ಅತೃಪ್ತರು-ಅನರ್ಹರು
ಇವರು ಅತೃಪ್ತರು; ಗೆದ್ದು ಬಂದದ್ದು ಒಂದು
ಪಕ್ಷವಾದರೆ ಸುದ್ದಿ ಸೂರರಾಗಿ ಸಿದ್ಧಾಂತಗಳ
ಮೆದ್ದವರು ಬುದ್ಧರ ಪೋಜಿನಲ್ಲಿ ರಾದ್ಧಾಂತಗಳ
ವೀರಾಧಿವೀರರು ಪ್ರಜಾತಂತ್ರದ ನೀತಿ ನಿರ್ಮಿತಿಗಳ
ಮಾತಿಗರು, ನಿನ್ನೆ ಬೈದವರನ್ನೇ ಇಂದು
ಇಂದ್ರಚಂದ್ರರೆನ್ನುವ ಭೂತಗಣಾದಿ ಸೇವಿತರು
ಅವಕಾಶಕ್ಕೆ ಹಂಬಲಿಸಿ ಅತೃಪ್ತರಾದವರು
ಹೊಗಳಿದವರನ್ನೇ ಮತ್ತೆ ತೆಗಳಿ ಹೊರನಡೆದವರು
ಬರುವಾಗ ಭವ ಭಾರದ ಭಾವ ಸಂಪನ್ನಿಗರು
ಹೋಗುವಾಗ ಸಲ್ಲದ ಸಿದ್ಧಾಂತಗಳ ಉಚ್ಚಿಷ್ಟಕ್ಕೆ ಕೈ
ಯೊಡ್ಡಿದವರು ಕೋಟಿ ಕೋಟಿಗೆ ಹರಾಜಾದವರು
ಇವರು ಮೂರು ಬಿಟ್ಟ ಮಾನಗೇಡಿ ಅತೃಪ್ತರು
ಇವರು ಅನರ್ಹರು ಉಂಡ ಮನೆಯ ಜಂತಿ
ಎಣಿಸಿ ಹೊರನಡೆದಂತೆ, ಬಾಯಿ ಬೊಂಬಾಯಿ
ಯಾದವರು ಕೊಂಡ ಮನೆಯವರ ಕುರ್ಚಿಯಾಸೆಗೆ
ಒತ್ತೆಯಾಳಾದವರು, ಮತದಾರರ ಮಾನ ಹರಾಜಿಗಿಟ್ಟವರು
ಕಾನೂನು ಕಟ್ಟಳೆಯ ಪ್ರಹಾರದಲ್ಲಿ ಹಕ್ಕು ಬಾಧ್ಯತೆ
ಗಳ ಹಡಾವುಡಿಗೈದ ಅಪರಾಧಿಗರು, ಅನರ್ಹರು
ಆರು ಕೊಟ್ಟರೆ ಅತ್ತೆ ಕಡೆ ಕಾಲು ಜಾರಿಸಿದವರು
ಪ್ರಜಾಪ್ರಭುತ್ವವನ್ನೇ ದಿವಾಳಿಗೈದ ವಿದ್ರೋಹಿಗಳು
ಇವರಿಗೆ ಇಂತಹವರಿಗೆ ಮತ ನೀಡುವ ಮತದಾರ
ಪ್ರಭು ಕೊಟ್ಟು ಕೋಡಂಗಿ ಸದಾ ಅನರ್ಹರಿಗೆ ನಿಲುವಂಗಿ
ಯಥಾ ರಾಜ ತಥಾ ಪ್ರಜಾ ಎಂಬುದು ಆ ಕಾಲದ ಮಾತು
ಯಥಾ ಪ್ರಜಾ ತಥಾ ಪ್ರತಿನಿಧಿ ಎಂಬುದು ಇಂದಿನ ಸಾಥು