ಏನಿದು ಸ್ಕೀಟರ್ ಸಿಂಡ್ರೋಮ್?

Update: 2020-12-04 05:26 GMT

ಡೆಂಗ್ ಮತ್ತು ಮಲೇರಿಯಾದಂತಹ ಅಪಾಯಕಾರಿ ರೋಗಗಳ ಹಿನ್ನೆಲೆಯಲ್ಲಿ ಸೊಳ್ಳೆ ಕಡಿತವು ನಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿದೆ. ಕೆಲವು ಪ್ರಕರಣಗಳಲ್ಲಿ ಅವು ಮಾರಣಾಂತಿಕವೂ ಆಗಬಹುದು. ಇದು ಇಲ್ಲಿಗೇ ಮುಗಿಯುವುದಿಲ್ಲ. ನಿಮ್ಮ ಚರ್ಮಕ್ಕೆ ಸಣ್ಣ ಸೊಳ್ಳೆ ಕಡಿತವೂ ಅಲರ್ಜಿ ಪ್ರತಿವರ್ತನೆಗಳನ್ನುಂಟು ಮಾಡಬಹುದು. ಪ್ರತಿ ವ್ಯಕ್ತಿಯ ಶರೀರ ಮತ್ತು ಚರ್ಮ ಕೂಡ ಪ್ರತಿಯೊಂದಕ್ಕೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಸೊಳ್ಳೆ ಕಡಿತದ ಅಲರ್ಜಿಯನ್ನು ವೈದ್ಯಕೀಯವಾಗಿ ಸ್ಕೀಟರ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಕೊಂಚ ಕೆಂಪು ಛಾಯೆಯ ಉರಿಯೂತ ಮತ್ತು ಕೊಂಚ ತುರಿಕೆ ಸೊಳ್ಳೆ ಕಡಿತಕ್ಕೆ ಹೆಚ್ಚು ಸಾಮಾನ್ಯವಾದ ಪ್ರತಿವರ್ತನೆಯಾಗಿದೆ. ಆದರೆ ಸ್ಕೀಟರ್ ಸಿಂಡ್ರೋಮ್ ಇದಕ್ಕಿಂತ ಮುಂದಿದೆ. ಈ ಸಮಸ್ಯೆ ಹೊಂದಿರುವವರು ತುಂಬಾ ನಾಜೂಕು ಮತ್ತು ಸೂಕ್ಷ್ಮರಾಗಿರುತ್ತಾರೆ. ಸೊಳ್ಳೆ ಕಡಿತದಿಂದ ಜ್ವರವನ್ನೂ ಅವರು ಅನುಭವಿಸಬಹುದು.

ಸ್ಕೀಟರ್ ಸಿಂಡ್ರೋಮ್‌ನ ಲಕ್ಷಣಗಳು

ಸೊಳ್ಳೆ ಕಡಿತದ ಅಲರ್ಜಿ ಪ್ರತಿವರ್ತನೆಗಳು ಸೌಮ್ಯದಿಂದ ತೀವ್ರ ಸ್ವರೂಪವನ್ನು ಹೊಂದಿರುತ್ತವೆ ಮತ್ತು ಪ್ರತಿ ವ್ಯಕ್ತಿಗೂ ಭಿನ್ನವಾಗಿರುತ್ತವೆ. ಸಾದಾ ಸೊಳ್ಳೆಕಡಿತದಿಂದ ಅರ್ಧ ಇಂಚಿಗೂ ಕಡಿಮೆ ಜಾಗದಲ್ಲಿ ಉರಿಯೂತ ಉಂಟಾಗುತ್ತದೆ,ಆದರೆ ಸ್ಕೀಟರ್ ಸಿಂಡ್ರೋಮ್ ಇರುವವರಲ್ಲಿ ಇದು ಸಾಕಷ್ಟು ದೊಡ್ಡದಾಗಿರುತ್ತದೆ. ಸೊಳ್ಳೆ ಕಚ್ಚಿದ ಜಾಗದ ಸುತ್ತ ದದ್ದು,ಹೆಚ್ಚಿನ ಜಾಗದಲ್ಲಿ ತುರಿಕೆ,ಗಾಯಗಳು,ಜ್ವರ,ತೀವ್ರ ತಲೆನೋವು,ಕಚ್ಚಿದ ಜಾಗವು ಕೆಂಪಗಾಗುವುದು,ಬಳಲಿಕೆ ಇತ್ಯಾದಿಗಳು ಸ್ಕೀಟರ್ ಸಿಂಡ್ರೋಮ್‌ನ ಲಕ್ಷಣಗಳಾಗಿವೆ.

ಬಳಸಬಹುದಾದ ಮನೆಮದ್ದುಗಳು

ಸ್ಕೀಟರ್ ಸಿಂಡ್ರೋಮ್‌ನ್ನು ಎಂದಿಗೂ ಕಡೆಗಣಿಸಬಾರದು. ಈ ಸಮಸ್ಯೆಗೆ ತುರ್ತು ವೈದ್ಯಕೀಯ ಗಮನ ಅಗತ್ಯವಾಗುತ್ತದೆ. ಇದಕ್ಕೆ ಕೆಲವು ನೈಸರ್ಗಿಕ ಪರಿಹಾರಗಳಿಲ್ಲಿವೆ.

ಮಂಜುಗಡ್ಡೆ

ಹೆಚ್ಚಿನ ಚರ್ಮದ ಅಲರ್ಜಿಗಳಿಗೆ ಚಿಕಿತ್ಸೆ ನೀಡಲು ಅತ್ಯಂತ ಸರಳ ಮತ್ತು ಸಾಮಾನ್ಯ ವಿಧಾನವೆಂದರೆ ಅದರ ಮೇಲೆ ಮಂಜುಗಡ್ಡೆಯನ್ನು ಲೇಪಿಸುವುದು. ಆದರೆ ಇದು ಕೆಲವರಲ್ಲಿ ಕೆಲಸ ಮಾಡಿದರೆ ಇನ್ನು ಕೆಲವರಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ. ಸ್ಕೀಟರ್ ಸಿಂಡ್ರೋಮ್ ಇರುವವರು ಐಸ್ ಪ್ಯಾಕ್‌ನ್ನು ಅಥವಾ ಕೆಲವು ಮಂಜುಗಡ್ಡೆ ತುಣುಕುಗಳನ್ನು ಪೀಡಿತ ಭಾಗದ ಮೇಲೆ ಇಟ್ಟುಕೊಂಡರೆ ಉರಿಯೂತ ಮತ್ತು ತುರಿಕೆ ಕಡಿಮೆಯಾಗುತ್ತವೆ.

ಅಡಿಗೆ ಸೋಡಾ

ಅಡಿಗೆ ಸೋಡಾ ಮತ್ತು ಹಾಲಿನ ಮಿಶ್ರಣವು ಸೊಳ್ಳೆಕಡಿತದಿಂದ ಚರ್ಮವು ಕೆಂಪಗಾಗುವುದನ್ನು ಮತ್ತು ತುರಿಕೆಯನ್ನು ಕಡಿಮೆಗೊಳಿಸುತ್ತದೆ. ಒಟ್ಟಾರೆ ಸೋಂಕನ್ನು ಸ್ವಚ್ಛಗೊಳಿಸಲು ಅದು ಪೂರಕವಾಗುತ್ತದೆ. ಅಡಿಗೆ ಸೋಡಾದಲ್ಲಿರುವ ಶಿಲೀಂಧ್ರ ನಿರೋಧಕ ಗುಣಗಳು ಸೊಳ್ಳೆಕಡಿತದ ಜಾಗದಲ್ಲಿ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಅಡಿಗೆ ಸೋಡಾದಿಂದ ಯೀಸ್ಟ್ ಸೋಂಕುಗಳು ಮತ್ತು ಇತರ ಚರ್ಮ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

ಬೇಯಿಸಿದ ಓಟ್‌ಮೀಲ್

ಸೊಳ್ಳೆ ಕಡಿತದ ಜಾಗಕ್ಕೆ ಬೇಯಿಸಿದ ಓಟ್‌ಮೀಲ್ ಅನ್ನೂ ಲೇಪಿಸಬಹುದು. ಓಟ್‌ಮೀಲ್ ಬಾತ್ ತುರಿಕೆಯಿಂದ ಶಮನ ನೀಡುತ್ತದೆ. ಓಟ್‌ಮಿಲ್ ಆರೋಗ್ಯಕ್ಕೆ ಮಾತ್ರವಲ್ಲ,ಚರ್ಮಕ್ಕೂ ಲಾಭದಾಯಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News