ಈ ಹೂವಿನ ಆರೋಗ್ಯಲಾಭಗಳು ನಿಮಗೆ ಗೊತ್ತೇ?
ಕೆಲವು ಹೂವುಗಳು ನೋಡಲು ಸುಂದರ ಮಾತ್ರವಲ್ಲ, ಶರೀರಕ್ಕೆ ಹಲವಾರು ಆರೋಗ್ಯ ಲಾಭಗಳನ್ನು ನೀಡುವ ಇವುಗಳನ್ನು ನಾವು ತಿನ್ನಲೂಬಹುದು. ಗುಲಾಬಿ, ಮಲ್ಲಿಗೆ, ತಾವರೆ ಮತ್ತು ದಾಸವಾಳ ಇವು ತಿನ್ನಬಹುದಾದ ಕೆಲವು ಹೂವುಗಳಾಗಿವೆ. ಈ ಪೈಕಿ ದಾಸವಾಳ ಹೂವು ನೀಡುವ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ.
* ರಕ್ತದೊತ್ತಡವನ್ನು ತಗ್ಗಿಸುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರತಿದಿನ ದಾಸವಾಳದ ಕಷಾಯ ಸೇವನೆ ಲಾಭದಾಯಕವಾಗಿದೆ. ದಾಸವಾಳವನ್ನು ಸೇವಿಸುವುದರಿಂದ ಸಿಸ್ಟೋಲಿಕ್ ರಕ್ತದೊತ್ತಡ ಶೇ.11ರಷ್ಟು ಮತ್ತು ಡಯಸ್ಟೋಲಿಕ್ ರಕ್ತದೊತ್ತಡ ಶೇ.7ರಷ್ಟು ಕಡಿಮೆಯಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
ಎರಡು ಕಪ್ ನೀರನ್ನು ಕುದಿಸಿ ಅದಕ್ಕೆ ಒಂದು ದಾಸವಾಳ ಹೂವನ್ನು ಸೇರಿಸಿ. ಐದು ನಿಮಿಷ ಹಾಗೆಯೇ ಬಿಡಿ. ಬಳಿಕ ಅದನ್ನು ಸೋಸಿ ಒಂದು ಟೀ ಚಮಚ ಜೇನು ಅಥವಾ ಅರ್ಧ ಟೀ ಚಮಚ ಸ್ಟೀವಿಯಾಯನ್ನು ಸೇರಿಸಿದರೆ ದಾಸವಾಳದ ಕಷಾಯ ಸಿದ್ಧವಾಗುತ್ತದೆ. ಅದು ಬೆಚ್ಚಗಿರುವಾಗಲೇ ಕುಡಿದು ಬಿಡಿ. ದಿನಕ್ಕೆ ಎರಡು ಸಲ ಈ ಕಷಾಯವನ್ನು ಸೇವಿಸಬೇಕು.
ದಾಸವಾಳವನ್ನು ಜಗ್‌ನಲ್ಲಿ ನೆನೆಸಿ ಅದನ್ನು ಜಜ್ಜಿ ಅರ್ಧ ಕಪ್ ಚೂರು ಮಾಡಿದ ಪುದೀನಾ ಎಲೆಗಳು ಮತ್ತು ಒಂದು ಟೀ ಸ್ಪೂನ್ ಸ್ಟೀವಿಯಾಯನ್ನು ಸೇರಿಸಿಯೂ ಸೇವಿಸಬಹುದು. ಆದರೆ ಇದನ್ನು ದಿನಕ್ಕೆ ಅರ್ಧ ಜಗ್ ಮಾತ್ರ ಸೇವಿಸಬೇಕು.
ವಿ.ಸೂ.ದಾಸವಾಳದ ಹುಳಿ ಗುಣವು ಹಲ್ಲುಗಳ ಮೇಲೆ ಕಲೆಯನ್ನುಂಟು ಮಾಡಬಹುದು,ಹೀಗಾಗಿ ಪ್ರತಿಸಲ ಕಷಾಯವನ್ನು ಸೇವಿಸಿದ ಬಳಿಕ ಬಾಯಿಯನ್ನು ಸರಿಯಾಗಿ ಮುಕ್ಕಳಿಸುವುದು ಅಗತ್ಯವಾಗಿದೆ. . ಆರಂಭದಲ್ಲಿ ದಿನಕ್ಕೆ ಎರಡು ಕಪ್ ಮಾತ್ರ ಕಷಾಯವನ್ನು ಸೇವಿಸಬೇಕು ಮತ್ತು ರಕ್ತದೊತ್ತಡದ ಮೇಲೆ ನಿಗಾ ಇರಿಸಬೇಕು. ಕಡಿಮೆ ರಕ್ತದೊತ್ತಡ ಇರುವವರು ದಾಸವಾಳದ ಕಷಾಯವನ್ನು ಸೇವಿಸಬಾರದು.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಕೊರೋನ ವೈರಸ್ ಯುಗದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳತ್ತ ಜನರು ಒಲವು ತೋರಿಸುತ್ತಿದ್ದಾರೆ. ದಾಸವಾಳವು ಸೋಂಕುಗಳ ವಿರುದ್ಧ ಹೋರಾಡುವ ಬಿ ಮತ್ತು ಟಿ ಜೀವಕೋಶಗಳನ್ನು ಪ್ರಚೋದಿಸುತ್ತದೆ. ದಾಸವಾಳವನ್ನು ಸೇವಿಸುವ ಮೂಲಕ ಈ ಕೋಶಗಳನ್ನು ಕ್ರಿಯಾಶೀಲಗೊಳಿಸಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
* ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಅಧಿಕ ರಕ್ತದೊತ್ತಡವು ಮಾರಣಾಂತಿಕ ಪರಿಣಾಮಗಳನ್ನುಂಟು ಮಾಡುವ ಗಂಭೀರ ಸಮಸ್ಯೆಯಾಗಿದೆ. ಅದು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲ,ಮೂತ್ರಪಿಂಡ ಸಮಸ್ಯೆಗಳಿಗೂ ಕಾರಣವಾಗುತ್ತದೆ. ದಾಸವಾಳ ಹೂವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಆದರೆ ಇದೊಂದೇ ಸಾಲದು,ದೈಹಿಕ ಕ್ರಿಯಾಶೀಲತೆ ಮತ್ತು ಸೂಕ್ತ ಆಹಾರ ಕ್ರಮವೂ ಅಗತ್ಯವಾಗುತ್ತದೆ.
* ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
ಕೂದಲ ಆರೋಗ್ಯವನ್ನು ಹೆಚ್ಚಿಸುವ ಉತ್ಪನ್ನಗಳಲ್ಲಿರುವ ಪ್ರಮುಖ ಘಟಕಗಳಲ್ಲಿ ದಾಸವಾಳವು ಒಂದಾಗಿದೆ. ಹೊಟ್ಟು, ಕೂದಲು ಉದುರುವಿಕೆ ಇತ್ಯಾದಿಗಳು ಸೇರಿದಂತೆ ವಿವಿಧ ಕೂದಲು ಸಮಸ್ಯೆಗಳಿಗೆ ದಾಸವಾಳವನ್ನು ವಿಭಿನ್ನ ರೀತಿಗಳಲ್ಲಿ ಬಳಸಬಹುದು. ತಾಜಾ ದಾಸವಾಳದ ಹೂವಿನ ಪಕಳೆಗಳು ಮತ್ತು ಎಲೆಗಳ ಪೇಸ್ಟ್ ತಯಾರಿಸಿ ಅದನ್ನು ಕೂದಲು ಮತ್ತು ನೆತ್ತಿಗೆ ಲೇಪಿಸಿಕೊಳ್ಳಬೇಕು. ಇದರಿಂದ ಕೂದಲಿನ ಬೆಳವಣಿಗೆ ಹೆಚ್ಚುವ ಜೊತೆಗೆ ಅವು ಸದೃಢವಾಗುತ್ತವೆ ಮತ್ತು ಹೊಳಪನ್ನು ಪಡೆದುಕೊಳ್ಳುತ್ತವೆ.
* ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ
ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸಲೂ ದಾಸವಾಳವು ನೆರವಾಗುತ್ತದೆ. ದಾಸವಾಳದ ಸೇವನೆಯಿಂದ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಶೇ.22ರಷ್ಟು ಕಡಿಮೆಯಾಗುತ್ತದೆ.