ಸುದೀರ್ಘ ವಿರಾಮದ ಬಳಿಕ ವ್ಯಾಯಾಮ ಮಾಡುತ್ತಿದ್ದೀರಾ? ಅಡ್ಡ ಪರಿಣಾಮಗಳು ಮತ್ತು ನಿವಾರಣೆಯ ಬಗ್ಗೆ ನಿಮಗೆ ಗೊತ್ತಿರಲಿ
ನೀವು ಸುದೀರ್ಘ ವಿರಾಮದ ಬಳಿಕ ವ್ಯಾಯಾಮವನ್ನು ಮತ್ತೆ ಆರಂಭಿಸಿದ್ದರೆ ಅಥವಾ ಜೀವನದಲ್ಲಿ ಮೊದಲ ಬಾರಿಗೆ ವ್ಯಾಯಾಮವನ್ನು ಮಾಡುತ್ತಿದ್ದರೆ ನಿಮ್ಮ ಅನುಭವ ಹಿತಕರವಂತೂ ಆಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮಾಂಸಖಂಡಗಳಲ್ಲಿ ನೋವು ಅನೇಕ ಅಡ್ಡಪರಿಣಾಮಗಳಲ್ಲಿ ಕೇವಲ ಒಂದಾಗಿದೆ. ವ್ಯಾಯಾಮವನ್ನು ಮಾಡಿ ಅನುಭವವಿರುವವರಿಗೆ ಈ ಅಡ್ಡಪರಿಣಾಮಗಳನ್ನು ಎದುರಿಸುವುದು ಸುಲಭವಾಗಬಹುದು. ಆರಂಭವು ಹಿತಕರ ಎನ್ನಿಸದಿದ್ದರೂ ಕೇವಲ ಒಂದು ವಾರ ಅಥವಾ 15 ದಿನಗಳ ಬಳಿಕ ವ್ಯಾಯಾಮವು ನಿಮ್ಮನ್ನು ತಾಜಾ ಆಗಿರಿಸುತ್ತದೆ ಮತ್ತು ನಿಮ್ಮಲ್ಲಿ ಉತ್ಸಾಹ,ಶಕ್ತಿಯನ್ನು ತುಂಬುತ್ತದೆ.
ವಿರಾಮದ ಬಳಿಕ ವ್ಯಾಯಾಮವನ್ನು ಪುನರಾರಂಭಿಸುತ್ತಿದ್ದರೆ ಅಥವಾ ಮೊದಲ ಬಾರಿಗೆ ವ್ಯಾಯಾಮ ಮಾಡುತ್ತಿದ್ದರೆ ಉಸಿರು ಖಾಲಿಯಾದ,ವಾಕರಿಕೆಯ,ತಲೆ ಹಗುರವಾದಂತೆ,ಮಾಂಸಖಂಡಗ ಳಲ್ಲಿ ಉರಿ,ಅತಿಯಾದ ಬೆವರು,ಬಾಯಾರಿಕೆ,ಬಾತ್‌ರೂಮ್‌ಗೆ ಹೋಗಬೇಕೆನ್ನುವ ತುಡಿತ,ಚರ್ಮದಲ್ಲಿ ತುರಿಕೆ,ಮೂಗಿನಲ್ಲಿ ನೀರಿಳಿಯುವುದು ಇವೆಲ್ಲ ಸಾಮಾನ್ಯವಾಗಿ ಕಂಡು ಬರುವ ಅಡ್ಡಪರಿಣಾಮಗಳ ಲಕ್ಷಣಗಳಾಗಿವೆ. ಇವುಗಳಲ್ಲದೆ ವ್ಯಾಯಾಮದ ಬಳಿಕ ಕೆಲವೊಮ್ಮೆ ಅತಿಯಾದ ಶಾರೀರಿಕ ನೋವು, ಮಾಂಸಖಂಡಗಳಲ್ಲಿ ನೋವು,ಅತಿಯಾದ ಆಯಾಸ, ತಲೆನೋವಿನಂತಹ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಆದರೆ ಈ ಲಕ್ಷಣಗಳನ್ನು ತಡೆಯಲು ಅಥವಾ ತಗ್ಗಿಸಲು ಹಲವಾರು ಪರಿಣಾಮಕಾರಿ ಕ್ರಮಗಳೂ ಇವೆ.
ವ್ಯಾಯಾಮದ ಸಂದರ್ಭದಲ್ಲಿ ವಾರ್ಮ್ ಅಪ್ ಮತ್ತು ಕೂಲ್ ಡೌನ್ ಪ್ರಕ್ರಿಯೆಗಳನ್ನು ತಪ್ಪದೆ ಕೈಗೊಳ್ಳಿ. ಜಿಮ್‌ಗೆ ಹೋಗುತ್ತಿದ್ದರೆ ಫೋಮ್ ರೋಲರ್ ಬಳಕೆಯನ್ನು ರೂಢಿಸಿಕೊಳ್ಳಿ.
ವ್ಯಾಯಾಮ ಮಾಡುವ ಮುನ್ನ ಮತ್ತು ಮಾಡಿದ ನಂತರ ಸಾಕಷ್ಟು ನೀರು ಸೇವಿಸಿ.
ವ್ಯಾಯಾಮ ಮಾಡುವಾಗ ತಲೆ ಸುತ್ತಿದಂತೆ ಅಥವಾ ತಲೆ ಹಗುರವಾದಂತೆ ಅನ್ನಿಸಿದರೆ ವ್ಯಾಯಾಮವನ್ನು ನಿಧಾನವಾಗಿ ಮಾಡಿ ಅಥವಾ ಸ್ವಲ್ಪ ಹೊತ್ತು ನಿಲ್ಲಿಸಿ. ನಿಮ್ಮ ತಾಕತ್ತು,ಕ್ಷಮತೆ,ನಮ್ಯತೆ ಮತ್ತು ಚಲನಶೀಲತೆಗೆ ಅನುಗುಣವಾದ ವೇಗದಲ್ಲಿ ವ್ಯಾಯಾಮವನ್ನು ಮಾಡಿ.
ವ್ಯಾಯಾಮ ಮಾಡುವ ಮುನ್ನ ಹೊಟ್ಟೆ ತುಂಬಾ ಆಹಾರ ಸೇವನೆಯನ್ನು ನಿವಾರಿಸಿ. ಒಂದು ವೇಳೆ ಅತಿಯಾಗಿ ಆಹಾರ ಸೇವಿಸಿದ್ದರೆ ಅದು ಜೀರ್ಣಗೊಳ್ಳಲು ಸಮಯ ನೀಡಿ ಮತ್ತು ನಂತರವಷ್ಟೇ ವ್ಯಾಯಾಮವನ್ನು ಆರಂಭಿಸಿ.
ವ್ಯಾಯಾಮದುದ್ದಕ್ಕೂ ನೀವು ಸರಿಯಾಗಿ ಉಸಿರಾಡುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಗೊತ್ತಿಲ್ಲದೆ ಉಸಿರನ್ನು ಬಿಗಿ ಹಿಡಿದ ಸಂದರ್ಭಗಳೂ ಇರಬಹುದು.
ಅಲ್ಲದೆ ನಿಮ್ಮ ದಿನಚರಿಯಲ್ಲಿ ಯಾವುದೇ ಬದಲಾವಣೆಯು ಮೊದಲಿಗೆ ನಿಮಗೆ ಅಹಿತಕರವೆನ್ನಿಸಬಹುದು. ಆದರೆ ಅದಕ್ಕೆ ಬದಲಾವಣೆಗೆ ನೀವು ಹೊಂದಿಕೊಂಡಾಗ ಅದು ಸುಲಭವಾಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ಸದೃಢರಾಗುತ್ತೀರಿ ಮತ್ತು ಫಿಟ್ ಆಗಿ ಉಳಿಯುತ್ತೀರಿ. ಅದು ನಿಮ್ಮ ದೇಹತೂಕವನ್ನು ಪರಿಣಾಮಕಾರಿಯಾಗಿ ಇಳಿಸಲೂ ನೆರವಾಗುತ್ತದೆ.