ಬಾಯಿಯ ಆರೋಗ್ಯದ ಕುರಿತು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು

Update: 2020-12-01 18:52 GMT

ಬಾಯಿಯ ಆರೋಗ್ಯದ ಕುರಿತು ಹಲವಾರು ಮಿಥ್ಯೆಗಳು ವರ್ಷಗಳಿಂದಲೂ ಜನರಲ್ಲಿ ಮನೆಮಾಡಿವೆ ಮತ್ತು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಗೊಳ್ಳುತ್ತಲೇ ಇವೆ. ಮುದ್ರಿತ ರೂಪದಲ್ಲಿ ಅಥವಾ ಆನ್‌ಲೈನ್‌ನಲ್ಲಿ ಬಾಯಿಯ ನೈರ್ಮಲ್ಯ ಕಾಯ್ದುಕೊಳ್ಳುವ ಬಗ್ಗೆ ಕೆಲವು ಮಾಹಿತಿಗಳು ದೊರೆಯಬಹುದು. ಆದರೆ ಇವುಗಳ ಪೈಕಿ ಹೆಚ್ಚಿನವು ಸುಳ್ಳು ಅಥವಾ ದಾರಿ ತಪ್ಪಿಸುವ ಮಾಹಿತಿಗಳಾಗಿರಬಹುದು. ಬಾಯಿಯ ಆರೋಗ್ಯದ ಕುರಿತು ಕೆಲವು ಮಿಥ್ಯೆಗಳು ಇಲ್ಲಿವೆ....

* ಸಿಹಿ ಮತ್ತು ಸಕ್ಕರೆಯನ್ನು ತಿನ್ನುವುದರಿಂದ ಮಾತ್ರ ದಂತಕುಳಿಗಳಾಗುತ್ತವೆ

 -ಸಕ್ಕರೆಯನ್ನು,ವಿಶೇಷವಾಗಿ ಸಂಸ್ಕರಿತ ಸಕ್ಕರೆಯನ್ನು ಅತಿಯಾಗಿ ಸೇವಿಸುವುದು ದಂತಕ್ಷಯದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ನೀವು ಆಹಾರದಲ್ಲಿ ಬಹಳಷ್ಟು ಸಕ್ಕರೆಯನ್ನು ಸೇವಿಸದಿದ್ದರೂ ನೀವು ಹಲ್ಲುಗಳನ್ನು ಸರಿಯಾಗಿ ಬ್ರಷ್ ಮತ್ತು ಫ್ಲಾಸಿಂಗ್ ಮಾಡುತ್ತಿಲ್ಲವಾದರೆ ದಂತಕ್ಷಯದ ಅಪಾಯವಿದ್ದೇ ಇದೆ. ಸಕ್ಕರೆಯೊಂದೇ ದಂತಕ್ಷಯವನ್ನುಂಟು ಮಾಡುವುದಿಲ್ಲ. ಬಾಯಿಯಲ್ಲಿಯ ಕೆಲವು ಬ್ಯಾಕ್ಟೀರಿಯಾಗಳು ಆಹಾರದಲ್ಲಿಯ ಅತಿಯಾದ ಸಕ್ಕರೆಗೆ ಪ್ರತಿವರ್ತಿಸಿ ಆಮ್ಲಗಳನ್ನು ಬಿಡುಗಡೆಗೊಳಿಸುತ್ತವೆ ಮತ್ತು ಇವು ಹಲ್ಲುಗಳ ಮೇಲಿನ ರಕ್ಷಣಾ ಪದರವು ಕರಗಲು ಕಾರಣವಾಗುತ್ತವೆ.

* ಗಟ್ಟಿಯಾಗಿ ಬ್ರಷ್ ಮಾಡುವುದರಿಂದ ಹಲ್ಲುಗಳು ಹೆಚ್ಚು ಸ್ವಚ್ಛವಾಗುತ್ತವೆ

-ಇದು ಸಂಪೂರ್ಣ ತಪ್ಪುಗ್ರಹಿಕೆಯಾಗಿದೆ. ಹಾಗೆ ಮಾಡುವುದರಿಂದ ಹಾನಿಯುಂಟಾಗುವ ಸಾಧ್ಯತೆಯೇ ಹೆಚ್ಚು. ಹೆಚ್ಚು ಗಟ್ಟಿಯಾಗಿ ಬ್ರಷ್ ಮಾಡಿದಷ್ಟೂ ಎನಾಮಲ್‌ಗೆ ಹೆಚ್ಚು ಹಾನಿಯಾಗುತ್ತದೆ ಮತ್ತು ಹಲ್ಲುಗಳ ಸ್ವರೂಪವೇ ಹಾಳಾಗುತ್ತದೆ. ಅಲ್ಲದೆ ವಸಡುಗಳಿಗೂ ಹಾನಿಯುಂಟಾಗುತ್ತದೆ. ಹೀಗಾಗಿ ಮೃದುವಾದ ಎಳೆಗಳಿರುವ ಬ್ರಷ್‌ನಿಂದ ಮೆಲ್ಲಗೆ ಹಲ್ಲುಗಳನ್ನುಜ್ಜಿದರೆ ಸಾಕು. ಬ್ರಷ್‌ನ್ನು ಹಲ್ಲುಗಳಿಗೆ 45 ಡಿಗ್ರಿ ಕೋನದಲ್ಲಿ ಹಿಡಿದುಕೊಂಡು ವೃತ್ತಾಕಾರವಾಗಿ ಉಜ್ಜುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

* ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಕೆಲವು ದಿನಗಳ ಕಾಲ ಬ್ರಷ್ ಮಾಡಬಾರದು

-ಬ್ರಷ್ ಅಥವಾ ಫ್ಲಾಸಿಂಗ್ ಮಾಡುವಾಗ ವಸಡುಗಳಿಂದ ರಕ್ತಸ್ರಾವಕ್ಕೆ ಅವುಗಳ ಉರಿಯೂತವು ಕಾರಣವಾಗಿರುತ್ತದೆ. ಪಾಚಿ ಸಂಗ್ರಹಗೊಂಡು ವಸಡು ರೋಗವನ್ನುಂಟು ಮಾಡುವುದು ಈ ರಕ್ತಸ್ರಾವಕ್ಕೆ ಕಾರಣವಾಗಿದೆ. ವಸಡುಗಳಲ್ಲಿ ರಕ್ತಸ್ರಾವವು ನಮ್ಮ ಸಾಮಾನ್ಯ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನೂ ಪ್ರತಿಬಿಂಬಿಸಬಹುದು. ವಸಡುಗಳಲ್ಲಿ ರಕ್ತಸ್ರಾವವಿದ್ದರೆ ಹಲ್ಲುಗಳನ್ನು ಉಜ್ಜುವುದನ್ನು ನಿಲ್ಲಿಸಬೇಕಿಲ್ಲ ಮತ್ತು ದಂತವೈದ್ಯರನ್ನು ಭೇಟಿಯಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

* ಫ್ಲಾಸಿಂಗ್ ಬಾಯಿಯ ಆರೋಗ್ಯಕ್ಕೆ ಪೂರಕವಲ್ಲ ಮತ್ತು ಅದು ಹಲ್ಲುಗಳ ನಡುವೆ ಜಾಗವನ್ನುಂಟು ಮಾಡುತ್ತದೆ

 -ಫ್ಲಾಸಿಂಗ್ ಪಾಚಿಯನ್ನು ಮತ್ತು ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಆಹಾರ ಕಣಗಳನ್ನು ನಿವಾರಿಸುತ್ತದೆ. ಹಲ್ಲುಗಳು ಪರಸ್ಪರ ನಿಕಟವಾಗಿದ್ದರೆ ಫ್ಲಾಸಿಂಗ್ ಅಗತ್ಯವಿಲ್ಲ ಎನ್ನುವುದು ನಿಜ. ಆದರೆ ಹಲ್ಲುಗಳು ದೂರವಾಗಿದ್ದರೆ ನಿಯಮಿತವಾಗಿ ಫ್ಲಾಗಿಂಗ್ ಮಾಡುವುದು ಬಾಯಿಯ ಆರೋಗ್ಯಕ್ಕೆ ಪೂರಕವಾಗುತ್ತದೆ.

* ಬಾಯಿಯ ಆರೋಗ್ಯ ಅದಕ್ಕೆ ಮಾತ್ರ ಸಂಬಂಧಿಸಿದೆ

- ಇದು ಹಲವರನ್ನು ದಾರಿತಪ್ಪಿಸುತ್ತಿರುವ ಸಾಮಾನ್ಯ ನಂಬಿಕೆಯಾಗಿದೆ. ಬಾಯಿಯಲ್ಲಿ,ವಿಶೇಷವಾಗಿ ವಸಡುಗಳಲ್ಲಿರುವ ಬ್ಯಾಕ್ಟೀರಿಯಾಗಳು ಶರೀರದ ಇತರ ಭಾಗಗಳಿಗೂ ಹರಡಬಲ್ಲವು. ಹೃದ್ರೋಗ,ಮಧುಮೇಹ ಮತ್ತು ಕೆಲವು ವಿಧಗಳ ಕ್ಯಾನ್ಸರ್‌ಗಳು ಹಾಗೂ ವಸಡು ರೋಗಗಳ ನಡುವೆ ಸಂಬಂಧವಿದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಬಾಯಿಯ ಆರೋಗ್ಯವು ಶರೀರದ ಇತರ ಭಾಗದೊಂದಿಗೆ ಗುರುತಿಸಿಕೊಂಡಿದೆ.

* ವಯಸ್ಸಾಗುತ್ತಿದ್ದಂತೆ ಹಲ್ಲುಗಳು ಆರೋಗ್ಯವನ್ನು ಕಳೆದುಕೊಳ್ಳುತ್ತವೆ

ಸಣ್ಣ ವಯಸ್ಸು ಎಂದ ಮಾತ್ರಕ್ಕೆ ಹಲ್ಲುಗಳು ಆರೋಗ್ಯಯುತವಾಗಿರುತ್ತವೆ ಎಂದೇನಿಲ್ಲ. ಏಕೆಂದರೆ ತಮ್ಮ ಹಲ್ಲುಗಳ ಬಗ್ಗೆ ಸೂಕ್ತ ಕಾಳಜಿ ವಹಿಸದ ಹದಿಹರೆಯದವರು ಮತ್ತು ಯುವಕರು ಅವುಗಳನ್ನು ಕಳೆದುಕೊಂಡಿರುವ ಎಷ್ಟೋ ನಿದರ್ಶನಗಳಿವೆ. ಬಾಲ್ಯದಲ್ಲಿ ಮತ್ತು ಹರೆಯದಲ್ಲಿ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವವರ ಹಲ್ಲುಗಳು ಅವರಿಗೆ ವಯಸ್ಸಾದರೂ ಆರೋಗ್ಯಯುತವಾಗಿಯೇ ಇರುತ್ತವೆ.

* ಟೂಥ್‌ಬ್ರಷ್‌ಗೆ ಕ್ಯಾಪ್ ಹಾಕಿಡುವುದರಿಂದ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ದೊರೆಯುತ್ತದೆ

-ಇದು ಇನ್ನೊಂದು ತಪ್ಪುಗ್ರಹಿಕೆ. ಟೂಥ್‌ಬ್ರಷ್‌ನ ಎಳೆಗಳ ಮೇಲೆ ಬ್ಯಾಕ್ಟೀರಿಯಾಗಳು ವೃದ್ಧಿಯಾಗದಿರಲು ಅದು ಚೆನ್ನಾಗಿ ಒಣಗಿರಬೇಕಾಗುತ್ತದೆ. ಬ್ಯಾಕ್ಟೀರಿಯಾಗಳಿಂದ ನಿಮ್ಮ ಬ್ರಷ್‌ನ್ನು ಕಾಪಾಡಲು ಅದನ್ನು ಇತರರ ಬ್ರಷ್‌ಗಳ ಜೊತೆಯಲ್ಲಿಡಬೇಡಿ. ಬ್ರಷ್‌ಗೆ ಕ್ಯಾಪ್ ಹಾಕುವ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು ಕೈಬಿಡಿ. ಪ್ರತಿ ಬಾರಿ ಹಲ್ಲುಜ್ಜಿದಾಗಲೂ ಬ್ರಷ್‌ನ್ನು ಚೆನ್ನಾಗಿ ತೊಳೆದು ಒಣಗಲು ಬಿಡಿ.

* ಊಟವಾದ ತಕ್ಷಣ ಹಲ್ಲುಜ್ಜುವುದು ಒಳ್ಳೆಯ ಅಭ್ಯಾಸ

 - ನಾವು ಸೇವಿಸುವ ಪಾನೀಯಗಳು ಮತ್ತು ಆಹಾರದಲ್ಲಿರುವ ಆಮ್ಲದ ಅಂಶವು ಹಲ್ಲುಗಳ ಮೇಲಿನ ಎನಾಮಲ್ ಅನ್ನು ಮೃದುವಾಗಿಸುತ್ತದೆ. ಹೀಗಾಗಿ ಊಟವಾದ ತಕ್ಷಣ ಹಲ್ಲುಜ್ಜುವುದರಿಂದ ಮೃದುವಾಗಿರುವ ಎನಾಮಲ್ ಹಾನಿಗೀಡಾಗುತ್ತದೆ. ಆದ್ದರಿಂದ ಊಟವಾದ ಕನಿಷ್ಠ 30 ನಿಮಿಷಗಳ ಬಳಿಕವೇ ಬ್ರಷ್ ಮಾಡಬೇಕು. ಈ ಅವಧಿಯಲ್ಲಿ ಬಾಯಿಯಲ್ಲಿಯ ಜೊಲ್ಲು ಆಮ್ಲದ ಅಂಶವನ್ನು ದುರ್ಬಲಗೊಳಿಸಿ ಅದನ್ನು ನಿವಾರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News