ನಿಮ್ಮ ಹಲ್ಲುಗಳು ಬಿಳಿಯಾಗಬೇಕೇ? ಹೀಗೆ ಮಾಡಿ.....
ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ ಎಂಬ ಚಿಂತೆ ಹಲವರನ್ನು ಆಗಾಗ್ಗೆ ಕಾಡುತ್ತಿರುತ್ತದೆ. ಹಲ್ಲುಗಳು ಬಿಳಿಯಾಗಿರಲು ಬ್ರಷ್ ಮಾಡುವುದೊಂದೇ ಸಾಲುವುದಿಲ್ಲ,ಆದರೆ ಇದಕ್ಕಾಗಿ ಇತರ ಪರಿಹಾರಗಳೂ ಇವೆ. ನಾವು ಆಹಾರವನ್ನು ಸೇವಿಸಿದ ಬಳಿಕ ಅದರ ಅವಶೇಷಗಳು ಹಲ್ಲುಗಳ ಮೇಲೆ ಸಂಗ್ರಹಗೊಂಡಿರುತ್ತವೆ ಮತ್ತು ಇದರಿಂದಾಗಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನೈಸರ್ಗಿಕ ಪರಿಹಾರಗಳು ಹಲ್ಲುಗಳ ಆರೋಗ್ಯವನ್ನು ಕಾಯ್ದುಕೊಳ್ಳಲೂ ನೆರವಾಗುತ್ತವೆ. ಹಲವರು ತಮ್ಮ ಹಲ್ಲುಗಳ ಬಣ್ಣದಿಂದಾಗಿ ಸಾಮಾಜಿಕವಾಗಿ ಬೆರೆಯಲು ಮುಜುಗರ ಪಡುವುದೂ ಉಂಟು. ಹಲ್ಲುಗಳನ್ನು ಬಿಳಿಯಾಗಿಸಲು ಕೆಲವು ಸರಳ ಮನೆಮದ್ದುಗಳು ಇಲ್ಲಿವೆ. ಈ ಮದ್ದುಗಳನ್ನು ಮನೆಯಲ್ಲಿ ಬಳಸುವ ಮುನ್ನ ನಿಮ್ಮ ದಂತವೈದ್ಯರ ಸಲಹೆ ಪಡೆದುಕೊಳ್ಳಬಹುದು.
* ಅಡಿಗೆ ಸೋಡಾ
ಹಲ್ಲುಗಳ ಹಳದಿ ಬಣ್ಣವನ್ನು ನಿವಾರಿಸಲು ಅಡಿಗೆ ಸೋಡಾವನ್ನು ಬಳಸಲಾಗುತ್ತದೆ. ಅಡಿಗೆ ಸೋಡಾವನ್ನು ಹಲ್ಲುಗಳಿಗೆ ಲೇಪಿಸಿ 3ರಿಂದ 4 ನಿಮಿಷಗಳ ಹಾಗೆಯೇ ಬಿಟ್ಟು ಬಳಿಕ ಬ್ರಷ್ ಮಾಡಬೇಕು. ನಿಮ್ಮ ಟೂಥ್‌ಪೇಸ್ಟ್‌ನಲ್ಲಿ ಚಿಟಿಕೆ ಅಡಿಗೆ ಸೋಡಾವನ್ನು ಸೇರಿಸಿಕೊಂಡೂ ಹಲ್ಲುಗಳನ್ನು ಬ್ರಷ್ ಮಾಡಬಹುದು.
* ಸಾಸಿವೆ ಎಣ್ಣೆ
ಕನಿಷ್ಠ ವಾರಕ್ಕೆರಡು ಬಾರಿ ಅರ್ಧ ಚಮಚ ಉಪ್ಪು ಮತ್ತು ಕೆಲವು ಹನಿ ಸಾಸಿವೆ ಎಣ್ಣೆಯ ಮಿಶ್ರಣವನ್ನು ಹಲ್ಲುಗಳಿಗೆ ಲೇಪಿಸಿ ಮಸಾಜ್ ಮಾಡುವುದು ಉತ್ತಮ ಪರಿಣಾಮವನ್ನು ನೀಡುತ್ತದೆ. ಹಲ್ಲುಗಳನ್ನು ಬಿಳಿಯಾಗಿಸಲು ಮತ್ತು ಅವುಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಸಿವೆ ಎಣ್ಣೆಯು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಮದ್ದಾಗಿದೆ.
* ಬೇವು
ಹಲ್ಲುಗಳ ಹಳದಿ ಬಣ್ಣವನ್ನು ನಿವಾರಿಸುವಲ್ಲಿ ಬೇವು ಪರಿಣಾಮಕಾರಿಯಾಗಿದೆ. ಬೇವಿನ ಕಡ್ಡಿಯನ್ನು ಬ್ರಷ್‌ನಂತೆ ಮಾಡಿಕೊಂಡು ಹಲ್ಲುಜ್ಜುವುದರಿಂದ ಬಿಳಿಯಾಗುವ ಜೊತೆಗೆ ಅದರ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಯಾವುದೇ ದಂತ ಸಮಸ್ಯೆಗಳನ್ನು ತಡೆಯುತ್ತವೆ.
* ಕಿತ್ತಳೆ ಸಿಪ್ಪೆ
ಹಲ್ಲುಗಳನ್ನು ಬಿಳಿಯಾಗಿಸುವಲ್ಲಿ ಕಿತ್ತಳೆ ಸಿಪ್ಪೆಯು ಉತ್ತಮವಾಗಿದೆ. ಅದು ಬಾಯಿಯ ಒಳಭಾಗವನ್ನೂ ತಾಜಾ ಆಗಿರಿಸುತ್ತದೆ.
* ಲಿಂಬೆ ಸಿಪ್ಪೆ
ವಾರಕ್ಕೆ 2-3 ಸಲ ಲಿಂಬೆ ಸಿಪ್ಪೆಯಿಂದ ಹಲ್ಲುಗಳನ್ನು ತಿಕ್ಕಿಕೊಳ್ಳುವುದರಿಂದ ಅವು ಬಿಳಿಯಾಗುವ ಜೊತೆಗೆ ಆರೋಗ್ಯಯುತವೂ ಆಗಿರುತ್ತವೆ. ಆದರೆ ಲಿಂಬೆ ಸಿಪ್ಪೆಯಿಂದ ವಸಡುಗಳನ್ನು ಉಜ್ಜಿಕೊಳ್ಳಬಾರದು,ಹಾಗೆ ಮಾಡಿದರೆ ಆಹಾರ ಸೇವಿಸುವಾಗ ಹುಳಿರುಚಿಯುಂಟಾಗುತ್ತದೆ.
* ಆ್ಯಪಲ್ ಸಿಡರ್ ವಿನೆಗರ್ ಆ್ಯಪಲ್ ಸಿಡರ್ ವಿನೆಗರ್ ಹಳದಿ ಹಲ್ಲುಗಳಿಗೆ ಚಿಕಿತ್ಸೆ ನೀಡುವ ಗುಣಗಳನ್ನು ಹೊಂದಿದೆ. ಅದು ಹಲ್ಲುಗಳನ್ನು ತ್ವರಿತವಾಗಿ ಬಿಳಿಯಾಗಿಸುತ್ತದೆ. ಅದನ್ನು ಮೊಸರಿನೊಂದಿಗೆ ಸೇರಿಸಿಯೂ ಬಳಸಬಹುದು. ಹತ್ತಿಯ ತುಂಡಿನಿಂದ ಇದನ್ನು ಹಲ್ಲುಗಳಿಗೆ ಲೇಪಿಸಿ ಸುಮಾರು 15-20 ನಿಮಿಷಗಳ ಕಾಲ ಬಿಡಿ,ಬಳಿಕ ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.