ಬೆಲ್ಸ್ ಪಾಲ್ಸಿ:ಕಾರಣಗಳು ಮತ್ತು ಲಕ್ಷಣಗಳು, ಏನಿದು ಬೆಲ್ಸ್ ಪಾಲ್ಸಿ?

Update: 2021-03-06 09:57 GMT

ಇದು ಮುಖದ ಒಂದು ಪಾರ್ಶ್ವದ ಸ್ನಾಯುಗಳ ಬಲಹೀನತೆ ಅಥವಾ ಪಾರ್ಶ್ವವಾಯು ಆಗಿದೆ. ಇದನ್ನು ಮುಖದ ಲಕ್ವಾ ಎಂದೂ ಕರೆಯಲಾಗುತ್ತದೆ. ಈ ರೋಗವುಂಟಾದಾಗ ಮುಖವು ಒಂದು ಪಾರ್ಶ್ವದಲ್ಲಿ ಜೋಲು ಬೀಳುತ್ತದೆ ಮತ್ತು ಪೀಡಿತ ಭಾಗದಲ್ಲಿಯ ಕಣ್ಣನ್ನು ಮುಚ್ಚಲು ಸಾಧ್ಯವಾಗುವುದಿಲ್ಲ. ಮುಖದ ಆ ಪಾರ್ಶ್ವದ ಸ್ನಾಯುಗಳನ್ನು ನಿಯಂತ್ರಿಸುವ ನರದಲ್ಲಿಯ ಸಮಸ್ಯೆ ಈ ಸ್ಥಿತಿಯನ್ನುಂಟು ಮಾಡುತ್ತದೆ.

ಕಾರಣಗಳು

ಬೆಲ್ಸ್ ಪಾಲ್ಸಿಗೆ ನಿಖರವಾದ ಕಾರಣಗಳು ಇನ್ನೂ ಗೊತ್ತಾಗಿಲ್ಲ,ಆದರೆ ಮುಖದ ನರದ ವೈರಾಣು ಸೋಂಕಿನಿಂದ ಈ ರೋಗವುಂಟಾಗುತ್ತದೆ ಎಂದು ನಂಬಲಾಗಿದೆ. ಈ ನರವು ಮುಖದಲ್ಲಿ ಮೂಳೆಯ ಕಾಲುವೆಯ ಮೂಲಕ ಹಾದು ಹೋಗುತ್ತದೆ. ಸೋಂಕು ನರವು ಬಾತುಕೊಳ್ಳುವಂತೆ ಮತ್ತು ಅದು ಪಕ್ಕದ ಮೂಳೆಗೆ ಒತ್ತಿಕೊಳ್ಳುವಂತೆ ಮಾಡುತ್ತದೆ. ಇದು ಮುಖ ನರಗಳಿಗೆ ಸಂಕೇತಗಳ ಪ್ರಸರಣದಲ್ಲಿ ವೈಫಲ್ಯಕ್ಕೆ ಕಾರಣವಾಗುತ್ತದೆ ಮತ್ತು ಇದು ಬೆಲ್ಸ್ ಪಾಲ್ಸಿ ಅಥವಾ ಮುಖದ ಪಾರ್ಶ್ವವಾಯುವನ್ನುಂಟು ಮಾಡುತ್ತದೆ ಎಂದು ಭಾವಿಸಲಾಗಿದೆ.

ಲಕ್ಷಣಗಳು

 ಸಾಮಾನ್ಯವಾಗಿ ಯಾವುದಾದರೂ ಒಂದು ಕಿವಿಯ ಹಿಂಭಾಗದಲ್ಲಿ ನೋವಿನಿಂದ ಇದು ಆರಂಭಗೊಳ್ಳುತ್ತದೆ ಮತ್ತು ನಂತರದಲ್ಲಿ ಅದೇ ಭಾಗದಲ್ಲಿಯ ಮುಖದ ನರಗಳು ಬಲಹೀನತೆಗೆ ಅಥವಾ ಲಕ್ವಾಕ್ಕೆ ಗುರಿಯಾಗುತ್ತವೆ. ಪಾರ್ಶ್ವವಾಯು ಸಾಮಾನ್ಯವಾಗಿ ಮುಖದ ಕೆಳಭಾಗದಲ್ಲಿ ಆರಂಭಗೊಳ್ಳುತ್ತದೆ. ರುಚಿಯು ಕುಂಠಿತಗೊಳ್ಳುವುದು,ಶ್ರವಣದಲ್ಲಿ ಬದಲಾವಣೆ,ಕಣ್ಣುಗಳಲ್ಲಿ ನೀರು ಮತ್ತು ಶಿಳ್ಳೆ ಹೊಡೆಯಲು ಅಥವಾ ಬಾಯಿಯಲ್ಲಿ ಆಹಾರವನ್ನು ಹಿಡಿದಿಡಲು ಸಾಧ್ಯವಾಗದಿರುವುದು ಇತ್ಯಾದಿಗಳು ಇದರ ಲಕ್ಷಣಗಳಾಗಿವೆ. ಇದರ ಸ್ವರೂಪ ಸೌಮ್ಯದಿಂದ ಪೂರ್ಣ ಪಾರ್ಶ್ವವಾಯುವಿನವರೆಗೆ ಇರುತ್ತದೆ. ರೋಗದ ತೀವ್ರತೆಯು ಲಕ್ಷಣಗಳು ವೃದ್ಧಿಗೊಳ್ಳುವ ವೇಗಕ್ಕೆ ಅನುಗುಣವಾಗಿರುತ್ತದೆ. ಲಕ್ಷಣಗಳು ಕೆಲವೇ ಗಂಟೆಗಳಲ್ಲಿ ತೀವ್ರಗೊಳ್ಳಬಹುದು ಅಥವಾ ಒಂದೆರಡು ದಿನಗಳನ್ನು ತೆಗೆದುಕೊಳ್ಳಬಹುದು.

ರೋಗನಿರ್ಧಾರ

ವೈದ್ಯರು ರೋಗಿಯ ಲಕ್ಷಣಗಳನ್ನು ಪರೀಕ್ಷಿಸಿ ತಪಾಸಣೆಗಳನ್ನು ನಡೆಸುತ್ತಾರೆ. ಬೆಲ್ಸ್ ಪಾಲ್ಸಿಯಲ್ಲದೆ ಇತರ ಯಾವುದೇ ಕಾರಣಗಳಿಂದ ಮುಖದಲ್ಲಿಯ ನರಗಳು ಬಲಹೀನಗೊಂಡಿವೆಯೇ ಎನ್ನುವುದನ್ನು ಪರೀಕ್ಷೆಗಳ ಮೂಲಕ ತಿಳಿದುಕೊಳ್ಳುತ್ತಾರೆ. ಒಳಗಿವಿಯಲ್ಲಿ ಟ್ಯೂಮರ್ ಬೆಳೆದಿದೆಯೇ ಎನ್ನುವುದನ್ನು ತಿಳಿದುಕೊಳ್ಳಲೂ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಿವಿ ಅಥವಾ ಮಿದುಳಿನಲ್ಲಿ ಗಡ್ಡೆ ಬೆಳೆದಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ತಲೆಯ ಸಿಟಿ ಸ್ಕಾನ್ ಅನ್ನೂ ಕೈಗೊಳ್ಳಲಾಗುತ್ತದೆ. ಹಾನಿಯ ವ್ಯಾಪ್ತಿಯನ್ನು ತಿಳಿದುಕೊಳ್ಳಲು ನರದ ಎಲೆಕ್ಟ್ರಿಕಲ್ ಟೆಸ್ಟಿಂಗ್ ಅಗತ್ಯವಾಗಬಹುದು.

ಚಿಕಿತ್ಸೆ

 ಆರಂಭದ ಹಂತದಲ್ಲಿಯೇ ಬಾಯಿಯ ಮೂಲಕ ಸ್ಟಿರಾಯ್ಡಿಗಳನ್ನು ನೀಡುವುದರಿಂದ ತ್ವರಿತ ಚೇತರಿಕೆಯುಂಟಾಗುತ್ತದೆ. ಹೆಚ್ಚಿನ ಜನರು ಯಾವುದೇ ಚಿಕಿತ್ಸೆಯಿಲ್ಲದೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಪೀಡಿತ ಭಾಗದಲ್ಲಿಯ ಕಣ್ಣಿನಲ್ಲಿ ಧೂಳು ಸೇರದಂತೆ ಮತ್ತು ಅದು ಒಣಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಚೇತರಿಕೆ ತುಂಬ ನಿಧಾನವಾಗಿರುವ ಕೆಲವು ಪ್ರಕರಣಗಳಲ್ಲಿ ಮುಖವು ಹೆಚ್ಚು ಅಂದಗೆಡದಂತೆ ವಿವಿಧ ಪ್ಲಾಸ್ಟಿಕ್ ಸರ್ಜರಿಗಳನ್ನು ನಡೆಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News