ಏನಿದು ರುಮ್ಯಾಟಿಕ್ ಹಾರ್ಟ್ ಡಿಸೀಸ್?

Update: 2021-03-06 04:12 GMT

ಸ್ಟ್ರೆಪ್ಟೊಕೋಕಲ್ ಬ್ಯಾಕ್ಟೀರಿಯಾಗಳಿಂದ ಗಂಟಲಿನಲ್ಲಿ ಸೋಂಕಿನೊಂದಿಗೆ ಆರಂಭವಾಗುವ ರೋಗ ಪ್ರಕ್ರಿಯೆಯಿಂದ ರಕ್ತವು ಹಿಮ್ಮುಖವಾಗಿ ಹರಿಯುವುದನ್ನು ತಡೆಯುವ ಹೃದಯದ ಕವಾಟಗಳಿಗೆ ಹಾನಿಯುಂಟಾದಾಗ ಆ ಸ್ಥಿತಿಯನ್ನು ರುಮ್ಯಾಟಿಕ್ ಹಾರ್ಟ್ ಡಿಸೀಸ್ (ಆರ್‌ಎಚ್‌ಡಿ) ಎಂದು ಕರೆಯಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಸ್ವಜ್ವರ ಹೃದ್ರೋಗ ಎಂಬ ಹೆಸರಿದೆ. ಗಂಟಲಿನ ಸೋಂಕಿಗೆ ಚಿಕಿತ್ಸೆ ಪಡೆಯದಿದ್ದರೆ ಅದು ಕೈಕಾಲುಗಳ ಸಂದುಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಇದು ರುಮ್ಯಾಟಿಕ್ ಫೀವರ್ (ಸಂಧಿವಾತ ಸಂಬಂಧಿತ ಜ್ವರ)ಗೆ ಕಾರಣವಾಗುತ್ತದೆ. ಪದೇ ಪದೇ ಇಂತಹ ಜ್ವರವು ಕಾಣಿಸಿಕೊಳ್ಳುವುದು ಮುಂದೆ ಆರ್‌ಎಚ್‌ಡಿಗೆ ಕಾರಣವಾಗಬಹುದು. ರುಮ್ಯಾಟಿಕ್ ಫೀವರ್ ಉರಿಯೂತ ರೋಗವಾಗಿದ್ದು ಶರೀರದಲ್ಲಿಯ ಸಂಯೋಜಕ ಅಂಗಾಂಶಗಳ,ವಿಶೇಷವಾಗಿ ಹೃದಯ,ಸಂದುಗಳು, ಮಿದುಳು ಅಥವಾ ಚರ್ಮದ ಸಂಯೋಜಕ ಅಂಗಾಂಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ರುಮ್ಯಾಟಿಕ್ ಫೀವರ್ ಹೃದಯಕ್ಕೆ ಶಾಶ್ವತ ಹಾನಿಯನ್ನುಂಟು ಮಾಡಿದರೆ ಇದನ್ನು ಆರ್‌ಎಚ್‌ಡಿ ಎನ್ನಲಾಗುತ್ತದೆ. ಎಲ್ಲ ವಯೋಮಾನದವರು ತೀವ್ರ ರುಮ್ಯಾಟಿಕ್ ಫೀವರ್‌ಗೆ ತುತ್ತಾಗುತ್ತಾರಾದರೂ ಸಾಮಾನ್ಯಾಗಿ 5ರಿಂದ 15 ವರ್ಷದ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು

ಜ್ವರ,ಊತ,ಸಂದುಗಳಲ್ಲಿ ನಿರ್ದಿಷ್ಟವಾಗಿ ಮಂಡಿ,ಕಣಕಾಲು,ಮೊಣಕೈ ಅಥವಾ ಮಣಿಗಂಟುಗಳಲ್ಲಿ ಊತ,ಮೃದುತ್ವ,ಕೆಂಪಗಾಗುವಿಕೆ ಮತ್ತು ನೋವು,ಬಾತುಕೊಂಡ ಸಂದುಗಳಲ್ಲಿ ಗಂಟುಗಳು ಗೋಚರ,ತೋಳುಗಳಲ್ಲಿ ಮತ್ತು ಕಾಲುಗಳಲ್ಲಿ ಅಥವಾ ಮುಖದ ಸ್ನಾಯುಗಳಲ್ಲಿ ಅನಿಯಂತ್ರಿತ ಚಲನವಲನಗಳು,ನಿಶ್ಶಕ್ತಿ ಮತ್ತು ಉಸಿರಾಟದ ತೊಂದರೆ

ರೋಗನಿರ್ಣಯ ಹೇಗೆ?

ಎದೆಯ ಎಕ್ಸ್-ರೇ ಮತ್ತು ಎಲೆಕ್ಟ್ರೋಕಾರ್ಡಿಯೊಗ್ರಾಂ ಅಥವಾ ಇಸಿಜಿ ಇವು ಹೃದಯಕ್ಕೆ ಹಾನಿಯಾಗಿದೆಯೇ ಎನ್ನುವುದನ್ನು ನಿರ್ಧರಿಸಲು ಸಾಮಾನ್ಯವಾಗಿ ನಡೆಸಲಾಗುವ ಎರಡು ಪರೀಕ್ಷೆಗಳಾಗಿವೆ.

ಚಿಕಿತ್ಸೆ ಏನು?

ರೋಗಿಯ ಒಟ್ಟಾರೆ ಆರೋಗ್ಯ,ವೈದ್ಯಕೀಯ ಇತಿಹಾಸ ಮತ್ತು ರೋಗದ ವ್ಯಾಪ್ತಿಯನ್ನು ಆಧರಿಸಿ ವೈದ್ಯರು ಕೈಗೊಳ್ಳಬೇಕಾದ ನಿರ್ದಿಷ್ಟ ಚಿಕಿತ್ಸೆಯ ಬಗ್ಗೆ ನಿರ್ಧರಿಸುತ್ತಾರೆ. ರುಮ್ಯಾಟಿಕ್ ಫೀವರ್ ಹೃದ್ರೋಗದ ಕಾರಣವಾಗಿರುವುದರಿಂದ ಈ ಜ್ವರ ಬಾರದಂತೆ ತಡೆಗಟ್ಟುವುದು ಅತ್ಯುತ್ತಮ ಚಿಕಿತ್ಸೆಯಾಗಿದೆ. ಸಾಮಾನ್ಯವಾಗಿ ಪೆನ್ಸಿಲಿನ್ ಮತ್ತು ಇತರ ಆ್ಯಂಟಿಬಯಾಟಿಕ್‌ಗಳು ಸ್ಟ್ರೆಪ್ಟೊಕೋಕಲ್ ಬ್ಯಾಕ್ಟೀರಿಯಾಗಳಿಂದ ಗಂಟಲಿನಲ್ಲಿ ಉಂಟಾದ ಸೋಂಕನ್ನು ಗುಣಪಡಿಸುತ್ತವೆ. ಈ ಮೊದಲು ರುಮ್ಯಾಟಿಕ್ ಫೀವರ್‌ನಿಂದ ಬಳಲಿದ್ದ ರೋಗಿಗಳಿಗೆ ಭವಿಷ್ಯದಲ್ಲಿ ಈ ಜ್ವರದ ದಾಳಿಯನ್ನು ತಡೆಯಲು ಮತ್ತು ಹೃದಯಕ್ಕೆ ಹಾನಿಯುಂಟಾಗುವ ಅಪಾಯವನ್ನು ತಗ್ಗಿಸಲು ಪ್ರತಿದಿನ ಅಥವಾ ವಾರಕ್ಕೊಮ್ಮೆ ನಿರಂತರವಾಗಿ ಆ್ಯಂಟಿಬಯಾಟಿಕ್‌ಗಳ ಚಿಕಿತ್ಸೆಯನ್ನು ನೀಡಲಾಗುತ್ತದೆ ಮತ್ತು ಈ ಚಿಕಿತ್ಸೆಯು ರೋಗಿಯ ಜೀವಮಾನಪರ್ಯಂತ ಮುಂದುವರಿಯಬಹುದು. ಶಸ್ತ್ರಚಿತ್ಸೆಯ ಮೂಲಕ ಹಾನಿಗೀಡಾದ ಹೃದಯದ ಕವಾಟದ ಬದಲಿಗೆ ಲೋಹ ಅಥವಾ ಪ್ಲಾಸ್ಟಿಕ್ ಕವಾಟವನ್ನು ಅಳವಡಿಸುವ ಬಗ್ಗೆ ವೈದ್ಯರು ರೋಗಿಯ ಸ್ಥಿತಿಯನ್ನು ಆಧರಿಸಿ ನಿರ್ಧರಿಸುತ್ತಾರೆ. ಇಂತಹ ಶಸ್ತ್ರಚಿಕಿತ್ಸೆಯ ಬಳಿಕ ಹೆಚ್ಚಿನ ರೋಗಿಗಳು ಗಣನೀಯವಾಗಿ ಚೇತರಿಸಿಕೊಳ್ಳುತ್ತಾರೆ.

ತಡೆಯುವುದು ಹೇಗೆ?

ರುಮ್ಯಾಟಿಕ್ ಫೀವರ್ ಬಾರದಂತೆ ತಡೆಯುವುದು ಆರ್‌ಎಚ್‌ಡಿಯ ಅಪಾಯವನ್ನು ನಿವಾರಿಸಲು ಅತ್ಯುತ್ತಮ ಮುನ್ನೆಚ್ಚರಿಕೆ ಕ್ರಮವಾಗಿದೆ. ಇದರ ಜೊತೆಗೆ ಗಂಟಲಿನ ಸೋಂಕಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ ಕ್ರಮವಾಗಿದೆ. ರುಮ್ಯಾಟಿಕ್ ಫೀವರ್ ಉಂಟಾದರೆ ಭವಿಷ್ಯದಲ್ಲಿ ಮತ್ತೆ ಜ್ವರವುಂಟಾಗದಂತೆ ನಿರಂತರ ಆ್ಯಂಟಿ ಬಯಾಟಿಕ್ ಚಿಕಿತ್ಸೆ ಅಗತ್ಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News