ನಿಮ್ಮ ಶರೀರದಲ್ಲಿ ವಿಟಾಮಿನ್ ಕೊರತೆಯನ್ನು ಸೂಚಿಸುವ ಈ ಐದು ಲಕ್ಷಣಗಳು ನಿಮಗೆ ಗೊತ್ತೇ?

Update: 2021-03-14 11:22 GMT

ವಿಟಾಮಿನ್‌ಗಳು ಮತ್ತು ಖನಿಜಗಳು ನಮ್ಮ ಶರೀರದಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಶರೀರದ ಅಂಗಾಂಶಗಳ ಸಂಶ್ಲೇಷಣೆ, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಗೊಳಿಸುವಿಕೆ,ವಿಷವಸ್ತುಗಳನ್ನು ಹೊರಹಾಕುವಿಕೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳ ತಡೆಯುವಿಕೆಯಂತಹ ಕಾರ್ಯಗಳನ್ನು ಅವು ನಿರ್ವಹಿಸುತ್ತವೆ. ಎಲ್ಲ ಪೌಷ್ಟಿಕಾಂಶಗಳು ಶರೀರದಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾಗುವುದಿಲ್ಲ, ಆದ್ದರಿಂದ ಅವುಗಳನ್ನು ಆಹಾರದ ಮೂಲಕ ಪಡೆದುಕೊಳ್ಳುವುದು ಮುಖ್ಯವಾಗುತ್ತದೆ. ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಎಲ್ಲ ವಿಧಗಳ ಸಮಗ್ರ ಆಹಾರಗಳ ಸೇವನೆ ಅಗತ್ಯವಾಗಿದೆ. ಶರೀರದ ಪರಿಣಾಮಕಾರಿ ಕಾರ್ಯ ನಿರ್ವಹಣೆಗಾಗಿ ಮತ್ತು ಯಾವುದೇ ಕೊರತೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಸಮತೋಲಿತ ಪೌಷ್ಟಿಕ ಆಹಾರವನ್ನು ಸೇವಿಸಬೇಕಾಗುತ್ತದೆ. ಇಲ್ಲದಿದ್ದರೆ ಬಳಲಿಕೆ,ನಿಶ್ಶಕ್ತಿ ಇತ್ಯಾದಿಗಳು ನಮ್ಮನ್ನು ಕಾಡುತ್ತವೆ ಮತ್ತು ಕೊರತೆಗಳು ನಮ್ಮ ಕೂದಲು,ಚರ್ಮದ ಮೂಲಕವೂ ಪ್ರಕಟಗೊಳ್ಳುತ್ತವೆ. ಶರೀರದಲ್ಲಿ ವಿಟಾಮಿನ್‌ಗಳು ಮತ್ತು ಖನಿಜಗಳ ಕೊರತೆಯನ್ನು ಸೂಚಿಸುವ ಐದು ಪ್ರಮುಖ ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ....

 ► ತಲೆಹೊಟ್ಟು

ಸೆಬೊರೆಕ್ ಡರ್ಮಟೈಟಿಸ್ ಅಥವಾ ಅತಿ ಮೇದಸ್ರಾವ ಚರ್ಮರೋಗ ಮತ್ತು ತಲೆಹೊಟ್ಟು ಚರ್ಮದಲ್ಲಿಯ ತೈಲ ಉತ್ಪಾದನೆ ಜಾಗಗಳಲ್ಲಿ ಉಂಟಾಗುತ್ತವೆ, ಇವೆರಡೂ ಚರ್ಮ ಮತ್ತು ನೆತ್ತಿಯಲ್ಲಿ ತುರಿಕೆಯನ್ನುಂಟು ಮಾಡುವ ಜೊತೆಗೆ ಹಪ್ಪಳೆಗಳು ಉದುರಲು ಕಾರಣವಾಗುತ್ತವೆ. ತಲೆಹೊಟ್ಟು ನೆತ್ತಿಯಲ್ಲಿ ಉಂಟಾಗುತ್ತದೆ,ಆದರೆ ಸೆಬೊರೆಕ್ ಡರ್ಮಟೈಟಿಸ್ ಮುಖ,ಎದೆಯ ಮೇಲ್ಭಾಗ,ಕಂಕುಳುಗಳು ಮತ್ತು ತೊಡೆಸಂದು ಸೇರಿದಂತೆ ಇತರ ಭಾಗಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ವಿವಿಧ ಕಾರಣಗಳಿಂದ,ವಿಶೇಷವಾಗಿ ಪೌಷ್ಟಿಕಾಂಶ ಕೊರತೆಯ ಆಹಾರ ಸೇವನೆಯಿಂದ ಇವೆರಡೂ ಸಮಸ್ಯೆಗಳು ಉಂಟಾಗುತ್ತವೆ. ರಕ್ತದಲ್ಲಿ ಸತುವು,ವಿಟಾಮಿನ್ ಬಿ3,ಬಿ2 ಮತ್ತು ಬಿ6 ಕೊರತೆ ಇವೂ ಈ ಸಮಸ್ಯೆಗಳಿಗೆ ಕಾರಣವಾಗಬಹುದು.

►  ಬಿಳಿಯ ಅಥವಾ ಕೆಂಪು ಗುಳ್ಳೆಗಳು

 ಕೆರಾಟೊಸಿಸ್ ಪೈಲಾರಿಸ್ ಎಂಬ ಸ್ಥಿತಿಯು ಕೆನ್ನೆಗಳು,ತೋಳುಗಳು,ತೊಡೆಗಳು ಅಥವಾ ಪ್ರಷ್ಠಗಳಲ್ಲಿ ಬಿಳಿಯ ಅಥವಾ ಕೆಂಪು ಗುಳ್ಳೆಗಳುಂಟಾಗಲು ಕಾರಣವಾಗುತ್ತದೆ. ಈ ಸಣ್ಣಗುಳ್ಳೆಗಳು ಒಳಗಿನಿಂದ ಬೆಳೆದಿರುವ ಕೂದಲನ್ನೂ ಹೊಂದಿರಬಹುದು. ಈ ಸ್ಥಿತಿಯು ಹೆಚ್ಚಾಗಿ ಬಾಲ್ಯದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಮಗುವು ಬೆಳೆದಂತೆ ಮಾಯವಾಗುತ್ತದೆ. ಇದಕ್ಕೆ ಮುಖ್ಯ ಕಾರಣವಿನ್ನೂ ದೃಢಪಟ್ಟಿಲ್ಲವಾದರೂ ಕೂದಲ ಕೋಶಗಳಲ್ಲಿ ಅತಿಯಾಗಿ ಕೆರಾಟಿನ್ ಉತ್ಪಾದನೆಯಾದಾಗ ಈ ಬಿಳಿ ಮತ್ತು ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಆನುವಂಶಿಕತೆಯ ಕಾರಣದಿಂದಲೂ ಕೆರಾಟೊಸಿಸ್ ಪೈಲಾರಿಸ್ ಉಂಟಾಗುತ್ತದೆ. ವಿಟಾಮಿನ್ ಎ ಮತ್ತು ಸಿ ಕೊರತೆಯುಳ್ಳ ಆಹಾರಗಳನ್ನು ಸೇವಿಸುವವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ಕೂದಲುದುರುವಿಕೆ

 ಕೂದಲು ಉದುರುವಿಕೆಯು ವಿಟಾಮಿನ್ ಕೊರತೆಯ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ. ಹಲವರಿಗೆ 50 ವರ್ಷ ಪ್ರಾಯಕ್ಕಿಂತ ಮೊದಲೇ ಕೂದಲು ಉದುರಲು ಆರಂಭವಾಗುತ್ತದೆ. ಕೂದಲ ಕೋಶಗಳಲ್ಲಿರುವ ಡಿಎನ್‌ಎ ಸೇರಿದಂತೆ ಶರೀರದ ಡಿಎನ್‌ಎ ಸಂಶ್ಲೇಷಣೆಯಲ್ಲಿ ಕಬ್ಬಿಣವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದ್ದರಿಂದ ಕಬ್ಬಿಣದ ಕೊರತೆಯು ಕೂದಲಿನ ಬೆಳವಣಿಗೆಗೆ ತಡೆಯನ್ನುಂಟು ಮಾಡುತ್ತದೆ ಮತ್ತು ಉದುರುವಿಕೆಗೂ ಕಾರಣವಾಗುತ್ತದೆ. ಬಯೊಟಿನ್ ಎಂಬ ಇನ್ನೊಂದು ವಿಟಾಮಿನ್ ಬಿ ಕೊರತೆಯೂ ತಲೆಗೂದಲು ಉದುರಲು ಕಾರಣವಾಗಬಹುದು.

►  ಬಾಯಿಹುಣ್ಣುಗಳು

ಬಾಯಿಯ ಒಳಗೆ ಅಥವಾ ಸುತ್ತ ಉಂಟಾಗುವ ಹುಣ್ಣುಗಳಿಗೂ ವಿಟಾಮಿನ್ ಮತ್ತು ಖನಿಜಗಳ ಕೊರತೆಗೂ ನೇರವಾದ ಸಂಬಂಧವಿದೆ. ಕ್ಯಾಂಕರ್ ಸೋರ್ಸ್‌ ಎಂದು ಕರೆಯಲ್ಪಡುವ ಈ ಬಾಯಿಹುಣ್ಣುಗಳು ಹೆಚ್ಚಾಗಿ ಕಬ್ಬಿಣ ಮತ್ತು ಬಿ ವಿಟಾಮಿನ್‌ಗಳ ಕೊರತೆಯಿಂದ ಉಂಟಾಗುತ್ತವೆ. ಆ್ಯಂಗುಲರ್ ಚಿಲೈಟಿಸ್ ಎಂಬ ಸ್ಥಿತಿಯು ಬಾಯಿಯ ಮೂಲೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಅಥವಾ ಒಡೆದು ರಕ್ತ ಸೋರಿಕೆಗೆ ಕಾರಣವಾಗುತ್ತದೆ,ಅತಿಯಾದ ಜೊಲ್ಲು ಅಥವಾ ನಿರ್ಜಲೀಕರಣದಿಂದ ಈ ಸ್ಥಿತಿಯು ಉಂಟಾಗುತ್ತದೆ. ಆದರೆ ಕಬ್ಬಿಣ ಮತ್ತು ಬಿ ವಿಟಾಮನ್‌ಗಳನ್ನು ಸಾಕಷ್ಟು ಸೇವಿಸದಿರುವುದೂ ಇದಕ್ಕೆ ಕಾರಣವಾಗುತ್ತದೆ.

► ಕೂದಲು ಮತ್ತು ಉಗುರುಗಳಲ್ಲಿ ಬಿರುಕುಗಳು

ವಿಟಾಮಿನ್‌ಗಳ ಕೊರತೆಯು ಕೂದಲು ಮತ್ತು ಉಗುರುಗಳಲ್ಲಿ ಬಿರುಕುಗಳು ಉಂಟಾಗಲು ಕಾರಣವಾಗುತ್ತದೆ. ಮುಖ್ಯವಾಗಿ ಬಯೊಟಿನ್ ವಿಟಾಮಿನ್ ಕೊರತೆಯು ಈ ಸ್ಥಿತಿಯನ್ನುಂಟು ಮಾಡುತ್ತದೆ. ಬಿ7 ಎಂದೂ ಕರೆಯಲಾಗುವ ಈ ವಿಟಾಮಿನ್ ಆಹಾರವನ್ನು ವಿಭಜಿಸಿ ಶಕ್ತಿಯನ್ನಾಗಿ ಪರಿವರ್ತಿಸಲು ಶರೀರಕ್ಕೆ ನೆರವಾಗುತ್ತದೆ. ಬಯೊಟಿನ್ ಕೊರತೆಯುಂಟಾಗುವುದು ಅಪರೂಪ,ಆದರೆ ಕೊರತೆಯುಂಟಾದಾಗ ಕೂದಲುಗಳು ಮತ್ತು ಉಗುರುಗಳು ಬಿರುಕು ಬಿಡುವುದು ಮತ್ತು ತೆಳ್ಳಗಾಗುವುದು ಮುಖ್ಯ ಲಕ್ಷಣಗಳಾಗಿವೆ. ಸುದೀರ್ಘ ಬಳಲಿಕೆ,ಸ್ನಾಯು ನೋವು ಮತ್ತು ಸೆಳೆತ ಬಯೊಟಿನ್ ಕೊರತೆಯನ್ನು ಸೂಚಿಸುವ ಇತರ ಲಕ್ಷಣಗಳಾಗಿವೆ.

Writer - ನವ್ಯಾ ಕರಬಂಧ (onlymyhealth)

contributor

Editor - ನವ್ಯಾ ಕರಬಂಧ (onlymyhealth)

contributor

Similar News