ಹೈಪರ್‌ಕೊಲೆಸ್ಟ್ರಾಲಿಮಿಯಾ: ಲಕ್ಷಣಗಳು ಮತ್ತು ಕಾರಣಗಳು
ನಮ್ಮ ಶರೀರದಲ್ಲಿ ಎಲ್ಲ ಪ್ರಮುಖ ಪೋಷಕಾಂಶಗಳು, ವಿಟಾಮಿನ್‌ಗಳು ಮತ್ತು ಖನಿಜಗಳು ಸಮತೋಲನದಲ್ಲಿ ಇರಬೇಕಾಗುತ್ತದೆ. ಈ ಪೈಕಿ ಯಾವುದೇ ಒಂದರ ಅತಿಯಾದ ಸೇವನೆ ಅಥವಾ ಕೊರತೆಯು ಆರೋಗ್ಯಕ್ಕೆ ಅಪಾಯವನ್ನು ಒಡ್ಡಬಹುದು. ನಮ್ಮ ಶರೀರಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಕೊಲೆಸ್ಟ್ರಾಲ್‌ನ ಅಗತ್ಯವಿದೆ. ನರಗಳಿಗಾಗಿ ಮೈಲಿನ್ ಪೊರೆಯಾಗಿ ನಮ್ಮ ಮಿದುಳಿಗೆ ಕೊಂಚ ಪ್ರಮಾಣದಲ್ಲಿ ಕೊಬ್ಬು ಅಗತ್ಯವಿರುವಂತೆ ನಿರ್ದಿಷ್ಟ ಪ್ರಮಾಣದ ಕೊಲೆಸ್ಟ್ರಾಲ್ ಕೂಡ ಶರೀರಕ್ಕೆ ಮುಖ್ಯವಾಗಿದೆ. ಆದರೆ ಇದು ಅಗತ್ಯ ಮಟ್ಟವನ್ನು ಮೀರಿದರೆ ರಕ್ತದಲ್ಲಿ ಸಂಗ್ರಹಗೊಳ್ಳತೊಡಗುತ್ತದೆ. ಇಂತಹ ಪ್ರಕರಣಗಳಲ್ಲಿ ರಕ್ತ ಪರೀಕ್ಷೆಯನ್ನು ಮಾಡಿಸಿದಾಗ ರಕ್ತದಲ್ಲಿ ಅಧಿಕ ಪ್ಲಾಸ್ಮಾ ಕೊಲೆಸ್ಟ್ರಾಲ್ ಮಟ್ಟವನ್ನು ಸೂಚಿಸುವ ಹೈಪರ್‌ಕೊಲೆಸ್ಟ್ರಾಲಿಮಿಯಾ ಪತ್ತೆಯಾಗುತ್ತದೆ. ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಮಟ್ಟ ಪ್ರತಿ ಡೆಸಿ ಲೀ.ಗೆ 180 ಎಂಜಿಗಿಂತ ಕಡಿಮೆಯಿರಬೇಕು. ಪ್ರಾಥಮಿಕವಾಗಿ ಹೈಪರ್‌ಕೊಲೆಸ್ಟ್ರಾಲಿಮಿಯಾ ಎನ್ನುವುದು ಎಲ್‌ಡಿಎಲ್ ಅಥವಾ ಎಚ್‌ಡಿಎಲ್ ಹೆಚ್ಚಿನ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ ಮತ್ತು ಇದರ ಪರಿಣಾಮವಾಗಿ ಟ್ರೈಗ್ಲಿಸರೈಡ್‌ಗಳೂ ಹೆಚ್ಚುತ್ತವೆ.
ಹೈಪರ್‌ಕೊಲೆಸ್ಟ್ರಾಲಿಮಿಯಾಕ್ಕೆ ಕಾರಣಗಳು
ವಂಶವಾಹಿ: ವಂಶವಾಹಿ ಮತ್ತು ಆನುವಂಶಿಕತೆ ಹೈಪರ್‌ಕೊಲೆಸ್ಟ್ರಾಲಿಮಿಯಾಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಈ ಅಂಶವನ್ನು ಫೆಮಿಲಿಯಲ್ ಹೈಪರ್‌ಕೊಲೆಸ್ಟ್ರಾಲಿಮಿಯಾ ಎಂದು ಕರೆಯಲಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಶರೀರದಲ್ಲಿಯ ಆಂತರಿಕ ವ್ಯವಸ್ಥೆ ಅಥವಾ ಆನುವಂಶಿಕತೆ ಕಾರಣ ಎನ್ನುವುದು ಬಹಳಷ್ಟು ಪ್ರಕರಣಗಳಲ್ಲಿ ಕಂಡು ಬಂದಿದೆ.
ಧೂಮ್ರಪಾನ: ಧೂಮ್ರಪಾನವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಶ್ವಾಸಕೋಶಗಳ ಕಾಯಿಲೆ ಮಾತ್ರವಲ್ಲ,ಹೆಚ್ಚುಕಡಿಮೆ ಪ್ರತಿಯೊಂದು ಕಾಯಿಲೆಯೂ ನೇರವಾಗಿ ಅಥವಾ ಪರೋಕ್ಷವಾಗಿ ಧೂಮ್ರಪಾನದೊಂದಿಗೆ ಸಂಬಂಧ ಹೊಂದಿದೆ. ಧೂಮ್ರಪಾನವು ಫ್ರೀ ರ್ಯಾಡಿಕಲ್‌ಗಳಂತಹ ಹಾನಿಕಾರಕಗಳನ್ನು ಉತ್ಪಾದಿಸುತ್ತದೆ. ಅದು ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಹೀಗಾಗಿ ಹೈಪರ್‌ಕೊಲೆಸ್ಟ್ರಾಲಿಮಿಯಾದಿಂದ ಬಳಲುತ್ತಿರುವವರು ಧೂಮ್ರಪಾನದಿಂದ ದೂರವಿರಬೇಕು.
ಮದ್ಯಪಾನ: ಮದ್ಯಪಾನವೂ ಹೈಪರ್‌ಕೊಲೆಸ್ಟ್ರಾಲಿಮಿಯಾಕ್ಕೆ ಕಾರಣವಾಗುತ್ತದೆ. ಅದು ಯಕೃತ್ತಿನಲ್ಲಿ ಎಲ್‌ಡಿಎಲ್ ಗ್ರಾಹಕ ಕೋಶಗಳನ್ನು ಕಡಿಮೆ ಮಾಡುತ್ತದೆ. ಅತಿಯಾದ ಮದ್ಯಪಾನವು ಶರೀರದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಆಹಾರ: ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ನಾವು ಸೇವಿಸುವ ಆಹಾರವೂ ಕಾರಣವಾಗುತ್ತದೆ. ವ್ಯಕ್ತಿಗೆ ಅಧಿಕ ಕೊಲೆಸ್ಟ್ರಾಲ್ ಇದ್ದರೆ ಆಹಾರ ಕ್ರಮದಲ್ಲಿ ಪರಿಷ್ಕರಣೆ ಅಗತ್ಯವಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಒಳಗೊಂಡಿರುವ ಆಹಾರಗಳನ್ನು ಮಾತ್ರ ನಿರ್ಬಂಧಿಸಿದರೆ ಸಾಲದು,ಆಹಾರದಲ್ಲಿ ಹೈ ಸ್ಯಾಚ್ಯುರೇಟೆಡ್ ಫ್ಯಾಟ್ ಅಥವಾ ಅನಾರೋಗ್ಯಕರ ಕೊಬ್ಬು ಇರದಂತೆಯೂ ಕಾಳಜಿ ವಹಿಸಬೇಕಾಗುತ್ತದೆ.
ಒತ್ತಡ: ಸುದೀರ್ಘ ಕಾಲ ಒತ್ತಡವನ್ನು ಅನುಭವಿಸುತ್ತಿದ್ದರೆ ಅದು ಶರೀರದ ವ್ಯವಸ್ಥೆಯನ್ನು ವ್ಯತ್ಯಯಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಒತ್ತಡವು ಶರೀರದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುವಲ್ಲಿ ತನ್ನ ಪಾಲು ಹೊಂದಿದೆ.
ವ್ಯಾಯಾಮ ಮಾಡದಿರುವುದು: ನಮ್ಮ ಶರೀರದ ಹಲವಾರು ಚಟುವಟಿಕೆಗಳಿಗೆ ವ್ಯಾಯಾಮ, ನಡಿಗೆ, ಓಟ, ಈಜು ಮತ್ತು ಡಾನ್ಸಿಂಗ್‌ನಂತಹ ದೈಹಿಕ ಚಟುವಟಿಕೆಗಳು ಮುಖ್ಯವಾಗಿವೆ. ವ್ಯಾಯಾಮವು ಹೈಪರ್‌ಕೊಲೆಸ್ಟ್ರಾಲಿಮಿಯಾದ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಹೈಪರ್‌ಕೊಲೆಸ್ಟ್ರಾಲಿಮಿಯಾದಿಂದ ಬಳಲುತ್ತಿರುವವರು ಶರೀರದಲ್ಲಿಯ ಕೊಲೆಸ್ಟ್ರಾಲ್ ಮಟ್ಟಗಳನ್ನು ಸಮತೋಲನಗೊಳಿಸಲು ನಿಯಮಿತವಾಗಿ ವ್ಯಾಯಾಮವನ್ನು ಮಾಡಬೇಕು.
ಹೈಪರ್‌ಕೊಲೆಸ್ಟ್ರಾಲಿಮಿಯಾದ ಲಕ್ಷಣಗಳು
ಹೈಪರ್‌ಕೊಲೆಸ್ಟ್ರಾಲಿಮಿಯಾ ಸ್ಥಿತಿಯು ರಕ್ತದಲ್ಲಿ ಚಲಿಸುವ ಲಿಪೊಪ್ರೋಟಿನ್ ಆಗಿರುವುದರಿಂದ ನಿರ್ದಿಷ್ಟವಾದ ಲಕ್ಷಣಗಳನ್ನು ಹೊಂದಿಲ್ಲ. ಅದು ಸಮಸ್ಯೆಗಳನ್ನುಂಟು ಮಾಡುವವರೆಗೆ ಅಥವಾ ಹೃದಯಾಘಾತವಾಗುವವರೆಗೆ ಗೊತ್ತಾಗುವುದಿಲ್ಲ ಮತ್ತು ಆಗ ತುಂಬಾ ವಿಳಂಬವಾಗಿರುತ್ತದೆ. ಇದೇ ಕಾರಣದಿಂದ ಬೊಜ್ಜು ದೇಹವನ್ನು ಹೊಂದಿರುವವರು ಅಥವಾ ಒತ್ತಡಯುಕ್ತ ಬದುಕನ್ನು ನಡೆಸುತ್ತಿರುವವರು ಹೈಪರ್‌ಕೊಲೆಸ್ಟ್ರಾಲಿಮಿಯಾ ಸಕಾಲದಲ್ಲಿ ಗುರುತಿಸುವಂತಾಗಲು ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು.
ಹೈಪರ್‌ಕೊಲೆಸ್ಟ್ರಾಲಿಮಿಯಾ ಉಂಟು ಮಾಡುವ ತೊಂದರೆಗಳು
ಹೃದ್ರೋಗಗಳು: ಹೈಪರ್‌ಕೊಲೆಸ್ಟ್ರಾಲಿಮಿಯಾ ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಬಲ್ಲದು. ಶರೀರದಲ್ಲಿ ಅಧಿಕ ಕೊಲೆಸ್ಟ್ರಾಲ್ ಮಟ್ಟವು ಹೃದಯನಾಳೀಯ ರೋಗಗಳು ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಶರೀರದಲ್ಲಿ ಎಲ್‌ಡಿಎಲ್ ಮಟ್ಟವು ಅತಿಯಾದಾಗ ಅದು ರಕ್ತನಾಳಗಳಲ್ಲಿ ಸಂಗ್ರಹಗೊಂಡು ರಕ್ತ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಇದರಿಂದ ಹೃದಯಕ್ಕೆ ಸರಿಯಾಗಿ ರಕ್ತಪೂರೈಕೆಯಾಗದೆ ಸಮಸ್ಯೆಗಳಿಗೆ ಕಾರಣವಾಗುತ್ತದೆ
ಜೀರ್ಣಾಂಗಕ್ಕೆ ಹಾನಿಕರ: ಕೊಲೆಸ್ಟ್ರಾಲ್ ಪಿತ್ತರಸದ ಉತ್ಪಾದನೆಗೂ ನೆರವಾಗುತ್ತದೆ. ನಾವು ಸೇವಿಸಿದ ಆಹಾರವನ್ನು ಶರೀರವು ಸೂಕ್ತವಾಗಿ ಹೀರಿಕೊಳ್ಳುವಂತಾಗಲು ಅದನ್ನು ವಿಭಜಿಸುವಲ್ಲಿ ಪಿತ್ತರಸವು ಪ್ರಮುಖ ಪಾತ್ರವನ್ನು ಹೊಂದಿದೆ. ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗಿದ್ದರೆ ಅದು ಪಿತ್ತರಸದ ಉತ್ಪಾದನೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಹಾಗೂ ಯಾತನಾದಾಯಕವಾದ ಪಿತ್ತಗಲ್ಲುಗಳು ರೂಪುಗೊಳ್ಳಲು ಕಾರಣವಾಗುತ್ತದೆ.