ಕೆ.ಎಸ್.ನ.: ನುಡಿಮಲ್ಲಿಗೆಯ ಪರಿಮಳ ಬೀರಿದ ಕವಿ
ಇಂದು ಕೆ.ಎಸ್.ನ. ಜನ್ಮದಿನ
ಕೆ.ಎಸ್. ನರಸಿಂಹಸ್ವಾಮಿ ಎಂದೊಡನೆ ಮಲ್ಲಿಗೆಯ ಕವಿ ಎಂದುಬಿಡುವುದು, ಅವರ ‘ಮೈಸೂರು ಮಲ್ಲಿಗೆ’ ಕವನಸಂಕಲವನ್ನಷ್ಟೇ ನೆನಪಿಸಿಕೊಂಡು ಅದು ಹಲವಾರು ಮುದ್ರಣಗಳನ್ನು ಕಂಡಿತೆನ್ನುವುದು ಸಾಮಾನ್ಯ. ಅವರ ಕವಿತೆಗಳಲ್ಲಿನ ಕೌಟುಂಬಿಕ ಚಿತ್ರಗಳ ಪ್ರೇರಣೆ ಯಾವುದೇ ಆದರೂ, ಅದು ಕಟ್ಟಿಕೊಡುವ ಅಂತಃಕರಣಕ್ಕೆ ಎಲ್ಲ ಪರಿಧಿಗಳನ್ನೂ ಮೀರುವ ಶಕ್ತಿಯಿದೆ ಎಂಬುದು ನಿಜ.
‘ಮೈಸೂರು ಮಲ್ಲಿಗೆ’ಯ ಕವಿತೆಗಳು ನರಸಿಂಹಸ್ವಾಮಿಯವರ ಕಾವ್ಯದ ದಾರಿಯಲ್ಲಿ ಒಂದು ಸಣ್ಣ ಅಧ್ಯಾಯವಷ್ಟೆ. ಅವನ್ನು ಮೀರಿ ಬರೆದ, ಮಾಧುರ್ಯದ ಆಚೆಗಿನ ಕಟುಸತ್ಯಗಳನ್ನು ಕಂಡಿರಿಸಿದ ಕೆ.ಎಸ್.ನ. ಅವರನ್ನು ನೋಡಿಕೊಂಡ ಪ್ರಯತ್ನಗಳು ಮತ್ತು ಅಂಥ ಆಸ್ಥೆ ಕಡಿಮೆಯೇ. ಪ್ರೇಮಕ್ಕಿರುವ ಆಯಾಮಗಳು ವಿಭಿನ್ನ. ಮಧುರವಾದುದೆಂಬುದಕ್ಕಿಂತ ಹೆಚ್ಚಾಗಿ ಬದುಕಿನ ಗಾಢ ನೆಲೆಯ ಸೆಲೆಯೂ ಹೌದು. ಆಧ್ಯಾತ್ಮಿಕವಾದುದಕ್ಕೆ ಬಾಗಿಲೂ ಹೌದು. ‘‘ಶ್ರೀಕೃಷ್ಣನಂತೊಂದು ಮುಗಿಲು’’ ಎಂಬ ನರಸಿಂಹಸ್ವಾಮಿಯವರ ಕವಿತೆ ಮಲ್ಲಿಗೆಯ ಕವಿತೆಗಳಿಗಿಂತ ವಿಭಿನ್ನವಾದುದೂ ಹುಡುಕಾಟದ ಒಡಲಾಳವುಳ್ಳದ್ದೂ ಆಗಿದೆ. ಅಲ್ಲಿ ಅನುಭವವಾಗುವ ಘಮಲೇ ಬೇರೆ ಬಗೆಯದು. ಮುಗಿಲ ರೂಪಗಳಲ್ಲಿ ಪ್ರೇಮದ ಪ್ರತಿಮೆಗಳನ್ನು ನೋಡಿಕೊಳ್ಳುತ್ತ ಒಂದು ನಿರಾಕಾರದ ಸ್ಥಿತಿಗೆ ಮುಟ್ಟುವ, ಒಂದು ಅವರ್ಣನೀಯ ಅನುಭೂತಿಯಲ್ಲಿ ಪಕ್ಕಾಗುವ ಸೊಗಸು ಇಲ್ಲಿನದು. ನವೋದಯದ ಧಾಟಿಯ ಆಚೆಗೂ ನರಸಿಂಹಸ್ವಾಮಿಯ ಕಾವ್ಯದ ಕುತೂಹಲ ಮತ್ತು ವಿಸ್ತಾರವಿತ್ತು. ‘ಮೈಸೂರು ಮಲ್ಲಿಗೆ’ ಕವನ ಸಂಕಲನ ಕೂಡ ಪ್ರೇಮವನ್ನು ಕೌಟುಂಬಿಕ ಮೌಲ್ಯದೊಡನೆ ಕಟ್ಟಿಕೊಟ್ಟದ್ದಾಗಿದೆ. ಅಲ್ಲಿ ಪ್ರೇಮ ತಾನೇತಾನಾಗಿ ಹೊಸ ವ್ಯಾಖ್ಯಾನ ಪಡೆದು ನಿಲ್ಲುವುದನ್ನು ಕಾಣಬಹುದು. ಸ್ಕಾಟ್‌ಲ್ಯಾಂಡ್‌ನ ಬರ್ನ್ಸ್ ಕವಿಯ ಓದು ಈ ಕವಿತೆಗಳ ಹಿಂದಿನ ಪ್ರೇರಣೆಯಾಗಿದ್ದರೂ, ತಮ್ಮ ಜೀವನಮೌಲ್ಯಗಳ ಹಿನ್ನೆಲೆಯಲ್ಲಿ ಪಕ್ಕಾದ ಗ್ರಹಿಕೆಗಳು ಈ ಕವಿತೆಗಳ ಹಿಂದೆ ಹರಿದಿವೆ. ಇವು ಕವಿಯ ಮನಸ್ಸಿನಿಂದ ಓದುಗನ ಮನಸ್ಸುಗಳಿಗೆ ಇಳಿದು, ಇಂದಿಗೂ ಅದೆಂಥದೋ ಆಹ್ಲಾದವನ್ನು, ಪುಳಕವನ್ನು ತರುತ್ತಿರುವುದು ಸುಳ್ಳಲ್ಲ.
‘‘ಕೈಹಿಡಿದವಳೂ ಕೈಬಿಡದವಳೂ ಮಾಡಿದ ಅಡುಗೆಯ ಅಂದ, ನಾಗರ ಕುಚ್ಚಿನ ನಿಲು ಜಡೆಯವಳು ಈಕೆ ಬಂದುದು ಎಲ್ಲಿಂದ?’’ ಎಂಬಂಥ ಸಾಲುಗಳಾಗಲೀ, ‘‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು, ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು’’ ಎಂಬಲ್ಲಿನ ದಿವ್ಯಾನುಭೂತಿಯಾಗಲೀ ನರಸಿಂಹಸ್ವಾಮಿಯವರು ಪ್ರೇಮಕವಿತೆಗಳ ಎರಕದಲ್ಲಿ ಕಟ್ಟಿಕೊಟ್ಟ ಅನುಪಮ ಭಾವಸೌಂದರ್ಯವೇ ಆಗಿವೆ.
ಇಲ್ಲಿ ಗಂಡು-ಹೆಣ್ಣು ಒಂದು ಅತಿ ಮಧುರ ಬಂಧವನ್ನು ಪ್ರತಿನಿಧಿಸುವವರಾಗಿ ಕಾಣುತ್ತಾರೆ. ದಾಂಪತ್ಯವನ್ನು ಅದರ ತೀವ್ರ ಹರೆಯದಲ್ಲಿ ಕಟ್ಟಿಕೊಟ್ಟರೆ ಹೇಗಿರುವುದೋ ಹಾಗಿವೆ ಅವರ ಕವಿತೆಗಳು. ಹಾಗೆಂದು ಅದು ಮಾಗಿದ್ದಲ್ಲವೆಂದಲ್ಲ. ತೀವ್ರತೆಯಲ್ಲಿಯೂ ಸಮರಸದ ಸಮತೋಲ ತೋರುವ ಪ್ರಬುದ್ಧತೆ ಈ ಕವಿತೆಗಳಲ್ಲಿ ಬರುವ ಗಂಡು-ಹೆಣ್ಣಿನದ್ದು. ಉದ್ದಕ್ಕೂ ಅಂಥ ಹಲವು ಚಿತ್ರಗಳು ಬರುತ್ತವೆ. ಮನಸ್ಸನ್ನು ಕಾಡುತ್ತವೆ. ಹಾಗೆಯೇ ಉಳಿದುಬಿಡುತ್ತವೆ. ಸಂಘರ್ಷದ ಚಿತ್ರ ಇಲ್ಲಿಲ್ಲ. ಕವಿಗೆ ಅದು ಇಲ್ಲಿ ಮುಖ್ಯವೂ ಅಲ್ಲ. ಅದೊಂದು ಜೀವನ್ಮುಖಿ ಒರತೆಯಂತೆ ಸದಾ ಉಕ್ಕುತ್ತಿರುವ ಚೈತನ್ಯಸ್ವರೂಪ. ಹಾಗೆ ನೋಡಿದರೆ ನಿಜವಾದ ಅರ್ಥದಲ್ಲಿ ಮಲ್ಲಿಗೆ ದಂಡೆಗಳಂತೆಯೇ. ಅದು ಎಂದೆಂದೂ ಅಡರುವ ಅಪರಿಮಿತ ಘಮ.
‘‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ?, ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ’’ ಎಂಬಲ್ಲಿನ ಬಾಂಧವ್ಯದ ಅಗಾಧತೆ, ‘‘ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರ ಒಬ್ಬಳೇ ಮಡದಿಯೆನಗೆ’’ ಎನ್ನುವಲ್ಲಿನ ಅನ್ಯೋನ್ಯತೆಯ ಸೂಚನೆ, ‘‘ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಚಿಂತೆ ಬಿಡಿ ಹೂವ ಮುಡಿದಂತೆ, ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ಜೀವದಲಿ ಜಾತ್ರೆ ಮುಗಿದಂತೆ’’ ಎಂಬಲ್ಲಿನ ವ್ಯಾಕುಲತೆಯೊಳಗೂ ಉಕ್ಕುವ ಉತ್ಕಟತೆ ಇವೆಲ್ಲವೂ ಕೆ.ಎಸ್. ನರಸಿಂಹಸ್ವಾಮಿಯವರ ಕಾವ್ಯದಲ್ಲಿಯೇ ಮಾತ್ರ ಕಾಣಿಸಬಹುದಾದಷ್ಟು ಮಟ್ಟಿನ ಅಪರೂಪದ ಸಂಗತಿಗಳು.
ಕೆ.ಎಸ್.ನ. ಅವರ ನವ್ಯ ಕವಿತೆಗಳಾದ ‘ಗಡಿಯಾರದಂಗಡಿಯ ಮುಂದೆ’ ಮತ್ತು ‘ರೈಲ್ವೆ ನಿಲ್ದಾಣದಲ್ಲಿಯ ಕವಿತೆಗಳು’ ಅವರ ಕಾವ್ಯದ ಮತ್ತೊಂದೇ ನೆಲೆಯ ಸಾಧ್ಯತೆಗಳನ್ನು ಕಾಣಿಸಿದವುಗಳಾಗಿವೆ. ಕವಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳುವಂತೆ, ‘‘ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ, ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು ‘ಶಿಲಾಲತೆ’ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ.’’
ನರಸಿಂಹಸ್ವಾಮಿ ಮಂಡ್ಯದ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ 1915ರ ಜನವರಿ 26ರಂದು ಜನಿಸಿದರು. ಓದನ್ನು ಪೂರ್ಣಗೊಳಿಸಲಾಗದ ಅವರು ಬದುಕಿನುದ್ದಕ್ಕೂ ಆರ್ಥಿಕ ಸಂಕಷ್ಟವನ್ನೇ ಎದುರಿಸಿದವರು. ಆದರೆ ಅವರ ಕಾವ್ಯದಲ್ಲಿ ಜೀವನ ಶ್ರೀಮಂತಿಕೆಗೆ ಎಂದೂ ಮಂಕು ಕವಿದದ್ದೇ ಇಲ್ಲ. 1933ರಲ್ಲಿ ಅವರ ಮೊದಲ ಸಂಕಲನ ‘ಕಬ್ಬಿಗನ ಕೂಗು’ ಪ್ರಕಟವಾಯಿತು. ಆದರೆ ಅವರಿಗೆ ದೊಡ್ಡ ಹೆಸರು ತಂದುಕೊಟ್ಟದ್ದು ಮಾತ್ರ ಅದಾಗಿ ಒಂಭತ್ತು ವರ್ಷಗಳ ಬಳಿಕ, ಅಂದರೆ 1942ರಲ್ಲಿ ಪ್ರಕಟವಾದ ‘ಮೈಸೂರು ಮಲ್ಲಿಗೆ’ ಕೃತಿ. ‘ಐರಾವತ’, ‘ದೀಪದ ಮಲ್ಲಿ’, ‘ಉಂಗುರ’, ‘ಇರುವಂತಿಗೆ’, ‘ಶಿಲಾಲತೆ’, ‘ಮನೆಯಿಂದ ಮನೆಗೆ’, ‘ತೆರೆದ ಬಾಗಿಲು’, ‘ನವ ಪಲ್ಲವ’, ‘ದುಂಡುಮಲ್ಲಿಗೆ’, ‘ನವಿಲದನಿ’, ‘ಸಂಜೆ ಹಾಡು’, ‘ಕೈಮರದ ನೆಳಲಲ್ಲಿ’, ‘ಎದೆ ತುಂಬ ನಕ್ಷತ್ರ’, ‘ಮೌನದಲಿ ಮಾತ ಹುಡುಕುತ್ತ’, ‘ದೀಪ ಸಾಲಿನ ನಡುವೆ’, ‘ಮಲ್ಲಿಗೆಯ ಮಾಲೆ’, ‘ಹಾಡು-ಹಸೆ’ ಅವರ ಇತರ ಕವನ ಸಂಕಲನಗಳು. ‘ಮಾರಿಯ ಕಲ್ಲು’, ‘ದಮಯಂತಿ’, ‘ಉಪವನ’, ‘ಅನುವಾದ’, ‘ಮೋಹನಮಾಲೆ’, ‘ನನ್ನ ಕನಸಿನ ಭಾರತ’, ‘ಸುಬ್ರಹ್ಮಣ್ಯ ಭಾರತಿ’ ಮುಂತಾದ ಗದ್ಯಕೃತಿಗಳನ್ನೂ ಬರೆದಿದ್ದಾರೆ.
‘ಶಿಲಾಲತೆ’ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಗೊರೂರು ಪ್ರಶಸ್ತಿ, ದೇವರಾಜ್ ಬಹದ್ದೂರ್ ಬಹುಮಾನ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಗಳು ಅವರಿಗೆ ಸಂದಿವೆ. ಕೇಂದ್ರ ಸಾಹಿತ್ಯ ಅಕಾಡಮಿ ತನ್ನ ಪ್ರತಿಷ್ಠಿತ ಫೆಲೋಶಿಪ್ ನೀಡಿ ಗೌರವಿಸಿದೆ. ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಿಲಿಟ್ ನೀಡಿ ಗೌರವಿಸಿದೆ. ‘ಮೈಸೂರು ಮಲ್ಲಿಗೆ’ ಧ್ವನಿ ಸುರುಳಿ, ‘ಮೈಸೂರು ಮಲ್ಲಿಗೆ’ ಚಲನಚಿತ್ರ ಇವು ಅವರ ಜನಪ್ರಿಯತೆಯನ್ನು ಇನ್ನಷ್ಟಾಗಿಸಿದವು. ಅತ್ಯುತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ ಕೂಡ ಬಂತು. 1990ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 2003ರ ಡಿಸೆಂಬರ್ 27ರಂದು ಕೆ.ಎಸ್.ನ. ಕೊನೆಯುಸಿರೆಳೆದರು. ಅವರು ಕನ್ನಡ ಮನಸ್ಸುಗಳೆದೆಯಲ್ಲಿ ಹರಡಿಹೋದ ಮಲ್ಲಿಗೆ ಮಾತ್ರ ಎಂದೆಂದಿಗೂ ಉಳಿಯುತ್ತದೆ. ಅದು ನುಡಿ ಪರಿಮಳ.