ಕಿಟೋ ಡಯಟ್‌ನ ಏಳು ಅಪಾಯಕಾರಿ ಅಡ್ಡಪರಿಣಾಮಗಳು ನಿಮಗೆ ತಿಳಿದಿರಲಿ

Update: 2021-01-16 12:54 GMT

   ಶರೀರದ ತೂಕವನ್ನು ಇಳಿಸಿಕೊಳ್ಳಲು ನೆರವಾಗುವ ಕಿಟೋ ಡಯಟ್ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ ಕಡಿಮೆ ಕಾರ್ಬೊಹೈಡ್ರೇಟ್‌ಗಳು ಮತ್ತು ಹೆಚ್ಚಿನ ಕೊಬ್ಬುಗಳನ್ನು ಒಳಗೊಂಡಿರುವ ಈ ಆಹಾರ ಕ್ರಮವು ಕೆಲವು ಅಪಾಯಕಾರಿ ಅಡ್ಡಪರಿಣಾಮಗಳನ್ನೂ ಉಂಟು ಮಾಡುತ್ತದೆ. ಅಂತಹ ಏಳು ಅಡ್ಡಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ.....

► ನಿಮ್ಮ ಚಿಂತನೆಗಳು ಜಾಳುಜಾಳಾಗಬಹುದು

ಕಿಟೋಜೆನಿಕ್ ಡಯಟ್ ಶರೀರದ ಚಯಾಪಚಯವನ್ನು ಕೊಬ್ಬನ್ನು ಕರಗಿಸುವ ಕಿಟೋಸಿಸ್ ಎಂಬ ಸ್ಥಿತಿಗೆ ಬದಲಿಸುತ್ತದೆ. ಕಾರ್ಬ್‌ಗಳನ್ನು ನಿರ್ಮೂಲಿಸುವ ಮತ್ತು ಕೊಬ್ಬುಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ಅದು ಈ ಸ್ಥಿತಿಗೆ ಕಾರಣವಾಗುತ್ತದೆ. ಇದು ತ್ವರಿತ ತೂಕ ಇಳಿಕೆಗೆ ಹೆಚ್ಚು ಲಾಭದಾಯಕವಾಗುತ್ತದೆ ನಿಜ,ಆದರೆ ನಿಮ್ಮ ಮಿದುಳಿನ ಮೇಲೆ ತನ್ನದೇ ಆದ ಪರಿಣಾಮವನ್ನೂ ಉಂಟು ಮಾಡುತ್ತದೆ.

 ಕಾರ್ಬ್‌ಗಳ ಸೇವನೆಯಲ್ಲಿ ತ್ವರಿತ ಇಳಿಕೆಯು ಮಿದುಳಿಗೆ ಗ್ಲುಕೋಸ್‌ನ ಲಭ್ಯತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಇದರಿಂದ ಮಿದುಳಿಗೆ ಮಂಕು ಕವಿದಿರುವಂತೆ ನಿಮಗೆ ಭಾಸವಾಗುತ್ತದೆ. ನಿಮ್ಮ ಚಿಂತನೆಗಳು ಮತ್ತು ಏಕಾಗ್ರತೆ ವ್ಯತ್ಯಯಗೊಂಡಿರುವಂತೆ ನಿಮಗೆ ಅನಿಸಬಹುದು. ನೀವು ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗುವುದಿದ್ದರೆ ಅಥವಾ ಭಾರೀ ಯಂತ್ರವನ್ನು ನಿರ್ವಹಿಸಲಿದ್ದೀರಿ ಎಂದಾದರೆ ಕಿಟೋ ಡಯಟ್ ಆರಂಭಿಸುವುದನ್ನು ಮುಂದೂಡಬೇಕಾಗುತ್ತದೆ. ಮಿದುಳು ಕಾರ್ಬ್‌ಗಳ ಅನುಪಸ್ಥಿತಿಯಲ್ಲಿ ಶಕ್ತಿಗಾಗಿ ಕಿಟೋನ್ (ಕೊಬ್ಬಿನ ಉಪ ಉತ್ಪನ್ನ)ಗಳನ್ನು ಬಳಸಿಕೊಳ್ಳಲು ಸಮರ್ಥವಾಗಿರುತ್ತದೆ. ಶರೀರವು ಹೆಚ್ಚುಹೆಚ್ಚಾಗಿ ಕಿಟೋನ್‌ಗಳನ್ನು ಉತ್ಪಾದಿಸುತ್ತಿದ್ದಂತೆ ಸಾಮಾನ್ಯವಾಗಿ ಮಿದುಳಿಗೆ ಕವಿದಿರುವ ಈ ಮಂಕು ಒಂದು ವಾರದೊಳಗೆ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು.

► ಸ್ನಾಯುಗಳು ದುರ್ಬಲಗೊಳ್ಳಬಹುದು

 ನಿಜವಾದ ಕಿಟೋ ಡಯಟ್ ಕಡಿಮೆ ಕಾರ್ಬ್‌ಗಳನ್ನು ಮಾತ್ರವಲ್ಲ,ಪ್ರೋಟಿನ್ ಅನ್ನು ಸಹ ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ಅಂದರೆ ನೀವು ತೂಕವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ,ನಿಮ್ಮ ಸ್ನಾಯುಗಳ ದ್ರವ್ಯರಾಶಿಯನ್ನು ಸಹ ಕಳೆದುಕೊಳ್ಳುತ್ತೀರಿ. ಅಂದರೆ ನಿಮ್ಮ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದಕ್ಕೆ ಪ್ರೋಟಿನ್ ಸೇವನೆ ಕಡಿಮೆಯಾಗಿರುವುದು ಕಾರಣವಾಗಿರುತ್ತದೆ. ಈ ದುಷ್ಪರಿಣಾಮ ಕಿಟೋ ಡಯಟ್‌ನೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡುವವರನ್ನೂ ಬಿಡುವುದಿಲ್ಲ. ಎಷ್ಟೋ ಸಲ ತೂಕವು ಕಡಿಮೆಯಾಗುತ್ತಿರುವ ಸಂಭ್ರಮದಲ್ಲಿ ಸ್ನಾಯುಗಳು ದುರ್ಬಲಗೊಂಡಿರುವುದು ವ್ಯಕ್ತಿಯ ಗಮನಕ್ಕೆ ಬರುವುದೇ ಇಲ್ಲ. ಇದರಿಂದ ಪಾರಾಗಲು ಪರಿಷ್ಕೃತ ಕಿಟೋ ಡಯಟ್‌ನ್ನು ಅನುಸರಿಸಬಹುದು ಎನ್ನುತ್ತಾರೆ ತಜ್ಞರು. ಮೀನು ಅಥವಾ ಗ್ರೀಕ್ ಯೋಗರ್ಟ್‌ನಂತಹ ಆಹಾರಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಂಡರೆ ಸಾಕಷ್ಟು ಪ್ರೋಟಿನ್ ದೊರೆಯುತ್ತದೆ. ಇದರಿಂದ ಕಿಟೋಸಿಸ್ ಸಾಧನೆಯಾಗದಿರಬಹುದು,ಆದರೆ ಇದು ಕೆಟ್ಟದ್ದೇನಲ್ಲ. ಈಗಲೂ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು.

► ಪಚನಕ್ರಿಯೆ ಹಳಿ ತಪ್ಪುತ್ತದೆ

 ತೂಕ ಇಳಿಕೆಗಾಗಿ ಕಾರ್ಬ್‌ಗಳ ಸೇವನೆಯನ್ನು ಕಡಿತ ಮಾಡುತ್ತಿದ್ದೀರಿ ಅಂದರೆ ನಾರಿನಂತಹ ಒಳ್ಳೆಯ ಕಾರ್ಬ್‌ಗಳೂ ಕಡಿಮೆಯಾಗುತ್ತವೆ ಎಂದು ಅರ್ಥ. ಸಾಕಷ್ಟು ನಾರು ಸೇವಿಸದಿದ್ದರೆ ನಿಮ್ಮ ಪಚನಕ್ರಿಯೆಯು ಹಳಿ ತಪ್ಪುತ್ತದೆ. ಅಪರೂಪಕ್ಕೆ ಮಲಬದ್ಧತೆಯುಂಟಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ, ಆದರೆ ಕ್ರಮೇಣ ಅದು ಹೊಟ್ಟೆನೋವು,ಮೂಲವ್ಯಾಧಿ ಮತ್ತು ದೊಡ್ಡಕರುಳಿನ ಕಾರ್ಯಕ್ಕೆ ತೊಡಕು ಇತ್ಯಾದಿ ಸಮಸ್ಯೆಗಳನ್ನುಂಟು ಮಾಡುತ್ತದೆ. ಕಿಟೋ ಡಯಟ್‌ನಲ್ಲಿದ್ದಾಗ ಮಲಬದ್ಧತೆಯಿಂದ ನರಳುತ್ತಿದ್ದರೆ ಯಥೇಚ್ಛ ನೀರನ್ನು ಸೇವಿಸಿ ಮತ್ತು ಅಧಿಕ ನಾರು ಹಾಗೂ ಕಡಿಮೆ ಕಾರ್ಬ್‌ಗಳಿರುವ ಬೆರ್ರಿಗಳು,ಅವಕಾಡೊ ಇತ್ಯಾದಿಗಳು ನಿಮ್ಮ ಆಹಾರಕ್ರಮದಲ್ಲಿರಲಿ.

► ಮೂತ್ರಪಿಂಡ ಕಲ್ಲುಗಳುಂಟಾಗುವ ಅಪಾಯ ಹೆಚ್ಚಬಹುದು

ಕಿಟೋ ಡಯಟ್ ಕೆಲವು ಪ್ರಕರಣಗಳಲ್ಲಿ ಮೂತ್ರಪಿಂಡ ಕಲ್ಲುಗಳಿಗೂ ಕಾರಣವಾಗುತ್ತದೆ. ಈ ಆಹಾರ ಕ್ರಮದಲ್ಲಿ ಪ್ರಾಣಿಜನ್ಯ ಪ್ರೋಟಿನ್‌ಗಳ ಅಧಿಕ ಸೇವನೆಯು ಮೂತ್ರದಲ್ಲಿ ಕ್ಯಾಲ್ಸಿಯಂ ಮತ್ತು ಯೂರಿಕ್ ಆ್ಯಸಿಡ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಈ ಮಟ್ಟಗಳು ಹೆಚ್ಚುತ್ತಿದ್ದಂತೆ ಮೂತ್ರಪಿಂಡ ಕಲ್ಲುಗಳಾಗುವ ಅಪಾಯವೂ ಹೆಚ್ಚುತ್ತ ಹೋಗುತ್ತದೆ ಎನ್ನುತ್ತಾರೆ ತಜ್ಞರು.

ನೀವು ಈಗಾಗಲೇ ಮೂತ್ರಪಿಂಡ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿದ್ದರೆ ಕಿಟೋ ಡಯಟ್ ಆರಂಭಿಸುವ ಮುನ್ನ ಖಂಡಿತವಾಗಿ ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಸಂಸ್ಕರಿತ ಮಾಂಸದ ಹೆಚ್ಚಿನ ಸೇವನೆಯಿಂದ ಮೂತ್ರಪಿಂಡ ಕಲ್ಲುಗಳ ಅಪಾಯವೂ ಹೆಚ್ಚಾಗುವುದರಿಂದ ಇಂತಹ ಆಹಾರಗಳ ಸೇವನೆಗೆ ಮಿತಿಯಿರಬೇಕು.

► ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ವ್ಯತ್ಯಯಗೊಳಿಸುತ್ತದೆ

 ಮಧುಮೇಹದಿಂದ ಬಳಲುತ್ತಿರುವ ಕೆಲವರು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿಸಲು ಕಿಟೋ ವರದಾನವೆಂದು ಭಾವಿಸಿರುತ್ತಾರೆ. ಕಡಿಮೆ ಕಾರ್ಬ್‌ಗಳನ್ನು ಒಳಗೊಂಡಿರುವ ಕಿಟೋ ಆಹಾರಕ್ರಮವು ಸುಮಾರು ನಾಲ್ಕು ತಿಂಗಳುಗಳ ಬಳಿಕ ಸಕ್ಕರೆಯ ಮಟ್ಟದ ಮೇಲೆ ನಿಯಂತ್ರಣವನ್ನು ಹೆಚ್ಚಿಸಬಹುದು ಎನ್ನುವುದಕ್ಕೆ ಕೆಲವು ಕ್ಲಿನಿಕಲ್ ಸಾಕ್ಷಾಧಾರಗಳೂ ಇವೆ. ಆದರೆ ಕಿಟೋ ಮತ್ತು ಮಧುಮೇಹ ಸಂಯೋಜನೆ ಯಾವಾಗಲೂ ಒಳ್ಳೆಯದಲ್ಲ ಮತ್ತು ವಿಶೇಷವಾಗಿ ಗ್ಲುಕೋಸ್ ಮಟ್ಟವನ್ನು ತಗ್ಗಿಸುವ ಔಷಧಿಗಳನ್ನು ಸೇವಿಸುವವರಿಗೆ ಕಿಟೋ ಡಯಟ್ ಹೆಚ್ಚು ಅಪಾಯಕಾರಿಯಾಗಬಹುದು ಎನ್ನುತ್ತಾರೆ ತಜ್ಞರು. ಹೀಗಾಗಿ ಮಧುಮೇಹ ಸಮಸ್ಯೆ ಇರುವವರು ತಮ್ಮ ಆಹಾರಕ್ರಮವನ್ನು ವೈದ್ಯರೊಂದಿಗೆ ಚರ್ಚಿಸಿಯೇ ರೂಪಿಸಿಕೊಳ್ಳುವುದು ಒಳ್ಳೆಯದು.

►ಮೂಡ್ ಕೆಡಬಹುದು

 ನಮ್ಮ ಮೂಡ್‌ಗೂ ನಾವು ಸೇವಿಸುವ ಆಹಾರಕ್ಕೂ ಸಂಬಂಧವಿದೆ. ಕಿಟೋ ಡಯಟ್‌ನಿಂದಾಗಿ ನಮ್ಮ ಶರೀರವು ಕಾರ್ಬ್‌ಗಳಿಂದ ವಂಚಿತಗೊಳ್ಳುವುದರಿಂದ ಮನಃಸ್ಥಿತಿಯೂ ಆಗಾಗ್ಗೆ ಬದಲಾಗಬಹುದು. ಮಿದುಳು ಶಕ್ತಿಗಾಗಿ ರಕ್ತದಿಂದ ಕಡಿಮೆ ಸಕ್ಕರೆಯನ್ನು ಪಡೆದುಕೊಂಡರೆ ಅದು ನಮ್ಮ ಮೂಡ್‌ನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಕೆರಳುವಿಕೆ,ಬಳಲಿಕೆ ಮತ್ತು ಏಕಾಗ್ರತೆಗೆ ಕಷ್ಟ ಇತ್ಯಾದಿ ಮನಃಸ್ಥಿತಿಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

► ಕೊಲೆಸ್ಟ್ರಾಲ್ ಹೆಚ್ಚಿಸಬಹುದು

 ಸಾಮಾನ್ಯ ಕಿಟೋ ಡಯಟ್ ಕೊಬ್ಬಿನಿಂದ ನಿಮ್ಮ ಶರೀರದ ಶೇ.85 ರಷ್ಟು ದೈನಂದಿನ ಕ್ಯಾಲೊರಿ ಅಗತ್ಯವು ಒದಗಿಸಲ್ಪಡುತ್ತದೆ. ಇಷ್ಟೆಲ್ಲ ಕೊಬ್ಬನ್ನು ಒಳಗೊಂಡಿರುವ ಡಯಟ್ ಹೃದಯಕ್ಕೆ ಅಷ್ಟೊಂದು ಆರೋಗ್ಯಕರವಲ್ಲ. ಕಿಟೊ ಡಯಟ್‌ನ ಅಡ್ಡ ಪರಿಣಾಮಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದೂ ಸೇರಿದೆ ಮತ್ತು ಇದು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ ಕಿಟೋ ಡಯಟ್ ಮತ್ತು ಹೃದಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳು ನಡೆದಿಲ್ಲ,ಹೀಗಾಗಿ ವರ್ಷಗಳ ಕಾಲ ಕಿಟೋ ಡಯಟ್ ಅನುಸರಿಸಿದರೆ ಏನಾಗಬಹುದು ಎಂದು ಹೇಳುವುದು ಕಷ್ಟ ಎನ್ನುತ್ತಾರೆ ತಜ್ಞರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News