ಏನಿದು ಒತ್ತಡದ ತಲೆನೋವು? ಇಲ್ಲಿವೆ ಕಾರಣಗಳು ಮತ್ತು ಲಕ್ಷಣಗಳು

Update: 2020-12-01 18:33 GMT

ಆಧುನಿಕ ಜೀವನದ ಭಾಗವಾಗಿರುವ ಅತಿಯಾದ ಒತ್ತಡಗಳು ಹೆಚ್ಚಿನವರಲ್ಲಿ ತಳಮಳ,ಅಶಾಂತಿಯನ್ನುಂಟು ಮಾಡುತ್ತವೆ. ಈ ಒತ್ತಡಗಳನ್ನು ಸಹಿಸಲು ಸಾಧ್ಯವಾಗದಿದ್ದಾಗ ಅದು ವಿವಿಧ ಅಸ್ವಸ್ಥತೆಗಳ ರೂಪದಲ್ಲಿ ವ್ಯಕ್ತಗೊಳ್ಳುತ್ತದೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವೆಂದರೆ ಟೆನ್ಶನ್ ಹೆಡೇಕ್ ಅಥವಾ ಒತ್ತಡದ ತಲೆನೋವು.

ಹೆಸರೇ ಸೂಚಿಸುವಂತೆ ಒಂದು ರೀತಿಯ ಮಾನಸಿಕ ಅಥವಾ ಸ್ನಾಯು ಒತ್ತಡವು ಈ ತಲೆನೋವನ್ನುಂಟು ಮಾಡುತ್ತದೆ. ಒತ್ತಡದ ತಲೆನೋವಿಗೆ ನಿಖರವಾದ ಕಾರಣವಿನ್ನೂ ಗೊತ್ತಾಗಿಲ್ಲವಾ ದರೂ ಒತ್ತಡ ಈ ತಲೆನೋವಿಗೆ ಮೂಲಕಾರಣವಾಗಿರಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ. ಯಾವುದೇ ಪರಿವರ್ತನೆಗೆ ಶರೀರವು ಮಾನಸಿಕ,ದೈಹಿಕ ಮತ್ತು ಭಾವನಾತ್ಮಕ ಸ್ಪಂದನಗಳ ಮೂಲಕ ಪ್ರತಿಕ್ರಿಯಿಸುತ್ತದೆ ಮತ್ತು ಇದು ಆತಂಕ,ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ. ಕೆಲವೊಮ್ಮೆ ಮೊದಲ ಬಾರಿಗೆ ಅಪ್ಪನೋ ಅಮ್ಮನೋ ಆದ,ಕೆಲಸದಲ್ಲಿ ಬಡ್ತಿ ದೊರೆತಂತಹ ಸಕಾರಾತ್ಮಕ ಪರಿವರ್ತನೆಗಳೂ ಅತಿಯಾದ ಉತ್ಸಾಹಕ್ಕೆ ಕಾರಣವಾಗುವ ಜೊತೆಗೆ ಆತಂಕವನ್ನು ಸೃಷ್ಟಿಸಬಲ್ಲವು. ಧನಾತ್ಮಕ ಅಥವಾ ಋಣಾತ್ಮಕ ಭಾವನೆಗಳು ಹೆಚ್ಚಾದಾಗ ಮುಖದ ಮತ್ತು ಕುತ್ತಿಗೆಯ ಸ್ನಾಯುಗಳು ಅತಿಯಾಗಿ ಸಂಕುಚಿತಗೊಳ್ಳುತ್ತವೆ ಮತ್ತು ಇದು ಒತ್ತಡ ವಿಧದ ತಲೆನೋವನ್ನುಂಟು ಮಾಡುತ್ತದೆ. ಆತಂಕ, ಹಸಿವು,ಖಿನ್ನತೆ,ದಂತ ಸಮಸ್ಯೆಗಳು ಮತ್ತು ಧೂಮ್ರಪಾನ ಇವೂ ಇಂತಹ ತಲೆನೋವು ಉಂಟಾಗಲು ಪೂರಕವಾಗಿವೆ.

ಸಾಮಾನ್ಯವಾಗಿ ಒತ್ತಡದ ತಲೆನೋವು ಉಂಟಾದಾಗ ತಲೆಯ ಸುತ್ತ ಬಿಗಿದಂತಹ ಅನುಭವವಾಗುತ್ತದೆ. ಕೆಲವೊಮ್ಮೆ ಈ ತಲೆನೋವುಗಳು ತಲೆಯ ಎರಡೂ ಪಾರ್ಶ್ವಗಳಲ್ಲಿರಬಹುದು ಆಥವಾ ಕಿವಿಯ ಹಿಂಭಾಗದಲ್ಲಿ ನೋವಿನೊಂದಿಗೆ ಗುರುತಿಸಿಕೊಂಡಿರಬಹುದು. ಈ ತಲೆನೋವುಗಳು ಸಾಮಾನ್ಯವಾಗಿ ಸೌಮ್ಯದಿಂದ ಮಧ್ಯಮ ತೀವ್ರತೆಯನ್ನು ಹೊಂದಿದ್ದು,ದೈನಂದಿನ ಚಟುವಟಿಕೆಗಳನ್ನು ನಡೆಸುತ್ತಿರುವಾಗ ನೋವು ಹೆಚ್ಚುವುದಿಲ್ಲ. ಸಾಮಾನ್ಯವಾಗಿ ಒತ್ತಡದ ತಲೆನೋವು ತಿಂಗಳಲ್ಲಿ ಒಂದೆರಡು ಬಾರಿ ಕಾಣಿಸಿಕೊಳ್ಳಬಹುದು,ಆದರೆ ಕೆಲವು ಪ್ರಕರಣಗಳಲ್ಲಿ ಆವರ್ತನೆಯು ಹೆಚ್ಚಾಗಬಹುದು ಮತ್ತು ನೋವು ದೀರ್ಘಕಾಲಿಕವಾಗಿರಬಹುದು. ಒತ್ತಡದ ತಲೆನೋವು ಅಪರೂಪಕ್ಕೆ ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳನ್ನು ಪ್ರಕಟಿಸಬಹುದು.

ಮೈಗ್ರೇನ್ ಜನರು ಹೆಚ್ಚು ಸಾಮಾನ್ಯವಾಗಿ ಅನುಭವಿಸುವ ಇನ್ನೊಂದು ವಿಧದ ತಲೆನೋವು ಆಗಿದೆ. ಇದಕ್ಕೆ ಹೋಲಿಸಿದರೆ ಒತ್ತಡದ ತಲೆನೋವು ಸೌಮ್ಯ ಸ್ವರೂಪದ್ದಾಗಿದೆ. ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಲಭಿಸುವ ಮಾತ್ರೆಗಳು ಈ ತಲೆನೋವನ್ನು ಕ್ಷಿಪ್ರವಾಗಿ ಶಮನಿಸುತ್ತವೆ,ಹೀಗಾಗಿ ಇಂತಹ ತಲೆನೋವು ಉಂಟಾದಾಗ ಜನರು ವೈದ್ಯರ ಬಳಿಗೆ ಧಾವಿಸುವುದು ಕಡಿಮೆ ಎನ್ನಬಹುದು. ಕೆಲವೊಮ್ಮೆ ಒತ್ತಡದ ಮತ್ತು ಮೈಗ್ರೇನ್ ಮಿಳಿತಗೊಂಡ ತಲೆನೋವು ಉಂಟಾಗಬಹುದು ಮತ್ತು ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ರೋಗನಿರ್ಧಾರವು ಗೊಂದಲಕಾರಿಯಾಗಿರುತ್ತದೆ ಮತ್ತು ಈ ತಲೆನೋವನ್ನು ತಜ್ಞರು ಮಾತ್ರ ನಿಖರವಾಗಿ ಗುರುತಿಸಬಲ್ಲರು. ಯಾವುದೇ ವಿಧದ ತಲೆನೋವು ಆಗಾಗ್ಗೆ ಉಂಟಾಗುತ್ತಿದ್ದರೆ ಮತ್ತು ಕಿರಿಕಿರಿಯನ್ನುಂಟು ಮಾಡುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News