ಅಪಧಮನಿಗಳಲ್ಲಿಯ ತಡೆಯನ್ನು ನಿವಾರಿಸಲು ಮತ್ತು ಹೃದಯಾಘಾತವನ್ನು ತಡೆಯಲು ಈ ಐದು ಆಹಾರಗಳನ್ನು ಸೇವಿಸಿ

Update: 2021-01-18 18:43 GMT

 ದಿನೇದಿನೇ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಜಡ ಜೀವನಶೈಲಿ ಮಾತ್ರವಲ್ಲ,ಕಳಪೆ ಆಹಾರ ಕ್ರಮವೂ ಇದಕ್ಕೆ ಕಾರಣವಾಗಿದೆ. ಇಂದಿನ ಗಡಿಬಿಡಿಯ ಯುಗದಲ್ಲಿ ಹೆಚ್ಚಿನವರಿಗೆ ಸರಿಯಾಗಿ ಆಹಾರ ಸೇವಿಸುವುದೂ ಸಾಧ್ಯವಾಗುವುದಿಲ್ಲ ಮತ್ತು ಇದು ನೇರವಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ನಾವು ಕಡೆಗಣಿಸುವ ವಿಷಯಗಳೇ ನಂತರ ಬೃಹತ್ ರೂಪವನ್ನು ತಳೆಯುತ್ತವೆ ಮತ್ತು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ. ಅಪಧಮನಿಗಳಲ್ಲಿ ಪಾಚಿಯು ಸಂಗ್ರಹಗೊಂಡು ರಕ್ತ ಸಂಚಾರಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇಂದು ಸಣ್ಣ ಪ್ರಾಯದವರೂ ಹೃದಯಾಘಾತಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯಕರ ಆಹಾರಗಳ ಸೇವನೆಯು ಇಂದು ಹಿಂದೆಂದಿಗಿಂತಲೂ ಅಗತ್ಯವಾಗಿದೆ. ಅಪಧಮನಿಗಳಲ್ಲಿ ಉಂಟಾಗುವ ತಡೆಗಳನ್ನು ನಿವಾರಿಸಲು ಮತ್ತು ಹೃದಯಾಘಾತಕ್ಕೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಲು ನಾವು ಸೇವಿಸಬೇಕಾದ ಐದು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ....

* ಓಟ್ಸ್

 ಓಟ್ಸ್ ಇತ್ತೀಚಿಗೆ ಆರೋಗ್ಯಕರ ಆಹಾರ ಎಂದು ಜನಪ್ರಿಯಗೊಂಡಿದೆ. ಅದು ದೇಹದಾರ್ಢ್ಯದ ಬಗ್ಗೆ ಗಮನ ನೀಡುವವರ ಮೊದಲ ಆಯ್ಕೆಯ ಬ್ರೇಕ್‌ಫಾಸ್ಟ್ ಆಗಿದೆ. ಓಟ್ಸ್‌ನಲ್ಲಿರುವ ಕರಗಬಲ್ಲ ನಾರು ಶರೀರದಲಲಿಯ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್‌ಡಿಎಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಪಾಚಿ ಸೃಷ್ಟಿಯಾಗಲು ಮುಖ್ಯ ಕಾರಣವಾಗಿದೆ. ಇದನ್ನು ತಡೆಯಲು ದಿನಕ್ಕೆ ಒಂದು ಸಲವಾದರೂ ಓಟ್ಸ್ ಸೇವಿಸಬೇಕು. ರಾತ್ರಿ ನೆನೆಸಿಟ್ಟ ಓಟ್ಸ್‌ನ್ನು ಬೆಳಿಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಸೇವಿಸಿದರೆ ದೇಹದ ತೂಕವನ್ನು ತಗ್ಗಿಸಲೂ ನೆರವಾಗುತ್ತದೆ.

* ಬೆಳ್ಳುಳ್ಳಿ

 ಬೆಳ್ಳುಳ್ಳಿ ಹೃದಯ ಸಮಸ್ಯೆಗಳು ಸೇರಿದಂತೆ ಹಲವಾರು ಅನಾರೋಗ್ಯಗಳಿಗೆ ಚಿಕಿತ್ಸೆ ನೀಡುತ್ತದೆ. ಅದು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಜೊತೆಗೆ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದೆರಡು ಬೆಳ್ಳುಳ್ಳಿ ಎಸಳುಗಳ ಸೇವನೆಯು ಹಲವಾರು ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಪ್ರತಿದಿನ ಬೆಳ್ಳುಳ್ಳಿಯ ಸೇವನೆಯಿಂದ ಹೃದಯದ ಅಪಧಮನಿಗಳು ಸಂಕುಚಿತಗೊಳ್ಳುವ ಅಪಾಯವು ಕಡಿಮೆಯಾಗುತ್ತದೆ ಮತ್ತು ಇದು ಹೃದಯಾಘಾತವುಂಟಾಗುವ ಸಾಧ್ಯತೆಗಳನ್ನು ತಗ್ಗಿಸುತ್ತದೆ.

* ಕಿವಿ ಹಣ್ಣು

ಕಿವಿ ಹಣ್ಣು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಇದರಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ಶರೀರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ ವಿರುದ್ಧ ಹೋರಾಡುತ್ತವೆ. ಇದು ಹೃದಯದ ಅಪಧಮನಿಗಳಲ್ಲಿಯ ಪಾಚಿಯನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ಕಿವಿ ಹಣ್ಣು ನಮ್ಮ ಶರೀರವನ್ನು ನಂಜುಮುಕ್ತಗೊಳಿಸುತ್ತದೆ. ಕಿವಿ ಹಣ್ಣಿನ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡಗಳಲ್ಲಿಯ ಹಾನಿಕಾರಕಗಳನ್ನೂ ನಿವಾರಿಸುತ್ತದೆ.

*ಬದಾಮ,ಗೋಡಂಬಿಯಂತಹ ಬೀಜಗಳು

ಗೋಡಂಬಿ,ಬದಾಮ,ಅಕ್ರೋಟ್ ಮತ್ತು ನೆಲಗಡಲೆಯಂತಹ ಬೀಜಗಳು ಸಹ ಅಪಧಮನಿಯಲ್ಲಿನ ಪಾಚಿಯನ್ನು ನಿವಾರಿಸಲು ನೆರವಾಗುತ್ತವೆ. ಪ್ರತಿದಿನ ಈ ಬೀಜಗಳನ್ನು ಸೇರಿಸಿ ತಿನ್ನುವುದರಿಂದ ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚುತ್ತದೆ. ಇದರೊಂದಿಗೆ ಈ ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಎಲ್ಲ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ.

* ದಾಳಿಂಬೆ

ದಾಳಿಂಬೆಯು ಪ್ರಬಲ ಫೈಟೊಕೆಮಿಕಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ ಮತ್ತು ಇವು ಅಪಧಮನಿಗಳ ಭಿತ್ತಿಗಳಿಗೆ ಯಾವುದೇ ಹಾನಿಯ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ದಾಳಿಂಬೆ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳು ಶರೀರದಲ್ಲಿ ನೈಟ್ರಿಕ್ ಆಕ್ಸೈಡ್‌ನ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಇದು ಅಪಧಮನಿಗಳನ್ನು ಮುಕ್ತವಾಗಿರಿಸಿ ಸುಗಮ ರಕ್ತ ಸಂಚಾರಕ್ಕೆ ನೆರವಾಗುತ್ತದೆ. ಪ್ರತಿದಿನ ಒಂದು ತಾಜಾ ದಾಳಿಂಬೆಯನ್ನು ತಿನ್ನಬಹುದು ಅಥವಾ ಒಂದು ಗ್ಲಾಸ್ ದಾಳಿಂಬೆ ರಸವನ್ನು ಸೇವಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News