ಜೀವನಶೈಲಿಯು ಕಾರಣವಾಗಿರುವ ಸಮೀಪದೃಷ್ಟಿ ದೋಷವು ಗಂಭೀರ ಸಮಸ್ಯೆಗಳನ್ನುಂಟು ಮಾಡಬಲ್ಲದು
ಮಯೋಪಿಯಾ ಅಥವಾ ಸಮೀಪದೃಷ್ಟಿ ದೋಷವು ಹಲವಾರು ಗಂಭೀರ ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಗ್ರಾಮೀಣರಿಗೆ ಹೋಲಿಸಿದರೆ ನಗರ ಪ್ರದೇಶಗಳ ನಿವಾಸಿಗಳಲ್ಲಿ ವಿದ್ಯುನ್ಮಾನ ಸಾಧನಗಳು, ಶರೀರ ಸಮಸ್ಯೆಗಳು ಮತ್ತು ಕೈಗಾರೀಕರಣಗಳಿಂದಾಗಿ ಸಮೀಪದೃಷ್ಟಿ ದೋಷವು ಹೆಚ್ಚಿನ ಪ್ರಮಾಣದಲ್ಲಿದೆ.
ಸಮೀಪದೃಷ್ಟಿ ದೋಷವು ಗ್ಲಾಕೋಮಾ,ಕ್ಯಾಟರಾಕ್ಟ್,ಅಕ್ಷಿಪಟಲ ನಷ್ಟ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ರೆಟಿನಾ ಬೇರ್ಪಡುವಿಕೆಯು ಹಲವಾರು ದೇಶಗಳಲ್ಲಿ ಅಂಧತ್ವ ಮತ್ತು ದೃಷ್ಟಿ ದೋಷಗಳಿಗೆ ಪ್ರಮುಖ ಕಾರಣವಾಗಿದೆ. ಮೊಬೈಲ್ ಫೋನ್‌ಗಳ ಬಳಕೆಯನ್ನು ಸೀಮಿತಗೊಳಿಸುವುದರಿಂದ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ವ್ಯಾಯಾಮ ಮತ್ತು ದೈಹಿಕವಾಗಿ ಫಿಟ್ ಆಗಿರುವಂತಹ ಕೆಲವು ಜೀವನಶೈಲಿ ಬದಲಾವಣೆಗಳು ಉತ್ತಮ ದೃಷ್ಟಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಅಲ್ಲದೆ ನಿಯಮಿತ ಕಣ್ಣು ತಪಾಸಣೆಯು ಈ ನಿಟ್ಟಿನಲ್ಲಿ ಪೂರಕವಾಗುತ್ತದೆ.
ಸಮೀಪದೃಷ್ಟಿ ದೋಷವುಳ್ಳವರಿಗೆ ಹತ್ತಿರದಲ್ಲಿರುವ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ ಮತ್ತು ದೂರದಲ್ಲಿರುವ ವಸ್ತುಗಳು ಮಸುಕಾಗಿ ತೋರುತ್ತವೆ. ಇದು ನಗರ ಪ್ರದೇಶದಲ್ಲಿಯ ಜನರಿಗೆ ಹೆಚ್ಚಾಗಿ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ.
ಕೈಗಾರಿಕೀರಣ,ಕಾರ್ನಿಯಾದ ವಕ್ರತೆ,ಕುಟುಂಬದಲ್ಲಿ ಕಣ್ಣಿನ ಸಮಸ್ಯೆಯ ಇತಿಹಾಸ,ವಿದ್ಯುನ್ಮಾನ ಸಾಧನಗಳ ನಿರಂತರ ಬಳಕೆ,ವ್ಯಾಯಾಮದ ಕೊರತೆ,ಕಣ್ಣುಗಳಿಗೆ ಅತಿ ಸಮೀಪವಾದ ಕೆಲಸಗಳನ್ನು ಮಾಡುವುದು ಮತ್ತು ಮನೆಯೊಳಗೆ ಹೆಚ್ಚಿನ ಕಾಲ ಕಳೆಯುವುದು ಇವೆಲ್ಲ ನಗರ ಪ್ರದೇಶದಲ್ಲಿಯ ಜನರಲ್ಲಿ ಮಯೋಪಿಯಾ ಸಮಸ್ಯೆ ಹೆಚ್ಚಾಗಲು ಕಾರಣಗಳಾಗಿವೆ. ಆನ್‌ಲೈನ್ ತರಗತಿಗಳು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗದಿರುವುದು ಮಕ್ಕಳಲ್ಲೂ ಸಮೀಪ ದೃಷ್ಟಿ ದೋಷಕ್ಕೆ ಕಾರಣವಾಗುತ್ತಿವೆ. ಶೇ.4ರಿಂದ ಶೇ.5ರಷ್ಟು ಜನರು ಶರೀರ ರಚನಾ ದೋಷಗಳಿಂದಾಗಿ ಸಮೀಪದೃಷ್ಟಿಗೆ ತುತ್ತಾದರೆ ಶೇ.12ರಷ್ಟು ಜನರು ತಮ್ಮ ಜೀವನಶೈಲಿಗಳಿಂದಾಗಿ ಈ ಸಮಸ್ಯೆಗೆ ಒಳಗಾಗುತ್ತಾರೆ.
ಸಮೀಪದೃಷ್ಟಿ ದೋಷವಿರುವ ವಯಸ್ಕರಲ್ಲಿ ತಲೆನೋವು,ರಾತ್ರಿ ವೇಳೆ ವಸ್ತುಗಳನ್ನು ನೋಡಲು ಕಷ್ಟ ಮತ್ತು ಮಸುಕು ದೃಷ್ಟಿಯ ಲಕ್ಷಣಗಳಿದ್ದರೆ ಮಕ್ಕಳು ಆಗಾಗ್ಗೆ ಕಣ್ಣುಗಳನ್ನು ತಿಕ್ಕಿಕೊಳ್ಳುವುದು ಅಥವಾ ನಿರಂತರವಾಗಿ ಕಣ್ಣುಗಳನ್ನು ಮಿಟುಕಿಸುವುದನ್ನು ಮಾಡುತ್ತಿರುತ್ತಾರೆ. ಸಮೀಪ ದೃಷ್ಟಿ ದೋಷಕ್ಕೆ ಸಕಾಲದಲ್ಲಿ ವೈದ್ಯಕೀಯ ನೆರವು ಪಡೆಯದಿದ್ದರೆ ಅದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ನೋಟದಲ್ಲಿ ವ್ಯತ್ಯಯ,ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಕಣ್ಣುಗಳನ್ನು ಭಾಗಶಃ ಮುಚ್ಚುವ ಅಗತ್ಯ,ತಲೆನೋವಿನಿಂದ ಕಣ್ಣುಗಳಲ್ಲಿ ಬಿಗಿತ,ವಿಶೇಷವಾಗಿ ರಾತ್ರಿ ವೇಳೆ ವಾಹನಗಳನ್ನು ಚಲಾಯಿಸುವಾಗ ಸ್ಪಷ್ಟವಾಗಿ ಕಾಣದಿರುವುದು ಇವೂ ಸಮೀಪದೃಷ್ಟಿ ದೋಷದ ಲಕ್ಷಣಗಳಲ್ಲಿ ಸೇರಿವೆ.
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಸಮೀಪದೃಷ್ಟಿ ದೋಷವನ್ನು ನಿವಾರಿಸಲು ನೆರವಾಗುತ್ತದೆ. ಮಕ್ಕಳು ಮತ್ತು ವಯಸ್ಕರು ತಮ್ಮ ಸ್ಕೀನ್ ಸಮಯವನ್ನು ಕಡಿಮೆ ಮಾಡಿಕೊಳ್ಳಬೇಕು. ನಡಿಗೆ,ಓಟ ಅಥವಾ ಜಾಗಿಂಗ್‌ನಂತಹ ವ್ಯಾಯಾಮಗಳು ಈ ನಿಟ್ಟಿನಲ್ಲಿ ನೆರವಾಗುತ್ತವೆ. ಹೊರಾಂಗಣದಲ್ಲಿ ವ್ಯಾಯಾಮ ಮತ್ತು ಆಕಾಶ ವೀಕ್ಷಣೆ ಅಗತ್ಯ,ಏಕೆಂದರೆ ದೂರದಲ್ಲಿ ದೃಷ್ಟಿ ನೆಡುವುದು ಮಯೋಪಿಯಾವನ್ನು ತಗ್ಗಿಸಲು ನೆರವಾಗುತ್ತದೆ. ಸೂಕ್ತವಾದ ಕನ್ನಡಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ನಿಯಮಿತ ನೇತ್ರ ತಪಾಸಣೆ ಮಾಡಿಸುವುದನ್ನು ತಪ್ಪಿಸಬಾರದು. ಸಮಸ್ಯೆಯ ಗಂಭೀರತೆಗೆ ಅನುಗುಣವಾಗಿ ವೈದ್ಯರು ರಿಫ್ರಾಕ್ಟಿವ್ ಸರ್ಜರಿ ಅಥವಾ ವಕ್ರೀಕಾರಕ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು.