ನಿರಂತರ ತಲೆನೋವಿನಿಂದ ನರಳುತ್ತಿದ್ದೀರಾ? ವಿಧಗಳು,ಲಕ್ಷಣಗಳು ಮತ್ತು ಕಾರಣಗಳು ನಿಮಗೆ ಗೊತ್ತಿರಲಿ

Update: 2021-03-26 16:48 GMT

ತಲೆನೋವು ಎಂಬ ಶಬ್ದವನ್ನು ನಮ್ಮ ಜೀವನದಲ್ಲಿ ಸಾಕಷ್ಟು ಸಲ ಕೇಳಿರುತ್ತೇವೆ. ತಲೆನೋವು ಅತ್ಯಂತ ಸಾಮಾನ್ಯವಾಗಿದ್ದು,ಹೆಚ್ಚಿನ ಸಂದರ್ಭಗಳಲ್ಲಿ ನರಗಳ ಸಮಸ್ಯೆಗಳಿಂದ ಉಂಟಾಗುತ್ತದೆ. ಆದರೆ ತಲೆನೋವು ರೋಗ ಮಾತ್ರವಲ್ಲ,ಅದು ಇನ್ನಷ್ಟು ದೊಡ್ಡ ರೋಗ ಅಥವಾ ಸಮಸ್ಯೆಯ ಸಂಕೇತವೂ ಆಗಬಹುದು. ಹೀಗಾಗಿ ಎಲ್ಲ ಸಮಯದಲ್ಲಿಯೂ ಎಚ್ಚರಿಕೆಯಿಂದಿರುವುದು ಅಗತ್ಯವಾಗುತ್ತದೆ. ತಲೆನೋವುಗಳನ್ನು ಪ್ರೈಮರಿ ಅಥವಾ ಪ್ರಾಥಮಿಕ ಮತ್ತು ಸೆಕೆಂಡರಿ ಅಥವಾ ದ್ವಿತೀಯ ಹೀಗೆ ಎರಡು ವಿಧಗಳಲ್ಲಿ ವರ್ಗೀಕರಿಸಲಾಗಿದೆ.

ಪ್ರಾಥಮಿಕ ತಲೆನೋವುಗಳು ಹೆಸರೇ ಸೂಚಿಸುವಂತೆ ಅತ್ಯಂತ ಸಾಮಾನ್ಯವಾಗಿದ್ದು,ಕಡಿಮೆ ತೀವ್ರತೆಯನ್ನು ಹೊಂದಿರುತ್ತವೆ. ಈ ವಿಧದ ತಲೆನೋವು ಸ್ವತಃ ಮುಖ್ಯ ಸಮಸ್ಯೆಯಾಗಿದ್ದು,ಇತರ ಯಾವುದೇ ರೋಗದ ಲಕ್ಷಣವಲ್ಲ. ಪ್ರಾಥಮಿಕ ತಲೆನೋವುಗಳು ತಲೆಯಲ್ಲಿನ ನೋವು ಸಂವೇದಕ ಅಂಶಗಳಿಂದ ಉಂಟಾಗುತ್ತವೆ. ಈ ಸಮಸ್ಯೆ ಆನುವಂಶಿಕವೂ ಆಗಿರಬಹುದು. ಕ್ಲಸ್ಟರ್ ತಲೆನೋವು,ಮೈಗ್ರೇನ್,ಟೆನ್ಶನ್ ಅಥವಾ ಒತ್ತಡದ ತಲೆನೋವು ಮತ್ತು ಟ್ರೈಜಿಮಿನಲ್ ಆಟೋಮ್ಯಾಟಿಕ್ ಸಿಫಾಲಜಿಯಾ (ಟಿಎಸಿ) ಅಥವಾ ಕಪಾಲ ನರಶೂಲೆ ಇವು ಪ್ರಾಥಮಿಕ ತಲೆನೋವುಗಳ ಉದಾಹರಣೆಗಳಾಗಿವೆ.

 ಪ್ರಾಥಮಿಕ ತಲೆನೋವುಗಳು ಇತರ ರೋಗಗಳ ಲಕ್ಷಣಗಳಾಗಿರದೆ ಅವೇ ಸ್ವತಃ ಸಮಸ್ಯೆಯಾಗಿರುವುದರಿಂದ ಅವುಗಳಿಗೆ ಕಾರಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಮದ್ಯಪಾನ,ವಿಶೇಷವಾಗಿ ರೆಡ್ ವೈನ್,ಸಂಸ್ಕರಿತ ಮಾಂಸದಂತಹ ಆಹಾರಗಳ ಸೇವನೆ,ನಿದ್ರೆಯ ಕೊರತೆ ಅಥವಾ ನಿದ್ರಾಚಕ್ರದಲ್ಲಿ ಬದಲಾವಣೆ,ಕಳಪೆ ಭಂಗಿ ಮತ್ತು ಊಟವನ್ನು ತಪ್ಪಿಸಿಕೊಳ್ಳುವುದು ಇವು ಪ್ರಾಥಮಿಕ ತಲೆನೋವುಗಳನ್ನುಂಟು ಮಾಡುವ ಕಾರಣಗಳಾಗಿವೆ.

ಸೆಕೆಂಡರಿ ತಲೆನೋವುಗಳು ಶರೀರಕ್ಕೆ ಹಾನಿಕರವಾಗಬಹುದಾದ ಸೋಂಕು ರೋಗದಿಂದಾಗಿ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ. ಇವು ತಲೆ ಅಥವಾ ಮುಖದ ಭಾಗದಲ್ಲಿ ಅಹಿತಕರ ಅನುಭವವನ್ನುಂಟು ಮಾಡುತ್ತವೆ. ಶರೀರದಲ್ಲಿಯ ಅನಾರೋಗ್ಯದ ತೀವ್ರತೆಯನ್ನು ಅವಲಂಬಿಸಿ ಈ ತಲೆನೋವುಗಳ ಆವರ್ತನಗಳು ಭಿನ್ನವಾಗಬಹುದು. ಇಂತಹ ತಲೆನೋವುಗಳನ್ನು ಲಘುವಾಗಿ ಪರಿಗಣಿಸಬಾರದು ಮತ್ತು ರೋಗಿಯು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಮಿದುಳು ಸೋಂಕು,ಮಿದುಳಿನ ಟ್ಯೂಮರ್,ಹೈಡ್ರೋಸಿಫಾಲಸ್ ಅಥವಾ ಜಲಮಸ್ತಿಷ್ಕ ರೋಗ,ರಕ್ತನಾಳಗಳಲ್ಲಿ ಸಮಸ್ಯೆಗಳು,ಅಧಿಕ ರಕ್ತದೊತ್ತಡ ಇವು ಸೆಕೆಂಡರಿ ತಲೆನೋವುಗಳಿಗೆ ಕಾರಣಗಳಾಗಿವೆ.

 50 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರಲ್ಲಿ ಹೊಸ ಅಥವಾ ವಿಭಿನ್ನವಾದ ತಲೆನೋವು,ಶರೀರದ ಭಂಗಿಯನ್ನು ಬದಲಿಸಿದಾಗ ತಲೆನೋವು ಇನ್ನಷ್ಟು ತೀವ್ರಗೊಳ್ಳುವುದು,ಕೆಮ್ಮುವಾಗ ವಿಪರೀತ ತಲೆನೋವು,ಆಹಾರವನ್ನು ಅಗಿಯುವಾಗ ಉಂಟಾಗುವ ತಲೆನೋವು ಮತ್ತು ತಲೆನೋವಿನಿಂದಾಗಿ ನಿದ್ರಾಭಂಗ ಇವು ಸೆಕೆಂಡರಿ ತಲೆನೋವುಗಳ ಲಕ್ಷಣಗಳಾಗಿವೆ. ಈ ಎಲ್ಲ ತಲೆನೋವುಗಳು ರೋಗಿಯು ಬೇರೆ ಯಾವುದೋ ಕಾಯಿಲೆಯಿಂದ ಬಳಲುತ್ತಿರುವುದನ್ನು ಸೂಚಿಸುತ್ತಿರಬಹುದು,ಹೀಗಾಗಿ ಈ ಲಕ್ಷಣಗಳಿದ್ದಾಗ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ. ಆದರೆ ಇತರ ಹಲವಾರು ಲಕ್ಷಣಗಳೂ ಇದ್ದು,ಅವು ರೋಗಿಯು ಹೆಚ್ಚಿನ ಅಪಾಯದಲ್ಲಿರುವುದನ್ನು ಬೆಟ್ಟು ಮಾಡುತ್ತಿರಬಹುದು. ಹೀಗಾಗಿ ಇಂತಹ ತಲೆನೋವುಗಳನ್ನು ಕಡೆಗಣಿಸದೆ ಸಾಧ್ಯವಿದ್ದಷ್ಟು ಶೀಘ್ರ ವೈದ್ಯರನ್ನು ಭೇಟಿಯಾಗುವುದು ಬುದ್ಧಿವಂತಿಕೆಯಾಗುತ್ತದೆ.

ಮಾರಣಾಂತಿಕವಾಗಬಹುದಾದ ಗಂಭೀರ ಲಕ್ಷಣಗಳು

► ಸೀನುವಾಗ ಅಥವಾ ಕೆಮ್ಮುವಾಗ ಸೆಳವು

► ತಲೆಗೆ ಪೆಟ್ಟಿನೊಂದಿಗೆ ಉಂಟಾಗುವ ತಲೆನೋವು

► ವಾಕರಿಕೆರಹಿತ ವಾಂತಿ

► ಕೈಕಾಲುಗಳನ್ನು ಚಲಿಸಲು ಸಾಧ್ಯವಾಗದಿರುವುದು

► ತೊದಲು ಮಾತು

► ಮಾನಸಿಕ ಗೊಂದಲ

► ದೃಷ್ಟಿ ನಷ್ಟ ಅಥವಾ ದೃಷ್ಟಿಗೆ ತೊಂದರೆ

► ತೀವ್ರ ಜ್ವರ ಮತ್ತು ಕುತ್ತಿಗೆ ಸೆಟೆದುಕೊಳ್ಳುವಿಕೆ

 ಈ ಎಲ್ಲ ಲಕ್ಷಣಗಳು ತಲೆನೋವು ಎಷ್ಟು ತೀವ್ರವಾಗಬಹುದು ಎನ್ನುವುದನ್ನು ಸೂಚಿಸುತ್ತವೆ. ಸೆಕೆಂಡರಿ ತಲೆನೋವುಗಳು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯಕ್ಕೆ ತುತ್ತಾಗಿಸುತ್ತವೆ,ಆದರೆ ಪ್ರಾಥಮಿಕ ತಲೆನೋವುಗಳನ್ನು ಕಡೆಗಣಿಸಬಹುದು ಎನ್ನುವುದು ಇದರ ಅರ್ಥವಲ್ಲ.

 ಡಾ.ಆಝಾದ್ ಇರಾನಿ ಅವರು ಹೇಳುವಂತೆ ಪ್ರಾಥಮಿಕ ತಲೆನೋವುಗಳು ಜನರಲ್ಲಿ ಸಾಮಾನ್ಯವಾಗಿವೆ. ಕೆಲವರಲ್ಲಿ ಪದೇ ಪದೇ ಈ ತಲೆನೋವುಗಳು ಕಾಣಿಸಿಕೊಂಡರೆ ಇನ್ನು ಕೆಲವರಲ್ಲಿ ಜ್ವರ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದಾಗ ಉಂಟಾಗುತ್ತವೆ. ಸೆಕೆಂಡರಿ ತಲೆನೋವುಗಳು ತೀವ್ರ ಸ್ವರೂಪದ್ದಾಗಿರುತ್ತವೆ,ಆದರೆ ಇಂತಹ ತಲೆನೋವುಗಳು ಕಾಣಿಸಿಕೊಳ್ಳುವ ಸಂದರ್ಭಗಳೂ ಕಡಿಮೆಯಾಗಿರುತ್ತವೆ. ಆದರೆ ತಲೆನೋವುಗಳನ್ನು ಎಂದೂ ಲಘುವಾಗಿ ಪರಿಗಣಿಸಬಾರದು.

 ನಿದ್ರೆಯ ಕೊರತೆ,ಒತ್ತಡ ಮತ್ತು ಮೈಗ್ರೇನ್ ಇವು ಪ್ರಾಥಮಿಕ ತಲೆನೋವನ್ನುಂಟು ಮಾಡುತ್ತವೆ. ಶೇ.10ರಷ್ಟು ಪುರುಷರು ಮತ್ತು ಶೇ.20ರಷ್ಟು ಮಹಿಳೆಯರು ಮೈಗ್ರೇನ್‌ನಿಂದ ಬಳಲುತ್ತಿರುತ್ತಾರೆ ಮತ್ತು ಇದು ಗಣನೀಯ ಪ್ರಮಾಣವಾಗಿದೆ ಎನ್ನುತ್ತಾರೆ ಡಾ.ಇರಾನಿ.

► ಪೂರಕ ಮಾಹಿತಿ

ಡಾ.ಆಝಾದ್ ಇರಾನಿ,ಜಸ್ಲೋಕ್ ಆಸ್ಪತ್ರೆ,ಮುಂಬೈ

ಕೃಪೆ:Onlymyhealth

Writer - ಪುರು ಬನ್ಸಾಲ್

contributor

Editor - ಪುರು ಬನ್ಸಾಲ್

contributor

Similar News