ಮೊಟ್ಟೆಯ ಬಿಳಿಭಾಗವನ್ನು ತಿನ್ನಬಾರದು ಎನ್ನುವುದಕ್ಕೆ ಕಾರಣಗಳಿಲ್ಲಿವೆ

Update: 2021-01-18 18:38 GMT

ಮೊಟ್ಟೆಯಲ್ಲಿಯ ಹಳದಿ ಭಾಗ ಕೆಟ್ಟದ್ದು ಮತ್ತು ಬಿಳಿಯ ಭಾಗ ಒಳ್ಳೆಯದು ಎನ್ನುವುದನ್ನು ಹಲವರು ಗಟ್ಟಿಯಾಗಿ ನಂಬಿದ್ದಾರೆ. ಬಿಳಿಯ ಭಾಗ ನಿಜಕ್ಕೂ ಆರೋಗ್ಯಕರವೇ? ಪ್ರತಿದಿನ ಕೇವಲ ಮೊಟ್ಟೆಯ ಬಿಳಿಯ ಭಾಗವನ್ನಷ್ಟೇ ಸೇವಿಸುವುದು ತನ್ನದೇ ಆದ ಹಿನ್ನಡೆಗಳನ್ನು ಹೊಂದಿದೆ. ಮೊಟ್ಟೆಯ ಬಿಳಿಯ ಭಾಗವು ಅಧಿಕ ಪ್ರೋಟಿನ್ ಹೊಂದಿರುತ್ತದೆ,ಆದರೆ ಇಡಿಯ ಮೊಟ್ಟೆಗೆ ಹೋಲಿಸಿದರೆ ಅದರ ಪೌಷ್ಟಿಕಾಂಶ ವೌಲ್ಯ ಕಡಿಮೆಯಿರುತ್ತದೆ. ಅಲರ್ಜಿ,ಸೋಂಕು ಮತ್ತು ನ್ಯೂನತೆಗಳಂತಹ ಅಡ್ಡ ಪರಿಣಾಮಗಳು ಮೊಟ್ಟೆಯ ಬಿಳಿ ಭಾಗದೊಂದಿಗೆ ಗುರುತಿಸಿಕೊಂಡಿವೆ. ಪ್ರತಿಯೊಬ್ಬರಿಗೂ ಈ ಅಡ್ಡಪರಿಣಾಮಗಳು ಉಂಟಾಗದಿರಬಹುದು,ಆದರೆ ಇವುಗಳ ಬಗ್ಗೆ ಮಾಹಿತಿ ಹೊಂದಿರುವುದು ಒಳ್ಳೆಯದು. ಮೊಟ್ಟೆಯಲ್ಲಿ ಪ್ರೋಟಿನ್,ಸೋಡಿಯಂ,ಸಿಲೆನಿಯಂ,ಫಾಲೇಟ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುತ್ತವೆ. ಬಿಳಿಯ ಭಾಗವು ಸುಮಾರು 16 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಮೊಟ್ಟೆಯ ಬಿಳಿ ಭಾಗವು ಯಾವುದೇ ಸ್ಯಾಚ್ಯುರೇಟೆಡ್ ಫ್ಯಾಟ್‌ಗಳನ್ನಾಗಲೀ ಕ್ಝೊಛಿಸ್ಟ್ರಾಲ್‌ನ್ನಾಗಲೀ ಹೊಂದಿರುವುದಿಲ್ಲ,ಆದರೂ ಪ್ರತಿದಿನ ಅದರ ಸೇವನೆಯು ವಿವಿಧ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ. ಇಂತಹ ನಾಲ್ಕು ಹೆಚ್ಚು ಸಾಮಾನ್ಯವಾಗಿರುವ ಅಡ್ಡಪರಿಣಾಮಗಳು ಇಲ್ಲಿವೆ......

* ಅಲರ್ಜಿ ಪ್ರತಿವರ್ತನೆಗಳು

ಕೆಲವು ಜನರು ಮೊಟ್ಟೆಯ ಬಿಳಿಭಾಗ ಮತ್ತು ಅಲ್ಬುಮಿನ್ ಪ್ರೋಟಿನ್‌ಗೆ ಅಲರ್ಜಿಯನ್ನು ಹೊಂದಿರುತ್ತಾರೆ. ಮೊಟ್ಟೆಯ ಬಿಳಿ ಭಾಗದ ಸೇವನೆಯು ದದ್ದುಗಳು, ಊತ, ವಾಕರಿಕೆ, ಬೇಧಿ, ವಾಂತಿ, ಉಬ್ಬಸ,ಕೆಮ್ಮು ಮತ್ತು ಸೀನುಗಳಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ಬಿಳಿಯ ಭಾಗವನ್ನು  ತಿಂದಾಗ ಉಸಿರಾಡಲು ಕಷ್ಟ,ರಕ್ತದೊತ್ತಡ ಕುಸಿತ, ಗಂಟಲು ಅಥವಾ ಬಾಯಿಯಲ್ಲಿ ಉರಿಯೂತ ಮತ್ತು ಪ್ರಜ್ಞಾಹೀನತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊಟ್ಟೆಗಳಿಗೆ ಅಲರ್ಜಿ ಹೊಂದಿರುವವರು ಬಿಳಿಯ ಭಾಗಕ್ಕೂ ಅಲರ್ಜಿಯನ್ನು ಹೊಂದಿರುವ ಸಾಧ್ಯತೆಯಿರುತ್ತದೆ.

* ಆಹಾರ ವಿಷವಾಗುವಿಕೆ

ಹಸಿ ಮೊಟ್ಟೆಯ ಬಿಳಿಯ ಭಾಗವು ಕೋಳಿಗಳ ಕರುಳುಗಳಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳಿಂದ ಕಲುಷಿತವಾಗಿರುವ ಸಾಧ್ಯತೆಯಿರುತ್ತದೆ ಮತ್ತು ಇದನ್ನು ಸೇವಿಸಿದಾಗ ಫುಡ್ ಪಾಯ್ಸನಿಂಗ್ ಉಂಟಾಗುತ್ತದೆ ಅಥವಾ ಸೇವಿಸಿದ ಆಹಾರವೇ ವಿಷವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಮೊಟ್ಟೆಯ ಕವಚದ ಒಳಭಾಗ ಮತ್ತು ಹೊರ ಮೇಲ್ಮೈನಲ್ಲಿಯೂ ಇರುತ್ತವೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳ ಅಪಾಯದಿಂದ ಪಾರಾಗಲು ಪ್ರತಿ ದಿನ ಮೊಟ್ಟೆಯ ಬಿಳಿಯ ಭಾಗವನ್ನು ಸೇವಿಸುವುದನ್ನು ಸಾಧ್ಯವಾದಷ್ಟು ನಿವಾರಿಸಬೇಕು. ಮೊಟ್ಟೆಯನ್ನು ಹೆಚ್ಚಿನ ಉಷ್ಣತೆಯಲ್ಲಿ ಹೆಚ್ಚು ಸಮಯ ಬೇಯಿಸಬೇಕು. ಸೂಕ್ತವಾಗಿ ಬೇಯಿಸಿದ ಅಥವಾ ಫ್ರೈ ಮಾಡಲಾದ ಮೊಟ್ಟೆಯ ಬಿಳಿಯ ಭಾಗವನ್ನು ಸೇವಿಸುವುದು ಒಳ್ಳೆಯದು.

*ಬಯಾಟಿನ್ ಮಟ್ಟವು ಕುಸಿಯುತ್ತದೆ

 ವಿಟಾಮಿನ್ ಎಚ್ ಅಥವಾ ವಿಟಾಮಿನ್ ಬಿ7 ಎಂದೂ ಕರೆಯಲಾಗುವ ಬಯಾಟಿನ್ ಕೊರತೆಯು ಕ್ರಾಡಲ್ ಕ್ಯಾಪ್ ಅಥವಾ ಶಿಶುಗಳಲ್ಲಿ ತಲೆಹೊಟ್ಟು,ಸೆಬೊರಿಕ್ ಡರ್ಮಟೈಟಿಸ್ ಅಥವಾ ಚರ್ಮದಲ್ಲಿ ಅತಿ ಮೇದಸ್ರಾವ,ಸ್ನಾಯುಗಳಲ್ಲಿ ಸಮನ್ವಯತೆ ಕೊರತೆ,ಸ್ನಾಯು ನೋವು ಮತ್ತು ಸೆಳೆತಗಳು,ತಲೆಗೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ಮೊಟ್ಟೆಯ ಬಿಳಿಯ ಭಾಗವನ್ನು ತಿನ್ನುವುದರಿಂದ ಬಯಾಟಿನ್ ಕೊರತೆಯು ಹೆಚ್ಚಬಹುದು. ಮೊಟ್ಟೆಯ ಬಿಳಿಯ ಭಾಗದಲ್ಲಿರುವ ಅವಿಡಿನ್ ಎಂಬ ಪ್ರೋಟಿನ್ ಶರೀರದಲ್ಲಿಯ ಬಯಾಟಿನ್ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ ಮತ್ತು ಬಯಾಟಿನ್ ಕೊರತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಸಂಭಾವ್ಯ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ.

* ಶರೀರದಲ್ಲಿ ಹೆಚ್ಚುವರಿ ಪ್ರೋಟಿನ್

ಮೊಟ್ಟೆಯ ಬಿಳಿಯ ಭಾಗದಲ್ಲಿ ಪ್ರೋಟಿನ್ ಹೆಚ್ಚು ಪ್ರಮಾಣದಲ್ಲಿರುತ್ತದೆ ಮತ್ತು ವ್ಯಕ್ತಿಯು ಮೂತ್ರಪಿಂಡ ಸಮಸ್ಯೆಗಳಿಂದ ನರಳುತ್ತಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಸೇವನೆಯು ಅಪಾಯವನ್ನುಂಟು ಮಾಡಬಲ್ಲದು.

ಇಷ್ಟೆಲ್ಲ ಇದ್ದರೂ ನಮಗೆ ಅಗತ್ಯವಿರುವ ಶೇ.60ರಷ್ಟು ಪ್ರೋಟಿನ್ ಮೊಟ್ಟೆಗಳಿಂದಲೇ ದೊರೆಯುತ್ತದೆ. ಪ್ರತಿದಿನ ಎರಡು ಮೊಟ್ಟೆಗಳಿಗಿಂತ ಹೆಚ್ಚು ಸೇವಿಸಬಾರದು ಎನ್ನುತ್ತಾರೆ ತಜ್ಞರು. ತೀವ್ರ ಯಕೃತ್ತು ತೊಂದರೆಗಳನ್ನು ಹೊಂದಿರುವವರು ಮೊಟ್ಟೆಯ ಬಿಳಿಭಾಗವನ್ನೊಳಗೊಂಡ ಆಹಾರ ಸೇವನೆಯನ್ನು ಆರಂಭಿಸುವ ಮುನ್ನ ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News