ಡಯಲಿಸಿಸ್ ಕುರಿತು ನಿಮಗೆಷ್ಟು ಗೊತ್ತು?
ಡಯಲಿಸಿಸ್ ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಕೆಲವು ವೈದ್ಯಕೀಯ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಡಯಲಿಸಿಸ್ ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗುತ್ತದೆ ಎನ್ನುವುದು ನಮಗೆ ಗೊತ್ತು,ಆದರೆ ವಾಸ್ತವದಲ್ಲಿ ಈ ಪ್ರಕ್ರಿಯೆ ಏನು,ಹೇಗೆ ಅದನ್ನು ನಡೆಸಲಾಗುತ್ತದೆ ಮತ್ತು ಸಂಭಾವ್ಯ ಅಪಾಯಗಳೇನು ಇತ್ಯಾದಿ ಅಂಶಗಳ ಬಗ್ಗೆ ಹೆಚ್ಚಿನವರಿಗೆ ಸರಿಯಾದ ಮಾಹಿತಿಗಳಿಲ್ಲ. ಡಯಲಿಸಿಸ್ ಕುರಿತು ಸಂಪೂರ್ಣ ಮಾಹಿತಿಗಳು ಇಲ್ಲಿವೆ....
ಏನಿದು ಡಯಲಿಸಿಸ್?
ಡಯಲಿಸಿಸ್ ಮೂತ್ರಪಿಂಡಗಳು ವಿಫಲಗೊಂಡಾಗ ಅಥವಾ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ಧಾಗ ಯಂತ್ರದ ಮೂಲಕ ಅವುಗಳ ಕಾರ್ಯವನ್ನು ಮಾಡುವ ಚಿಕಿತ್ಸೆಯಾಗಿದೆ. ಮೂತ್ರಪಿಂಡಗಳು ಹೆಚ್ಚುವರಿ ದ್ರವ ಮತ್ತು ತ್ಯಾಜ್ಯವನ್ನು ಮೂತ್ರ ಮತ್ತು ಮಲಗಳ ರೂಪದಲ್ಲಿ ಹೊರಹಾಕುವ ಮೂಲಕ ಶರೀರವನ್ನು ನಂಜುಮುಕ್ತಗೊಳಿಸುವ ಕೆಲಸವನ್ನು ಮಾಡುತ್ತವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಬಹುದು. ಅವು ತ್ಯಾಜ್ಯವನ್ನು ಮೂತ್ರಕೋಶಕ್ಕೆ ರವಾನಿಸುತ್ತವೆ ಮತ್ತು ಅದು ಅಲ್ಲಿಂದ ವಿಸರ್ಜಿಸಲ್ಪಡುತ್ತದೆ. ಮೂತ್ರಪಿಂಡಗಳು ವಿಫಲಗೊಂಡಿದ್ದರೆ ಅಥವಾ ಅವು ಕೇವಲ ಶೇ.15-ಶೇ.20ರಷ್ಟು ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೆ ಡಯಲಿಸಿಸ್‌ಗೆ ವೈದ್ಯರು ಸೂಚಿಸುತ್ತಾರೆ. ರಕ್ತವನ್ನು ಶುದ್ಧೀಕರಿಸುವ ಮತ್ತು ತ್ಯಾಜ್ಯಗಳನ್ನು ಸೋಸುವ ಯಂತ್ರವನ್ನು ಬಳಸಿ ಡಯಲಿಸಿಸ್ ಅನ್ನು ನಡೆಸಲಾಗುತ್ತದೆ. 1940ರ ದಶಕದಿಂದಲೇ ಮೂತ್ರಪಿಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಡಯಲಿಸಿಸ್ ಬಳಕೆಯಾಗುತ್ತಿದೆ. ಅದು ವಿದ್ಯುದ್ವಿಚ್ಛೇದ್ಯಗಳು ಮತ್ತು ದ್ರವಗಳನ್ನು ಸಮತೋಲನಗೊಳಿಸಲು ನೆರವಾಗುವ ಮೂಲಕ ಮೂತ್ರಪಿಂಡಗಳ ಕಾರ್ಯಗಳನ್ನು ನಿರ್ವಹಿಸುತ್ತದೆ.
ಡಯಲಿಸಿಸ್‌ನ ಅಗತ್ಯವೇನು?
ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೂತ್ರಪಿಂಡಗಳು ಹೆಚ್ಚುವರಿ ನೀರು ಮತ್ತು ವಿಷವಸ್ತುಗಳನ್ನು ಹೊರಗೆ ಹಾಕುವ ಮೂಲಕ ಅವು ನಮ್ಮ ಶರೀರದಲ್ಲಿ ಶೇಖರಗೊಳ್ಳುವುದನ್ನು ತಡೆಯುತ್ತವೆ. ಅಲ್ಲದೆ ಮೂತ್ರಪಿಂಡಗಳು ಸೋಡಿಯಂ ಮತ್ತು ಪೊಟ್ಯಾಷಿಯಂ ಸೇರಿದಂತೆ ರಾಸಾಯನಿಕಗಳ ಮಟ್ಟಗಳನ್ನು ನಿಯಂತ್ರಿಸುತ್ತವೆ,ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತವೆ ಮತ್ತು ಶರೀರವು ವಿಟಾಮಿನ್‌ಗಳು ಮತ್ತು ಖನಿಜಗಳನ್ನು ತ್ವರಿತವಾಗಿ ಹೀರಿಕೊಳ್ಳಲು ಅವಕಾಶ ಕಲ್ಪಿಸುತ್ತವೆ. ಯಾವುದೇ ಪೆಟ್ಟು,ಗಾಯ ಅಥವಾ ಮೂತ್ರಪಿಂಡ ರೋಗಗಳಿಂದಾಗಿ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದಾಗ ಗರಿಷ್ಠ ಮಟ್ಟದಲ್ಲಿ ಅವುಗಳ ಕಾರ್ಯವನ್ನು ಮುಂದುವರಿಸಲು ಡಯಲಿಸಿಸ್ ನೆರವಾಗುತ್ತದೆ. ರೋಗಿಗಳು ನಿಯಮಿತವಾಗಿ ಡಯಲಿಸಿಸ್ ಅನ್ನು ಮಾಡಿಸಿಕೊಳ್ಳದಿದ್ದರೆ ರಕ್ತದಲ್ಲಿ ಉಪ್ಪು ಸಂಗ್ರಹಗೊಳ್ಳಬಹುದು ಮತ್ತು ಇದು ಇತರ ಅಂಗಗಳಿಗೂ ಹಾನಿಯನ್ನುಂಟು ಮಾಡುವ ಮೂಲಕ ಮಾರಣಾಂತಿಕವಾಗಬಹುದು.
ಡಯಲಿಸಿಸ್ ವಿಧಗಳು
ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳನ್ನು ಅವಲಂಬಿಸಿ ಡಯಲಿಸಿಸ್ ಅನ್ನು ಹೆಮೊಡಯಲಿಸಿಸ್,ಪೆರಿಟೋನಿಯಲ್ ಡಯಲಿಸಿಸ್ ಮತ್ತು ಕಂಟಿನ್ಯೂಯಸ್ ರೇನಲ್ ರಿಪ್ಲೇಸ್‌ಮೆಂಟ್ ಥೆರಪಿ (ಸಿಆರ್‌ಆರ್‌ಟಿ) ಅಥವಾ ಹೆಮೊಫಿಲ್ಟ್ರೇಷನ್ ಎಂಬ ಮೂರು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ.
ಡಯಲಿಸಿಸ್‌ನ ಅಪಾಯಗಳು ಮತ್ತು ಅಡ್ಡಪರಿಣಾಮಗಳು
ಡಯಲಿಸಿಸ್ ಹಲವಾರು ರೀತಿಗಳಲ್ಲಿ ಜೀವರಕ್ಷಕ ಪ್ರಕ್ರಿಯೆಯಾಗಿದೆ ನಿಜ,ಆದರೆ ಅದು ಕೆಲವು ಅನಾನುಕೂಲತೆಗಳನ್ನೂ ಉಂಟು ಮಾಡುತ್ತದೆ.
ಡಯಲಿಸಿಸ್‌ನ ವಿಧಗಳನ್ನು ಅವಲಂಬಿಸಿ ರಕ್ತಹೀನತೆ,ಕಡಿಮೆ ರಕ್ತದೊತ್ತಡ,ತುರಿಕೆ,ಸ್ನಾಯುಸೆಳೆತ,ನಿದ್ರಾಹೀನತೆ,ರಕ್ತದಲ್ಲಿ ಪೊಟ್ಯಾಷಿಯಂ ಮಟ್ಟ ಏರಿಕೆ,ಸೆಪ್ಸಿಸ್,ಅನಿಯಮಿತ ಹೃದಯ ಬಡಿತ,ಪೆರಿಕಾರ್ಡೈಟಿಸ್ ಅಥವಾ ಹೃದಯದ ಉರಿಯೂತ,ರಕ್ತ ಸೋಂಕು,ಹೃದಯ ಸ್ತಂಭನದಿಂದ ಸಾವು,ಹೊಟ್ಟೆಸೋಂಕುಗಳು, ಮಧುಮೇಹ,ಹರ್ನಿಯಾ,ದುರ್ಬಲ ಹೊಟ್ಟೆ ಸ್ನಾಯು, ಕಾರಣವಿಲ್ಲದ ತೂಕ ಇಳಿಕೆ, ಜ್ವರ, ಹೊಟ್ಟೆನೋವು, ರಕ್ತಸ್ರಾವ, ವಿದ್ಯುದ್ವಿಚ್ಛೇದ್ಯ ಅಸಮತೋಲನ,ಅನಫೈಲಾಕ್ಸಿಸ್,ಮೂಳೆಗಳ ದೌರ್ಬಲ್ಯ ಇತ್ಯಾದಿ ಅಪಾಯಗಳು ಎದುರಾಗಬಹುದು. ಇವೆಲ್ಲ ಸಾಮಾನ್ಯ ಅಪಾಯಗಳಾಗಿದ್ದು,ಡಯಲಿಸಿಸ್‌ನ ವಿಧವನ್ನು ಅವಲಂಬಿಸಿ ಇವುಗಳ ಪೈಕಿ ಕೆಲವು ಅಡ್ಡಪರಿಣಾಮಗಳನ್ನು ರೋಗಿಯು ಅನುಭವಿಸಬಹುದು. ರೋಗಿಯ ಪಾಲಿಗೆ ಮಾರಣಾಂತಿಕವಾಗಬಹುದಾದ ಅಮಿಲಾಯ್ಡಾಸಿಸ್‌ನಂತಹ ಇತರ ಕೆಲವು ಅಪಾಯಗಳೂ ಇವೆ. ಡಯಲಿಸಿಸ್ ಖಿನ್ನತೆಗೂ ಕಾರಣವಾಗಬಹುದು.