ಬಿಸಿಲಿನ ಒಳಿತು-ಕೆಡುಕುಗಳ ಬಗ್ಗೆ ನಿಮಗೆಷ್ಟು ಗೊತ್ತು?
ಬಿಸಿಲು ಹಾನಿಕಾರಕವೂ ಆಗಬಲ್ಲದು ಎಂದು ನೀವೆಂದಾದರೂ ಯೋಚಿಸಿದ್ದೀರಾ? ಸೂರ್ಯನ ಕಿರಣಗಳಿಗೆ ಅಲ್ಟ್ರಾವಯೊಲೆಟ್ ಅಥವಾ ಯುವಿ ಕಿರಣಗಳು ಎಂದೂ ಕರೆಯಲಾಗುತ್ತದೆ. ಅವು ನಮ್ಮ ಶರೀರಕ್ಕೆ ಲಾಭದಾಯಕವೂ ಆಗಬಲ್ಲವು,ಹಾನಿಕಾರಕವೂ ಆಗಬಲ್ಲವು. ನಾವು ಯುವಿ ಕಿರಣಗಳನ್ನು ನೋಡಲು ಸಾಧ್ಯವಿಲ್ಲವಾದರೂ ಅವು ಸುಲಭವಾಗಿ ನಮ್ಮ ಚರ್ಮದಲ್ಲಿ ತೂರುತ್ತವೆ. ನಮ್ಮ ಶರೀರವು ಹಾನಿಕಾರಕ ಯುವಿ ಕಿರಣಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಚರ್ಮವು ಕಂದು ಬಣ್ಣಕ್ಕೆ ತಿರುಗುತ್ತದೆ. ಬಿಸಿಲಿಗೆ ಮೈ ಸುಡುವುದರಿಂದ ಹಿಡಿದು ಡಿ ವಿಟಾಮಿನ್‌ನ ಉತ್ತಮ ಮೂಲವಾಗಿರುವವರೆಗೆ ಸೂರ್ಯನ ಕಿರಣಗಳು ಆರೋಗ್ಯಲಾಭಗಳನ್ನು ಮತ್ತು ಅಡ್ಡಪರಿಣಾಮಗಳನ್ನು ಹೊಂದಿವೆ. ಮಾನವ ಶರೀರಕ್ಕೆ ದಿನಕ್ಕೆ ಸುಮಾರು 20-30 ನಿಮಿಷಗಳ ಕಾಲ ಬಿಸಿಲಿಗೆ ಒಡ್ಡಿಕೊಂಡರೆ ಸಾಕು.
ಬಿಸಲಿಗೆ ಒಡ್ಡಿಕೊಳ್ಳುವುದರ ಆರೋಗ್ಯಲಾಭಗಳು
ನಾವು ಸೂರ್ಯನ ಬಿಸಿಲಿನಿಂದ ನೈಸರ್ಗಿಕವಾಗಿ ವಿಟಾಮಿನ್ ಡಿ ಅನ್ನು ಪಡೆದುಕೊಳ್ಳಬಹುದು. ವಾಸ್ತವದಲ್ಲಿ ಸೂಕ್ತ ಅವಧಿಗೆ ಬಿಸಿಲಿಗೆ ಒಡ್ಡಿಕೊಳ್ಳುವ ಮೂಲಕ ಹಲವಾರು ಕಾಯಿಲೆಗಳನ್ನು ನಾವು ತಡೆಯಬಹುದು ಮತ್ತು ಅವುಗಳಿಗೆ ಚಿಕಿತ್ಸೆಯನ್ನೂ ಪಡೆಯಬಹುದು. ಹೀಗಾಗಿ ಸೂರ್ಯನ ಕಿರಣಗಳು ನಮ್ಮ ಪಾಲಿಗೆ ವರದಾನವೇ ಆಗಿವೆ. ದಿನಕ್ಕೆ ಕನಿಷ್ಠ 20 ನಿಮಿಷಗಳ ಕಾಲ ಸೂರ್ಯಸ್ನಾನ ಮಾಡುವುದರಿಂದ ಹಲವಾರು ಆರೋಗ್ಯಲಾಭಗಳನ್ನು ಪಡೆಯಬಹುದು.
* ವಿಟಾಮಿನ್ ಡಿ ಮೂಲ
ಮೂಳೆಗಳನ್ನು ಸದೃಢವಾಗಿಸಲು ವಿಟಾಮಿನ್ ಡಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕು ಎನ್ನುವುದು ತಿಳಿದಿರುವ ವಿಷಯವೇ ಆಗಿದೆ. ಈ ಪೋಷಕಾಂಶಗಳು ನಮ್ಮ ಮೂಳೆಗಳನ್ನು ಸದೃಢಗೊಳಿಸಲು ನೆರವಾಗುತ್ತವೆ. ವೈದ್ಯರ ಸಲಹೆಯ ಮೇರೆಗೆ ವಿಟಾಮಿನ್ ಡಿ ಪೂರಕಗಳ ಸೇವನೆಯ ಜೊತೆಗೆ ಸೂರ್ಯನ ಬಿಸಿಲಿಗೂ ಹೆಚ್ಚೆಚ್ಚು ಮೈ ಒಡ್ಡಿಕೊಳ್ಳಬೇಕು. ಬೆಳಗಿನ ಬಿಸಿಲು ಡಿ ವಿಟಾಮಿನ್‌ನ ಪ್ರಮುಖ ಮೂಲವಾಗಿದೆ ಮತ್ತು ಈ ವಿಟಾಮಿನ್ ನಮ್ಮ ಮೂಳೆಗಳಿಗೆ ಅಗತ್ಯವಾಗಿದೆ. ಚಳಿಗಾಲದಲ್ಲಿ ಕೆಲವು ಸಮಯ ಬಿಸಿಲಿನಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಬಾರದು. ಶರೀರದಲ್ಲಿ ವಿಟಾಮಿನ್ ಡಿ ಮಟ್ಟವನ್ನು ಹೆಚ್ಚಿಸುವಲ್ಲಿ ಸೂರ್ಯನ ಬಿಸಿಲಿನ ಯುವಿ ವಿಕಿರಣವು ಧನಾತ್ಮಕ ಪರಿಣಾಮವನ್ನು ಬೀರುತ್ತದೆ.
* ಚರ್ಮದ ಕೆಲವು ಅನಾರೋಗ್ಯಗಳನ್ನು ಗುಣಪಡಿಸುತ್ತದೆ
ಸೂರ್ಯನ ಕಿರಣಗಳು ಕೆಲವು ಅನಾರೋಗ್ಯಗಳನ್ನು ಗುಣಪಡಿಸಲೂ ನೆರವಾಗಬಲ್ಲವು. ಸೋರಿಯಾಸಿಸ್,ಕಜ್ಜಿ,ಕಾಮಾಲೆ ಮತ್ತು ಕೆಲವು ವಿಧಗಳ ಮೊಡವೆಗಳಂತಹ ಹಲವಾರು ಚರ್ಮ ಸಮಸ್ಯೆಗಳ ಚಿಕಿತ್ಸೆಗೆ ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಹೀಗಾಗಿ ಬಿಸಿಲು ಚಿಕಿತ್ಸೆಯು ಚರ್ಮದ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು.
* ಕ್ಯಾನ್ಸರ್‌ನ್ನು ತಡೆಯುತ್ತದೆ
ಅತಿಯಾಗಿ ಬಿಸಿಲಿಗೆ ಒಡ್ಡಿಕೊಳ್ಳುವುದು ಚರ್ಮದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು ಮತ್ತು ಇದು ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುವುದು ಬಿಸಿಲಿನ ಅಡ್ಡಪರಿಣಾಮವಾಗಿದೆ. ಆದರೆ ಸರಿಯಾದ ಪ್ರಮಾಣದಲ್ಲಿ ಬಿಸಿಲಿಗೆ ಒಡ್ಡಿಕೊಳ್ಳುವುದು ಕೆಲವು ವಿಧಗಳ ಕ್ಯಾನ್ಸರ್‌ಗಳನ್ನು ತಡೆಯಲು ನೆರವಾಗುತ್ತದೆ. ಹಗಲು ಕಡಿಮೆಯಿರುವ ಪ್ರದೇಶಗಳ ನಿವಾಸಿಗಳಿಗಿಂತ ಬಿಸಿಲು ಹೆಚ್ಚಾಗಿರುವ ಪ್ರದೇಶಗಳಲ್ಲಿ ವಾಸವಿರುವವರು ಕೆಲವು ನಿರ್ದಿಷ್ಟ ಕ್ಯಾನ್ಸರ್‌ಗಳಿಗೆ ಹೆಚ್ಚಿನ ಪ್ರತಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಕೆಲವು ಸಂಶೋಧನೆಗಳು ಬೆಳಕಿಗೆ ತಂದಿವೆ.
* ಒತ್ತಡವನ್ನು ಕಡಿಮೆ ಮಾಡುತ್ತದೆ
ಕೆಲವು ಜನರಲ್ಲಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಒತ್ತಡಗಳನ್ನು ತಗ್ಗಿಸಲು ನೆರವಾಗುತ್ತದೆ ಎಂದು ನಂಬಲಾಗಿದೆ. ವ್ಯಕ್ತಿಗಳಲ್ಲಿ ಆತಂಕ ಅಥವಾ ಭೀತಿಗಳಿಗೆ ಹಲವಾರು ಕಾರಣಗಳಿರಬಹುದು,ಆದರೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಅವರಲ್ಲಿ ಮನೆಮಾಡಿದ್ದ ಉದ್ವಿಗ್ನತೆಯು ಶಮನಗೊಳ್ಳುತ್ತದೆ. ವಾಸ್ತವದಲ್ಲಿ ಹಲವು ವೈದ್ಯರೂ ಖಿನ್ನತೆ ರೋಗಿಗಳಿಗೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಬೆಳಕಿನ ಚಿಕಿತ್ಸೆಯಾಗಿರುವ ಇದನ್ನು ಫೋಟೊಥೆರಪಿ ಎಂದು ಕರೆಯಲಾಗುತ್ತದೆ.
* ಒಳ್ಳೆಯ ನಿದ್ರೆ ನೀಡುತ್ತದೆ
ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಒಳ್ಳೆಯ ನಿದ್ರೆ ಮಾಡಲು ನೆರವಾಗುತ್ತದೆ. ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗಿ ಶರೀರ ಮತ್ತು ಮನಸ್ಸು ಪ್ರಫುಲ್ಲಗೊಳ್ಳುತ್ತವೆ ಮತ್ತು ಇದರಿಂದ ಒಳ್ಳೆಯ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಶರೀರವು ಮೆಲಾಟೋನಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ ಮತ್ತು ಇದು ನಾವು ಚೆನ್ನಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಸಂಜೆಯಾಗುತ್ತಿದ್ದಂತೆ ನಮ್ಮ ಶರೀರವು ಈ ಹಾರ್ಮೋನ್ ಉತ್ಪಾದನೆಯನ್ನು ಆರಂಭಿಸುವುದರಿಂದ ಸಾಮಾನ್ಯವಾಗಿ ಸೂರ್ಯಾಸ್ತವಾದ ಎರಡು ಗಂಟೆಗಳ ಬಳಿಕ ನಮಗೆ ನಿದ್ರೆಯ ಮಂಪರು ಆವರಿಸಿಕೊಳ್ಳುತ್ತದೆ.
ಬಿಸಿಲಿನ ಹಾನಿಕಾರಕ ಪರಿಣಾಮಗಳು
ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದೂ ನಮ್ಮ ಶರೀರಕ್ಕೆ ಒಳ್ಳೆಯದಲ್ಲ. ವಾಸ್ತವದಲ್ಲಿ ಅದು ನಾವು ಊಹಿಸಿಯೂ ಇರದ ರೀತಿಗಳಲ್ಲಿ ನಮಗೆ ಹಾನಿಯನ್ನುಂಟು ಮಾಡುತ್ತದೆ. ಬಿಸಿಲು ಹಲವಾರು ಅನಾರೋಗ್ಯಗಳಿಗೆ ಒಳ್ಳೆಯ ಚಿಕಿತ್ಸೆಯಾಗಿದ್ದರೂ ಯೋಜಿತ ರೀತಿಯಲ್ಲಿ ಅದಕ್ಕೆ ಒಡ್ಡಿಕೊಳ್ಳಬೇಕು. * ಕಣ್ಣಿನ ಸಮಸ್ಯೆಗಳು
ಯುವಿ ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದು ಕಣ್ಣಿನ ಪೊರೆ,ಟೆರಿಜಿಯಂ (ಕಣ್ಣಿನ ಬಿಳಿಯ ಭಾಗದಲ್ಲಿ ಅಂಗಾಂಶದ ಬೆಳವಣಿಗೆ),ಕಣ್ಣಿನ ಸುತ್ತಲಿನ ಚರ್ಮದ ಕ್ಯಾನ್ಸರ್,ಫೋಟೊಕೆರಟೈಟಿಸ್(ಬಿಸಿಲಿನಿಂದ ಅಕ್ಷಿಪಟಲದ ಸುಡುವಿಕೆ), ಅಕ್ಷಿಪಟಲ ಅವನತಿಯಂತಹ ವಿವಿಧ ಸಮಸ್ಯೆಗಳುಂಟು ಮಾಡುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
* ಅಕಾಲ ವೃದ್ಧಾಪ್ಯ
ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಚರ್ಮದಲ್ಲಿ ಕಪ್ಪುಕಲೆಗಳು ಉಂಟಾಗುತ್ತವೆ ಮತ್ತು ಇದನ್ನು ಹೈಪರ್‌ಪಿಗ್ಮೆಂಟೇಷನ್ ಎಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದು ನಮ್ಮ ಚರ್ಮಕ್ಕೆ ಸಾಮಾನ್ಯಕ್ಕಿಂತ ಬೇಗ ವಯಸ್ಸಾಗುವಂತೆ ಮಾಡುತ್ತದೆ. ವಯಸ್ಸಾಗುವಿಕೆಯ ಇಂತಹ ಲಕ್ಷಣಗಳಲ್ಲಿ ಚರ್ಮದಲ್ಲಿ ನಿರಿಗೆಗಳು ಮತ್ತು ಬಿಗಿತ ಉಂಟಾಗುವುದು ಸೇರಿವೆ. ಅಲ್ಲದೆ ಬಿಸಿಲಿನಿಂದ ವೆುಸುಡುವುದರಿಂದ ಹಿಡಿದು ಚರ್ಮವು ಕೆಂಪಗಾಗುವವರೆಗೆ ಚರ್ಮದಲ್ಲಿ ಹಲವಾರು ಬದಲಾವಣೆಗಳು ಕಂಡು ಬರಬಹುದು. ಅತಿಯಾದ ಬಿಸಿಲು ನಮ್ಮ ಚರ್ಮದಲ್ಲಿ ನಸುಕಂದು ಮಚ್ಚೆಗಳನ್ನೂ ಉಂಟು ಮಾಡಬಹುದು.
* ಚರ್ಮದ ಕ್ಯಾನ್ಸರ್
ನಮ್ಮ ಚರ್ಮದ ಮೇಲೆ ಪರಿಣಾಮವನ್ನುಂಟು ಮಾಡುವ ಯುವಿ ಕಿರಣಗಳು ದೀರ್ಘಾವಧಿಗೆ ಬಿಸಲಿಗೆ ಒಡ್ಡಿಕೊಂಡಿದ್ದರೆ ಚರ್ಮದ ಕೋಶಗಳ ಡಿಎನ್‌ಎಗೂ ಹಾನಿಯನ್ನುಂಟು ಮಾಡಬಲ್ಲವು. ಈ ಸ್ಥಿತಿಯುಂಟಾಗಲು ಹಲವಾರು ವರ್ಷಗಳು ಬೇಕಾಗಬಹುದು,ಆದರೆ ಕೆಲವು ವರ್ಷಗಳ ಬಳಿಕ ಚರ್ಮದ ಕ್ಯಾನ್ಸರ್ ಕೂಡ ಉಂಟಾಗಬಹುದು. ಅದು ಮೆಲನೋಮಾ ಕ್ಯಾನ್ಸರ್ ಆಗಿರದಿರಬಹುದು ಮತ್ತು ಚಿಕಿತ್ಸೆಯಿಂದ ಗುಣಪಡಿಸಬಹುದು. ಮೆಲನೋಮಾ ಚರ್ಮದ ಕ್ಯಾನ್ಸರ್ ಅಪರೂಪ,ಆದರೆ ಅದು ತುಂಬ ತೀವ್ರ ಸ್ವರೂಪವನ್ನು ಹೊಂದಿರುತ್ತದೆ. ಚರ್ಮದ ಕ್ಯಾನ್ಸರ್‌ನ್ನು ಕಡೆಗಣಿಸಿದರೆ ಅದು ಶರೀರದ ಇತರ ಭಾಗಗಳಿಗೂ ಹರಡುತ್ತದೆ.
* ನಿರೋಧಕ ವ್ಯವಸ್ಥೆಗೆ ಅಪಾಯ
ಬಿಸಿಲಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು ನಮ್ಮ ನಿರೋಧಕ ಶಕ್ತಿಯನ್ನೂ ಅಪಾಯದಲ್ಲಿ ತಳ್ಳುತ್ತದೆ. ವಿವಿಧ ಸೋಂಕುಗಳು ಮತ್ತು ರೋಗಗಳ ವಿರುದ್ಧ ರಕ್ಷಣೆ ನೀಡುವ ಬಿಳಿಯ ರಕ್ತಕಣಗಳಿಗೆ ಹಾನಿಯುಂಟಾಗಬಹುದು. ನಮ್ಮ ಚರ್ಮವು ಸುಟ್ಟಾಗ ಹೊಸ ಕೋಶಗಳು ಅಭಿವೃದ್ಧಿಗೊಳ್ಳಲು ಬಿಳಿಯ ರಕ್ತಕಣಗಳು ನೆರವಾಗುತ್ತವೆ.