ಬೀದಿನಾಟಕ: ಸಫ್ದರ್ ಹಾಶ್ಮಿ ನೆನಪಿನಲ್ಲಿ

Update: 2021-01-16 19:30 GMT

ಬೀದಿನಾಟಕ ಚಳವಳಿಯ ನೇತಾರ, ಖ್ಯಾತ ರಂಗನಟ ಸಫ್ದರ್ ಹಾಶ್ಮಿ ಕೊಲೆ, ಪ್ರಜ್ಞಾವಂತ ನಾಗರಿಕರೆಲ್ಲರೂ ನಾಚಿ ತಲೆತಗ್ಗಿಸಬೇಕಾದಂತಹ ಘೋರ ಕೃತ್ಯವು ಉದ್ದೇಶಪೂರ್ವಕವಾಗಿಯೇ ನಡೆದು ಹೋಗಿತ್ತು.

ಇದು 1989ರ ಜನವರಿ 2ರಂದು ನಡೆದಿದ್ದರೆ ಕಳೆದ ವರ್ಷ ಅಂದರೆ 2020ರ ಜನವರಿ ಮೊದಲ ವಾರದಲ್ಲಿ ಸಫ್ದರ್ ಹಾಶ್ಮಿಯ ಒಡನಾಡಿ ಸಂಗಾತಿ ಸುಧನ್ವ ದೇಶಪಾಂಡೆ ಸಫ್ದರ್ ಬದುಕಿನ ಕುರಿತು ವಿಶಿಷ್ಟ ಪುಸ್ತಕವೊಂದನ್ನು ಇಂಗ್ಲಿಷ್‌ನಲ್ಲಿ ಬರೆದು ಓದುಗರಿಗೆ ಸಿಗುವ ಹಾಗೆ ಮಾಡಿದರು. 2020ರ ಕೊನೆಯ ತಿಂಗಳಲ್ಲಿ ಆ ಪುಸ್ತಕ ‘ಹಲ್ಲಾ ಬೋಲ್’ ಕರ್ನಾಟಕದಲ್ಲಿಯೂ ಅನುವಾದವಾಗಿ (ಅನುವಾದ ಎಂ. ಜಿ. ವೆಂಕಟೇಶ್) ರಂಗಾಸಕ್ತರಿಗೆ ಸಿಗುವ ಹಾಗೆ ಮಾಡಿದ್ದಾರೆ. ಈ ಪುಸ್ತಕ ಕನ್ನಡಕ್ಕೆ ಬಂದಿರುವ ಸಂದರ್ಭದಲ್ಲಿಯೇ ಉಡುಪಿಯ ರಥಬೀದಿ ಗೆಳೆಯರು ಸಫ್ದರ್ ಹಾಶ್ಮಿ ನೆನಪಿನಲ್ಲಿ ಒಂದು ವಿಚಾರ ಸಂಕಿರಣ ಏರ್ಪಡಿಸಿ ಗಂಭೀರ ಚರ್ಚೆ ಮುನ್ನಡೆಯುವಂತೆ ಮಾಡಿದರು. ಅಲ್ಲಿನ ಚರ್ಚೆಗೆ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳನ್ನು ‘ಬೀದಿನಾಟಕಗಳು-ಇಂದಿನ ಆಗುಹೋಗುಗಳ’ ಕುರಿತಾಗಿ ವಿಸ್ತರಿಸಿ ನೀಡುತ್ತಿದ್ದೇನೆ.


ಮೂವತ್ತೆರಡು ವರ್ಷಗಳ ಹಿಂದೆ ಬೀದಿನಾಟಕವೊಂದರ ಪ್ರದರ್ಶನ ನಡೆದಾಗ ಗೂಂಡಾಗಳ ದಾಳಿಗೆ ಒಳಗಾದ ನಂತರ ಮೃತ್ಯುವಿಗೆ ಈಡಾದ ಸಫ್ದರ್ ಹಾಶ್ಮಿ ನೆನಪಿನಲ್ಲಿ ಬೀದಿನಾಟಕಗಳ ಕುರಿತಾಗಿಯೂ ಚರ್ಚೆಯಾಗುತ್ತಿರುವುದು ಬೀದಿನಾಟಕಗಳ ಶಕ್ತಿ ಎಂದು ಗುರುತಿಸಬೇಕು. ನಾನು ಹೇಳಬೇಕಿರುವುದು ಬೀದಿನಾಟಕಗಳ ಮೌಲಿಕತೆಯ ಬಗ್ಗೆ, ಬೀದಿನಾಟಕದ ಆಗುಹೋಗುಗಳ ಬಗ್ಗೆ ಆಗಿಹೋಗಿರುವ ಗೊಂದಲಗಳ ಕುರಿತಾಗಿ.

ಒಂದು ಸಾಮಾನ್ಯವಾದ ಹೇಳಿಕೆ ಇದೆ.
ರಂಗಭೂಮಿಯೆಂದರೆ ಸಮಕಾಲೀನ ರಾಜಕೀಯ ಸಂಗತಿಗಳನ್ನು ಸಾರ್ವಜನಿಕವಾಗಿ ಮತ್ತು ಬಹಿರಂಗವಾಗಿ ಮಾತನಾಡುವ ಸ್ಥಳ ಎಂದು. ಆ ಸ್ಥಳ ಯಾವುದೆಂದರೆ ಬೀದಿಯೇ. ಗಮನಿಸಬೇಕು ಅದು ಬೀದಿ. ಮಾರ್ಗವಲ್ಲ. ಮಹಾ ಮಾರ್ಗವಲ್ಲ, ಹೆದ್ದಾರಿಯಂತೂ ಅಲ್ಲವೇ ಅಲ್ಲ.

ಬೀದಿನಾಟಕಗಳು ಜನಪ್ರಿಯವಾಗತೊಡಗಿದ ಕಾಲವನ್ನು ಗಮನಿಸಬೇಕು. ಅದು ಎಂಭತ್ತರ ನಂತರದ ದಿನಗಳಲ್ಲಿ ದಿಲ್ಲಿಯಲ್ಲಿ ‘ಜನ ನಾಟ್ಯ ಮಂಚ್’ನವರು ಬೀದಿನಾಟಕವನ್ನು ಆಯ್ದುಕೊಂಡದ್ದು ಕಾರ್ಮಿಕರ ಸಮಸ್ಯೆಗಳನ್ನು ಕುರಿತಾಗಿ ಮಾತನಾಡುವುದಕ್ಕೆ. ಹಾಗಾಗಿ ಅವರಿರುವ ಸ್ಥಳಗಳಿಗೆ ಹೋಗಲೇಬೇಕಾದ ಅನಿವಾರ್ಯತೆಯಿಂದ ತಾವು ರೂಪಿಸಿಕೊಂಡ ಕಲಾಮಾಧ್ಯಮವೊಂದರ ಮೂಲಕ ಕ್ರಿಯಾಶೀಲರಾಗಿ ಕೆಲಸ ಮಾಡತೊಡಗಿದರು.

ಈಗ ಜನ ನಾಟ್ಯ ಮಂಚ್‌ನಲ್ಲಿ ಸಕ್ರಿಯರಾಗಿರುವ ಅಥವಾ ‘ಹಲ್ಲಾ ಬೋಲ್’ ಪುಸ್ತಕದ ಮೂಲ ಕೃತಿಕಾರ ಸುಧನ್ವ ದೇಶಪಾಂಡೆ ಕೆಲವು ವರ್ಷಗಳ ಹಿಂದೆ ಹೆಗ್ಗೋಡಿನಲ್ಲಿ ನಾಟಕಗಳ ಕುರಿತಾದ ಸಂವಾದದಲ್ಲಿ ಭಾಗವಹಿಸಲು ಬಂದಿದ್ದರು. ಅವರು ತಾವು ಹೇಗೆ ನಾಟಕ ಮಾಡುತ್ತೇವೆ. ಯಾವ ನಾಟಕ ಮಾಡುತ್ತೇವೆ ಎಂದು ಹೇಳಲೇ ಇಲ್ಲ. ಬದಲಿಗೆ ನಮ್ಮ ನಾಟಕ ನಾವು ಯಾರಿಗಾಗಿ ಪ್ರದರ್ಶಿಸುತ್ತೇವೆ ಎಂದು ಹೇಳುತ್ತಾ ಸುಮಾರು 50ಕ್ಕೂ ಹೆಚ್ಚು ಫೋಟೊ ಸ್ಲೈಡ್‌ಗಳನ್ನು ತೋರಿಸಿದರು. ಅವೆಲ್ಲವೂ ಕಾರ್ಮಿಕರ ಚಿತ್ರ, ಮುದುಕರ-ಮುದುಕಿಯರ ಚಿತ್ರ, ಕಣ್ಣಲ್ಲಿ ಹೊಳಪು ಇರುವ ಕೊಳೆಗೇರಿಗಳಲ್ಲಿ ಬದುಕುತ್ತಿರುವ ಮಕ್ಕಳ ಚಿತ್ರ, ಜೋಪಡಿಗಳ ಚಿತ್ರಗಳಾಗಿದ್ದವು. ನಮ್ಮ ನಾಟಕದ ಪ್ರೇಕ್ಷಕರು ಇವರೇ. ಇವರಿಗಾಗಿ ನಾವು ನಾಟಕ ಮಾಡುತ್ತೇವೆ. ಇವರು ಸುಸಜ್ಜಿತ ರಂಗಮಂದಿರದಲ್ಲಿ ನಾಟಕಗಳು ನಡೆಯುವುದಾದರೆ ಬರಲಾರರು. ಹಾಗಾಗಿ ನಾವು ಅವರಿರುವ ಸ್ಥಳಗಳಿಗೆ ಹೋಗಬೇಕಾಗಿದೆ ಎಂದು ಹೇಳುತ್ತಲೇ...

ಜನ ನಾಟ್ಯ ಮಂಚ್‌ನ ಸಂಸ್ಥಾಪಕ ಸಫ್ದರ್ ಹಾಶ್ಮಿ ಹೇಳುವ ಹಾಗೆ ಒಂದು ನಾಟಕವು ಸುಲಭವಾಗಿ ಸಿದ್ಧಪಡಿಸಲು ಸಾಧ್ಯವಾಗುವಂತಿರಬೇಕು. ಆಗ ಅದ್ದೂರಿತನ, ನಿರ್ಮಾಣ ವೆಚ್ಚ, ಟೆನ್ಷನ್, ಸೋಲು ಗೆಲುವಿನ ನಿರೀಕ್ಷೆ ಎಲ್ಲವೂ ಕಡಿಮೆಯಾಗುತ್ತದೆ ಅಥವಾ ಇಲ್ಲವಾಗುತ್ತದೆ.

ನಮಗೆ ಪರಿಚಿತವಾಗಿರುವ ವಸ್ತುಗಳಿಂದಲೇ ರೂಪುಗೊಳಿಸುವ, ಭೀತಿಗೊಳಿಸುವ ಬೀದಿನಾಟಕಗಳು ಸಾಕ್ಷ ಚಿತ್ರಗಳ ಹಾಗೆ ಸಂಕ್ಷಿಪ್ತವಾಗಿರಬೇಕು. ಹಾಗಾಗಿಯೇ ಮೊದಮೊದಲು ಇವುಗಳನ್ನು ಪೋಸ್ಟರ್ ನಾಟಕಗಳು ಎಂದು ಕರೆಯಲಾಯಿತು. ನಾಟಕ ಯಾವುದೇ ಖಾಲಿ ಸ್ಪೇಸ್‌ನಲ್ಲಿ (ಅವಕಾಶದಲ್ಲಿ) ಅದು ಚೌಕ, ಆಯತ, ವೃತ್ತ ಅಥವಾ ಯಾವುದೇ ಆಕಾರದಲ್ಲೇ ಇರಲಿ ತನ್ನದೇ ಶಕ್ತಿ ಸೌಂದರ್ಯದಿಂದ ಜನಿಸುತ್ತದೆ. ಕತ್ತಲಿರಲಿ, ಬೆಳಕಿರಲಿ ಪ್ರೇಕ್ಷಕರು ಒಂದೇ ಕಡೆ ಅಥವಾ ಎಲ್ಲಾ ಕಡೆ ಕುಳಿತಿದ್ದರೂ ನಾಟಕ ಜೀವಪಡೆಯುತ್ತದೆ. ನೆಲದ ವಿಸ್ತಾರ, ಆಕಾಶದ ಎತ್ತರ ಮತ್ತು ಸುತ್ತಮುತ್ತಲ ಸ್ಪೇಸ್‌ನ ಸರಿಯಾದ ಬಳಕೆಗೆ ಪ್ರೊಸೀನಿಯಂನಲ್ಲಿ ಅವಕಾಶವಿಲ್ಲ. ಬೀದಿನಾಟಕ ಅದಕ್ಕೆ ಪರ್ಯಾಯ ಹಾದಿಯನ್ನು ತೋರಿಸುತ್ತದೆ.

ಬೀದಿನಾಟಕವನ್ನು ಬಹಳ ಬಾರಿ ಪ್ರತಿಭಟನೆಯ ನಾಟಕ, ಪ್ರತಿರೋಧದ ನಾಟಕ, ಸಾಮಾಜಿಕ ಅಸಮಾನತೆ, ಅನ್ಯಾಯದ ವಿರುದ್ಧ ಪ್ರಶ್ನಿಸುವ ನಾಟಕ ಎಂದೆಲ್ಲ ಕರೆಯಲಾಗುತ್ತದೆ. ಹಾಗಾಗಿ ಬೀದಿನಾಟಕ ಮೊತ್ತಮೊದಲಿಗೆ ಪ್ರತಿರೋಧ-ಪ್ರತಿಭಟನೆ ಮಾಡಬೇಕಾಗಿರುವುದು ಪ್ರೊಸೀನಿಯಂ ರಂಗಮಂದಿರಗಳ ವಿರುದ್ಧವೇ.
ಹಾಗಾದರೆ ಪ್ರೊಸೀನಿಯಂ ರಂಗಭೂಮಿ? ರಂಗಭೂಮಿಯನ್ನು ಇವತ್ತಿಗೂ ಜೀವಂತವಾಗಿ ಇರಿಸಲು ಪ್ರಯತ್ನ ಮಾಡುತ್ತಿರುವ ಪ್ರೊಸೀನಿಯಂ ರಂಗಭೂಮಿ ಬೆಳೆದು ಬಂದ ಬಗೆಯನ್ನು ಗಮನಿಸಬೇಕು. ಈ ನಿಟ್ಟಿನಲ್ಲಿ ವಿಕ್ಟೋರಿಯನ್ ರಂಗಭೂಮಿ, ಪಾರ್ಸಿ ರಂಗಭೂಮಿಯಿಂದ ಪ್ರೇರಿತವಾದ ಕನ್ನಡದ ಕಂಪೆನಿ ನಾಟಕಗಳ ಉಚ್ಛ್ರಾಯ ಕಾಲದ ನಾಟಕಗಳನ್ನು ನೆನಪಿಸಿಕೊಳ್ಳಬೇಕು.

ಮುಖ್ಯವಾಗಿ ನಟನೆ, ನಟರ ವೃತ್ತಿಪರತೆ, ಅದ್ದೂರಿ ರಂಗಸಜ್ಜಿಕೆ, ಆಧುನಿಕ ಉಪಕರಣಗಳ ಬಳಕೆ, ಊರೂರಿಗೆ ತೆರಳಿ ಕ್ಯಾಂಪ್ ಮಾಡುವ ಮೂಲಕ ಎಲ್ಲ ಜನರಿಗೂ ರಂಗಭೂಮಿಯ ಮೂಲಕ ವಿಚಾರ ಹಂಚಿಕೆ ಎಲ್ಲವೂ ದಾಖಲಾಗಬೇಕಾದ ಸಂಗತಿಗಳೇ...

ಈ ಸಂದರ್ಭದಲ್ಲಿಯೇ ಕೋಲ್ಕತಾದ ನಾಟಕಕಾರ, ನಿರ್ದೇಶಕ ಬಾದಲ್ ಸರ್ಕಾರ್ ತಮ್ಮ ರಂಗಮಾರ್ಗವನ್ನು ಬದಲಾಯಿಸಿ ಮುಂದಿನ ತಮ್ಮ ಚಟುವಟಿಕೆಗಳನ್ನು ಮೂರನೆಯ ರಂಗಭೂಮಿ ಅಂತ ಕರೆದುಕೊಂಡರು. ದೇಶಾದ್ಯಂತ ಸಂಚರಿಸಿ ತರಬೇತಿ ಶಿಬಿರವನ್ನು ನಡೆಸಿದರು.

ಇಂತಹ ಶಿಬಿರಗಳನ್ನು ನಡೆಸಿದ ಸಮುದಾಯ ರಾಜ್ಯಾದ್ಯಂತ ಬಹಳ ಪ್ರಮುಖವಾದ ಎರಡು ಸಾಂಸ್ಕೃತಿಕ ಜಾಥಾಗಳನ್ನು ನಡೆಸಿತು. ಸಮುದಾಯ ಜಾಥಾದ ಉದ್ದೇಶ ಮತ್ತು ಆಶಯಗಳನ್ನು ಹಿರಿಯ ರಂಗಕರ್ಮಿ ರತಿ ಬಾರ್ತಲೋಮಿಯೋ ಹೇಳುವ ಹಾಗೆ... ತಳಮಟ್ಟದ ಜನರನ್ನು, ಅವರ ನಡೆನುಡಿಗಳನ್ನು ಕಲಿತುಕೊಳ್ಳುವುದು, ಅನುಭವವನ್ನು ಪಡೆಯುವುದು ಮತ್ತು ಸನ್ನಿವೇಶದ ಮೌಲ್ಯಮಾಪನವನ್ನು ಅಲ್ಲಿಯೇ ಮಾಡುವುದು ಇತ್ಯಾದಿ. ಆದರೆ ಈ ಚಿಂತನೆಗಳು ನಗರದಲ್ಲಿ ಕುಳಿತು ಗ್ರಾಮೀಣರ ಬಗ್ಗೆ ಮಾತಾಡುವ ಮಂದಿಯದೇ ಆಗಿತ್ತು.

ಸಮುದಾಯದ ಜಾಥಾ ಕಾರ್ಯಕ್ರಮಗಳಿಂದಾಗಿ ರಾಜ್ಯಾದ್ಯಂತ ಹಲವಾರು ಬೀದಿನಾಟಕ ತಂಡಗಳು ಆರಂಭಗೊಂಡು ಅದನ್ನು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಲು, ಪ್ರತಿರೋಧದ ಮಾರ್ಗವಾಗಿ ಬಳಕೆ ಮಾಡಿಕೊಂಡದ್ದಂತೂ ನಿಜದ ಮಾತು. ಇದೇ ಸಂದರ್ಭದಲ್ಲಿ ಹಲವಾರು ಎನ್‌ಜಿಒಗಳು ತಾವು ಕೆಲಸ ಮಾಡುತ್ತಿರುವ ಊರುಗಳಲ್ಲಿ ಜನಪರ ಆಶಯಗಳಿಗೆ ಪೂರಕವಾಗಿ ವಸ್ತುಗಳನ್ನು ಆರಿಸಿಕೊಂಡು ಬೀದಿನಾಟಕದ ರೂಪದಲ್ಲಿ ಜನರ ನಡುವೆ ಕೆಲಸ ಮಾಡತೊಡಗಿರುವುದೂ ಹೌದು.

ಈ ಬೀದಿನಾಟಕವನ್ನು ಸರಿಯಾದ ದಾರಿಯಲ್ಲಿ ಮುಂದುವರಿಯಲು ಸಾಧ್ಯವಾದದ್ದು ರಾಜ್ಯಾದ್ಯಂತ ಜಾರಿಗೊಂಡ ಸಂಪೂರ್ಣ ಸಾಕ್ಷರತಾ ಆಂದೋಲನದ ವಿವಿಧ ಕಾರ್ಯಕ್ರಮಗಳು. ಓದು ಬಾರದ ಜನರಿಗೆ ಅಕ್ಷರ ಕಲಿಸುವ ಕಾರ್ಯಕ್ರಮವಾಗಿ ಈ ಬೀದಿನಾಟಕಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು. ಈ ಕಾರಣದಿಂದಾಗಿ ರಾಜ್ಯಾದ್ಯಂತ ಸಾವಿರಾರು ಬೀದಿನಾಟಕ ತಂಡಗಳು, ಸಾವಿರಾರು ಕಲಾವಿದರು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಾರಣವಾಯಿತು.

ಇದರ ಪರಿಣಾಮವಾಗಿಯೇ ಬೀದಿಯಲ್ಲಿ ನಾಟಕವಾಡಿದರೆ ಬೀದಿನಾಟಕ ವಾಗುತ್ತದೆಯೆಂದು ಸರಳೀಕರಿಸಲಾಯಿತು. ನಟ ನಟಿಯರು ಗಂಭೀರವಾಗಿ ನಟಿಸದೆ ಏನು ಮಾಡಿದರೂ ನಡೆಯುತ್ತದೆ, ಜನರಿಗೆ ಏನೂ ತಿಳಿಯಲಾರದು ಎಂಬ ಉದಾಸೀನ ಭಾವವನ್ನು ಪ್ರಕಟಿಸಲಾರಂಭಿಸಿದರು. ಬೀದಿನಾಟಕದಲ್ಲಿ ನಟಿಸುವುದೂ ಒಂದು ದುಡಿಮೆ ಎಂದು ಖಾತ್ರಿಯಾಗಿ ತಂಡದಲ್ಲಿ ಬಂದು ಹೋಗುವಷ್ಟಕ್ಕೆ ಸೀಮಿತವಾಗಿಸಿದರು. ಸರಕಾರದ ಪ್ರಚಾರ ಯೋಜನೆಗಳಲ್ಲಿ, ಚುನಾವಣಾ ಪ್ರಚಾರಗಳಿಗೆ ಬೀದಿನಾಟಕಗಳನ್ನು ಕೊಟೇಶನ್, ಟೆಂಡರ್ ಮೂಲಕ ಗುತ್ತಿಗೆ ತೆಗೆದುಕೊಳ್ಳುವ ಕ್ರಮ ಬರತೊಡಗಿತು. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸರಕುಗಳ ಮಾರಾಟಕ್ಕೆ ಬೀದಿನಾಟಕ ಕಲಾವಿದರನ್ನು ಕೊಂಡುಕೊಂಡು ಮಾರಾಟ ಮಾಡಲು ತೊಡಗುವಂತಾಯಿತು. ಸಂತೆಗಳಲ್ಲಿ, ಜನ ಗುಂಪು ಸೇರಿದಲ್ಲಿ ತಮ್ಮ ನಾಟಿ ಔಷಧಿ ಮಾರುವುದಕ್ಕೋ, ಆಟ ತೋರಿಸುವ ಹಾವಾಡಿಗರ ಊಟಕ್ಕೂ ಕಾರಣ ವಾದ ಒಂದು ಕಲೆ ಬೀದಿನಾಟಕದ ಆರಂಭಕ್ಕೆ ಕಾರಣವಾಗಿದ್ದರೂ ಆ ಕಲೆಯ ಅವನತಿಗೂ ಬೀದಿನಾಟಕ ಮಾಧ್ಯಮವೇ ಕಾರಣವಾಗಿರುವುದು ಬೇಸರದ ಸಂಗತಿ.

ಸಫ್ದರ್ ಹಾಶ್ಮಿಗೆ ತನ್ನ ಸಾವು ಹೀಗಾಗಬಹುದು ಎಂದು ತಿಳಿಯದೇ ಇದ್ದಿರಬಹುದು. ಆದರೆ ತನ್ನ ತಂಡದ ನಾಟಕಗಳ ಮೂಲಕ, ಲೇಖನ ಭಾಷಣಗಳ ಮೂಲಕ ಬೀದಿನಾಟಕದ ಶಕ್ತಿಯ ಕುರಿತು ಸ್ಪಷ್ಟವಾಗಿ ಹೇಳಿದ್ದರು.

 ಬೀದಿನಾಟಕ ಕೂಡ ಎಲ್ಲಾ ಪ್ರಾಕಾರಗಳಂತೆ ಶಿಸ್ತು ಮತ್ತು ಅಭ್ಯಾಸ ಬೇಡುತ್ತದೆ. ನಾಟಕ ಉತ್ತಮಗೊಳ್ಳಲು ನಟ ನಟಿಯರು ಪೂರ್ಣ ನಂಬಿಕೆಯಿಂದ ತಮ್ಮದೇ ಆದ ಪ್ರಯತ್ನ ನಡೆಸಬೇಕು. ಧ್ವನಿಯನ್ನು ತರಬೇತುಗೊಳಿಸಬೇಕು, ಹಾಡುವುದನ್ನು ಕಲಿಯಲೇಬೇಕು, ವಾದ್ಯ ನುಡಿಸಲು, ನರ್ತಿಸಲು ಕಲಿಯಬೇಕು. ಒಂದು ವೃತ್ತಾಕಾರದ ರಂಗಸ್ಥಳದಲ್ಲಿ ಸ್ಪೇಸ್‌ನ ಸರಿಯಾದ ಬಳಕೆ ಬಗ್ಗೆ ಪ್ರಜ್ಞಾಪೂರ್ವಕವಾಗಿ ಯೋಚಿಸಬೇಕು ಹಾಗೂ ನಾಟಕದ ಅಭ್ಯಾಸವನ್ನು ಗಂಭೀರವಾಗಿ ಶಿಸ್ತುಬದ್ಧವಾಗಿ ನಡೆಸಬೇಕು. ಸಂದೇಶ ಎಷ್ಟೇ ಉತ್ತಮವಾಗಿದ್ದರೂ, ವಿಚಾರ ಎಷ್ಟೇ ವೈಜ್ಞಾನಿಕವಾಗಿದ್ದರೂ, ಸಂಗತಿಗಳು ಎಷ್ಟೇ ಪ್ರಗತಿಪರವಾಗಿದ್ದರೂ ಕಲಾತ್ಮಕವಾಗಿರದಿದ್ದರೆ ಪ್ರೇಕ್ಷಕರನ್ನು ಕಟ್ಟಲು ಸಾಧ್ಯವಿಲ್ಲ. ಪ್ರೇಕ್ಷಕರನ್ನು ಕಲಾತ್ಮಕವಾಗಿ ತಟ್ಟಿದರೆ ಮಾತ್ರ ಪ್ರೇಕ್ಷಕರು ಹೆಚ್ಚು ಚಪ್ಪಾಳೆ ತಟ್ಟಲು ಸಾಧ್ಯ.

ಜನಪದ ಮೂಲದಿಂದ ಬಂದ ಯಕ್ಷಗಾನ ಮತ್ತು ಆಧುನಿಕ ರಂಗಭೂಮಿಯ ಬೆಳವಣಿಗೆಯ ದಿನಗಳಲ್ಲಿ ಜನಪದಕ್ಕೆ ಹೊರಳಿದ ಬೀದಿನಾಟಕ ರೂಪಗಳನ್ನು ಹೋಲಿಕೆಗಾಗಿ ಹೀಗೆ ವಿಂಗಡಿಸಬಹುದು:

* ಯಕ್ಷಗಾನವು ಪೌರಾಣಿಕ ಕಥಾಸಂದರ್ಭ, ಆಶು ವಿಸ್ತರಣೆ, ಹಾಡು, ಕುಣಿತ, ವಾದನಗಳ ಮೂಲಕ ನಿರೂಪಿಸಲಾಗುತ್ತದೆ.
-ಬೀದಿನಾಟಕವು ಸಾಮಾಜಿಕ ಕಥಾ ಸಂದರ್ಭ ಲಿಖಿತ ಪಠ್ಯವೇ ಆಗಿದ್ದರೂ ಇಂಪ್ರೊವೈಸೇಷನ್ ಹೆಸರಿನಲ್ಲಿ ತನ್ನದೇ ಮಾತುಗಳನ್ನು ಅಗತ್ಯವಿಲ್ಲದಿದ್ದರೂ ಸೇರಿಸಲಾಗುತ್ತದೆ. ಇಲ್ಲಿಯೂ ಹಾಡು ಕುಣಿತಗಳ ಬಳಕೆಯಾಗುತ್ತದೆ.

* ಪೆಟ್ಟಿಗೆಗಳಲ್ಲಿ ವಸ್ತುಗಳನ್ನು ತುಂಬಿಕೊಂಡು ಎತ್ತಿನಗಾಡಿಗಳಲ್ಲಿ ಸಾಗಾಟ ಮಾಡುತ್ತಾ, ಮುಂದೆ ಮೋಟಾರು ವಾಹನಗಳಿಗೆ ಬದಲಾಯಿಸಿಕೊಂಡು ನಿರ್ದಿಷ್ಟ ಊರುಗಳಿಗೆ ತೆರಳಿ ಸಂಜೆಯಾಗುತ್ತಲೇ ‘ಕೇಳಿ ಹೊಡೆದು’ ಜನ ಸೇರಿಸಿ ಬಯಲಾಟ ಪ್ರದರ್ಶನ ಮಾಡುತ್ತಿದ್ದಾರೆ.

-ವಾಹನ ತಂತ್ರಜ್ಞಾನದ ಸೌಲಭ್ಯ ಬಳಕೆಯ ಬಳಿಕ ಬೀದಿನಾಟಕ ಪ್ರಾಕಾರಗಳು ಜನಪ್ರಿಯಗೊಂಡಿದುದರಿಂದ ಸರಳೀಕರಿಸುವ ನೆಪದಲ್ಲಿ ಅವುಗಳನ್ನು ಕೈಬಿಡಲಾಗಿದೆ.

* ದೀವಟಿಗೆ, ದೊಂದಿಯ ಬೆಳಕಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳು ಮುಂದೆ ಗ್ಯಾಸ್ ಲೈಟ್, ಫ್ಲಡ್ ಲೈಟ್, ಟ್ಯೂಬ್‌ಲೈಟ್, ಎಲ್‌ಇಡಿ, ಡೈನಮೋಗಳ ಬಳಕೆಯೊಂದಿಗೆ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ರಂಗಮಂಟಪದಲ್ಲಿ ಪ್ರದರ್ಶನವಾಗುವವರೆಗೂ ಮುಂದುವರಿದಿದೆ.
-ಎಲ್ಲ ಅನುಕೂಲಗಳಿದ್ದರೂ ಸರಳೀಕರಣದ ಹೆಸರಿನಲ್ಲಿ ಅವುಗಳನ್ನು ಕೈಬಿಡಲಾಗಿದೆ.
* ಬಣ್ಣಬಣ್ಣದ ಪೋಷಾಕುಗಳು, ಪಾತ್ರೋಚಿತ ಮುಖವರ್ಣಿಕೆಗಳು, ಜಗಜಗಿಸುವ ವೇಷಭೂಷಣಗಳು ಯಕ್ಷಗಾನದ ಮುಖ್ಯ ಆಕರ್ಷಣೆಗಳು.
-ಸರಳೀಕರಣದ ಹೆಸರಿನಲ್ಲಿ ಅವುಗಳನ್ನು ಕೈಬಿಡಲಾಗಿದೆ. ಆದರೆ ಸಮವಸ್ತ್ರಧಾರಿ ನಟ ನಟಿಯರು ಬೀದಿನಾಟಕ ನಿರೂಪಿಸುತ್ತಾರೆ. ‘ಜನಂ’ ಆರಂಭಿಸಿದ ಈ ಕುರ್ತಾ ಜುಬ್ಬಾ ಸಮವಸ್ತ್ರಧಾರಣೆ-ಪಾತ್ರೋಚಿತವಲ್ಲ ಎಂಬ ರಂಗ ಅರಿವು ಇದ್ದರೂ ಪರಂಪರೆಯೊಂದಿಗೆ ಮುಂದುವರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದ ಕಾಲೇಜು ವಿದ್ಯಾರ್ಥಿಗಳು, ಯುವಜನರು ಅತ್ಯುತ್ಸಾಹದಿಂದ ಭಾಗವಹಿಸುವ ಪ್ರತಿಯೊಂದು ಬೀದಿನಾಟಕಗಳಲ್ಲೂ ನೂರಿನ್ನೂರು ಕಲಾವಿದರು ಭಾಗವಹಿಸುತ್ತಾರೆ. ಸಾವಿರಾರು ಪ್ರೇಕ್ಷಕರು ವೀಕ್ಷಿಸುತ್ತಾರೆ. ಹಾಗಿದ್ದರೂ ಧ್ವನಿವರ್ಧಕದ ಬಳಕೆಯನ್ನು ನಿರಾಕರಿಸುತ್ತಾರೆ. ಎಷ್ಟು ಒಳ್ಳೆಯ ಧ್ವನಿಯುಳ್ಳವರಾಗಿದ್ದರೂ ಅಸಂಖ್ಯಾತ ಪ್ರೇಕ್ಷಕರಿಗೆ ವಿಚಾರಗಳನ್ನು ದಾಟಿಸುವಲ್ಲಿ ವಿಫಲರಾಗುತ್ತಾರೆ. ಸಮಕಾಲೀನ ಸಮಸ್ಯೆಗಳನ್ನು ಸ್ಪರ್ಧಾ ನಾಟಕವಾಗಿ ನಿರೂಪಿಸುವುದರಿಂದ ಅವರಿಗೆ ತಿಳಿಯದೆಯೇ ಯುವಜನರ ಆಶಯ, ಕಾಳಜಿ ನಾಶವಾಗಿರುತ್ತದೆ. ಈ ಬಗೆಯ ಸರಳ ಸಂಗತಿಗಳು ಯಾಕೆ ಅರಿವಾಗುವುದಿಲ್ಲವೋ ತಿಳಿಯದು.

ಕರ್ನಾಟಕದಲ್ಲಿ ಬೀದಿನಾಟಕ ಚಳವಳಿ ಆರಂಭವಾದ ಸಂದರ್ಭದಲ್ಲಿಯೇ ಜಾಗತಿಕ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿರುವ ಗ್ರೋಟೋವಸ್ಕಿಯ ಬಡ ರಂಗಭೂಮಿಯ ಬಗ್ಗೆಯೂ ಲೇಖನ, ಭಾಷಣಗಳು ಬರತೊಡಗಿದ್ದವು. ಆತನ ‘ಬಡ ರಂಗಭೂಮಿ’ ಶಬ್ದಾರ್ಥವನ್ನೇ ಬೀದಿನಾಟಕಕ್ಕೆ ಬಳಸಿ ರಂಗಭೂಮಿ ರಿಕ್ತವಾದದ್ದು, ಒಬ್ಬ ನಟ ಮತ್ತು ಒಬ್ಬ ಪ್ರೇಕ್ಷಕರಿದ್ದರೆ ಸಾಕು ಎಂದು ಸೀಮಿತಗೊಳಿಸಿ ನಾಟಕಗಳನ್ನು ಪ್ರಸ್ತುತ ಪಡಿಸಲಾಯಿತು. ಈ ಚರ್ಚೆ ಇಪ್ಪತ್ತನೇ ಶತಮಾನದ ಕೊನೆಯವರೆಗೂ ಮುಂದುವರಿದಿದ್ದು ನಿಜದ ಮಾತು.

ಬೀದಿನಾಟಕವೆಂದರೆ
-ಕೇವಲ ಬೀದಿಯಲ್ಲಿ ಅಭಿನಯಿಸುವುದು ಮಾತ್ರವೇ?
-ಸರಳ ಎಂದರೆ ಎಲ್ಲವನ್ನು ನಿರಾಕರಿಸುವುದೇ?
-ಪ್ರತಿಭಟನೆಗಾಗಿ ಮಾತ್ರ ರಂಗಭೂಮಿಯೇ?
-ರಂಗಭೂಮಿಯ ಪ್ರಚಾರಕ್ಕಾಗಿ ಬೀದಿನಾಟಕವೇ?
-ಸರಕುಗಳ ಮಾರಾಟಕ್ಕಾಗಿ ಬೀದಿನಾಟಕವೇ?
ಹೀಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ.

ಆಧುನಿಕ ರಂಗಭೂಮಿಗೆ ಸಂಬಂಧಿಸಿದಂತೆ ಜನಪದದಿಂದ... ಪ್ರೊಸೀನಿಯಂ ನಿಂದ... ನವ್ಯದಿಂದ.. ಕಳಚಿಕೊಂಡು ಬೀದಿನಾಟಕಗಳು ನಿರ್ಮಾಣವಾದವು.
ರಂಗು ರಂಗಿನ ವೇಷ ಭೂಷಣಗಳು, ಬೆಳಕು-ಧ್ವನಿಗಳ ತಾಂತ್ರಿಕ ವ್ಯವಸ್ಥೆಯನ್ನು ತ್ಯಜಿಸಿ ಬೀದಿನಾಟಕಗಳು ಸಿದ್ಧಗೊಂಡವು. ಅದು ಬೇರೆಯೇ ದಾರಿ ಹಿಡಿದದ್ದು ಆ ಬಗ್ಗೆ ಬೇರೆಯೇ ಚರ್ಚೆ ಮಾಡಬೇಕು.

ಬೀದಿ ಬೀದಿನಾಟಕಗಳ ಕುರಿತು ಮಾತನಾಡುವಾಗ ಬ್ರೆಕ್ಟ್ ಹೇಳುವ ‘ಹಾದಿಬದಿಯ ರಂಗಭೂಮಿ’ ಮತ್ತು ಪರದೆ ನಾಟಕಗಳ ಕಾಲದ ‘ಬೀದಿ ದೃಶ್ಯ’ವನ್ನು ಅವಲೋಕಿಸಬೇಕು.

ಇದಕ್ಕೆ ಸಂಬಂಧಿಸಿ ಹಿರಣ್ಣಯ್ಯನವರ ಕಂಪೆನಿ ನಾಟಕಗಳ ಶೈಲಿಯನ್ನು ಗಮನಿಸಿ. ಮಾ. ಹಿರಣ್ಣಯ್ಯನವರು ಕಂಪೆನಿ ನಡೆಸುವ ಕಾಲಕ್ಕೆ ಎಚ್ಚಮನಾಯಕ, ಸದಾರಮೆಯಂತಹ ಗಟ್ಟಿ ನಾಟಕಗಳನ್ನು ಕೊಟ್ಟ ಅವರು ‘ರಸ್ತೆ ದೃಶ್ಯ’ ಪರದೆಯೆದುರು ಗಂಟೆಗಟ್ಟಲೆ ಮಾತಾಡುವುದರ ಮೂಲಕ ನಡುಬೀದಿ ನಾರಾಯಣ ಎಂದು ಹೆಸರಾದರು. ಭ್ರಷ್ಟಾಚಾರ, ಲಂಚಾವತಾರ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಕನ್ನಡ ರಂಗಪ್ರೇಮಿಗಳನ್ನು ನಾಟಕ ನೋಡುವ ಹಾಗೆ ಮಾಡಿರುವುದೂ ಇತಿಹಾಸ. ಕಂಪೆನಿ ನಾಟಕಗಳ ಎಲ್ಲಾ ಅದ್ದೂರಿತನಗಳನ್ನು ಕೈಬಿಟ್ಟು ಬೀದಿನಾಟಕದಲ್ಲಿ ಮಾಡುವ ಹಾಗೆ ಸಮಕಾಲೀನ ರಾಜಕೀಯವನ್ನು ಪ್ರಧಾನವಾಗಿರಿಸಿ ವರ್ಷಗಟ್ಟಲೆ ಬೀದಿ ಭಾಷಣ ಕೇಳಲು ರಂಗಮಂದಿರದ ಒಳಗೆ ನುಗ್ಗಿ ಬರುವುದು, ಸಾಲುಗಟ್ಟಿ ಬರುವ ಪ್ರೇಕ್ಷಕರಾಗುವುದು, ಟಿಕೆಟ್ ಇಲ್ಲದೆ ವಾಪಸ್ ಹೋಗಿರುವುದೂ ಚರಿತ್ರೆಯಲ್ಲಿ ನಡೆದುಹೋಗಿದೆ. ಒಬ್ಬ ನಟ ಪಟ್ಟಾಪಟ್ಟಿ ಚಡಿ,್ಡ ಹಳೆಯ ಬನಿಯನ್ನು, ಹರಿದು ತೂತಾದ ಕೊಡೆಯನ್ನು ವೇಷಭೂಷಣ ಪರಿಕರಗಳನ್ನಾಗಿಸಿ ಹಿರಣ್ಣಯ್ಯನವರು ಮಾತನಾಡತೊಡಗಿದರೆ ಚಪ್ಪಾಳೆಯ ಸುರಿಮಳೆ. ಇದನ್ನು ರಾಜಕೀಯ ನಾಟಕವೆಂದೇ...? ಬೀದಿಬದಿಯ ದೃಶ್ಯವೆಂದೇ...? ಕಲಾತ್ಮಕವಾಗಿಲ್ಲವೆಂದೇ ...? ಒಂದೂ ತಿಳಿಯದಂತಹ ಪರಿಸ್ಥಿತಿ ಆಗಿದೆ. ಆದರೆ ಮಾ. ಹಿರಣ್ಣಯ್ಯನವರ ರಂಗಭೂಮಿ ‘ಚಳವಳಿ’ ಆಗಲಿಲ್ಲ. ಅವರ ಹಾಗೆ ಬೇರೆಯವರು ಮಾಡಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.

ಆದರೆ ಬೀದಿನಾಟಕ ಮಾತ್ರ ಒಂದು ಬಗೆಯಲ್ಲಿ ಚಳವಳಿ ರೂಪದಲ್ಲಿ ಪಂಥವಾಗಿ ಮುಂದುವರಿದಿದೆ ಎನ್ನುವುದು ಗಮನಾರ್ಹ ವಿಚಾರ.
ಅಮೆರಿಕದ ರಂಗ ವಿದ್ವಾಂಸ ಪೀಟರ್ ಶೂಮನ್ ಯುದ್ಧ ಕಾಲದಲ್ಲಿ ಯುದ್ಧಭೂಮಿಯ ನಡುವೆಯೇ ಬೃಹದಾಕಾರದ ಬೊಂಬೆಗಳನ್ನು ಬಳಕೆ ಮಾಡಿಕೊಂಡು ಬೀದಿನಾಟಕ ಸ್ವರೂಪದ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಜಗತ್ತಿನಾದ್ಯಂತ ತನ್ನ ರಂಗಭೂಮಿಯ ಕುರಿತು ತರಬೇತಿ ಅರಿವು ಮೂಡಿಸುತ್ತಾರೆ. ಆದರೂ ಅದು ಕೂಡ ಚಳವಳಿಯಾಗಿ ಮುಂದುವರಿಯುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

‘ಹಲ್ಲಾ ಬೋಲ್’ ಕೃತಿಯಲ್ಲಿ ಸುಧನ್ವ ದೇಶಪಾಂಡೆ ಕೇವಲ ಸಫ್ದರ್ ಹಾಶ್ಮಿಯ ಬದುಕಿನ ಆಗುಹೋಗುಗಳನ್ನು ಮಾತ್ರ ದಾಖಲಿಸಿಲ್ಲ. ಸಫ್ದರ್ ಬೀದಿನಾಟಕ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾದ ಎಲ್ಲಾ ಘಟನೆಗಳನ್ನು ವಿಶ್ಲೇಷಿಸಿದ್ದಾರೆ. ಅವರ ರಾಜಕೀಯ ಸಿದ್ಧಾಂತಗಳು, ಸಿಐಟಿಯು ಜೊತೆಗಿನ ಸಂಬಂಧ, ಕಾರ್ಮಿಕ ಸಂಘಟನಾ ಸದಸ್ಯರ ನಡುವಣ ಒಡನಾಟ, ರಂಗಭೂಮಿಯ ಜೊತೆಗಿನ ಬದ್ಧತೆ ಎಲ್ಲವನ್ನೂ ಆಕರ್ಷಕವಾಗಿ ನಿರೂಪಿಸುತ್ತಾರೆ. ರಂಗಭೂಮಿಯ ಕುರಿತು ಆಸಕ್ತಿ ಇರುವ ಎಲ್ಲರೂ ಓದಲೇಬೇಕಾದ ಕನ್ನಡಾನುವಾದ ‘ಹಲ್ಲಾ ಬೋಲ್’ ಎಂದು ಗಟ್ಟಿ ಧ್ವನಿಯಲ್ಲಿ ಮಾತಾಡಬೇಕಾದ ಪುಸ್ತಕ ಇದು. ಅದಕ್ಕಾಗಿ ಭಾಷಾಂತರಿಸಿದ ಸಮುದಾಯದ ಎಂ. ಜಿ. ವೆಂಕಟೇಶ್ ಅವರು ಅಭಿನಂದನೆಗೆ ಪಾತ್ರರಾಗುತ್ತಾರೆ 

Writer - ಐಕೆ ಬೊಳುವಾರು

contributor

Editor - ಐಕೆ ಬೊಳುವಾರು

contributor

Similar News

ಸಲ್ಮಾತು