ವಾಕಿಂಗ್ ಕ್ಯಾನ್ಸರ್ ರೋಗಿಗಳ ಜೀವನಮಟ್ಟವನ್ನು ಹೆಚ್ಚಿಸುತ್ತದೆ

Update: 2021-02-05 18:30 GMT

 ದಿನಕ್ಕೆ ಕನಿಷ್ಠ 30 ನಿಮಿಷಗಳ ವಾಕಿಂಗ್ ಅಥವಾ ನಡಿಗೆಯು ಒಟ್ಟಾರೆ ಆರೋಗ್ಯಕ್ಕೆ ಲಾಭದಾಯಕ ಎನ್ನುವುದರಲ್ಲಿ ಸಂಶಯವಿಲ್ಲ. ಅದು ನಮ್ಮ ಮೂಡ್‌ನ್ನು ಹೆಚ್ಚಿಸುವುದು ಮತ್ತು ತೂಕ ಇಳಿಕೆಯಲ್ಲಿ ನೆರವಾಗುವುದು ಮಾತ್ರವಲ್ಲ,ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ, ಒತ್ತಡಗಳಿಂದ ಮುಕ್ತಿ ನೀಡುತ್ತದೆ ಮತ್ತು ಆಯುಷ್ಯವನ್ನು ಹೆಚ್ಚಿಸುತ್ತದೆ. ಆದರೆ ವಾಕಿಂಗ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ತಗ್ಗಿಸುತ್ತದೆ ಮತ್ತು ಕ್ಯಾನ್ಸರ್ ರೋಗಿಗಳ ಜೀವನಮಟ್ಟವನ್ನು ಹೆಚ್ಚಿಸುತ್ತದೆ ಎನ್ನುವುದು ಅಷ್ಟಾಗಿ ಗೊತ್ತಿರಲಿಲ್ಲ. ವಾರಕ್ಕೆ ಕನಿಷ್ಠ ಮೂರು ಸಲ ಕೇವಲ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಕ್ಯಾನ್ಸರ್ ರೋಗಿಗಳ ಜೀವನ ಮಟ್ಟ ಉತ್ತಮಗೊಳ್ಳುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ತೋರಿಸಿದೆ.

ಬ್ರಿಟನ್‌ನ ಸರ್ರೆ ವಿವಿಯ ಸಂಶೋಧಕರು ನಡೆಸಿದ್ದ ಈ ಅಧ್ಯಯನದ ವರದಿಯು ಬ್ರಿಟಿಷ್ ಮೆಡಿಕಲ್ ಜರ್ನಲ್ ಓಪನ್‌ನಲ್ಲಿ ಪ್ರಕಟಗೊಂಡಿದೆ. ಅಧ್ಯಯನಕ್ಕಾಗಿ 42 ಕ್ಯಾನ್ಸರ್ ರೋಗಿಗಳನ್ನು ಆಯ್ಕೆ ಮಾಡಿಕೊಂಡು,ಎರಡು ಗುಂಪುಗಳಲ್ಲಿ ವಿಭಜಿಸಲಾಗಿತ್ತು. ಮೊದಲ ಗುಂಪಿನ ರೋಗಿಗಳನ್ನು ಎರಡು ದಿನಗಳಿಗೊಮ್ಮೆ 30 ನಿಮಿಷಗಳ ವಾಕಿಂಗ್ ಸೇರಿದಂತೆ ಕೆಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಲಾಗಿತ್ತು ಮತ್ತು ಎರಡನೇ ಗುಂಪಿನವರಿಗೆ ಯಾವುದೇ ಬದಲಾವಣೆಗಳಿಲ್ಲದೆ ತಮ್ಮ ಎಂದಿನ ಚಟುವಟಿಕೆಯ ಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು.

 ನಿಗದಿತ ಅವಧಿಯ ಬಳಿಕ ಮೊದಲ ಗುಂಪಿನ ರೋಗಿಗಳಲ್ಲಿ ದೈಹಿಕ,ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯಗಳಲ್ಲಿ ಸುಧಾರಣೆಗಳು ಕಂಡು ಬಂದಿದ್ದವು. ವಾಕಿಂಗ್ ಈ ರೋಗಿಗಳಲ್ಲಿ ತಮ್ಮ ಕಾಯಿಲೆಯ ಬಗ್ಗೆ ಹೆಚ್ಚಿನ ಧನಾತ್ಮಕ ನಿಲುವನ್ನು ಒದಗಿಸಿತ್ತು. ಅಲ್ಲದೆ ಅದು ರೋಗಿಗಳು ತೂಕ ಇಳಿಸಿಕೊಳ್ಳಲು ಮತ್ತು ಹೆಚ್ಚು ಕ್ರಿಯಾಶೀಲರಾಗಿರಲೂ ನೆರವಾಗಿತ್ತು.

ಜೀವನಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲ,ವಾಕಿಂಗ್ ಸ್ತನ ಕ್ಯಾನ್ಸರ್ ಮತ್ತು ಕರುಳು ಕ್ಯಾನ್ಸರ್‌ನ ಅಪಾಯಗಳನ್ನೂ ಕಡಿಮೆ ಮಾಡುತ್ತದೆ ಮತ್ತು ರೋಗಿಗಳ ಆಯುಷ್ಯವನ್ನು ಹೆಚ್ಚಿಸಲೂ ನೆರವಾಗುತ್ತದೆ. ಇದೇ ಕಾರಣದಿಂದ ವಯಸ್ಕ ವ್ಯಕ್ತಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ಬಿರುಸಿನ ನಡಿಗೆ ಮತ್ತು 75 ನಿಮಿಷಗಳಷ್ಟು ಕಾಲ ಯಾವುದೇ ತೀವ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಕ್ಯಾನ್ಸರ್ ತಡೆಯಲು ಕೆಲವು ಟಿಪ್ಸ್ ಇಲ್ಲಿವೆ

 ನಿಯಮಿತವಾಗಿ ಬಿರುಸಿನ ವಾಕಿಂಗ್ ಸರಳ,ಸುಲಭ ದೈಹಿಕ ಚಟುವಟಿಕೆಯಾಗಿದ್ದು,ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ತಗ್ಗಿಸುವುದು ಮಾತ್ರವಲ್ಲ,ಆರೋಗ್ಯಯುತವಾಗಿರಲೂ ನೆರವಾಗುತ್ತದೆ.

ಧೂಮ್ರಪಾನದಿಂದ ದೂರವಿರುವುದು,ಆರೋಗ್ಯಕರ ಆಹಾರ ಸೇವನೆ,ದೇಹತೂಕದ ಬಗ್ಗೆ ಕಾಳಜಿ,ಮದ್ಯಪಾನಕ್ಕೆ ಮಿತಿ,ವಿಷವಸ್ತುಗಳು ಮತ್ತು ವಿಕಿರಣಗಳಿಗೆ ಅನಾವಶ್ಯಕವಾಗಿ ಒಡ್ಡಿಕೊಳ್ಳುವುದನ್ನು ನಿವಾರಿಸುವುದು,ಶರೀರಕ್ಕೆ ಸಾಕಷ್ಟು ವಿಟಾಮಿನ್ ಡಿ ಲಭ್ಯವಾಗಿಸುವುದು, ಸರಿಯಾದ ನಿದ್ರೆ,ಒತ್ತಡಗಳು ಮತ್ತು ಸೋಂಕುಗಳಿಂದ ದೂರವಿರುವುದು ಇವೇ ಮುಂತಾದ ಸರಳ ಉಪಾಯಗಳಿಂದ ಕ್ಯಾನ್ಸರ್ ಬಾರದಂತೆ ತಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News