ತೂಕ ಹೆಚ್ಚಿಸುವ ಪೌಡರ್‌ನ ಅಡ್ಡಪರಿಣಾಮಗಳು ನಿಮಗೆ ಗೊತ್ತಿರಲಿ
ಶರೀರದ ತೂಕ ಹೆಚ್ಚಿಸಿಕೊಳ್ಳಲು ಸೇವಿಸುವ ಪೌಡರ್‌ಗಳು ಅಡ್ಡಪರಿಣಾಮಗಳನ್ನೂ ಉಂಟು ಮಾಡುತ್ತವೆ ಎನ್ನುವುದು ನಿಮಗೆ ಗೊತ್ತೇ? ಶರೀರದ ತೂಕವನ್ನು ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ,ಅದು ತೂಕವನ್ನು ಕಡಿಮೆ ಮಾಡಿಕೊಳ್ಳುವಷ್ಟೇ ಕಷ್ಟಕರವಾಗಿದೆ. ತೂಕವನ್ನು ಹೆಚ್ಚಿಸಿಕೊಳ್ಳಲು ಜನರು ಜಿಮ್‌ಗಳಲ್ಲಿ ಕಸರತ್ತು ಮಾಡುತ್ತ ಗಂಟೆಗಟ್ಟಲೆ ಸಮಯವನ್ನು ಕಳೆಯುತ್ತಾರೆ ಮತ್ತು ಹೆಚ್ಚಿನ ಆಹಾರವನ್ನು ಸೇವಿಸುತ್ತಾರೆ. ತೂಕ ಹೆಚ್ಚಿಸುವ ಪೂರಕಗಳ ಸೇವನೆ ಶರೀರದ ತೂಕವನ್ನು ಹೆಚ್ಚಿಸಿಕೊಳ್ಳಲು ಅತ್ಯಂತ ತ್ವರಿತ ಮಾರ್ಗಗಳಲ್ಲಿ ಒಂದಾಗಿದೆ. ಇಂತಹ ಪೂರಕಗಳು ಸಾಕಷ್ಟು ಜನಪ್ರಿಯವಾಗಿವೆ ಮತ್ತು ತೂಕವನ್ನು ಹೆಚ್ಚಿಸುವಲ್ಲಿ ಹಾಗೂ ಸ್ನಾಯುಗಳನ್ನು ಸದೃಢಗೊಳಿಸುವಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿವೆ.
ಆದರೆ ತೂಕ ಹೆಚ್ಚಿಸುವ ಪೌಡರ್‌ಗಳ ಬಳಕೆಯು ಉಂಟು ಮಾಡುವ ಅಡ್ಡಪರಿಣಾಮಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇದು ಅತ್ಯಂತ ಸುಲಭದ ಮಾರ್ಗವಾಗಿರುವುದರಿಂದ ಜನರು ಇಂತಹ ಪೌಡರ್‌ಗಳನ್ನು ಸೇವಿಸುವ ಮುನ್ನ ಬೇರೆ ಆಲೋಚನೆಯನ್ನೇ ಮಾಡುವುದಿಲ್ಲ. ಇದು ಖಂಡಿತ ಸರಿಯಲ್ಲ,ನಿಮ್ಮ ಆಹಾರದಲ್ಲಿ ತೂಕ ಹೆಚ್ಚಿಸುವ ಪೌಡರ್‌ನ್ನು ಸೇರಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ ಎನ್ನುವುದನ್ನು ಮರೆಯಬೇಡಿ. ನಿಮ್ಮ ಶರೀರದ ಮಾದರಿಗೆ ಅನುಗುಣವಾಗಿ ನೀವು ಸೇವಿಸುವ ಪೌಡರ್‌ನ ಪ್ರಮಾಣದ ಬಗ್ಗೆಯೂ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಈ ಪೂರಕಗಳನ್ನೆಂದೂ ಅತಿಯಾಗಿ ಸೇವಿಸಬಾರದು. ಪ್ರತಿದಿನ ತೂಕ ಹೆಚ್ಚಿಸುವ ಪೌಡರ್‌ನ ಸೇವನೆಯನ್ನು ಆರಂಭಿಸುವ ಮುನ್ನ ಅವುಗಳ ಒಳಿತು-ಕೆಡುಕುಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯಿರಬೇಕು.
ಅಷ್ಟಕ್ಕೂ ಈ ತೂಕ ಹೆಚ್ಚಿಸುವ ಪೌಡರ್ ಏನು?
ತೂಕವನ್ನು ವೃದ್ಧಿಸುವ ಹೆಚ್ಚಿನ ಪೂರಕಗಳು ಪೌಡರ್‌ಗಳ ರೂಪದಲ್ಲಿದ್ದು,ಇವುಗಳನ್ನು ನೀರು ಅಥವಾ ನಿಮ್ಮ ಇಷ್ಟದ ಪಾನೀಯದಲ್ಲಿ ಸೇರಿಸಿಕೊಂಡು ಸೇವಿಸಬಹುದು. ಈ ಪೌಡರ್‌ಗಳಲ್ಲಿ ಕಾರ್ಬೊಹೈಡ್ರೇಟ್‌ಗಳು,ಪ್ರೋಟಿನ್ ಮತ್ತು ಕೊಬ್ಬುಗಳು,ವಿಟಾಮಿನ್‌ಗಳು ಮತ್ತು ಖನಿಜಗಳು,ಪ್ರತ್ಯೇಕ ಅಮಿನೊ ಆಮ್ಲಗಳು ಮತ್ತು ಕ್ರಿಯೇಟೈನ್‌ನಂತಹ ಇತರ ಪೋಷಕಾಂಶಗಳು ವಿಭಿನ್ನ ಪ್ರಮಾಣಗಳಲ್ಲಿರುತ್ತವೆ. ತುಲನಾತ್ಮಕವಾಗಿ ಅಧಿಕ ಕ್ಯಾಲೊರಿಗಳನ್ನು ಒಳಗೊಂಡಿರುವುದರಿಂದ ಈ ಪೌಡರ್‌ಗಳು ನಿರೀಕ್ಷಿತ ಪರಿಣಾಮವನ್ನು ನೀಡುತ್ತವೆ. ತೂಕ ಹೆಚ್ಚಿಸುವ ಕೆಲವು ಪೂರಕಗಳು ಮಾತ್ರೆಗಳು ಅಥವಾ ಕ್ಯಾಪ್ಸೂಲ್‌ಗಳ ರೂಪದಲ್ಲಿ ಬರುತ್ತವೆ,ಆದರೆ ಅವು ಸಾಕಷ್ಟು ಕ್ಯಾಲೊರಿಗಳನ್ನು ಒದಗಿಸುವುದಿಲ್ಲ. ಹೀಗಾಗಿ ತೂಕ ಹೆಚ್ಚಿಸುವ ನಿಟ್ಟಿನಲ್ಲಿ ಅವು ಉಪಯೋಗವಿಲ್ಲ.
ತೂಕ ಹೆಚ್ಚಿಸುವ ಪೌಡರ್‌ಗಳ ಆರೋಗ್ಯ ಅಪಾಯಗಳು ಮತ್ತು ಪರಿಣಾಮಕಾರಿತ್ವ ಪೌಷ್ಟಿಕಾಂಶ ತಜ್ಞರು ಅತ್ಯಂತ ಹೆಚ್ಚು ಸಂಶೋಧನೆ ನಡೆಸಿರುವ ವಿಷಯಗಳಲ್ಲೊಂದಾಗಿದೆ. ಸೂಕ್ತವಲ್ಲದ ಪ್ರಮಾಣದಲ್ಲಿ ಇಂತಹ ಪೌಡರ್‌ಗಳ ಸೇವನೆಯು ಸ್ನಾಯು ಸೆಳೆತ ಮತ್ತು ಇತರ ಪ್ರತಿಕೂಲ ಅಡ್ಡಪರಿಣಾಮಗಳನ್ನುಂಟು ಮಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಅದು ಮೂತ್ರಪಿಂಡ ಹಾನಿ,ಯಕೃತ್ತು ಸಮಸ್ಯೆ, ನಿರ್ಜಲೀಕರಣ ಮತ್ತು ಬೇಧಿಯಂತಹ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ತೂಕ ಹೆಚ್ಚಿಸುವ ಪೌಡರ್‌ನಲ್ಲಿ ವಿಟಾಮಿನ್ ಸಿ ಮತ್ತು ಕಬ್ಬಿಣಾಂಶಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿದ್ದು,ಇವು ಬೇಧಿ ಮತ್ತು ಜಠರ ಸಮಸ್ಯೆಗೆ ಕಾರಣಗಳಾಗಿವೆ. ಹೀಗಾಗಿ ಅನವಶ್ಯಕ ಆರೋಗ್ಯ ತೊಂದರೆಗಳಿಂದ ಪಾರಾಗಲು ಇಂತಹ ಪೌಡರ್‌ಗಳನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಮುಖ್ಯವಾಗಿದೆ.
ಪೌಡರ್‌ನೊಂದಿಗೆ ಗುರುತಿಸಿಕೊಂಡಿರುವ ಅಪಾಯಗಳು
ಮೂತ್ರಪಿಂಡ ಸಮಸ್ಯೆಗಳು: ಮೂತ್ರಪಿಂಡ ಕಾಯಿಲೆಗಳು ತೂಕ ಹೆಚ್ಚಿಸುವ ಪೌಡರ್‌ನ ಸೇವನೆಯೊಂದಿಗೆ ತಳುಕು ಹಾಕಿಕೊಂಡಿವೆ. ಈ ಪೌಡರ್ ಮೂತ್ರಪಿಂಡ ಕಲ್ಲುಗಳು ಉಂಟಾಗಲು ಪರೋಕ್ಷ ಕಾರಣವೂ ಆಗಿದೆ.
ಯಕೃತ್ತಿನ ಸಮಸ್ಯೆಗಳು: ಸೂಕ್ತವಲ್ಲದ ಪ್ರಮಾಣದಲ್ಲಿ ಪೌಡರ್ ಸೇವನೆಯ ಬಳಿಕ ಯಕೃತ್ ಸಮಸ್ಯೆಗಳು ವರದಿಯಾಗಿವೆ. ಮದ್ಯದೊಂದಿಗೆ ಆರೋಗ್ಯ ಪೂರಕಗಳ ಸೇವನೆಯು ಮಾರಣಾಂತಿಕವೂ ಆಗಬಲ್ಲದು.
ಸ್ನಾಯು ಜಗಿತ ಮತ್ತು ಸೆಳೆತಗಳು: ಪೌಡರ್‌ನ ಅತಿಯಾದ ಸೇವನೆಯು ದ್ರವಗಳ ಪೂರೈಕೆಯಲ್ಲಿ ಕೊರತೆಯನ್ನುಂಟು ಮಾಡಬಹುದು ಮತ್ತು ಇದು ಸ್ನಾಯುಗಳ ಜಗಿತ ಮತ್ತು ಸೆಳೆತಗಳಿಗೆ ಕಾರಣವಾಗುತ್ತದೆ.
ಉಸಿರಾಟದ ತೊಂದರೆಗಳು: ಉಸಿರಾಟದ ಸಮಸ್ಯೆಗಳು ಸಹ ತೂಕವನ್ನು ಹೆಚ್ಚಿಸುವ ಪೌಡರ್‌ಗಳ ಅತಿಯಾದ ಸೇವನೆಯೊಂದಿಗೆ ಗುರುತಿಸಿಕೊಂಡಿವೆ. ಕೆಮ್ಮು,ಸೀನು,ಉಬ್ಬಸ ಮತ್ತು ಅಸ್ತಮಾಗಳೂ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಉಸಿರಾಟದ ಸಮಸ್ಯೆಯಿರುವವರು ಇಂತಹ ಪೌಡರ್‌ಗಳಿಂದ ದೂರವೇ ಇರಬೇಕು.
ವಾಕರಿಕೆ ಮತ್ತು ಬೇಧಿ: ಪೌಡರ್‌ನ ಅತಿಯಾದ ಸೇವನೆ ವಾಕರಿಕೆಯನ್ನುಂಟು ಮಾಡುತ್ತದೆ ಮತ್ತು ಜಠರದಲ್ಲಿ ಕರಗದೆ ಹಾಗೆಯೇ ಉಳಿದುಕೊಂಡರೆ ಬೇಧಿಗೆ ಕಾರಣವಾಗುತ್ತದೆ.
ಅನಾರೋಗ್ಯಕರ ತೂಕ ಹೆಚ್ಚಳ: ಅತಿಯಾದ ಪ್ರಮಾಣದಲ್ಲಿ ತೂಕ ಹೆಚ್ಚಿಸುವ ಪೂರಕಗಳನ್ನು ಸೇವಿಸಿದರೆ ಅದು ಅನಾರೋಗ್ಯಕರ ತೂಕ ಹೆಚ್ಚಳವನ್ನುಂಟು ಮಾಡುತ್ತದೆ. ಅದು ಅನಗತ್ಯ ಕೊಬ್ಬನ್ನು ಹೆಚ್ಚಿಸುತ್ತದೆ. ನೀವು ಮಾಡುವ ವ್ಯಾಯಾಮವು ತೂಕ ಹೆಚ್ಚಿಸುವ ಪೂರಕಗಳಿಗೆ ತಾಳೆಯಾಗದಿದ್ದರೆ ಬಳಕೆಯಾಗದೆ ಉಳಿದ ಕ್ಯಾಲೊರಿಗಳು ಕೊಬ್ಬಾಗಿ ಪರಿವರ್ತನೆಗೊಳ್ಳುತ್ತವೆ ಮತ್ತು ಕೊಬ್ಬು ಎಂದಿಗೂ ಒಳ್ಳೆಯದಲ್ಲ.