ನಾವೇಕೆ ಸೀನುತ್ತೇವೆ?
ಸೀನು ಬರುವುದು ಸಾಮಾನ್ಯ. ಕೆಲವರು ಅಪರೂಪಕ್ಕೆ ಸೀನಿದರೆ ಕೆಲವರು ಆಗಾಗ್ಗೆ ಸೀನುತ್ತಲೇ ಇರುತ್ತಾರೆ. ಇನ್ನು ಕೆಲವರು ಸೀನಲು ಆರಂಭಿಸಿದರೆ ಗಂಟೆಗಟ್ಟಲೆ ಸೀನುತ್ತಲೇ ಇರುತ್ತಾರೆ. ಸೀನು ನಮ್ಮ ಶರೀರದ ಪ್ರತಿವರ್ತನೆ ವ್ಯವಸ್ಥೆಯಾಗಿದೆ. ಅಲರ್ಜಿಯಾದಾಗಲೂ ಕೆಲವರಿಗೆ ಒಂದರ ಹಿಂದೊಂದರಂತೆ ಸೀನುಗಳು ಬರುತ್ತಲೇ ಇರುತ್ತವೆ. ತಾಪಮಾನ, ತುರಿಕೆ, ಸ್ರವಿಸುವಿಕೆ, ಕಿರಿಕಿರಿ, ಘಾಟು ವಾಸನೆ, ಹೊಗೆ, ಧೂಳು ಅಥವಾ ವಾಯುಮಾಲಿನ್ಯ ಮಟ್ಟ ಇವೆಲ್ಲ ಸೀನುವಿಕೆಗೆ ಕಾರಣಗಳಾಗಿವೆ. ಸೀನುವುದು ಶರೀರದ ರಕ್ಷಣಾ ವ್ಯವಸ್ಥೆಯಾಗಿದೆ. ಹಾನಿಕರವಾದ ಯಾವುದೇ ಬಾಹ್ಯ ಪ್ರತಿಜನಕ ಅಥವಾ ಬಾಹ್ಯ ವಸ್ತುವು ಒಳಪ್ರವೇಶಿಸಿದಾಗ ಶರೀರವು ಅದಕ್ಕೆ ಸೀನಿನ ಮೂಲಕ ಪ್ರತಿಕ್ರಿಯಿಸುತ್ತದೆ. ಅಂದ ಹಾಗೆ ಸೀನು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು.
ನಾವು ಯಾವುದೇ ಹೊಸ ವಾತಾವರಣಕ್ಕೆ ಒಡ್ಡಿಕೊಂಡಾಗ,ಅತ್ಯಂತ ಧಗೆಯಿರುವ ಕೋಣೆಯಿಂದ ಅತ್ಯಂತ ತಂಪು ಹವೆಯಿರುವ ಕೋಣೆಯನ್ನು ಪ್ರವೇಶಿಸಿದಾಗ ಶರೀರವು ಅದಕ್ಕೆ ಸಂವೇದಿಸುತ್ತದೆ. ಮೂಗು ನಮ್ಮ ಶರೀರದ ಸೆನ್ಸರ್ ಆಗಿದ್ದು,ಅದು ತಂಪು ಗಾಳಿ ನಮ್ಮ ಶರೀರದೊಳಗೆ ಪ್ರವೇಶಿಸುವುದನ್ನು ಗ್ರಹಿಸುತ್ತದೆ ಮತ್ತು ನಾವು ಸೀನಲು ಆರಂಭಿಸುತ್ತೇವೆ. ಸೀನುವಿಕೆಯು ಮುಖ್ಯವಾಗಿ ಪ್ರತಿಜನಕದಿಂದ ಉಂಟಾಗುವ ಶರೀರದ ಪ್ರತಿಕ್ರಿಯೆಯಾಗಿದ್ದು, ಈ ಬಾಹ್ಯ ಅಂಶದಿಂದಾಗಿ ಮೂಗಿನಲ್ಲಿಯ ಲೋಳೆಯ ಪದರ ಮತ್ತು ಮೂಗು ಕೆರಳುತ್ತವೆ. ಪ್ರತಿಜನಕದಿಂದಾಗಿ ಶರೀರವು ಸಿಸ್ಟಮೈನ್ ಅನು್ನ ಬಿಡುಗಡೆಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಮೂಗಿನ ಲೋಳೆಯ ಪದರದಲ್ಲಿ ಏನೋ ಬದಲಾವಣೆಯಾಗಿರುವಂತೆ ಶರೀರವು ವರ್ತಿಸುತ್ತದೆ. ತನಗೆ ಹಾನಿಕರವಾದ ಮೂಗಿನಲ್ಲಿಯ ಯಾವುದೇ ಬದಲಾವಣೆಗೆ ಶರೀರವು ಪ್ರತಿಕ್ರಿಯಿಸಿದಾಗ ಮೂಗಿನಿಂದ ಸೀನುಗಳು ಬರಲು ಆರಂಭವಾಗುತ್ತವೆ. ಶರೀರವು ತಾನು ಸಹಿಸದ ಕೆಲವು ಪ್ರತಿಜನಕಗಳು, ಅಲರ್ಜಿಕಾರಕಗಳ ಸಂಪರ್ಕಕ್ಕೆ ಬಂದಿದೆ ಎನ್ನುವುದನ್ನು ಸೀನು ಸೂಚಿಸುತ್ತದೆ.
ಸೀನುವಿಕೆ ಒಳ್ಳೆಯದು ಏಕೆ?
ಒಂದು ಮಿತಿಯವರೆಗೆ ಸೀನುವಿಕೆ ಒಳ್ಳೆಯದೇ. ನಾವು ಸೀನಿದಾಗ ನಮ್ಮ ಮೂಗಿನಲ್ಲಿ ಏನಾದರೂ ಧೂಳಿನ ಕಣ ಇತ್ಯಾದಿಗಳು ಸಿಕ್ಕಿಕೊಂಡಿದ್ದರೆ ಅವು ಹೊರಗೆ ತಳ್ಳಲ್ಪಡುತ್ತವೆ. ಮೂಗಿನಲ್ಲಿ ಏನಾದರೂ ಸ್ರವಿಸುವಿಕೆ,ಲೋಳೆ ಸಿಕ್ಕಿ ಹಾಕಿಕೊಂಡಿದ್ದರೆ ಅದೂ ಸೀನಿನೊಂದಿಗೆ ಹೊರಬಂದು ಮೂಗು ಸ್ವಚ್ಛವಾಗುತ್ತದೆ. ಕೆಲವು ಜನರು ತಾವೇ ಮೂಗು ಸೀಟಿಕೊಂಡಂತೆ ಸೀನುವಿಕೆಯು ಮೂಗಿನಲ್ಲಿ ಸಿಕ್ಕಿಕೊಂಡಿರುವ ಲೋಳೆಯನ್ನು ಹೊರಕ್ಕೆ ಹಾಕುವ ವ್ಯವಸ್ಥೆಯಾಗಿದೆ.
ನಮ್ಮ ಸುತ್ತುಮುತ್ತಲಿನ ಯಾರಾದರೂ ಸೀನತೊಡಗಿದರೆ,ಅದೂ ಈ ಕೋವಿಡ್ ಕಾಲದಲ್ಲಿ, ನಾವು ತಕ್ಷಣ ಜಾಗ್ರತರಾಗುತ್ತೇವೆ ಮತ್ತು ಆ ಜಾಗ ಸೂಕ್ತವಲ್ಲ ಎಂದು ಅನಿಸುವುದರಿಂದ ಅಲ್ಲಿಂದ ದೂರ ಸರಿಯುತ್ತವೆ. ಈ ರೀತಿಯಲ್ಲಿ ನಮ್ಮ ಆರೋಗ್ಯ ರಕ್ಷಣೆಗೂ ಸೀನು ನೆರವಾಗುತ್ತದೆ.
ಒಂದು ಸ್ಥಳದಲ್ಲಿದ್ದಾಗ ನಮಗೆ ಸೀನು ಆರಂಭವಾದರೆ ಆ ವಾತಾವರಣದಿಂದ ಹೊರಬೀಳುವ ಮೂಲಕ ಸೀನುವುದನ್ನು ನಿವಾರಿಸಬಹುದು. ಹೀಗಾಗಿ ಸೀನುವಿಕೆಯು ನಮ್ಮ ಸುತ್ತಲಿನ ವಾತಾವರಣವು ನಮ್ಮ ಶರೀರಕ್ಕೆ ಅಲರ್ಜಿಯನ್ನುಂಟು ಮಾಡುತ್ತದೆ ಎನ್ನುವುದಕ್ಕೆ ಪ್ರಾರಂಭಿಕ ಸೂಚನೆಯಾಗಿದೆ.
ಸೀನುವಿಕೆ ಕೆಟ್ಟದ್ದು ಏಕೆ?
ವ್ಯಕ್ತಿ ದಿನವಿಡೀ ಸೀನುತ್ತಲೇ ಇದ್ದರೆ ಮೂಗಿನಿಂದ ನೀರು ಇಳಿಯತೊಡಗುತ್ತದೆ, ಶರೀರದಲ್ಲಿ ಉರಿಯೂತ ಆರಂಭವಾಗುತ್ತದೆ. ಇಂತಹ ಸಂದರ್ಭವು ಅಲರ್ಜಿ ಪ್ರತಿಕ್ರಿಯೆಗಳು, ಸೋಂಕುಗಳು, ಅಸ್ತಮಾ ಮತ್ತು ಬ್ರಾಂಕೈಟಿಸ್‌ಗೆ ಆಹ್ವಾನ ನೀಡುತ್ತದೆ. ಶರೀರದಲ್ಲಿ ಅಲರ್ಜಿಯುಂಟಾದಾಗ ಇವೆಲ್ಲ ಸೋಂಕಿನ ಆರಂಭಿಕ ಹಂತಗಳಾಗಿರುತ್ತವೆ. ಇಂತಹ ಸ್ಥಿತಿಯು ಹಲವಾರು ಉಸಿರಾಟ ಮತ್ತು ಇಎನ್‌ಟಿ ಸಮಸ್ಯೆಗಳನ್ನುಂಟು ಮಾಡಬಹುದಾದ್ದರಿಂದ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.