುಂಟು ಮಾಡುತ್ತದೆ. ನಾರು,ಕೊಬ್ಬು ಮತ್ತು ಪ್ರೋಟಿನ್ ಕಡಿಮೆ ಪ್ರಮಾಣದಲ್ಲಿರುವ ಆಹಾರವು ಪದೇ ಪದೇ ಹಸಿವನ್ನುಂಟು ಮಾಡುತ್ತಿರುತ್ತದೆ.
ಊಟದ ಕಡೆಗೆ ಗಮನವಿಲ್ಲದಿರುವುದು
ಕೆಲವರಿಗೆ ಊಟ ಮಾಡುತ್ತಿರುವಾಗಲೂ ಗಮನ ಬೇರೆಡೆಗೆ ಇರುತ್ತದೆ. ಗಮನವನ್ನು ಬೇರೆಡೆಗೆ ಹರಿಸದೆ ಪೌಷ್ಟಿಕ ಆಹಾರ ಸೇವನೆಯು ಹೊಟ್ಟೆ ತುಂಬಿದಂತಿರಲು ಮುಖ್ಯವಾಗಿದೆ. ಆಹಾರ ಸೇವಿಸುವಾಗ ಮೊಬೈಲ್ ಫೋನ್‌ಗೆ ಅಂಟಿಕೊಂಡಿರುವುದು ಅಥವಾ ಟಿವಿಯನ್ನು ನೋಡುತ್ತಿರುವುದು ಒಳ್ಳೆಯದಲ್ಲ. ಇಂತಹ ಗೀಳು ಊಟ ಮಾಡಿದ ಬಳಿಕವೂ ಮತ್ತೆ ಮತ್ತೆ ಹಸಿವಾಗುವಂತೆ ಮಾಡುತ್ತದೆ.
ನಿದ್ರೆಯ ಕೊರತೆ
ನೀವು ಎಚ್ಚರವಾಗಿದ್ದಾಗ ಆಹಾರವನ್ನು ಸೇವಿಸುತ್ತೀರಿ. ನೀವು ಸಾಕಷ್ಟು ನಿದ್ರೆ ಮಾಡಿರದಿದ್ದಾಗ ಏನನ್ನಾದರೂ ತಿನ್ನುತ್ತಲೇ ಇರಬೇಕೆಂಬ ತುಡಿತವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಶರೀರಕ್ಕೆ ಸಾಕಷ್ಟು ಶಕ್ತಿಯನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಮತ್ತು ಇದು ಅತಿಯಾಗಿ ಹಸಿವನ್ನುಂಟು ಮಾಡುತ್ತದೆ.
ಅತಿಯಾದ ವ್ಯಾಯಾಮ
ನೀವು ಸೇವಿಸುವ ಆಹಾರಕ್ಕಿಂತ ಹೆಚ್ಚಿನ ವ್ಯಾಯಾಮವನ್ನು ನೀವು ಮಾಡುತ್ತಿದ್ದರೆ ಖಂಡಿತವಾಗಿಯೂ ಪದೇ ಪದೇ ಆಹಾರ ಸೇವಿಸುವ ಅಗತ್ಯ ನಿಮ್ಮನ್ನು ಕಾಡುತ್ತಿರುತ್ತದೆ. ನಿಮ್ಮ ಊಟಗಳ ನಡುವಿನ ಅಂತರವು ಕಡಿಮೆಯಾಗುತ್ತದೆ ಮತ್ತು ಎಂದಿಗಿಂತ ಹೆಚ್ಚಾಗಿ ನೀವು ಹಸಿದಿರುತ್ತೀರಿ. ವ್ಯಾಯಾಮವು ಮುಖ್ಯ ನಿಜ,ಆದರೆ ಅದು ನೀವು ಸೇವಿಸುವ ಆಹಾರದ ಪ್ರಮಾಣಕ್ಕೆ ಅನುಗುಣವಾಗಿರಬೇಕು.
ಕೆಲವು ಔಷಧಿಗಳು
ಕೆಲವು ಔಷಧಿಗಳು ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಇಂತಹ ಔಷಧಿಗಳು ನಿಮ್ಮ ಚಯಾಪಚಯ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸಬಲ್ಲವು. ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗುತ್ತದೆ.
ಅವಸರದ ಆಹಾರ ಸೇವನೆ
ಊಟ ಮಾಡುವಾಗ ಅವಸರಿಸಬಾರದು ಎಂಬ ಹಿರಿಯರ ಮಾತುಗಳನ್ನು ಕೇಳುತ್ತಲೇ ನಾವು ಬೆಳೆದಿದ್ದೇವೆ. ಅವಸರದಿಂದ ಉಟ ಮಾಡುವುದರಿಂದ ಹೊಟ್ಟೆ ಸಂಕ್ಷಿಪ್ತ ಅವಧಿಗೆ ತುಂಬಿರುತ್ತದೆ. ಇಂತಹ ಸಂದರ್ಭಗಳಲ್ಲಿ ಊಟ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಹಸಿವು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪದೇ ಪದೇ ಹಸಿವಾಗುವುದನ್ನು ತಪ್ಪಿಸಲು ನಿಧಾನವಾಗಿ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.