ಹೃದಯದ ಮೇಲೆ ನೇರ ಪರಿಣಾಮ ಬೀರುವ ಸ್ಟಿರಾಯ್ಡಿಗಳ ಬಳಕೆಯನ್ನು ನಿವಾರಿಸಿ
ಸಾಮಾನ್ಯವಾಗಿ ಅನಾರೋಗ್ಯಪೀಡಿತ ವ್ಯಕ್ತಿಯು ಚೇತರಿಸಿಕೊಳ್ಳುವಂತಾಗಲು ಸ್ಟಿರಾಯ್ಡ್ ಗಳನ್ನು ನೀಡಲಾಗುತ್ತದೆ. ಸಮಸ್ಯೆಗೆ ಪರಿಹಾರ ನೀಡುವಲ್ಲಿ ಸ್ಟಿರಾಯ್ಡ್ ನೆರವಾಗಬಹುದು, ಆದರೆ ಕೆಲವು ಹಾನಿಕಾರಕ ಪರಿಣಾಮಗಳೂ ಅದರೊಂದಿಗೆ ಗುರುತಿಸಿಕೊಂಡಿವೆ. ಅದು ಅತ್ಯಂತ ಕೆಟ್ಟ ಪರಿಣಾಮವನ್ನುಂಟು ಮಾಡುವುದು ಹೃದಯದ ಮೇಲೆ. ವೈದ್ಯರು ಕಟ್ಟಕಡೆಯ ಉಪಾಯವಾಗಿ ಸಣ್ಣ ಡೋಸ್‌ಗಳಲ್ಲಿ ಸ್ಟಿರಾಯ್ಡಿನ್ನು ರೋಗಿಗೆ ನೀಡುತ್ತಾರೆ ನಿಜ,ಆದರೆ ಸಣ್ಣ ಡೋಸ್ ಕೂಡ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟು ಮಾಡಬಲ್ಲದು. ಇತ್ತೀಚಿನ ಸಂಶೋಧನೆ ಯೊಂದು ಹೃದಯದ ಮೇಲೆ ಸ್ಟಿರಾಯ್ಡ್ ನ ಋಣಾತ್ಮಕ ಪರಿಣಾಮ ಗಳನ್ನು ಬಹಿರಂಗಗೊಳಿಸಿದೆ.
ಗ್ಲುಕೊಕಾರ್ಟಿಕಾಯ್ಡ ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುವ ಸ್ಟಿರಾಯ್ಡಿ ಆಗಿದೆ. ಇದನ್ನು ಸಾಮಾನ್ಯವಾಗಿ ನಿರೋಧಕ ವ್ಯವಸ್ಥೆಗೆ ಸಂಬಂಧಿತ ಉರಿಯೂತ ಕಾಯಿಲೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಸ್ಟಿರಾಯ್ಡ್ ಗಳ ಹೆಚ್ಚಿನ ಡೋಸ್‌ಗಳ ಸೇವನೆಯು ಹಾನಿಕಾರಕ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು,ಆದರೆ ಕಡಿಮೆ ಡೋಸ್ ಕೂಡ ಅಪಾಯವನ್ನುಂಟು ಮಾಡಬಲ್ಲದು ಎನ್ನುವುದು ಗೊತ್ತಿರಲಿಲ್ಲ.
ಬ್ರಿಟನ್‌ನ ಲೀಡ್ಸ್ ವಿವಿಯು ನಡೆಸಿದ ಸಂಶೋಧನೆಯು ಗ್ಲುಕೊಕಾರ್ಟಿಕಾಯ್ಡ್ ನಂತಹ ಸ್ಟಿರಾಯ್ಡ್ ಗಳ ಸಣ್ಣ ಡೋಸ್ ಸಹ ಹೃದಯ ರಕ್ತನಾಳಗಳ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದನ್ನು ಬಹಿರಂಗಗೊಳಿಸಿದೆ. ಅದರ ಸೇವನೆಯು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಗ್ಲುಕೊಕಾರ್ಟಿಕಾಯ್ಡಿ ಡೋಸ್‌ನಿಂದ ಹೃದಯನಾಳೀಯ ರೋಗಗಳ ಅಪಾಯವನ್ನು ತಿಳಿದುಕೊಳ್ಳಲು ಸಂಶೋಧಕರು ವಿವಿಧ ನಿರೋಧಕ ವ್ಯವಸ್ಥೆ ಸಂಬಂಧಿತ ಉರಿಯೂತ ಕಾಯಿಲೆಗಳನ್ನು ಹೊಂದಿದ್ದ ಮತ್ತು ಅದಕ್ಕಾಗಿ ಔಷಧಿಗಳನ್ನು ಸೇವಿಸುತ್ತಿದ್ದ 85,000ಕ್ಕೂ ಅಧಿಕ ರೋಗಿಗಳ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದರು.
ಗ್ಲುಕೊಕಾರ್ಟಿಕಾಯ್ಡ್ ಅನ್ನು ಸೇವಿಸುತ್ತಿದ್ದ ರೋಗಿಗಳಲ್ಲಿ ಹೃದ್ರೋಗಗಳ ಅಪಾಯವು ಅದನ್ನು ಸೇವಿಸದ ರೋಗಿಗಳಿಗೆ ಹೋಲಿಸಿದರೆ ಎರಡು ಪಟ್ಟುಗಳಷ್ಟು ಇರುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿತ್ತು. ‘ಪ್ಲಾಸ್ ಮೆಡಿಸಿನ್’ಜರ್ನಲ್‌ನಲ್ಲಿ ಈ ಸಂಶೋಧನಾ ವರದಿಯು ಪ್ರಕಟವಾಗಿದೆ.
ಎಲ್ಲ ಹೃದಯನಾಳೀಯ ರೋಗಗಳ ಚಿಕಿತ್ಸೆಯಲ್ಲಿ ಕಡಿಮೆ ಡೋಸ್‌ನಲ್ಲಿ ಸ್ಟಿರಾಯ್ಡ್ ಗಳನ್ನು ಬಳಸಲಾಗುತ್ತಿದೆ. ಹೃದಯ ವೈಫಲ್ಯ, ಸೆರೆಬ್ರೊವಸ್ಕುಲರ್ ಕಾಯಿಲೆ,ಪೆರಿಫೆರಲ್ ಆರ್ಟರಿ ಕಾಯಿಲೆ, ಏಟ್ರಿಯಲ್ ಫಿಬ್ರಿಲೇಷನ್,ಎಕ್ಯೂಟ್ ಮಯೊಕಾರ್ಡಿಯಲ್ ಇನ್‌ಫೆಕ್ಷನ್ ಮತ್ತು ಅಬ್ಡಾಮಿನಲ್ ಎವೊರ್ಟಿಕ್ ಅನಿರಿಸಂ ಇವು ಇಂತಹ ರೋಗಗಳಲ್ಲಿ ಸೇರಿವೆ.
ಈ ಸಂಶೋಧನೆಗೆ ಮುನ್ನ ಗ್ಲುಕೊಕಾರ್ಟಿಕಾಯ್ಡ್ ನ 5 ಎಂಜಿ ಡೋಸ್ ಸುರಕ್ಷಿತವೆಂದು ಭಾವಿಸಲಾಗಿತ್ತು,ಆದರೆ ಸಣ್ಣ ಡೋಸ್ ಕೂಡ ರೋಗಿಯಲ್ಲಿ ಹೃದಯನಾಳೀಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ಈಗ ಸಾಬೀತಾಗಿದೆ. ಗ್ಲುಕೊಕಾರ್ಟಿಕಾಯ್ಡ್ ಅನ್ನು ಕನಿಷ್ಠ ಡೋಸ್‌ನಲ್ಲಿ,ಅದೂ ಅತ್ಯಂತ ಅಗತ್ಯವಾಗಿದ್ದರೆ ಮಾತ್ರ ನೀಡಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ಹೃದಯವನ್ನು ಸುರಕ್ಷಿತವಾಗಿರಿಸಲು ಸ್ಟಿರಾಯ್ಡ್ ಡೋಸೇಜ್ ಮೇಲೆ ನಿಗಾಯಿರಿಸುವುದು ಮುಖ್ಯವಾಗಿದೆ.