ಕ್ಯಾನ್ಸರ್ ರೋಗ ಮತ್ತು ನಿಯಮಿತ ವ್ಯಾಯಾಮ

Update: 2020-10-28 13:41 GMT

ದೈಹಿಕ ಕ್ಷಮತೆಯು ನಮ್ಮ ಐಚ್ಛಿಕ ಆಯ್ಕೆಯಾಗಬಾರದು, ಬದಲು ಅದು ಜೀವನಶೈಲಿ ಅಭ್ಯಾಸವಾಗಿರಬೇಕು. ವ್ಯಾಯಾಮವು ಐಚ್ಛಿಕವಾಗಿರಬಾರದು,ಅದು ನಮ್ಮ ದಿನಚರಿಯ ಕಡ್ಡಾಯ ಭಾಗವಾಗಿರಬೇಕು. ಒಟ್ಟಾರೆ ಬಲ ಮತ್ತು ಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಇತರ ಹಲವು ಅಚ್ಚರಿದಾಯಕ ಲಾಭಗಳನ್ನೂ ವ್ಯಾಯಾಮವು ನಮಗೆ ನೀಡುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎನ್ನುವುದನ್ನು ಇತ್ತೀಚಿಗೆ ಸಂಶೋಧಕರು ಕಂಡುಕೊಂಡಿದ್ದಾರೆ. ಇದನ್ನು ನೀವು ನಂಬದಿರಬಹುದು,ಆದರೆ ಸಂಶೋಧನೆಯು ಇದನ್ನು ಸಾಬೀತುಗೊಳಿಸಿದೆ.

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದ್ದು,ತಮ್ಮ ಶರೀರದಲ್ಲಿ ಕ್ಯಾನ್ಸರ್ ಮಾರಿಯನ್ನು ಆಹ್ವಾನಿಸಲು ಯಾರೂ ಬಯಸುವುದಿಲ್ಲ. ಕ್ಯಾನ್ಸರ್‌ನೊಂದಿಗೆ ಬದುಕು ಅತ್ಯಂತ ಕಷ್ಟದಾಯಕವಾಗಿದೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಈ ಹೋರಾಟ ಚೆನ್ನಾಗಿ ಗೊತ್ತು. ಕ್ಯಾನ್ಸರ್‌ನಿಂದ ಬಳಲುತ್ತಿರುವವರು ತಮ್ಮ ಶರೀರದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಪ್ರತಿದಿನ ವ್ಯಾಯಾಮವನ್ನು ಮಾಡಲೇಬೇಕು.

ದೈಹಿಕವಾಗಿ ಕ್ರಿಯಾಶೀಲರಾಗಿರುವ ಕ್ಯಾನ್ಸರ್ ರೋಗಿಗಳು ಇತರರಿಗಿಂತ ಉತ್ತಮ ಮುನ್ನರಿವನ್ನು ಹೊಂದಿರುತ್ತಾರೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ವ್ಯಾಯಾಮವು ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ನಡೆಸಲು ಚಯಾಪಚಯ ದರವನ್ನು ಹೆಚ್ಚಿಸುವುದು ಇದಕ್ಕೆ ಕಾರಣ.

ಸ್ವೀಡನ್ ನ ಕ್ಯಾರೊಲಿಂಸ್ಕಾ ಇನ್‌ಸ್ಟಿಟ್ಯೂಟ್ ಇಲಿಗಳ ಮೇಲೆ ನಡೆಸಿರುವ ಪ್ರಯೋಗದಲ್ಲಿ ವ್ಯಾಯಾಮವು ಶರೀರದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ತೋರಿಸಿದೆ. ದೈಹಿಕ ಚಟುವಟಿಕೆಯು ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ನಡೆಸುವ ಸೈಟೊಟಾಕ್ಸಿಕ್ ಟಿ ಸೆಲ್‌ಗಳು ಅಥವಾ ನಿರೋಧಕ ಕೋಶಗಳ ಚಯಾಪಚಯವನ್ನು ಬದಲಿಸುತ್ತದೆ. ಬೆಳಗ್ಗಿನ ಸಮಯ ವ್ಯಾಯಾಮ ಮಾಡುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು ಎನ್ನುವುದನ್ನು ಹಲವಾರು ಅಧ್ಯಯನಗಳು ತಿಳಿಸಿವೆ.

ವ್ಯಾಯಾಮದ ಧನಾತ್ಮಕ ಪರಿಣಾಮಗಳ ಹಿಂದಿನ ಜೀವಶಾಸ್ತ್ರವು ಶರೀರವು ಹೇಗೆ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ ಎಂಬ ಬಗ್ಗೆ ಒಳನೋಟಗಳನ್ನು ನೀಡಬಲ್ಲದು ಹಾಗೂ ಕ್ಯಾನ್ಸರ್‌ಗೆ ಚಿಕಿತ್ಸೆಗಳನ್ನು ರೂಪಿಸಲು ಮತ್ತು ಅವುಗಳನ್ನು ಹೆಚ್ಚು ಉತ್ತಮಗೊಳಿಸಲು ನೆರವಾಗಬಲ್ಲದು ಎನ್ನುತ್ತಾರೆ ಸಂಶೋಧಕರು. ಸೈಟೊಟಾಕ್ಸಿಕ್ ಟಿ ಸೆಲ್‌ಗಳು ಪ್ರಾಥಮಿಕವಾಗಿ ಬಿಳಿಯ ರಕ್ತಕೋಶಗಳಾಗಿದ್ದು,ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಇಲಿಯ ಮೇಲೆ ಪ್ರಯೋಗ ನಡೆಸುವ ಮುನ್ನ ಸಂಶೋಧಕರು ಸೈಟೊಟಾಕ್ಸಿಕ್ ಟಿ ಸೆಲ್‌ಗಳ ಮಹತ್ವವನ್ನು ಅರಿಯಲು ಅವುಗಳನ್ನು ಇಲಿಯ ಶರೀರದಿಂದ ತೆಗೆದುಹಾಕಿದ್ದರು. ವ್ಯಾಯಾಮದಿಂದ ಕ್ಯಾನ್ಸರ್ ಕೋಶಗಳನ್ನು ದಮನಿಸುವಲ್ಲಿ ಟಿ ಸೆಲ್‌ಗಳು ಮಹತ್ವದ್ದಾಗಿವೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಕೆಲವು ಚಯಾಪಚಯಗಳು ಟಿ ಸೆಲ್‌ಗಳ ಚಯಾಪಚಯವನ್ನು ಬದಲಿಸುವ ಮೂಲಕ ಅವುಗಳ ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಇಲಿ ಮಾತ್ರವಲ್ಲ,ಸಂಶೋಧಕರು ಮಾನವರ ಮೇಲೂ ಈ ಪ್ರಯೋಗವನ್ನು ನಡೆಸಿದ್ದು,ಫಲಿತಾಂಶಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ.

ವ್ಯಾಯಾಮವು ಕ್ಯಾನ್ಸರ್ ವಿರುದ್ಧ ಹೋರಾಡುವ ನಿರೋಧಕ ಕೋಶಗಳನ್ನು ಕ್ರಿಯಾಶೀಲಗೊಳಿಸುವ ಹಲವಾರು ಮಾಲೆಕ್ಯೂಲ್‌ಗಳು ಮತ್ತು ಮೆಟಾಬೊಲೈಟ್‌ಗಳ ಉತ್ಪಾದನೆಯ ಮೇಲೆ ಪರಿಣಾಮವನ್ನು ಹೊಂದಿದೆ ಮತ್ತು ತನ್ಮೂಲಕ ಕ್ಯಾನ್ಸರ್ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎನ್ನುವುದನ್ನು ಸಂಶೋಧನೆಯು ತೋರಿಸಿದೆ. ನಮ್ಮ ಜೀವನಶೈಲಿಯು ನಮ್ಮ ನಿರೋಧಕ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಆಳವಾಗಿ ತಿಳಿದುಕೊಳ್ಳಲು ಸಂಶೋಧನೆಯ ಫಲಿತಾಂಶಗಳು ನೆರವಾಗಬಹುದು ಮತ್ತು ಕ್ಯಾನ್ಸರ್ ವಿರುದ್ಧ ಹೊಸ ಚಿಕಿತ್ಸಾ ಕ್ರಮಗಳನ್ನು ರೂಪಿಸಲು ಇಂಬು ನೀಡಬಹುದು ಎನ್ನುತ್ತಾರೆ ಸಂಶೋಧಕರು.

ವ್ಯಾಯಾಮವು ಕ್ಯಾನ್ಸರ್ ರೋಗಿಗಳ ಪಾಲಿಗೆ ಮುಖ್ಯವಾಗಿದೆ ಮತ್ತು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸಂಶೋಧನೆಯು ಸಿದ್ಧಪಡಿಸಿದೆ. ವ್ಯಾಯಾಮವನ್ನು ನಮ್ಮ ದಿನಚರಿಯ ಕಡ್ಡಾಯ ಭಾಗವಾಗಿಸಿಕೊಳ್ಳುವ ಅಗತ್ಯವಿದೆ. ದಿನಕ್ಕೆ ಕನಿಷ್ಠ 40 ನಿಮಿಷಗಳ ವ್ಯಾಯಾಮವು ಶರೀರದ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News