ಯಾವಾಗಲೂ ಹೊಟ್ಟೆಯುಬ್ಬರದ ಸಮಸ್ಯೆಯೇ? ಈ ಸರಳ ಉಪಾಯಗಳನ್ನು ಪ್ರಯತ್ನಿಸಿ

Update: 2020-12-16 13:50 GMT

ಹೊಟ್ಟೆ ಉಬ್ಬರಿಸಿರುವುದು ಎಲ್ಲ ಕಡೆಯೂ ಸಾಮಾನ್ಯವಾಗಿರುವ ಸಮಸ್ಯೆಯಾಗಿದ್ದು,ಹೆಚ್ಚಿನ ಜನರು ಆಗಾಗ್ಗೆ ಇದನ್ನು ಅನುಭವಿಸುತ್ತಿರುತ್ತಾರೆ. ಆದರೆ ಬಹಳಷ್ಟು ಜನರು ಹೊಟ್ಟೆಯುಬ್ಬರವನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ, ಏಕೆಂದರೆ ಅವರ ಹೊಟ್ಟೆಯು ತೀರ ಉಬ್ಬರಿಸಿಕೊಂಡಿರುವಂತೆ ಕಂಡು ಬರುವುದಿಲ್ಲ. ಭಾರೀ ಊಟ,ವಾಯು ಉತ್ಪತ್ತಿ,ಜೀರ್ಣ ಸಮಸ್ಯೆಗಳು,ಹಾರ್ಮೋನ್ ಬದಲಾವಣೆಗಳು,ದ್ರವ ಧಾರಣ ಸೇರಿದಂತೆ ಹೊಟ್ಟೆಯುಬ್ಬರಕ್ಕೆ ಹಲವಾರು ಕಾರಣಗಳಿವೆ. ಕೆಲವರಿಗಿಂತೂ ಹೊಟ್ಟೆಯುಬ್ಬರ ದಿನಿತ್ಯದ ಸಂಗಾತಿಯಾಗಿರುತ್ತದೆ. ಸಮಸ್ಯೆಯ ಮೂಲಕಾರಣವನ್ನು ತಿಳಿದುಕೊಳ್ಳಲು ಅವರು ಖಂಡಿತವಾಗಿಯೂ ವೈದ್ಯಕೀಯ ನೆರವನ್ನು ಪಡೆದುಕೊಳ್ಳಬೇಕು. ಹೊಟ್ಟೆಯುಬ್ಬರದಿಂದ ಪಾರಾಗಲು ಕೆಲವು ಸರಳ ಮನೆಮದ್ದುಗಳು ಇಲ್ಲಿವೆ......

* ವಾಕಿಂಗ್

ದೈಹಿಕ ಶ್ರಮವನ್ನು ಬಯಸದೆ ಅತಿಯಾಗಿ ಆಲಸಿಗಳಾಗಿರುವವರು ಹೊಟ್ಟೆಯುಬ್ಬರಕ್ಕೆ ಗುರಿಯಾಗುವ ಸಾಧ್ಯತೆಯು ಹೆಚ್ಚು. ತಿಂದ ಆಹಾರ ಜೀರ್ಣವಾಗದಿರುವುದು ಇದಕ್ಕೆ ಕಾರಣ. ನಿಮ್ಮ ಹೊಟ್ಟೆ ಉಬ್ಬರಿಸಿಕೊಂಡಿದ್ದರೆ ಒಂದಿಷ್ಟು ವಾಕಿಂಗ್ ಮಾಡಿ. ಇದು ಕರುಳಿನಲ್ಲಿ ಸಿಕ್ಕಿಕೊಂಡಿರುವ ಮಲ ಮತ್ತು ವಾಯುವನ್ನು ಹೊರಕ್ಕೆ ಹಾಕಲು ನೆರವಾಗುತ್ತದೆ. ವ್ಯಾಯಾಮ ಅಥವಾ ಬಾಲಾಸನ,ಪದ್ಮಾಸನದಂತಹ ಕೆಲವು ಸರಳ ಯೋಗಗಳೂ ಹೊಟ್ಟೆಯುಬ್ಬರವನ್ನು ನಿವಾರಿಸಲು ನೆರವಾಗುತ್ತವೆ.

* ಹೊಟ್ಟೆಯ ಮಸಾಜ್

ಮುಟ್ಟಿನ ನೋವು ಸಹಿಸಲಸಾಧ್ಯವಾದರೆ ಮಹಿಳೆಯರು ಹೊಟ್ಟೆಗೆ ಮಸಾಜ್ ಮಾಡಿಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಈ ಸರಳ ಉಪಾಯವು ಹೊಟ್ಟೆಯುಬ್ಬರ ಮತ್ತು ವಾಯುವಿನಿಂದ ಮುಕ್ತಿ ನೀಡುತ್ತದೆ. ಮಸಾಜ್ ಕರುಳಿನ ಚಲನವಲನಗಳನ್ನು ಹೆಚ್ಚಿಸುತ್ತದೆ.

* ಸಾರಭೂತ ತೈಲಗಳು

ಕರ್ಕುಮಿನ್ ಮತ್ತು ಫೆನೆಲ್ ಎಸೆನ್ಶಿಯಲ್ ಆಯಿಲ್‌ನಂತಹ ಕೆಲವು ಸಾರಭೂತ ತೈಲಗಳು ಹೊಟ್ಟೆಯುಬ್ಬರ ಮತ್ತು ವಾಯುವನ್ನು ನಿವಾರಿಸಲು ನೆರವಾಗಬಲ್ಲವು. ಆದರೆ ಅವು ಎಲ್ಲರಿಗೂ ಸೂಕ್ತವಲ್ಲ. ಹೀಗಾಗಿ ಅವುಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗುತ್ತದೆ.

* ಬಿಸಿನೀರಿನ ಸ್ನಾನ ಬಿಸಿನೀರಿನ ಸ್ನಾನ ಮಾಡುವುದು ಹೊಟ್ಟೆಯುಬ್ಬರದಿಂದ ತಕ್ಷಣ ಮುಕ್ತಿ ಪಡೆಯಲು ಉತ್ತಮ ವಿಧಾನವಾಗಿದೆ. ಅದರಲ್ಲೂ ಬಾತ್‌ಟಬ್‌ನಲ್ಲಿ ಸ್ನಾನ ಮಾಡುವುದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದರಿಂದ ಶರೀರದ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ಹೊಟ್ಟೆಯು ಸಹಜ ಸ್ಥಿತಿಗೆ ಮರಳುತ್ತದೆ.

* ಪ್ರೊಬಯಾಟಿಕ್‌ಗಳ ಸೇವನೆ

  ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಕೊರತೆಯೂ ಜೀರ್ಣ ಸಮಸ್ಯೆಗಳಿಗೆ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರೊಬಯಾಟಿಕ್‌ಗಳ ಸೇವನೆ ಎಲ್ಲಕ್ಕಿಂತ ಸುಲಭ ಪರಿಹಾರವಾಗಿದೆ.

* ಬಡೆಸೋಪು

 ಕಷಾಯಬಡೆಸೋಪು ಶೀತಲ ಗುಣಗಳನ್ನು ಹೊಂದಿದ್ದು,ಸೇವನೆಯ ಬಳಿಕ ಹೊಟ್ಟೆಯಲ್ಲಿ ತಂಪು ಅನುಭವವನ್ನುಂಟು ಮಾಡುತ್ತದೆ. ಒಂದು ಟೀ ಚಮಚದಷ್ಟು ಬಡೆಸೋಪು ಕಾಳುಗಳನ್ನು ಅಗಿದು ತಿಂದರೆ ಅಥವಾ ಅದರ ಬಿಸಿಯಾದ ಕಷಾಯವನ್ನು ಸೇವಿಸಿದರೆ ಹೊಟ್ಟೆಯುಬ್ಬರ ನಿವಾರಣೆಯಾಗುತ್ತದೆ.

ಇದೇ ರೀತಿ ಲಿಂಬೆ ರಸ ಮತ್ತು ಶುಂಠಿ ಕಷಾಯ ಕೂಡ ಹೊಟ್ಟೆಯುಬ್ಬರವನ್ನು ನಿವಾರಿಸಲು ನೆರವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News