ಹೃದಯಾಘಾತದ ಅಪಾಯದಲ್ಲಿ ತಾಪಮಾನದ ಪಾತ್ರ ನಿಮಗೆ ಗೊತ್ತಿರಲಿ

Update: 2020-10-27 12:44 GMT

ಋತುಮಾನ ಯಾವುದೇ ಆಗಿದ್ದರೂ ದಿನದ ಯಾವುದೇ ಸಮಯದಲ್ಲಿಯೂ ಹೃದಯಾಘಾತ ಸಂಭವಿಸಬಹುದು. ಆದರೂ ಚಳಿಗಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು ಎಂದು ಪರಿಗಣಿಸಲಾಗಿದೆ.

ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಹಲವಾರು ಅಂಶಗಳಿದ್ದು,ಅದರಲ್ಲಿ ವಯಸ್ಸು ಒಂದಾಗಿದೆ. ಸಾಮಾನ್ಯವಾಗಿ 60 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರು ಹೃದಯ ರೋಗಗಳಿಗೆ ಸುಲಭಭೇದ್ಯರಾಗಿರುತ್ತಾರೆ. ಉದಾಹರಣೆಗೆ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್. ಇತ್ತೀಚಿಗೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಅವರಿಗೆ 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದೆ. ಕಪಿಲ್ ಪ್ರತಿದಿನ ಗಾಲ್ಫ್ ಸೇರಿದಂತೆ ವಿವಿಧ ದೈಹಿಕ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರಾದರೂ ವಯಸ್ಸನ್ನು ಕಡೆಗಣಿಸುವಂತಿಲ್ಲ ಮತ್ತು ವಯಸ್ಸು ಹೃದಯರೋಗಗಳಿಗೆ ತುತ್ತಾಗಿಸುವಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದೆ ಎನ್ನುವುದನ್ನು ಇದು ತೋರಿಸುತ್ತದೆ.

 ಕೆಲವು ವಿಧಗಳ ಹೃದಯಾಘಾತಗಳಿಗೆ ತುತ್ತಾಗುವ ಅಪಾಯ ಚಳಿಗಾಲದಲ್ಲಿ ಹೆಚ್ಚಾಗಿರುತ್ತದೆ. ಆರ್ದ್ರತೆ,ವಾಯುಭಾರ ಒತ್ತಡ,ಗಾಳಿ,ಕಡಿಮೆ ತಾಪಮಾನ ಇತ್ಯಾದಿಗಳು ನಮ್ಮ ಆರೋಗ್ಯವನ್ನು ಸಂಕೀರ್ಣಗೊಳಿಸುತ್ತವೆ ಮತ್ತು ಹೃದಯ ರಕ್ತನಾಳಗಳ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ತಾಪಮಾನದಲ್ಲಿ ಕುಸಿತವು ಶರೀರದ ನರಮಂಡಳ ವ್ಯವಸ್ಥೆಯ ಪ್ರತಿವರ್ತನೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಇದು ರಕ್ತವು ದಪ್ಪಗಾಗಲು ಮತ್ತು ರಕ್ತನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಜನರು,ವಿಶೇಷವಾಗಿ ವಯಸ್ಸಾದವರು ಚಳಿಗಾಲದಲ್ಲಿ ಹೃದಯಾಘಾತದ ಈ ಲಕ್ಷಣಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು.

ವಾಕರಿಕೆ ಮತ್ತು ತಲೆ ಹಗುರವಾಗುವುದು,ಉಸಿರಾಡಲು ಕಷ್ಟ,ಎದೆ ನೋವು,ಎದೆಯಲ್ಲಿ ಹಿಂಡಿದಂತೆ ಅನುಭವ,ಎರಡೂ ತೋಳುಗಳು,ಬೆನ್ನು,ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ನೋವು ಇವು ಇಂತಹ ಲಕ್ಷಣಗಳಲ್ಲಿ ಸೇರಿವೆ. ಈಗಾಗಲೇ ಹೃದಯ ರೋಗಗಳಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಇತರರಿಗಿಂತ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ಅವರು ಈ ಅಪಾಯದಿಂದ ದೂರವಿರಲು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು.

ಚಳಿಗಾಲವು ಹೃದಯದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವುದರ ಹಿಂದಿನ ಖಚಿತ ಕಾರಣ ಈವರೆಗೂ ತಿಳಿದಿಲ್ಲವಾದರೂ ಚಳಿಗಾಲದಲ್ಲಿ ಹೃದಯ ಸಮಸ್ಯೆಗಳ ವಿವಿಧ ಮಗ್ಗಲುಗಳನ್ನು ವಿವರಿಸುವ ಹಲವಾರು ಸಿದ್ಧಾಂತಗಳಿವೆ:

ಕಡಿಮೆ ತಾಪಮಾನ ಅಥವಾ ಚಳಿಯು ಅಪಧಮನಿಗಳು ಮತ್ತು ರಕ್ತನಾಳಗಳು ಸಂಕುಚಿತಗೊಳ್ಳುವಂತೆ ಮಾಡುತ್ತದೆ,ತನ್ಮೂಲಕ ಹೃದಯಕ್ಕೆ ಆಮ್ಲಜನಕದ ಪೂರೈಕೆಯಲ್ಲಿ ಕೊರತೆ, ನಿರ್ಬಂಧಿತ ರಕ್ತ ಹರಿವು ಮತ್ತು ಹೆಚ್ಚಿನ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಲಘೂಷ್ಣತೆಯ ಹೆಚ್ಚಿನ ಸಾಧ್ಯತೆಗಳು ಹೃದಯದ ಸ್ನಾಯುಗಳಿಗೆ ಹಾನಿಯನ್ನುಂಟು ಮಾಡುತ್ತವೆ.

ಚಳಿಗಾಲದಲ್ಲಿ ಋತುಮಾನಕ್ಕನುಗುಣವಾಗಿ ಉಂಟಾಗುವ ಕಾಯಿಲೆಗಳಿಂದಾಗಿ ಭಾವನಾತ್ಮಕ ಒತ್ತಡವು ಹಾರ್ಮೋನ್‌ಗಳ ಅಸಮತೋಲನವನ್ನುಂಟು ಮಾಡಬಹುದು ಮತ್ತು ಇದು ಪಾರ್ಶ್ವವಾಯು ಅಥವಾ ಹೃದಯಾಘಾತಕ್ಕೆ ತುತ್ತಾಗುವಂತೆ ಮಾಡಬಲ್ಲದು.

ಹೃದ್ರೋಗಿಗಳು,ಈ ಹಿಂದೆ ಹೃದಯಾಘಾತಕ್ಕೆ ಗುರಿಯಾಗಿದ್ದವರು, ಚೈನ್ ಸ್ಮೋಕರ್‌ಗಳು ಮತ್ತು ಮದ್ಯಪಾನಿಗಳು,ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು, ಜಡ ಜೀವನಶೈಲಿ ಹೊಂದಿರುವವರು ಚಳಿಗಾಲದಲ್ಲಿ ಹೃದಯಾಘಾತದ ಹೆಚ್ಚಿನ ಅಪಾಯವಿರುವವರ ಗುಂಪಿನಲ್ಲಿ ಸೇರುತ್ತಾರೆ.

ಚಳಿಗಾಲದಲ್ಲಿ ಹೃದಯಾಘಾತವನ್ನು ತಡೆಯಲು ಕೆಲವು ಟಿಪ್ಸ್

 ಹೃದಯಾಘಾತ ಉಂಟಾಗುವ ಮುನ್ನ ಅದು ಕೆಲವು ಎಚ್ಚರಿಕೆಯ ಸಂಕೇತಗಳನ್ನು ನೀಡುತ್ತದೆ. ಜನರು ಹೆಚ್ಚಾಗಿ ಇವುಗಳನ್ನು ಗಮನಿಸುವುದಿಲ್ಲ ಮತ್ತು ನಂತರ ಹೃದಯಾಘಾತಕ್ಕ ತುತ್ತಾಗುತ್ತಾರೆ. ಎದೆನೋವು ಹೃದಯಾಘಾತದ ಮೊದಲ ಲಕ್ಷಣವಾಗಿದ್ದು,ಇದರ ಬಗ್ಗೆ ಹೆಚ್ಚಿನವರು ಕಾಳಜಿಯನ್ನು ವಹಿಸುವುದಿಲ್ಲ. ಆ್ಯಸಿಡಿಟಿ ಸಮಸ್ಯೆ ಎಂದು ಭಾವಿಸುವವರೇ ಹೆಚ್ಚು. ಚಳಿಗಾಲದಲ್ಲಿ ನಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಕೆಲವು ಸರಳ ಉಪಾಯಗಳಿಲ್ಲಿವೆ.

ಚಳಿಗಾಲದಲ್ಲಿ ಮನೆಯಿಂದ ಹೊರಹೋಗುವುದಿದ್ದರೆ ಬೆಚ್ಚನೆಯ ಬಟ್ಟೆಗಳನ್ನು ಧರಿಸುವ ಮೂಲಕ ನಮ್ಮನ್ನು ನಾವು ಬೆಚ್ಚಗಾಗಿರಿಸಿಕೊಳ್ಳಬೇಕು, ನಮ್ಮ ಆರೋಗ್ಯಕ್ಕಿಂತ ಫ್ಯಾಷನ್ ಮುಖ್ಯವಲ್ಲ. ಪ್ರತಿದಿನ ವ್ಯಾಯಾಮ ಮಾಡುವುದು ಅಗತ್ಯ. ಧೂಮ್ರಪಾನ ಮತ್ತು ಮದ್ಯಪಾನ ಹೃದಯಾಘಾತದ ಅಪಾಯವನ್ನು ಶೇ.100ರಷ್ಟು ಹೆಚ್ಚಿಸುವುದರಿಂದ ಈ ದುಶ್ಚಟಗಳಿಂದ ದೂರವಿದ್ದಷ್ಟೂ ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News