ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ಗ್ಯಾಂಗ್ರಿನ್ ಜೀವವನ್ನೇ ತೆಗೆಯುತ್ತದೆ

Update: 2021-02-21 13:05 GMT

 ರಕ್ತಪೂರೈಕೆಯ ಕೊರತೆಯಿಂದ ಅಥವಾ ಗಂಭೀರ ಬ್ಯಾಕ್ಟೀರಿಯಾ ಸೋಂಕಿನಿಂದ ಶರೀರದ ಅಂಗಾಂಶಗಳು ಸಾಯುವುದರಿಂದ ಗ್ಯಾಂಗ್ರಿನ್ ಅಥವಾ ಅಂಗಕ್ಷಯವುಂಟಾಗುತ್ತದೆ. ಗ್ಯಾಂಗ್ರಿನ್ ಸಾಮಾನ್ಯವಾಗಿ ಬೆರಳುಗಳು ಸೇರಿದಂತೆ ಕೈಕಾಲುಗಳನ್ನು ಬಾಧಿಸುತ್ತದೆಯಾದರೂ ಅದು ಶರೀರದೊಳಗೆ ಸ್ನಾಯುಗಳು ಮತ್ತು ಪಿತ್ತಕೋಶದಂತಹ ಅಂಗಾಂಗಗಳಲ್ಲಿಯೂ ಉಂಟಾಗುತ್ತದೆ.

ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುವ ಮತ್ತು ರಕ್ತಸಂಚಾರಕ್ಕೆ ವ್ಯತ್ಯಯವನ್ನುಂಟು ಮಾಡುವ ಮಧುಮೇಹ ಅಥವಾ ಅಪಧಮನಿ ಕಾಠಿಣ್ಯದಂತಹ ರೋಗಗಳಿಂದ ಬಳಲುತ್ತಿರುವವರು ಗ್ಯಾಂಗ್ರಿನ್‌ಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ.

 ರಕ್ತಸಂಚಾರವನ್ನು ಮರುಸ್ಥಾಪಿಸಲು ಮತ್ತು ಮೃತ ಅಂಗಾಂಶವನ್ನು ತೆಗೆಯಲು ಶಸ್ತ್ರಚಿಕಿತ್ಸೆ,ಸೋಂಕು ಇದ್ದರೆ ಆ್ಯಂಟಿಬಯಾಟಿಕ್‌ಗಳ ಸೇವನೆ ಮತ್ತು ಹೈಪರ್‌ಬೇರಿಕ್ ಆಕ್ಸಿಜನ್ ಥೆರಪಿ ಇವು ಗ್ಯಾಂಗ್ರಿನ್ ಚಿಕಿತ್ಸೆಗಳಲ್ಲಿ ಸೇರಿವೆ. ಗ್ಯಾಂಗ್ರಿನ್‌ನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಚೇತರಿಸಿಕೊಳ್ಳುವ ಅವಕಾಶ ಹೆಚ್ಚಿರುತ್ತದೆ.

►ಲಕ್ಷಣಗಳು

ಗ್ಯಾಂಗ್ರಿನ್ ಚರ್ಮವನ್ನು ಬಾಧಿಸಿದರೆ ಕಂಡು ಬರಬಹುದಾದ ಲಕ್ಷಣಗಳಲ್ಲಿ ಚರ್ಮದ ಬಣ್ಣ ಬದಲಾಗುವಿಕೆ,ಊತ,ಗುಳ್ಳೆಗಳು,ತೀವ್ರ ನೋವು ಮತ್ತು ಮರಗಟ್ಟುವಿಕೆಯ ಅನುಭವ,ಹುಣ್ಣಿನಿಂದ ದುರ್ನಾತದ ಕೀವು ಸೋರಿಕೆ,ತೆಳುವಾದ ಹೊಳೆಯುವ ಚರ್ಮ ಅಥವಾ ಕೇಶರಹಿತ ಚರ್ಮ,ಚರ್ಮವನ್ನು ಸ್ಪರ್ಶಿಸಿದಾಗ ತಣ್ಣನೆಯ ಅನುಭವ ಇವು ಸೇರಿವೆ.

ಗ್ಯಾಂಗ್ರಿನ್ ಚರ್ಮದ ಮೇಲ್ಮೈ ಅಡಿಯ ಅಂಗಾಂಶಗಳನ್ನು ಬಾಧಿಸಿದ್ದರೆ ಸಣ್ಣ ಜ್ವರ ಮತ್ತು ಅಸ್ವಸ್ಥತೆಯೂ ಕಾಣಿಸಿಕೊಳ್ಳಬಹುದು.

ಗ್ಯಾಂಗ್ರಿನ್‌ಗೆ ಕಾರಣವಾದ ಸೂಕ್ಷ್ಮಜೀವಿಗಳು ಶರೀರದಲ್ಲಿ ಹರಡಿದ್ದರೆ ರಕ್ತವು ಕೀವುಗಟ್ಟಿ ಸೆಪ್ಟಿಕ್ ಶಾಕ್ ಅಥವಾ ನಂಜು ಆಘಾತ ಉಂಟಾಗಬಹುದು. ರಕ್ತದೊತ್ತಡ ಕುಸಿತ,ಜ್ವರ (ಕೆಲವರಲ್ಲಿ ಶರೀರದ ಉಷ್ಣತೆ 98.6 ಡಿ.ಫೆರೆನ್‌ಹೀಟ್‌ಗಿಂತ ಕಡಿಮೆಯೂ ಆಗಬಹುದು), ಹೃದಯ ಬಡಿತ ತೀವ್ರಗೊಳ್ಳುವುದು,ತಲೆ ಹಗುರವಾಗುವಿಕೆ,ಉಸಿರಾಟಕ್ಕೆ ತೊಂದರೆ,ಮಾನಸಿಕ ಗೊಂದಲ ಇವು ಸೆಪ್ಟಿಕ್ ಶಾಕ್‌ನ ಲಕ್ಷಣಗಳಲ್ಲಿ ಸೇರಿವೆ.

►ವೈದ್ಯರನ್ನು ಯಾವಾಗ ಕಾಣಬೇಕು?

ಗ್ಯಾಂಗ್ರಿನ್ ಗಂಭೀರ ಅನಾರೋಗ್ಯ ಸ್ಥಿತಿಯಾಗಿದ್ದು,ಇದಕ್ಕೆ ತುರ್ತು ವೈದ್ಯಕೀಯ ಚಿಕಿತ್ಸೆಯು ಅಗತ್ಯವಾಗುತ್ತದೆ. ಶರೀರದ ಯಾವುದೇ ಭಾಗದಲ್ಲಿ ನಿರಂತರವಾಗಿ ಹೇಳಲಾಗದ ನೋವು ಮತ್ತು ಈ ಕೆಳಗಿನ ಒಂದು ಅಥವಾ ಹೆಚ್ಚಿನ ಲಕ್ಷಣಗಳಿದ್ದರೆ ವಿಳಂಬಿಸದೆ ವೈದ್ಯರನ್ನು ಭೇಟಿಯಾಗಬೇಕು.

ಸತತ ಜ್ವರ,ಬಣ್ಣಗೆಡುವಿಕೆ,ಬಿಸಿಯಾಗಿರುವುದು,ಊತ,ಗುಳ್ಳೆಗಳು ಸೇರಿದಂತೆ ಚರ್ಮದಲ್ಲಿ ಬದಲಾವಣೆಗಳು,ಹುಣ್ಣಿನಿಂದ ದುರ್ನಾತ ಬೀರುವ ಕೀವು ಸೋರಿಕೆ,ಇತ್ತೀಚಿಗೆ ಶಸ್ತ್ರಚಿಕಿತ್ಸೆಯಾಗಿದ್ದರೆ ಆ ಭಾಗದಲ್ಲಿ ದಿಢೀರ್ ನೋವು,ಚರ್ಮವು ಗಟ್ಟಿಯಾಗುವುದು,ಮುಟ್ಟಿದರೆ ತಂಪು ಅನುಭವ ಮತ್ತು ಮರಗಟ್ಟುವಿಕೆ

ಕಾರಣಗಳು

 ರಕ್ತಪೂರೈಕೆಯ ಕೊರತೆ:ರಕ್ತವು ನಮ್ಮ ಶರೀರದ ವಿವಿಧ ಅಂಗಾಂಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುತ್ತದೆ. ಅದು ಸೋಂಕುಗಳನ್ನು ನಿವಾರಿಸಲು ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಆ್ಯಂಟಿಬಾಡಿಗಳು ಅಥವಾ ಪ್ರತಿಕಾಯಗಳನ್ನೂ ಒದಗಿಸುತ್ತದೆ. ಸೂಕ್ತ ರಕ್ತಪೂರೈಕೆಯಿಲ್ಲದಿದ್ದರೆ ಜೀವಕೋಶಗಳು ಬದುಕುಳಿಯುವುದಿಲ್ಲ ಮತ್ತು ಅಂಗಾಂಶಗಳು ಕ್ಷಯಿಸತೊಡಗುತ್ತವೆ.

ಸೋಂಕು: ಬ್ಯಾಕ್ಟೀರಿಯಾ ಸೋಂಕು ಉಂಟಾದ ಸಂದರ್ಭದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಗ್ಯಾಂಗ್ರಿನ್‌ಗೆ ಕಾರಣವಾಗುತ್ತದೆ.

ಆಘಾತಕಾರಿ ಗಾಯ: ಗುಂಡೇಟಿನ ಗಾಯಗಳು ಅಥವಾ ಅಪಘಾತದ ಸಂದರ್ಭದಲ್ಲಿ ಉಂಟಾಗುವ ತೆರೆದ ಗಾಯಗಳು ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸಲು ಅವಕಾಶವನ್ನು ಕಲ್ಪಿಸುತ್ತವೆ. ಬ್ಯಾಕ್ಟೀರಿಯಾ ಅಂಗಾಂಶಗಳಿಗೆ ಸೋಂಕನ್ನುಂಟು ಮಾಡಿದರೆ ಮತ್ತು ಅದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅದು ಗ್ಯಾಂಗ್ರಿನ್‌ಗೆ ತಿರುಗುತ್ತದೆ.

► ಗ್ಯಾಂಗ್ರಿನ್ ವಿಧಗಳು

ಗ್ಯಾಂಗ್ರಿನ್‌ನ ಸ್ವರೂಪ ಮತ್ತು ಅದು ಉಂಟಾಗಿರುವ ಜಾಗವನ್ನು ಅವಲಂಬಿಸಿ ಡ್ರೈ ಗ್ಯಾಂಗ್ರಿನ್,ವೆಟ್ ಗ್ಯಾಂಗ್ರಿನ್,ಗ್ಯಾಸ್ ಗ್ಯಾಂಗ್ರಿನ್, ಇಂಟರ್ನಲ್ ಗ್ಯಾಂಗ್ರಿನ್,ಫೋರ್ನಿಯರ್ಸ್ ಗ್ಯಾಂಗ್ರಿನ್ ಮತ್ತು ಮೆಲೆನಿಸ್ ಗ್ಯಾಂಗ್ರಿನ್ ಎಂದು ವರ್ಗೀಕರಿಸಲಾಗಿದೆ. ಇವುಗಳ ಪೈಕಿ ಹೆಚ್ಚಿನ ಗ್ಯಾಂಗ್ರಿನ್‌ಗಳು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗುತ್ತವೆ.

► ಅಪಾಯದ ಅಂಶಗಳು

ಮಧುಮೇಹ,ರಕ್ತನಾಳಗಳ ಕಾಯಿಲೆ,ತೀವ್ರ ಗಾಯ ಅಥವಾ ಶಸ್ತ್ರಚಿಕಿತ್ಸೆ,ಧೂಮ್ರಪಾನ,ಬೊಜ್ಜು,ರೋಗ ನಿರೋಧಕ ಶಕ್ತಿಯ ಕುಗ್ಗುವಿಕೆ, ಕೆಲವು ಔಷಧಿಗಳ ಸೇವನೆ ಇವು ಗ್ಯಾಂಗ್ರಿನ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಕೋವಿಡ್-19 ಸಂಬಂಧಿತ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಅನುಭವಿಸಿದವರು ಕೈಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ಡ್ರೈ ಗ್ಯಾಂಗ್ರಿನ್‌ಗೆ ತುತ್ತಾಗಿರುವ ಕೆಲವು ಪ್ರಕರಣಗಳು ವರದಿಯಾಗಿದ್ದು, ಕೋವಿಡ್-19 ಮತ್ತು ಗ್ಯಾಂಗ್ರಿನ್ ನಡುವೆ ಸಂಬಂಧವನ್ನು ದೃಢೀಕರಿಸಲು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುವ ಅಗತ್ಯವಿದೆ.

►ತೊಂದರೆಗಳು

 ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಗ್ಯಾಂಗ್ರಿನ್ ಗಂಭೀರ ತೊಂದರೆಗಳಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾಗಳು ತ್ವರಿತವಾಗಿ ಇತರ ಅಂಗಾಂಶಗಳು ಮತ್ತು ಅಂಗಾಂಗಗಳಿಗೆ ಹರಡುತ್ತವೆ. ಜೀವವನ್ನು ಉಳಿಸಲು ದೇಹದ ಭಾಗವೊಂದನ್ನು ಕತ್ತರಿಸಿ ತೆಗೆಯಬೇಕಾಗಬಹುದು.

ಸೋಂಕಿತ ಅಂಗಾಂಶವನ್ನು ತೆಗೆದುಹಾಕಿದಾಗ ಕಲೆಗಳು ಉಳಿದುಕೊಳ್ಳಬಹುದು ಅಥವಾ ಪುನರ್‌ರಚನೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

► ತಡೆಯುವುದು ಹೇಗೆ?

ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಗ್ಯಾಂಗ್ರಿನ್‌ಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಮಧುಮೇಹಿಗಳು ಯಾವುದೇ ಗಾಯ,ಹುಣ್ಣು ಅಥವಾ ಸೋಂಕಿನ ಲಕ್ಷಣಗಳಿವೆಯೇ ಎನ್ನುವುದನ್ನು ತಿಳಿದುಕೊಳ್ಳಲು ಪ್ರತಿ ದಿನ ತಮ್ಮ ಕೈಕಾಲುಗಳನ್ನು ಪರೀಕ್ಷಿಸಬೇಕು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ವೈದ್ಯರ ಬಳಿ ತಮ್ಮ ಕೈಕಾಲುಗಳ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಮುಖ್ಯವಾಗಿದೆ.

ಅತಿಯಾದ ದೇಹತೂಕವು ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲ,ಅಪಧಮನಿಗಳ ಮೇಲೆ ಒತ್ತಡವನ್ನು ಹೇರಿ ರಕ್ತಸಂಚಾರಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಗಾಯಗಳು ಮಾಯುವುದು ವಿಳಂಬವಾಗುತ್ತದೆ. ಹೀಗಾಗಿ ಶರೀರದ ತೂಕವನ್ನು ಆರೋಗ್ಯಕರವಾಗಿ ಕಾಯ್ದುಕೊಳ್ಳುವುದು ಅಗತ್ಯವಾಗುತ್ತದೆ.

ದೀರ್ಘಕಾಲಿಕ ತಂಬಾಕು ಬಳಕೆಯು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ,ಹೀಗಾಗಿ ತಂಬಾಕು ಬಳಕೆಯಿಂದ ದೂರವಿರಬೇಕು.

ತೆರೆದ ಗಾಯಗಳಾಗಿದ್ದರೆ ಸೋಂಕಿನಿಂದ ರಕ್ಷಿಸಲು ಅವುಗಳನ್ನು ಮೃದುವಾದ ಸಾಬೂನಿನಿಂದ ತೊಳೆಯುತ್ತಿರಬೇಕು ಮತ್ತು ಅವುಗಳನ್ನು ಸ್ವಚ್ಛವಾಗಿ,ಒಣಗಿರುವಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News