ನುಗ್ಗೆ ಸೊಪ್ಪು ಮಧುಮೇಹವನ್ನು ನಿಯಂತ್ರಿಸುತ್ತದೆ ಎನ್ನುವುದು ನಿಮಗೆ ಗೊತ್ತೇ?

Update: 2021-03-04 19:14 GMT

ಆರೋಗ್ಯಕರ ಆಹಾರ,ಉತ್ತಮ ಜೀವನಶೈಲಿ ಮತ್ತು ಔಷಧಿಗಳು ರಕ್ತದಲ್ಲಿಯ ಸಕ್ಕರೆ ಮಟ್ಟಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಮಧುಮೇಹಿಗಳು ತಮ್ಮ ಸಕ್ಕರೆಯ ಮಟ್ಟದ ಮೇಲೆ ನಿರಂತರವಾಗಿ ನಿಗಾಯಿರಿಸುವ ಮೂಲಕ ಈ ರೋಗದೊಂದಿಗೆ ಗುರುತಿಸಿಕೊಂಡಿರುವ ಅಪಾಯಗಳನ್ನು ತಡೆಯಬಹುದು. ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಹಲವಾರು ಆಹಾರಗಳು ಮತ್ತು ಪಾನೀಯಗಳು ನೆರವಾಗುತ್ತವೆ. ಆಹಾರ ಮತ್ತು ಪಾನೀಯಗಳ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂತಹ ಆಹಾರಗಳಲ್ಲಿ ನುಗ್ಗೆಕಾಯಿ ಮತ್ತು ಅದರ ಮರದ ಎಲೆಗಳು ಸೇರಿವೆ.

ನುಗ್ಗೆ ಸೊಪ್ಪು ತನ್ನ ಔಷಧೀಯ ಗುಣಗಳಿಂದಾಗಿ ಶತಮಾನಗಳಿಂದಲೂ ಭಾರತೀಯ ಅಡಿಗೆಗಳಲ್ಲಿ ಬಳಕೆಯಾಗುತ್ತಿದೆ. ಅದು ಶಿಲೀಂಧ್ರ ನಿರೋಧಕ,ಖಿನ್ನತೆ ನಿರೋಧಕ,ವೈರಸ್ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದೆ.

ಅಗತ್ಯ ಖನಿಜಗಳನ್ನು ಸಮೃದ್ಧವಾಗಿ ಒಳಗೊಂಡಿರುವ ನುಗ್ಗೆ ಸೊಪ್ಪು ಕ್ಯಾಲ್ಸಿಯಮ್‌ನ ಹೈನೇತರ ಮೂಲವಾಗಿದೆ. ಈ ಸೊಪ್ಪು ಪೊಟ್ಯಾಷಿಯಂ,ಸತುವು,ಮ್ಯಾಗ್ನೇಷಿಯಂ,ಕಬ್ಬಿಣ,ತಾಮ್ರ,ರಂಜಕದಂತಹ ಇತರ ಪೋಷಕಾಂಶಗಳನ್ನೂ ನಮ್ಮ ಶರೀರಕ್ಕೆ ಒದಗಿಸುತ್ತದೆ.

ನುಗ್ಗೆ ಸೊಪ್ಪಿನಲ್ಲಿರುವ ಕ್ವರ್ಸೆಟಿನ್ ಉತ್ಕರ್ಷಣ ನಿರೋಧಕವಾಗಿದ್ದು ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ ಮತ್ತು ಇನ್ನೊಂದು ಉತ್ಕರ್ಷಣ ನಿರೋಧಕ ಕ್ಲೋರೊಜೆನಿಕ್ ಆ್ಯಸಿಡ್ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅದು ಶರೀರವು ಸಕ್ಕರೆಯನ್ನು ಉತ್ತಮವಾಗಿ ಸಂಸ್ಕರಿಸಲು ನೆರವಾಗುತ್ತದೆ ಮತ್ತು ಇನ್ಸುಲಿನ್ ಮೇಲೂ ಪರಿಣಾಮವನ್ನು ಬೀರುತ್ತದೆ.

 ನುಗ್ಗೆ ಸೊಪ್ಪಿನಲ್ಲಿರುವ ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ವಿವಿಧ ರೋಗಕಾರಕಕಗಳ ವೃದ್ಧಿಯನ್ನು ತಡೆಯುವ ಮೂಲಕ ಮಲಬದ್ಧತೆ,ಜಠರದುರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್‌ನಂತಹ ಜೀರ್ಣ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತವೆ.

ನುಗ್ಗೆ ಸೊಪ್ಪನ್ನು ಅಡಿಗೆಯಲ್ಲಿ ಬಳಸುವುದಲ್ಲದೆ ಹಸಿಯಾಗಿ,ಹುಡಿ ಅಥವಾ ರಸದ ರೂಪದಲ್ಲಿಯೂ ಸೇವಿಸಬಹುದು. ಬೆಚ್ಚಗಿನ ನೀರಿಗೆ ಕೆಲವು ನುಗ್ಗೆ ಎಲೆಗಳನ್ನು ಸೇರಿಸಿ ಕುದಿಸಿದ ಬಳಿಕ ರುಚಿಗೆ ಸ್ವಲ್ಪ ಲಿಂಬೆರಸ ಮತ್ತು ಜೇನನ್ನು ಸೇರಿಸಿಕೊಂಡು ಸೇವಿಸಬಹುದು.

ನಿಯಮಿತವಾಗಿ ಸೇವಿಸಲು ಒಂದು ಟೀ ಚಮಚ ಅಥವಾ ಎರಡು ಗ್ರಾಮ್‌ಗಳಷ್ಟು ನುಗ್ಗೆ ಸೊಪ್ಪು ಸೂಕ್ತ ಪ್ರಮಾಣವಾಗಿದೆ. ಮಧುಮೇಹಿಗಳು ತಮ್ಮ ಸ್ಥಿತಿಗ ಅನುಗುಣವಾಗಿ ಸೇವಿಸಬೇಕಾದ ನುಗ್ಗೆ ಸೊಪ್ಪಿನ ಪ್ರಮಾಣವನ್ನು ತಮ್ಮ ವೈದ್ಯರಿಂದ ತಿಳಿದುಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News