ಏನಿದು ವರ್ಣಾಂಧತೆ? ಕಾರಣಗಳು ಮತ್ತು ಲಕ್ಷಣಗಳು

Update: 2021-01-08 18:46 GMT

ಬಣ್ಣಗಳನ್ನು ನೋಡುವುದು ನಿಮಗೆ ಕಷ್ಟವಾಗುತ್ತದೆಯೇ? ಇಂತಹ ಅನುಭವ ಹಲವಾರಿ ಬಾರಿ ನಿಮಗಾಗಿದ್ದರೆ ನೀವು ವರ್ಣಾಂಧತೆ ಅಥವಾ ಬಣ್ಣಗುರುಡುತನದಿಂದ ಬಳಲುತ್ತಿರಬಹುದು. ವರ್ಣಾಂಧತೆಯು ಹೆಚ್ಚಾಗಿ ಆನುವಂಶಿಕವಾಗಿದ್ದು,ವ್ಯಕ್ತಿಯು ಕೆಲವು ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ವಿಶೇಷವಾಗಿ ಕೆಂಪು,ಹಸಿರು ಮತ್ತು ನೀಲಿ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸಲು ವ್ಯಕ್ತಿಗೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಜನರಿಗೆ ತಮಗೆ ಇಂತಹದೊಂದು ಸಮಸ್ಯೆಯಿದೆ ಎನ್ನುವುದೂ ಗೊತ್ತಿರುವುದಿಲ್ಲ ಮತ್ತು ಬಣ್ಣಗಳನ್ನು ಗುರುತಿಸುವಲ್ಲಿ ತಮ್ಮ ಕೊರತೆಯ ಬಗ್ಗೆ ಅರಿವಿರುವುದಿಲ್ಲ. ಉದಾಹರಣೆಗೆ ಕಿತ್ತಳೆ ಹಣ್ಣು ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ ಎನ್ನುವುದು ಅವರಿಗೆ ಗೊತ್ತಿರುತ್ತದೆ,ಹೀಗಾಗಿ ಬಣ್ಣವು ಕಿತ್ತಳೆ ಎನ್ನುವುದಷ್ಟೇ ಅವರಿಗೆ ಗೊತ್ತಿರುತ್ತದೆಯೇ ಹೊರತು ವಾಸ್ತವದಲ್ಲಿ ಅವರು ಆ ಬಣ್ಣವನ್ನು ನೋಡುತ್ತಿರುವುದಿಲ್ಲ. ನೀವು ವರ್ಣಾಂಧತೆಯನ್ನು ಹೊಂದಿದ್ದರೆ ದೃಷ್ಟಿ ಮಸುಕಾಗುವುದನ್ನೂ ನೀವು ಅನುಭವಿಸಬಹುದು.

ವರ್ಣಾಂಧತೆಗೆ ಕಾರಣಗಳು

ವರ್ಣಾಂಧತೆಯು ಹೆಚ್ಚಾಗಿ ಆನುವಂಶಿಕ ಸ್ಥಿತಿಯಾಗಿದೆ,ಅಂದರೆ ಜನ್ಮದಿಂದಲೇ ಈ ಸಮಸ್ಯೆಯನ್ನು ಅವರು ಹೊಂದಿರಬಹುದು. ಅಕ್ಷಿಪಟಲದಲ್ಲಿ ಕೋನ್‌ಗಳು ಅಥವಾ ಪ್ರಖರ ಬೆಳಕು ಮತ್ತು ಬಣ್ಣಗಳಿಗೆ ಸಂವೇದಿಸುವ ಚಿತ್ರಗ್ರಾಹಕ ಕೋಶಗಳ ಭಾಗಶಃ ಅಥವಾ ಸಂಪೂರ್ಣ ಅನುಪಸ್ಥಿತಿಯಿದ್ದಾಗ ವರ್ಣಾಂಧತೆ ಉಂಟಾಗುತ್ತದೆ. ಈ ಕೋನ್‌ಗಳು ಕೆಂಪು,ಹಸಿರು ಮತ್ತು ನೀಲಿ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸಲು ನಿಮಗೆ ನೆರವಾಗುತ್ತವೆ.

* ಆನುವಂಶಿಕತೆ

ಸಾಮಾನ್ಯವಾಗಿ ಹೆಚ್ಚಿನ ವರ್ಣಾಂಧತೆ ಸಮಸ್ಯೆಗಳು ವ್ಯಕ್ತಿಯ ಹುಟ್ಟಿನಿಂದಲೇ ಜೊತೆಯಾಗಿರುತ್ತವೆ, ಅಂದರೆ ಆನುವಂಶಿಕವಾಗಿರುತ್ತವೆ. ವೈದ್ಯಕೀಯ ಪರೀಕ್ಷೆಗಳ ಮೂಲಕ ಮಾತ್ರ ಇದನ್ನು ಪತ್ತೆ ಹಚ್ಚಬಹುದು. ತನಗೆ ವರ್ಣಾಂಧತೆಯ ಸಮಸ್ಯೆಯಿದೆ ಎನ್ನುವುದು ಮಗುವಿಗೆ ಎಂದೂ ಗೊತ್ತಾಗುವುದಿಲ್ಲ. ಹೀಗಾಗಿ ಆನುವಂಶಿಕತೆ ಈ ಸಮಸ್ಯೆಯ ಹಿಂದಿನ ಮುಖ್ಯ ಕಾರಣವಾಗಿದೆ.

ಅಪರೂಪದ ಕಾರಣಗಳಿಂದಲೂ ವರ್ಣಾಂಧತೆ ಉಂಟಾಗುತ್ತದೆ

ಆಪ್ಟಿಕ್ ನರ ರೋಗಗಳು: ಕೆಲವೊಮ್ಮೆ ವ್ಯಕ್ತಿಯು ಆಪ್ಟಿಕ್ ನರಕ್ಕೆ ಸಂಬಂಧಿಸಿದ ರೋಗದಿಂದ ಬಳಲುತ್ತಿರಬಹುದು ಮತ್ತು ಇದು ವರ್ಣಾಂಧತೆಗೆ ಕಾರಣವಾಗಬಹುದು. ಅಕ್ಷಿಪಟಲ ಅಥವಾ ಆಪ್ಟಿಕ್ ನರಕ್ಕೆ ಹಾನಿಯು ದೃಷ್ಟಿಯು ಮಸುಕನ್ನಾಗಿಸುವುದರ ಜೊತೆಗೆ ವರ್ಣಾಂಧತೆಯನ್ನು ಉಂಟು ಮಾಡಬಲ್ಲದು. ಕೆಲವು ಔಷಧಿಗಳೂ ವ್ಯಕ್ತಿಯನ್ನು ವರ್ಣಾಂಧತೆಯ ಅಪಾಯಕ್ಕೆ ಗುರಿ ಮಾಡಬಹುದು.

ಇತರ ರೋಗಗಳು: ಜನ್ಮಜಾತ ಬಣ್ಣಗುರುಡುತನಕ್ಕೆ ಹೋಲಿಸಿದರೆ ಇತರ ರೋಗಗಳಿಂದ ವರ್ಣಾಂಧತೆಯುಂಟಾಗುವುದು ತುಂಬಾ ಅಪರೂಪವೆನ್ನಬಹುದು. ಅಲ್ಲದೆ,ರೋಗವೊಂದರಿಂದ ಉಂಟಾದ ವರ್ಣಾಂಧತೆಯು ಎರಡು ಕಣ್ಣುಗಳ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಕಾಲಕ್ರಮೇಣ ಈ ಸ್ಥಿತಿ ತೀರ ಹದಗೆಡಬಹುದು. ಮಧುಮೇಹ,ಅಲ್ಝೀಮರ್ಸ್ ಕಾಯಿಲೆ, ಪಾರ್ಕಿನ್ಸನ್ಸ್ ಕಾಯಿಲೆ ಮತ್ತು ಲ್ಯುಕೋಮಿಯಾ ಇವು ಕೆಲವೊಮ್ಮೆ ವರ್ಣಾಂಧತೆಯೊಂದಿಗೆ ಗುರುತಿಸಿಕೊಳ್ಳುವ ರೋಗಗಳಾಗಿವೆ.

ವರ್ಣಾಂಧತೆಯ ಲಕ್ಷಣಗಳು

ವರ್ಣಾಂಧತೆಯ ಲಕ್ಷಣಗಳು ಸೌಮ್ಯ ಅಥವಾ ತೀವ್ರ ಸ್ವರೂಪದ್ದಾಗಿರಬಹುದು. ವಾಸ್ತವದಲ್ಲಿ ತಮಗೆ ವರ್ಣಾಂಧತೆಯ ಸೌಮ್ಯ ಲಕ್ಷಣಗಳು ಇವೆ ಎನ್ನುವುದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ತಮ್ಮ ಮಗು ಬಣ್ಣಗಳನ್ನು ಗುರುತಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದೆಯೇ ಎನ್ನುವುದರ ಮೇಲೆ ನಿಗಾ ಇರಿಸುವುದು ಹೆತ್ತವರ ಕರ್ತವ್ಯವಾಗಿದೆ. ವರ್ಣಾಂಧತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಕೆಂಪು ಮತ್ತು ಹಸಿರು ಅಥವಾ ನೀಲಿ ಮತ್ತು ಹಳದಿ ಬಣ್ಣಗಳು ಗೊಂದಲವನ್ನುಂಟು ಮಾಡುತ್ತವೆ.

ದೃಷ್ಟಿಯು ಮಸುಕಾಗುವುದು,ಬಣ್ಣಗಳನ್ನು ಗುರುತಿಸಲು ಸಾಧ್ಯವಾಗದಿರುವುದು,ಯಾರನ್ನಾದರೂ ಅಥವಾ ಏನನ್ನಾದರೂ ನೋಡುವಾಗ ರೆಪ್ಪೆಗಳನ್ನು ಅರ್ಧ ಮುಚ್ಚುವುದು,ಬೆಳಕಿನ ಸೂಕ್ಷ್ಮತೆ ಮತ್ತು ಬಣ್ಣಗಳ ಪ್ರಖರತೆಯನ್ನು ನೋಡಲು ಕಷ್ಟವಾಗುವುದು ಇವು ವರ್ಣಾಂಧತೆಯ ಮುಖ್ಯ ಲಕ್ಷಣಗಳಾಗಿವೆ.

ರೋಗನಿರ್ಧಾರ ಮತ್ತು ಚಿಕಿತ್ಸೆ

ವರ್ಣಾಂಧತೆಯ ಯಾವುದೇ ಲಕ್ಷಣ ನಿಮ್ಮಲ್ಲಿದ್ದರೆ ಕೆಲವು ವಿನ್ಯಾಸಗಳು ಅಥವಾ ಚುಕ್ಕೆಗಳನ್ನು ನೋಡುವುದೂ ನಿಮಗೆ ಕಷ್ಟವಾಗಬಹುದು. ವರ್ಣಾಂಧತೆಯ ಸಮಸ್ಯೆಯಿದ್ದರೆ ನೇತ್ರವೈದ್ಯರು ಇಷಿಹರ,ಲ್ಯಾಂಟರ್ನ್,ಎನಾಮಲೊಸ್ಕೋಪ್ ಮತ್ತು ಫ್ರಾನ್ಸ್‌ವರ್ಥ್ ಹ್ಯೂಸ್ ಟೆಸ್ಟನಂತಹ ವಿವಿಧ ಪರೀಕ್ಷೆಗಳ ಮೂಲಕ ಅದನ್ನು ದೃಢಪಡಿಸಿಕೊಳ್ಳುತ್ತಾರೆ.

ವರ್ಣಾಂಧತೆ ಜನ್ಮದತ್ತವಾಗಿದ್ದರೆ ಅದಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಆದರೆ ವರ್ಣಾಂಧತೆಯ ವಿಧವನ್ನು ತಿಳಿದುಕೊಳ್ಳಲು ಮತ್ತು ಅದು ಮುಂದಿನ ಪೀಳಿಗೆಗೂ ವರ್ಗಾವಣೆಗೊಳ್ಳುತ್ತದೆಯೇ ಎನ್ನುವುದನ್ನು ಅರಿಯಲು ಆನುವಂಶಿಕತೆ ತಜ್ಞರೊಂದಿಗೆ ಅಗತ್ಯವಾಗಿ ಸಮಾಲೋಚಿಸಬೇಕಾಗುತ್ತದೆ. ಅದು ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಕೆಂಪು ಅಥವಾ ಹಸಿರು ಬಣ್ಣದ ವರ್ಣಾಂಧತೆಯಾಗಿದ್ದರೆ ವಾಹನ ಚಾಲನೆಯು ಸಮಸ್ಯೆಯಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾರ್ವಜನಿಕ ಸುರಕ್ಷತೆಯ ಪ್ರಶ್ನೆ ಎದುರಾಗುವುದರಿಂದ ವರ್ಣಾಂಧತೆಯುಳ್ಳ ವ್ಯಕ್ತಿಗಳಿಗೆ ವಾಹನ ಚಾಲನೆ ಪರವಾನಿಗೆಯನ್ನು ನೀಡುವುದಿಲ್ಲ. ಇದನ್ನು ಹೊರತುಪಡಿಸಿದರೆ ವರ್ಣಾಂಧತೆಯು ದೈನಂದಿನ ಬದುಕಿನಲ್ಲಿ ಹೆಚ್ಚಿನ ತೊಡಕುಗಳನ್ನುಂಟು ಮಾಡುವುದಿಲ್ಲ. ಆದರೆ ಉದ್ಯೋಗ ನೇಮಕಾತಿಗಳಲ್ಲಿ ಕೆಲವು ನಿರ್ಬಂಧಗಳಿರುತ್ತವೆ. ಅಗತ್ಯವಿದ್ದರೆ ವರ್ಣಾಂಧತೆಯ ಕೊರತೆಯನ್ನು ನಿವಾರಿಸಲು ಕಲರ್ಡ್ ಫಿಲ್ಟರ್‌ಗಳನ್ನು ಹೊಂದಿರುವ ಕಾಂಟ್ಯಾಕ್ಟ್ ಲೆನ್ಸ್‌ಗಳು ಅಥವಾ ಮಸೂರಗಳು ಲಭ್ಯವಿವೆ. ಆದರೆ ದೃಷ್ಟಿಯು ಸಹಜವಾಗಿರುವುದರಿಂದ ಹೆಚ್ಚಿನ ಜನರು ಇಂತಹ ಮಸೂರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವರ್ಣಾಂಧತೆಯ ಸಮಸ್ಯೆಯನ್ನು ಎದುರಿಸಲು ವ್ಯಕ್ತಿಯು ಬಣ್ಣದ ವಸ್ತುಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಬಹುದು ಮತ್ತು ವಿವಿಧ ಬಣ್ಣಗಳನ್ನು ಗುರುತಿಸಲು ವಿವಿಧ ಫೋನ್ ಅಪ್ಲಿಕೇಷನ್‌ಗಳನ್ನು ಬಳಸಬಹುದು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News