ಸೆರೆಬ್ರಲ್ ಪಾಲ್ಸಿ:ಲಕ್ಷಣಗಳು ಮತ್ತು ಕಾರಣಗಳು

Update: 2021-03-07 13:22 GMT

ಸೆರೆಬ್ರಲ್ ಪಾಲ್ಸಿ ಶರೀರದ ಚಲನವಲನ ಮತ್ತು ಸ್ನಾಯುಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುವ ರೋಗಗಳ ಸಮೂಹವಾಗಿದೆ. ಇದು ಮುಖ್ಯವಾಗಿ ಮಿದುಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಹೆಚ್ಚಾಗಿ ಶಿಶುವಿನ ಜನನಕ್ಕೆ ಮೊದಲೇ ಈ ರೋಗವು ಕಾಣಿಸಿಕೊಂಡಿರುತ್ತದೆ. ಮಗುವಾಗಿದ್ದಾಗಲೇ ಸೆರೆಬ್ರಲ್ ಪಾಲ್ಸಿಯ ಲಕ್ಷಣಗಳು ಪ್ರಕಟವಾಗತೊಡಗುತ್ತವೆ. ಈ ರೋಗದಿಂದ ಪೀಡಿತ ವ್ಯಕ್ತಿಗಳಿಗೆ ಚಲನವಲನಕ್ಕೆ ಕಷ್ಟವಾಗುವ ಜೊತೆಗೆ ಆಹಾರವನ್ನು ನುಂಗುವುದೂ ಸಮಸ್ಯೆಯಾಗುತ್ತದೆ ಮತ್ತು ಸಾಮಾನ್ಯವಾಗಿ ಕಣ್ಣುಗಳ ಸ್ನಾಯುಗಳು ಸೆಳೆಯುತ್ತಿರುತ್ತವೆ,ಹೀಗಾಗಿ ಕಣ್ಣುಗಳು ಏಕಕಾಲದಲ್ಲಿ ಒಂದೇ ವಸ್ತುವಿನ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಸಾಧ್ಯವಾಗುವುದಿಲ್ಲ.

ಸೆರೆಬ್ರಲ್ ಪಾಲ್ಸಿ ರೋಗಿಗಳಲ್ಲಿ ಸ್ನಾಯುಗಳ ಪೆಡಸುತನದಿಂದಾಗಿ ಶರೀರದ ವಿವಿಧ ಸಂದುಗಳ ಚಲನೆಯು ಕಡಿಮೆಯಾಗಿರುತ್ತದೆ. ಮಿದುಳಿನ ಮೇಲೆ ಈ ರೋಗದ ಪರಿಣಾಮ ಮತ್ತು ಶರೀರದ ಕಾರ್ಯ ನಿರ್ವಹಣೆ ಪ್ರತಿ ರೋಗಿಗೂ ಭಿನ್ನವಾಗಿರುತ್ತದೆ. ಕೆಲವು ಪೀಡಿತ ವ್ಯಕ್ತಿಗಳು ನಡೆದಾಡಬಹುದು,ಇತರರಿಗೆ ನೆರವು ಬೇಕಾಗುತ್ತದೆ. ಕೆಲವರಲ್ಲಿ ಮಿದುಳು ಸಹಜವಾಗಿ ಬೆಳವಣಿಗೆಯಾಗಿದ್ದರೆ,ಇತರರಲ್ಲಿ ಬುದ್ಧಿಮಾಂದ್ಯತೆ ಕಾಣಿಸಿಕೊಳ್ಳಬಹುದು. ಸೆರೆಬ್ರಲ್ ಪಾಲ್ಸಿಯ ಕೆಲವು ಪ್ರಕರಣಗಳಲ್ಲಿ ಅಪಸ್ಮಾರ,ಅಂಧತ್ವ ಮತ್ತು ಕಿವುಡುತನವೂ ಉಂಟಾಗಬಹುದು.

ಸೆರೆಬ್ರಲ್ ಪಾಲ್ಸಿಯಲ್ಲಿ ಸ್ಪಾಸ್ಟಿಕ್,ಡೈಸ್ಕೈನೆಟಿಕ್,ಹಿಪ್ನಾಟಿಕ್,ಅಟಾಕ್ಸಿಕ್,ಮಿಕ್ಸಡ್ ಸೆರೆಬ್ರಲ್ ಪಾಲ್ಸಿ ಎಂಬ ಐದು ಪ್ರಮುಖ ವಿಧಗಳಿದ್ದು,ಇವು ಮಿದುಳಿನ ವಿವಿಧ ಭಾಗಗಳ ಮೇಲೆ ತಮ್ಮದೇ ಆದ ಪರಿಣಾಮವನ್ನುಂಟು ಮಾಡುತ್ತವೆ.

ಲಕ್ಷಣಗಳು

ಸೆರೆಬ್ರಲ್ ಪಾಲ್ಸಿಯ ಲಕ್ಷಣಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತವೆ. ಕೆಲವರಲ್ಲಿ ಕೆಲವೇ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಚಲನೆಯೇ ಸಾಧ್ಯವಿಲ್ಲದ ರೋಗಿಗಳೂ ಇದ್ದಾರೆ.

ಸೆಳವುಗಳು,ಆಹಾರ ಸೇವಿಸುವಾಗ ಕಷ್ಟ,ಅತಿಯಾಗಿ ಜೊಲ್ಲು ಸುರಿಸುವಿಕೆ,ನಡುಕ ಅಥವಾ ಅನಿಚ್ಛೆಯ ಚಲನವಲನಗಳು,ಶರೀರದಲ್ಲಿ ಪೆಡಸುತನ ಅಥವಾ ಜೋಲುವುದು,ಸಮತೋಲನ ಕಾಯ್ದುಕೊಳ್ಳಲು ಕಷ್ಟವಾಗುವುದು,ನಿಧಾನ ಚಲನವಲನಗಳು,ಕಲಿಕೆ ಮತ್ತು ಮಾತನಾಡುವಲ್ಲಿ ಸಮಸ್ಯೆ,ಸರಿಯಾಗಿ ನಡೆದಾಡಲು ಸಾಧ್ಯವಾಗದಿರುವುದು ಇತ್ಯಾದಿಗಳು ಸೆರೆಬ್ರಲ್ ಪಾಲ್ಸಿಯ ಲಕ್ಷಣಗಳಾಗಿವೆ.

ಕಾರಣಗಳು

ಹಲವಾರು ಕಾರಣಗಳು ಈ ಸ್ಥಿತಿಯನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಮಗುವಿನ ಜನನಕ್ಕೆ ಮುನ್ನ ಮಿದುಳಿನ ಅಭಿವೃದ್ಧಿಯಲ್ಲಿ ಅಸಮಂಜಸತೆ ಅಥವಾ ವ್ಯತ್ಯಯ ಈ ರೋಗಕ್ಕೆ ಪ್ರಮುಖ ಕಾರಣವಾಗಿದೆ. ಹಲವಾರು ಪ್ರಕರಣಗಳಲ್ಲಿ ರೋಗಕ್ಕೆ ಕಾರಣವೇ ಗೊತ್ತಾಗುವುದಿಲ್ಲ. ಆನುವಂಶಿಕತೆ,ಮಿದುಳಿನಲ್ಲಿ ರಕ್ತಸ್ರಾವ,ಭ್ರೂಣಕ್ಕೆ ಆಘಾತ,ತಾಯಿಯಿಂದ ಸೋಂಕು,ತಲೆಗೆ ಗಾಯ,ಆಮ್ಲಜನಕದ ಕೊರತೆ ಇವು ಸೆರೆಬ್ರಲ್ ಪಾಲ್ಸಿಯನ್ನುಂಟು ಮಾಡುವ ಇತರ ಪ್ರಮುಖ ಕಾರಣಗಳಾಗಿವೆ.

ರೋಗನಿರ್ಧಾರ

ಸೆರೆಬ್ರಲ್ ಪಾಲ್ಸಿಯ ಲಕ್ಷಣಗಳು ಕಾಲಕ್ರಮೇಣ ತೀವ್ರಗೊಳ್ಳುತ್ತವೆ,ಆದ್ದರಿಂದ ಮಗುವು ಜನಿಸಿದ ಕೆಲವು ತಿಂಗಳುಗಳ ನಂತರವೇ ಸೂಕ್ತ ರೋಗ ನಿರ್ಧಾರ ಸಾಧ್ಯವಾಗುತ್ತದೆ. ವೈದ್ಯರು ಹಲವಾರು ಪರೀಕ್ಷೆಗಳನ್ನು ನಡೆಸುವ ಮೂಲಕ ರೋಗಕ್ಕೆ ಕಾರಣಗಳನ್ನು ತಿಳಿದುಕೊಳ್ಳುತ್ತಾರೆ . ಎಂಆರ್ ಮತ್ತು ಕ್ರೇನಿಯಲ್ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನೂ ಸೂಚಿಸಬಹುದು. ರೋಗದ ಲಕ್ಷಣಗಳಲ್ಲಿ ಸೆಳವುಗಳೂ ಇದ್ದರೆ ಇಸಿಜಿಯು ಸ್ಥಿತಿಯನ್ನು ಅರಿತುಕೊಳ್ಳಲು ನೆರವಾಗುತ್ತದೆ

ಚಿಕಿತ್ಸೆ

ಸೆರೆಬ್ರಲ್ ಪಾಲ್ಸಿಯಿಂದ ಪೀಡಿತ ಮಕ್ಕಳು ಮತ್ತು ವಯಸ್ಕರಿಗೆ ವೈದ್ಯರ ನಿರಂತರ ನಿಗಾ ಅಗತ್ಯವಾಗುತ್ತದೆ. ರೋಗದ ಎಲ್ಲ ಲಕ್ಷಣಗಳಿಗೆ ಚಿಕಿತ್ಸೆ ಪಡೆಯಲು ಮಕ್ಕಳ ತಜ್ಞರು,ಮನಃಶಾಸ್ತ್ರಜ್ಞರು,ನರಶಾಸ್ತ್ರಜ್ಞರು ಮತ್ತು ಥೆರಪಿಸ್ಟ್ ನೆರವು ಅಗತ್ಯವಾಗಬಹುದು. ಔಷಧಿಗಳ ಸೇವನೆ ಮತ್ತು ಫಿಜಿಯೊ ಥೆರಪಿ ವೈದ್ಯರು ಸೂಚಿಸುವ ಸಾಮಾನ್ಯ ಕೋರ್ಸ್‌ಗಳಾಗಿವೆ. ಇಂತಹ ರೋಗಿಗಳಿಗೆ ಕೆಲವು ವಾಕ್ ಮತ್ತು ಭಾಷಾ ಚಿಕಿತ್ಸೆಗಳನ್ನು ನಡೆಸಲಾಗುತ್ತದೆ ಮತ್ತು ಇದು ಇತರರೊಂದಿಗೆ ಸಂವಹನದಲ್ಲಿಯ ತೊಂದರೆಗಳನ್ನು ತಕ್ಕಮಟ್ಟಿಗೆ ಕಡಿಮೆ ಮಾಡುತ್ತದೆ. ಶರೀರದಲ್ಲಿ ತೀರ ವಿರೂಪಗಳಿದ್ದರೆ ಮೂಳೆ ಶಸ್ತ್ರಚಿಕಿತ್ಸೆಗಳೂ ಅಗತ್ಯವಾಗುತ್ತವೆ. ಸೆರೆಬ್ರಲ್ ಪಾಲ್ಸಿ ಇಡಿ ಶರೀರವನ್ನು ಆವರಿಸಬಹುದು ಅಥವಾ ಶರೀರದ ಒಂದು ಪಾರ್ಶ್ವಕ್ಕೆ ಮಾತ್ರ ಸೀಮಿತವಾಗಿರಬಹುದು. ಮಿದುಳಿನ ಸ್ಥಿತಿಯಲ್ಲಿ ಸಮಯದೊಂದಿಗೆ ಯಾವುದೇ ಬದಲಾವಣೆಯಾಗುವುದಿಲ್ಲ ಮತ್ತು ಜೀವನವಿಡೀ ಯಥಾಸ್ಥಿತಿಯಲ್ಲಿಯೇ ಇರುತ್ತದೆ,ಹೀಗಾಗಿ ಹೆಚ್ಚಾಗಿ ಲಕ್ಷಣಗಳು ತೀವ್ರಗೊಳ್ಳುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News