ದೀರ್ಘ ಸಮಯ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತೀರಾ?ನೀವು ಈ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಬಹುದು

Update: 2021-03-21 19:07 GMT

ಮಕ್ಕಳಾಗಲಿ ಅಥವಾ ವಯಸ್ಕರಾಗಿರಲಿ,ಇಂದು ಪ್ರತಿಯೊಬ್ಬರೂ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಪರದೆಗಳಿಗೆ ಅಂಟಿಕೊಂಡಿರುತ್ತಾರೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ ಮಾಹಿತಿಗಳ ಮಹಾಪೂರದಿಂದಾಗಿ ಇದು ಒಂದು ವ್ಯಸನವಾಗಿಬಿಟ್ಟಿದೆ.

ಇಂದು ಪ್ರತಿಯೊಂದೂ ಡಿಜಿಟಲ್ ಆಗಿದೆ ಮತ್ತು ವರ್ಕ್ ಫ್ರಮ್ ಹೋಮ್ ಪದ್ಧತಿಗೆ ಎಂದೂ ಇಲ್ಲದ ಆದ್ಯತೆ ಲಭಿಸಿದೆ. ಹೀಗಿರುವಾಗ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಾಗ ನಾವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇಂತಹ ಸಾಧನಗಳ ಮುಂದೆ ತುಂಬಾ ಸಮಯ ಕಳೆಯುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಲ್ಲದು. ಅದು ಕಣ್ಣುಗಳಿಗೆ ಆಯಾಸವುಂಟು ಮಾಡುವುದು ಮಾತ್ರವಲ್ಲ,ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಅನ್ನು ತುಂಬಾ ಸಮಯ ಬಳಸುವುದರಿಂದ ಕೆಲವು ರೋಗಗಳಿಗೂ ನಾವು ತುತ್ತಾಗಬಹುದು. ಇಂತಹ ಆರು ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿಗಳಿಲ್ಲಿವೆ.......

  *ಕಳಪೆ ಭಂಗಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ಮುಂದೆ ಗಂಟೆಗಟ್ಟಲೆ ಕಳೆಯುವುದು ಕುತ್ತಿಗೆ,ಬೆನ್ನು ಮತ್ತು ತಲೆನೋವನ್ನುಂಟು ಮಾಡುತ್ತದೆ. ದಣಿವಿನಿಂತಹ ಖಾಯಂ ಸಮಸ್ಯೆಗಳೂ ಉಂಟಾಗಬಹುದು. ನಿರ್ದಿಷ್ಟ ಸ್ಥಿತಿಯಲ್ಲಿ ತುಂಬ ಸಮಯ ಕಳೆದಾಗ ಸ್ನಾಯುಗಳಿಗೆ ವಿಶ್ರಾಂತಿ ಪಡೆಯುವುದು ಸಾಧ್ಯವಾಗುವುದಿಲ್ಲ ಮತ್ತು ಶರೀರದ ಕಳಪೆ ಭಂಗಿಗೆ ಕಾರಣವಾಗುತ್ತದೆ. ಇದು ಅಭಿಧಮನಿಗಳು ಮತ್ತು ಸ್ನಾಯುಗಳಲ್ಲಿ ರಕ್ತಸಂಚಾರವನ್ನು ತಗ್ಗಿಸುತ್ತದೆ,ತನ್ಮೂಲಕ ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ.

* ಕಣ್ಣುಗಳಿಗೆ ಆಯಾಸ

ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ಪರದೆಯನ್ನು ನಿರಂತರವಾಗಿ ನೋಡುವುದು ಕಣ್ಣುಗಳ ಮೇಲೆ ಭಾರಿ ಒತ್ತಡವನ್ನುಂಟು ಮಾಡುತ್ತದೆ. ಪರದೆಯನ್ನು ದೂರವಿರಿಸಿದರೂ ಅದು ಕಣ್ಣುಗಳ ಮೇಲಿನ ಒತ್ತಡವನ್ನು ಹೆಚ್ಚಿಸಬಲ್ಲದು. ಇದು ಮತ್ತೆ ಆಯಾಸವನ್ನುಂಟು ಮಾಡುತ್ತದೆ ಮತ್ತು ಕಣ್ಣುಗಳಿಗೆ ಹಾನಿಯುಂಟಾಗುವ ಸಾಧ್ಯತೆಯಿರುತ್ತದೆ. ಕಣ್ಣುಗಳ ಮೇಲೆ ನಿರಂತರ ಒತ್ತಡವೂ ದೃಷ್ಟಿಯನ್ನು ಮಸುಕಾಗಿಸುವ ಅಪಾಯವೂ ಇದೆ.

* ನಿದ್ರೆಯ ಅಭಾವ

 ಲ್ಯಾಪ್‌ಟಾಪ್ ಪರದೆಯ ಮುಂದೆ ನಾವು ಕಳೆಯುವ ಸಮಯವು ನಮ್ಮ ನಿದ್ರೆಯ ಸಮಯವನ್ನೂ ಕಡಿಮೆ ಮಾಡುತ್ತದೆ. ಲ್ಯಾಪ್‌ಟಾಪ್‌ನ ಅತಿಯಾದ ಬಳಕೆ ಮತ್ತು ಪರದೆಯಿಂದ ಹೊರಸೂಸುವ ನೀಲಿ ಬೆಳಕು ಮೆಲಾಟೋನಿನ್ ಎಂಬ ನಿದ್ರೆಯ ಹಾರ್ಮೋನ್‌ನ ಸಮಸ್ಯೆಗೆ ಕಾರಣವಾಗುತ್ತವೆ. ಇದರಿಂದಾಗಿ ರಾತ್ರಿ ನಿದ್ರಿಸುವುದು ಕಷ್ಟವಾಗುತ್ತದೆ ಮತ್ತು ಕ್ರಮೇಣ ನಿದ್ರಾಹೀನತೆಯ ರೋಗಕ್ಕೆ ತುತ್ತಾಗಬೇಕಾಗುತ್ತದೆ.

* ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು

ಲ್ಯಾಪ್‌ಟಾಪ್‌ನಲ್ಲಿ ಗಂಟೆಗಟ್ಟಲೆ ಸಮಯವನ್ನು ಕಳೆಯುವುದು ಟೈಪ್-2 ಮಧುಮೇಹ,ಹೃದ್ರೋಗ ಅಷ್ಟೇ ಏಕೆ...ಕ್ಯಾನ್ಸರ್‌ನಂತಹ ಕಾಯಿಲೆಗಳಿಗೂ ಕಾರಣವಾಗಬಲ್ಲದು. ಡಿಜಿಟಲ್ ಸಾಧನಗಳೊಂದಿಗೆ ಅತಿಯಾಗಿ ಸಮಯವನ್ನು ಕಳೆಯುವುದು ನಮ್ಮ ಶರೀರದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಪ್ರವೃತ್ತಿಯು ನಮ್ಮ ರಕ್ತದಲ್ಲಿ ಕೊಬ್ಬು ಸಂಗ್ರಹಗೊಳ್ಳುವಂತೆ ಮಾಡುತ್ತದೆ ಮತ್ತು ಇದು ಆಘಾತಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.

* ಜ್ಞಾಪಕ ಶಕ್ತಿ ನಷ್ಟ

ಇದು ನಿಜಕ್ಕೂ ಆತಂಕಕಾರಿಯಾಗಿದೆ ಮತ್ತು ಲ್ಯಾಪ್‌ಟಾಪ್‌ನ ಮುಂದೆ ಗಂಟೆಗಟ್ಟಲೆ ಕಳೆಯುವುದು ಏಕೆ ಅಪಾಯಕಾರಿ ಎನ್ನಲು ಪ್ರಮುಖ ಕಾರಣಗಳಲ್ಲೊಂದಾಗಿದೆ. ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನೊಂದಿಗೆ ಅತಿಯಾದ ಸಮಯವನ್ನು ವ್ಯಯಿಸುವುದು ನಮ್ಮ ಮಿದುಳಿನ ಆಲೋಚನಾ ಪ್ರಕ್ರಿಯೆಯ ಸ್ವರೂಪವನ್ನು ಬದಲಿಸಬಲ್ಲದು. ಅದು ಅರಿವಿನ ಪ್ರಕ್ರಿಯೆಯನ್ನು ಕುಗ್ಗಿಸುತ್ತದೆ ಮತ್ತು ಮಿದುಳಿನ ಸಂಕೇತಗಳನ್ನು ದುರ್ಬಲಗೊಳಿಸುತ್ತದೆ. ಇದು ಜ್ಞಾಪಕ ಶಕ್ತಿ ನಷ್ಟ,ಏಕಾಗ್ರತೆ ಕುಂಠಿತ,ಮಾಹಿತಿಗಳ ನಿಧಾನ ಸಂಸ್ಕರಣೆ ಮತ್ತು ದುರ್ಬಲ ಪ್ರತಿವರ್ತನೆಗಳಿಗೆ ಕಾರಣವಾಗುತ್ತದೆ.

* ಸಾಮಾಜಿಕ ಕೌಶಲ್ಯಗಳ ಕುಂಠಿತ

ಡಿಜಿಟಲ್ ಸಾಧನಗಳಲ್ಲಿ ಆಟವಾಡುವುದರಲ್ಲಿ ಅಥವಾ ಸಿರೀಸ್‌ಗಳನು ವೀಕ್ಷಿಸುವುದರಲ್ಲಿ ತುಂಬಾ ಸಮಯ ಕಳೆಯುವವರು ಕಡಿಮೆ ಸಾಮಾಜಿಕ ಕೌಶಲ್ಯಗಳನ್ನು ಹೊಂದಿರುವುದನ್ನು ನೀವು ಗಮನಿಸಿರಬಹುದು. ಅವರಿಗೆ ಸಾಮಾಜಿಕ ಗುಂಪುಗಳಲ್ಲಿ ಬೆರೆತಿರುವುದು ಹಿತಕರವೆನ್ನಿಸುವುದಿಲ್ಲ ಮತ್ತು ಜನರಿಂದ ದೂರವಾಗಿ ತಮ್ಮದೇ ಆದ ಲೋಕದಲ್ಲಿ ಮುಳುಗಲು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಲ್ಯಾಪ್‌ಟಾಪ್‌ನ ಮುಂದೆ ಹೆಚ್ಚು ಸಮಯ ಕಳೆಯುವುದರಿಂದ ನಮ್ಮ ಮಿದುಳು ಒಂದು ರೀತಿಯ ಬಂಧನಕ್ಕೆ ಒಳಗಾಗುತ್ತದೆ ಮತ್ತು ಅದು ನಮ್ಮ ಚಿಂತನಾ ಶಕ್ತಿಯನ್ನು ಹಾಗೂ ಕೆಲವು ವಿಷಯಗಳಲ್ಲಿ ನಮ್ಮ ಕೌಶಲ್ಯಗಳನ್ನು ಕುಗ್ಗಿಸುತ್ತದೆ. ಇಂದು ಹೆಚ್ಚಿನ ಮಕ್ಕಳು ತಮ ಮನೆಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಸೀಮಿತವಾಗಿರುವುದರಿಂದ ಈ ಸಮಸ್ಯೆಯು ಹೆಚ್ಚುತ್ತಿದೆ.

ಲ್ಯಾಪ್‌ಟಾಪ್ ಮುಂದೆ ತುಂಬಾ ಸಮಯ ಕಳೆದರೆ ಏನಾಗುತ್ತದೆ?

ಡಾ.ಸುಮಿತ್ ನಿಗಂ ಅವರು ಉದಾಹರಣೆಯೊಂದಿಗೆ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ತಮಗೆ ಆರಾಮವೆನ್ನಿಸುವ ಭಂಗಿಯಲ್ಲಿ ಲ್ಯಾಪ್‌ಟಾಪ್‌ಗಳ ಮುಂದೆ ವಿಪರೀತ ಸಮಯವನ್ನು ಕಳೆಯುವುದು ಇಂದು ವಯಸ್ಕರಲ್ಲಿ ಮತ್ತು ಹದಿಕರೆಯದವರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದು ಲ್ಯಾಪ್‌ಟಾಪ್‌ಗಳಿಂದ ಹಾನಿಗಳುಂಟಾಗುವ ಅಪಾಯವನ್ನೂ ಹೆಚ್ಚಿಸಿದೆ. ಪ್ರಾರಂಭದಲ್ಲಿ ಲ್ಯಾಪ್‌ಟಾಪ್‌ಗಳು ಮತ್ತು ಮಾನಿಟರ್‌ಗಳು ಅಲ್ಪಾವಧಿಯ ಕೆಲಸಗಳಿಗೆಂದು ಅಸ್ತಿತ್ವದಲ್ಲಿ ಬಂದಿದ್ದವು,ಆದರೆ ವಿಪರೀತ ವೀಕ್ಷಣೆಯಂತಹ ಚಟುವಟಿಕೆಗಳು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಕಣ್ಣುಗಳ ಸ್ನಾಯುಗಳು, ಭುಜಗಳು,ತೋಳುಗಳು ಮತ್ತು ಕೀಲುಗಳಲ್ಲಿ ಗಣನೀಯ ನೋವು ಕಾಣಿಸಿಕೊಳ್ಳಬಹುದು. ಕಣ್ಣುಗಳ ದೃಷ್ಟಿ ಮತ್ತು ನೆನಪಿನ ಕೋಶಗಳು ದುರ್ಬಲಗೊಳ್ಳಬಹುದು. ಇತರರಿಗೆ ಹೋಲಿಸಿದರೆ ಲ್ಯಾಪ್‌ಟಾಪ್‌ಗಳಲ್ಲಿ ಕೆಲಸ ಮಾಡುವವರು ಮಧುಮೇಹ ಮತ್ತು ಹೃದಯಾಘಾತಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

 

ಕೃಪೆ:Onlymyhealth

*ಪುರು ಬನ್ಸಾಲ್

ಪೂರಕ ಮಾಹಿತಿ: ಡಾ.ಸುಮಿತ್ ನಿಗಂ

Writer - ಪುರು ಬನ್ಸಾಲ್

contributor

Editor - ಪುರು ಬನ್ಸಾಲ್

contributor

Similar News