ಚಂದ್ರಬಾಳೆಯ ಅದ್ಭುತ ಆರೋಗ್ಯಲಾಭಗಳು
ಹಳದಿ ಮತ್ತು ಹಸಿರು ಬಾಳೆಹಣ್ಣುಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಚಂದ್ರಬಾಳೆ ಎಂದು ಕರೆಯಲಾಗುವ ಕೆಂಪು ಬಣ್ಣದ ಬಾಳೆಹಣ್ಣುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಚಂದ್ರಬಾಳೆಯಲ್ಲಿ ಇತರ ಬಾಳೆಹಣ್ಣುಗಳಿಗಿಂತ ಹೆಚ್ಚಿನ ಬೀಟಾ-ಕ್ಯಾರೊಟಿನ್ ಮತ್ತು ವಿಟಾಮಿನ್ ಸಿ ಇರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಇದು ಇತರ ನೈಸರ್ಗಿಕ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವೂ ಆಗಿದೆ. ನಾರನ್ನು ಸಮೃದ್ಧವಾಗಿ ಹೊಂದಿರುವ ಇದು ನಮ್ಮ ದೈನಂದಿನ ಅಗತ್ಯದ ಸುಮಾರು ಶೇ.16ರಷ್ಟನ್ನು ಒದಗಿಸುತ್ತದೆ. ಚಂದ್ರಬಾಳೆಯ ಕೆಲವು ಅದ್ಭುತ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ......
ಮಿದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ
ಇತರ ಬಾಳೆಹಣ್ಣುಗಳಿಗೆ ಹೋಲಿಸಿದರೆ ಚಂದ್ರಬಾಳೆಯಲ್ಲಿ ಡೋಪಮೈನ್ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 54 ಎಂಸಿಜಿ/ಗ್ರಾಮ್‌ನಷ್ಟು ಇರುತ್ತದೆ. ಡೋಪಮೈನ್ ಪ್ರಮುಖ ನ್ಯೂರೊಟ್ರಾನ್ಸ್‌ಮಿಟರ್ ಅಥವಾ ನರಪ್ರೇಕ್ಷಕವಾಗಿದ್ದು,ಮೂಡ್ ಹೆಚ್ಚಿಸಲು ಮತ್ತು ಭಾವನಾತ್ಮಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದು ದೀರ್ಘಾವಧಿಯಲ್ಲಿ ಪಾರ್ಕಿನ್‌ಸನ್ಸ್ ಕಾಯಿಲೆಯಂತಹ ನರ ಅವನತಿಯ ರೋಗಗಳ ಅಪಾಯವನ್ನು ತಡೆಯಲು ನೆರವಾಗಬಲ್ಲದು.
* ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸುತ್ತದೆ
ಚಂದ್ರಬಾಳೆಯಲ್ಲಿ ಹೇರಳವಾಗಿರುವ ಫೈಟೊಸ್ಟಿರಾಲ್‌ಗಳು ನೈಸರ್ಗಿಕವಾಗಿ ಸೃಷ್ಟಿಯಾಗುವ ಸಸ್ಯಜನ್ಯ ಸ್ಟಿರಾಲ್‌ಗಳಾಗಿದ್ದು,ಕೊಲೆಸ್ಟ್ರಾಲ್‌ನ ಸ್ವರೂಪವನ್ನೇ ಹೋಲುತ್ತವೆ. ಇವು ಎಲ್‌ಡಿಎಲ್ ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್)ನ ಬದಲಾಗಿ ಕರುಳಿನಲ್ಲಿ ಹೀರಲ್ಪಡುತ್ತವೆ ಮತ್ತು ತನ್ಮೂಲಕ ಎಲ್‌ಡಿಎಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತವೆ. ಚಂದ್ರಬಾಳೆಯ ತಿರುಳು ಮತ್ತು ಸಿಪ್ಪೆ ಎರಡೂ ಸಮೃದ್ಧ ಫೈಟೊಸ್ಟಿರಾಲ್‌ಗಳನ್ನು ಹೊಂದಿವೆ.
* ಮೂತ್ರಪಿಂಡ ಕಲ್ಲುಗಳನ್ನು ತಡೆಯುತ್ತವೆ
ಚಂದ್ರಬಾಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಮೂತ್ರಪಿಂಡ ಕಲ್ಲುಗಳುಂಟಾಗುವ ಅಪಾಯವನ್ನು ತಡೆಯಲು ನೆರವಾಗುತ್ತದೆ. ನಿಯಮಿತವಾಗಿ ಈ ಹಣ್ಣನ್ನು ಸೇವಿಸುವುದು ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ.
* ತೂಕ ಇಳಿಸಲು ನೆರವಾಗುತ್ತದೆ
ಇತರ ಬಾಳೆಹಣ್ಣುಗಳಿಗೆ ಹೋಲಿಸಿದರೆ ಕೆಂಪು ಬಾಳೆಹಣ್ಣು ಅತಿ ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿರುವುದರಿಂದ ದೇಹ ತೂಕವನ್ನು ಇಳಿಸಲು ನೆರವಾಗುತ್ತದೆ.
* ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ
ಆ್ಯಂಥೊಸೈನಾನ್‌ಗಳು ಆಹಾರಗಳಿಗೆ ಅವುಗಳ ನೈಸರ್ಗಿಕ ಬಣ್ಣಗಳನ್ನು ನೀಡುವ ಫ್ಲಾವನಾಯ್ಡ್ಗಳಾಗಿವೆ. ಈ ಫ್ಲಾವನಾಯ್ಡ್ಗಳು ಹೃದಯ ರಕ್ತನಾಳಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುತ್ತವೆ. ಹಳದಿ ಮತ್ತು ಹಸಿರು ಬಾಳೆಹಣ್ಣುಗಳಿಗೆ ಹೋಲಿಸಿದರೆ ಚಂದ್ರಬಾಳೆಯಲ್ಲಿ ಆ್ಯಂಥೊಸೈನಾನ್‌ಗಳು ಅಧಿಕ ಪ್ರಮಾಣದಲ್ಲಿವೆ ಮತ್ತು ಇದೇ ಕಾರಣದಿಂದ ಈ ಹಣ್ಣಿನ ಸೇವನೆಯು ಶರೀರದಲ್ಲಿ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಚಂದ್ರಬಾಳೆಯಲ್ಲಿರುವ ವಿಟಾಮಿನ್ ಬಿ6 ಶರೀರದಲ್ಲಿ ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
* ಹೃದ್ರೋಗಗಳ ಅಪಾಯವನ್ನು ತಗ್ಗಿಸುತ್ತದೆ
ಈಗಾಗಲೇ ಹೇಳಿರುವಂತೆ ಚಂದ್ರಬಾಳೆಯ ಸೇವನೆಯು ರಕ್ತಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸುತ್ತದೆ. ಈ ಅಂಶಗಳು ಹೃದ್ರೋಗಗಳ ಅಪಾಯಗಳನ್ನು ತಗ್ಗಿಸಲು ನೆರವಾಗುತ್ತವೆ.
* ದೃಷ್ಟಿಯನ್ನು ಹೆಚ್ಚಿಸುತ್ತದೆ
ಪ್ರೊವಿಟಾಮಿನ್ ಎ ಕ್ಯಾರೊಟಿನಾಯ್ಡಾಗಳು ಚಂದ್ರಬಾಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು,ಸಸ್ಯಜನ್ಯ ಉತ್ಕರ್ಷಣ ನಿರೋಧಕಗಳಾಗಿರುವ ಇವು ಶರೀರದಲ್ಲಿ ವಿಟಾಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತವೆ. ಈ ಅಗತ್ಯ ವಿಟಾಮಿನ್ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ ಮತ್ತು ಅಕ್ಷಿಪಟಲ ಅವನತಿ ಹಾಗೂ ಕಣ್ಣಿನ ಪೊರೆಯಂತಹ ಅಪಾಯಗಳನ್ನು ತಡೆಯುತ್ತದೆ.
* ಗ್ಲುಕೋಸ್ ಮಟ್ಟವನ್ನು ತಗ್ಗಿಸುತ್ತದೆ
ಚಂದ್ರಬಾಳೆಯು ಒಂದು ವಿಧದ ಕರಗಬಲ್ಲ ನಾರು ಆಗಿರುವ ನಿರೋಧಕ ಪಿಷ್ಟದ ಉತ್ತಮ ಮೂಲವಾಗಿದೆ. ಇದು ಆಹಾರ ಸೇವನೆಯ ಬಳಿಕ ಶರೀರದಲ್ಲಿ ಗ್ಲುಕೋಸ್ ಮಟ್ಟವನ್ನು ತಗ್ಗಿಸಲು ಮತ್ತು ಇನ್ಸುಲಿನ್ ಸಂವೇದನಾಶೀಲತೆಯನ್ನು ಹೆಚ್ಚಿಸಲು ನೆರವಾಗಬಲ್ಲದು. ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಫ್ಲಾವನಾಯ್ಡಾಗಳಂತಹ ಉತ್ಕರ್ಷಣ ನಿರೋಧಕಗಳು ಮತ್ತು ಪೊಟ್ಯಾಷಿಯಮ್‌ನಂತಹ ಖನಿಜಗಳು ಮಧುಮೇಹಿಗಳಲ್ಲಿ ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪೂರಕವಾಗಿವೆ.
* ಶಕ್ತಿಯ ದಿಢೀರ್ ಮೂಲ
ನೀರಿನಂಶದೊಂದಿಗೆ ಸುಮಾರು 90 ಕ್ಯಾಲೊರಿಗಳು, ಕಾರ್ಬೊಹೈಡ್ರೇಟ್‌ಗಳು ಮತ್ತು ವಿಟಾಮಿನ್ ಬಿ6,ಮ್ಯಾಗ್ನೀಷಿಯಂ,ಪೊಟ್ಯಾಷಿಯಂ ಮತ್ತು ಸಿ ವಿಟಾಮಿನ್‌ನಂತಹ ಪೌಷ್ಟಿಕಾಂಶಗಳನ್ನು ಒಳಗೊಂಡಿರುವುದರಿಂದ ಮತ್ತು ಅದರಲ್ಲಿರುವ ನಾರು ರಕ್ತದಲ್ಲಿಯ ಸಕ್ಕರೆಯ ಮಟ್ಟದ ಸ್ಥಿರತೆಯನ್ನು ಕಾಯ್ದುಕೊಳ್ಳುವುದರಿಂದ ಚಂದ್ರಬಾಳೆಯ ಸೇವನೆಯು ಶರೀರಕ್ಕೆ ತಕ್ಷಣ ಶಕ್ತಿಯನ್ನು ನೀಡುತ್ತದೆ. ಅದು ಬಳಲಿಕೆಯನ್ನು ತಡೆಯಲೂ ನೆರವಾಗುತ್ತದೆ,ಹೀಗಾಗಿ ಬ್ರೇಕ್‌ಫಾಸ್ಟ್‌ನಲ್ಲಿ ಸೇರಿಸಿಕೊಳ್ಳಲು ಉತ್ತಮ ಆಹಾರವಾಗಿದೆ.
* ಎದೆ ಉರಿಯನ್ನು ಶಮನಿಸುತ್ತದೆ
ನಿಯಮಿತವಾಗಿ ಚಂದ್ರಬಾಳೆಯ ಸೇವನೆಯು ಎದೆಉರಿಯನ್ನು ಶಮನಿಸುತ್ತದೆ. ಅದು ಆ್ಯಂಟಾಸಿಡ್ ಅಥವಾ ಆಮ್ಲ ನಿರೋಧಕ ಗುಣವನ್ನು ಹೊಂದಿರುವುದರಿಂದ ಎದೆಉರಿಯಿಂದ ತ್ವರಿತ ಮುಕ್ತಿಯನ್ನು ನೀಡುತ್ತದೆ ಮತ್ತು ಇತರ ಆಮ್ಲೀಯತೆ ಸಮಸ್ಯಗಳಿಂದ ಪಾರು ಮಾಡುತ್ತದೆ. ಚಂದ್ರಬಾಳೆಯ ತಿರುಳು ಜಠರಕ್ಕೆ ಹಿತಕರವಾದ ಅನುಭವವನ್ನು ನೀಡುತ್ತದೆ.