ಕಾರ್ಡಿಯೊ ವ್ಯಾಯಾಮ ಕುರಿತ ಈ ಮಿಥ್ಯೆಗಳನ್ನು ನಂಬುವುದನ್ನು ನಿಲ್ಲಿಸಿ

Update: 2020-11-28 13:24 GMT

ಪುರುಷರಿರಲಿ ಅಥವಾ ಮಹಿಳೆಯರಿರಲಿ, ಪ್ರತಿಯೊಬ್ಬರೂ ತಮ್ಮ ಶರೀರ ಒಂದು ಚೂರೂ ಬೊಜ್ಜು ಇಲ್ಲದೆ ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಶರೀರದಲ್ಲಿ ಕೊಬ್ಬು ಸೇರಿಕೊಂಡಿದೆ ಎನ್ನುವುದು ಗೊತ್ತಾದಾಗ ಹೆಚ್ಚಿನವರು ಅದನ್ನು ಕರಗಿಸುವ ಬಗ್ಗೆ ಆಲೋಚಿಸುತ್ತಾರೆ. ಹೀಗೆ ದೇಹತೂಕವನ್ನು ತಗ್ಗಿಸಿಕೊಳ್ಳಲು ಮುಂದಾದಾಗ ಮೊದಲು ತಲೆಗೆ ಬರುವುದೇ ಯಾವುದಾದರೂ ಜಿಮ್‌ಗೆ ಸೇರಬೇಕು ಎನ್ನುವುದು. ಆದರೆ ಜಿಮ್‌ನಲ್ಲಿ ಮಾಡಬೇಕಿರುವ ಮೊದಲ ವ್ಯಾಯಾಮ ಯಾವುದು? ಪ್ರತಿಯೊಬ್ಬರೂ ಕಾರ್ಡಿಯೊ ವ್ಯಾಯಾಮಕ್ಕೆ ಆದ್ಯತೆಯನ್ನು ನೀಡುತ್ತಾರೆ. ಆದರೆ ಅದರಲ್ಲಿ ಯಾವೆಲ್ಲ ವ್ಯಾಯಾಮಗಳು ಒಳಗೊಂಡಿವೆ ಎನ್ನುವುದು ನಿಮಗೆ ಗೊತ್ತೇ? ಓಟ, ಸ್ಕಿಪ್ಪಿಂಗ್, ಸೈಕ್ಲಿಂಗ್ ಇತ್ಯಾದಿಗಳಂತಹ ನಿಮ್ಮ ಹೃದಯ ಬಡಿತ ದರವನ್ನು ಹೆಚ್ಚಿಸುವ ಚಟುವಟಿಕೆಗಳು ಕಾರ್ಡಿಯೊದಲ್ಲಿ ಸೇರಿವೆ. ಶರೀರದ ತೂಕ ಇಳಿಸಿಕೊಳ್ಳಲು ಕಾರ್ಡಿಯೊ ಅತ್ಯುತ್ತಮ ಆಯ್ಕೆಯಾಗಿದೆ ಎನ್ನುವುದು ನಿಮಗೆ ಗೊತ್ತೇ? ಅದು ಹೃದಯದ ಆರೋಗ್ಯವನ್ನು ಹೆಚ್ಚಿಸಲೂ ನೆರವಾಗುತ್ತದೆ. ಅದು ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ ಮತ್ತು ಕೆಲಸ ಮಾಡುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಾರ್ಡಿಯೊ ಮಾಡುವುದರಿಂದ ಕ್ಯಾಲೊರಿಗಳು ಕಡಿಮೆಯಾಗುತ್ತವೆ ಮತ್ತು ಶ್ವಾಸಕೋಶಗಳು ಆರೋಗ್ಯಯುತವಾಗಿರುತ್ತವೆ. ಕಾರ್ಡಿಯೊದ ಹಲವಾರು ಲಾಭಗಳ ಜೊತೆಗೆ ಕೆಲವು ಮಿಥ್ಯೆಗಳೂ ತಳುಕು ಹಾಕಿಕೊಂಡಿವೆ. ಇಲ್ಲಿವೆ ಅಂತಹ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು........

►ಮನೆಯಲ್ಲಿಯೇ ಕಾರ್ಡಿಯೊ ಮಾಡುವುದು ಓಟ ಮತ್ತು ಕಾಲುಗಳ ವ್ಯಾಯಾಮಕ್ಕೆ ಪರ್ಯಾಯ

ಜನರು ಯಾವಾಗಲೂ ಕಾರ್ಡಿಯೊಕ್ಕಿಂತ ಕಾಲುಗಳ ವ್ಯಾಯಾಮವೇ ಹೆಚ್ಚು ಒಳ್ಳೆಯದೆಂದು ಭಾವಿಸುತ್ತಾರೆ. ಆದರೆ ಇದು ಸಂಪೂರ್ಣ ಸುಳ್ಳು,ಏಕೆಂದರೆ ಈ ವ್ಯಾಯಾಮಗಳು ಸಂಪೂರ್ಣ ವಿಭಿನ್ನವಾಗಿವೆ ಮತ್ತು ಪರಸ್ಪರ ಪರ್ಯಾಯಗಳಲ್ಲ. ಕಾಲುಗಳಿಗೆ ವ್ಯಾಯಾಮವು ಸ್ನಾಯುಗಳು ಹೆಚ್ಚು ಹಿಗ್ಗುವಂತೆ ಮಾಡುತ್ತದೆ ಮತ್ತು ಕಾರ್ಡಿಯೊ ಶರೀರದ ತೂಕವನ್ನು ಕಡಿಮೆ ಮಾಡುತ್ತದೆ. ವರ್ಕ್ ಔಟ್ ಅಥವಾ ಕಾಲುಗಳಿಗೆ ಸಂಬಂಧಿಸಿದ ಎರೊಬಿಕ್ ವ್ಯಾಯಾಮವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅದು ಓಟಕ್ಕಿಂತಲೂ ಸುಲಭವಾಗಿದೆ,ಆದರೂ ಹೃದಯ ರಕ್ತನಾಳಗಳ ಕ್ಷಮತೆಯನ್ನು ಮತ್ತು ಸ್ನಾಯುಗಳ ಬಲವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ.

►ಕಾರ್ಡಿಯೊ ಮಾತ್ರ ಶರೀರದ ತೂಕವನ್ನು ಕಡಿಮೆ ಮಾಡುತ್ತದೆ

ಇದು ತಪ್ಪುಗ್ರಹಿಕೆಯಾಗಿದೆ,ಏಕೆಂದರೆ ತೂಕ ಇಳಿಕೆಯು ಕಾರ್ಡಿಯೊವನ್ನು ಮಾತ್ರ ಅವಲಂಬಿಸಿಲ್ಲ. ಸ್ಟ್ರೆಂಗ್ತ್ ಟ್ರೇನಿಂಗ್ ಅಥವಾ ಶಕ್ತಿ ತರಬೇತಿ,ಸೂಕ್ತವಾದ ಆಹಾರ ಕ್ರಮ ಮತ್ತು ಸಮತೋಲಿತ ಕಾರ್ಡಿಯೊ ಇವು ತೂಕ ಇಳಿಸಿಕೊಳ್ಳಲು ಅಗತ್ಯವಾಗಿವೆ. ಪೌಷ್ಟಿಕ ಆಹಾರವು ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ಅಂಶವಾಗಿದೆ,ಏಕೆಂದರೆ ಇದಿಲ್ಲದಿದ್ದರೆ ಕಾರ್ಡಿಯೊ ವ್ಯಾಯಾಮದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ನೀವು ಕಾರ್ಡಿಯೊ ಮಾಡುತ್ತೀರಾದರೆ ಸ್ಟ್ರೆಂಗ್ತ್ ಟ್ರೇನಿಂಗ್ ಅಗತ್ಯ,ಏಕೆಂದರೆ ಅದು ತೂಕವನ್ನು ತಗ್ಗಿಸಲು ಪೂರಕವಾಗಿದೆ. ಅದು ತೂಕ ಇಳಿಕೆ ಪ್ರಕ್ರಿಯೆಯನ್ನು ಉತ್ತೇಜಿಸಲು ಮತ್ತು ಸ್ನಾಯುಗಳನ್ನು ‘ ಲೀನ್ ಆ್ಯಂಡ್ ಫಿಟ್’ ಆಗಿಸಲು ನೆರವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ.

►ಕಾರ್ಡಿಯೊ ಮಾಡಲು ಜಿಮ್ ಅತ್ಯಗತ್ಯ

ಇದು ಇನ್ನೊಂದು ಮಿಥ್ಯೆಯಾಗಿದೆ. ಇದು ಜಿಮ್‌ಗೆ ಹೋಗಲು ನೆಪವಷ್ಟೇ. ನಿಮ್ಮ ಹೃದಯ ಬಡಿತ ದರವನ್ನು ಹೆಚ್ಚಿಸುವ ಯಾವುದೇ ಚಟುವಟಿಕೆಯನ್ನು ಕಾರ್ಡಿಯೊ ಎಂದು ಕರೆಯಲಾಗುತ್ತದೆ. ನೀವು ಇದರಲ್ಲಿ ಓಟ,ಜಂಪಿಂಗ್,ಸೈಕ್ಲಿಂಗ್ ಮತ್ತು ಹಲವಾರು ಇಂತಹುದೇ ಕ್ರಿಯೆಗಳನ್ನು ಸೇರಿಸಿಕೊಳ್ಳಬಹುದು. ಈ ಯಾವುದೇ ವ್ಯಾಯಾಮ ಮಾಡಲು ಜಿಮ್‌ಗೆ ಹೋಗಬೇಕಾದ ಅಗತ್ಯವಿಲ್ಲ. ಇದನ್ನು ಯಾವುದೇ ಪಾರ್ಕ್‌ನಲ್ಲಿ,ಖುಲ್ಲಾ ಸ್ಥಳದಲ್ಲಿ ಅಥವಾ ಮನೆಯಲ್ಲಿಯೂ ಮಾಡಬಹುದು.

►ಖಾಲಿ ಹೊಟ್ಟೆಯಲ್ಲಿ ಕಾರ್ಡಿಯೊ ಮಾಡಬೇಕು

ಹಸಿದಿರುವುದರಿಂದ ತೂಕವನ್ನು ಬಹುಬೇಗನೆ ಕಡಿಮೆ ಮಾಡಿಕೊಳ್ಳಬಹುದು ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಇದು ಸಂಪೂರ್ಣವಾಗಿ ತಪ್ಪುಗ್ರಹಿಕೆಯಾಗಿದೆ. ನೀವು ವ್ಯಾಯಾಮ ಮಾಡುವಾಗ ನಿಮ್ಮ ಶರೀರದಲ್ಲಿ ಶಕ್ತಿಯಿರುವುದು ಅಗತ್ಯವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾರ್ಡಿಯೊ ಮಾಡುವುದರಿಂದ ನಿಮ್ಮ ಶರೀರವು ನಿಶ್ಶಕ್ತಗೊಳ್ಳುತ್ತದೆ ಮತ್ತು ತೂಕ ಎಂದೂ ಕಡಿಮೆಯಾಗುವುದಿಲ್ಲ. ಹೀಗಾಗಿ ಖಾಲಿಹೊಟ್ಟೆಯಲ್ಲಿ ಎಂದಿಗೂ ಕಾರ್ಡಿಯೊ ವ್ಯಾಯಾಮ ಮಾಡಬಾರದು.

►ಕನಿಷ್ಠ ಒಂದು ಗಂಟೆಯಾದರೂ ಕಾರ್ಡಿಯೊ ವ್ಯಾಯಾಮ ಮಾಡಬೇಕು

ಕಾರ್ಡಿಯೊ ವ್ಯಾಯಾಮವು ಕ್ಯಾಲೊರಿಗಳನ್ನು ಕರಗಿಸುತ್ತದೆ. ನೀವು ಒಂದು ಗಂಟೆ ಅಥವಾ 20 ನಿಮಿಷ ಓಡಿದರೂ ಅದು ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹೈ ಇಂಟೆನ್ಸಿವ್ ಇಂಟರ್‌ವಲ್ ಟ್ರೇನಿಂಗ್ (ಎಚ್‌ಐಐಟಿ) ನಿಂದ ಮಾತ್ರ ದೇಹದ ತೂಕವನ್ನು ಇಳಿಸಬಹುದು ಎಂದು ಹೆಚ್ಚಿನವರು ಭಾವಿಸುತ್ತಿದ್ದಾರೆ. ಆದರೆ ಇದೊಂದು ಮಿಥ್ಯೆಯಷ್ಟೇ. ನೀವು ಸ್ಥಿರತೆಯೊಂದಿಗೆ ಕಾರ್ಡಿಯೊ ಮಾಡಿದರೂ ಅದು ಲಾಭವನ್ನು ನೀಡುತ್ತದೆ ಮತ್ತು ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News