ಕೊರೋನ-ನ್ಯುಮೋನಿಯಾ ಗೊಂದಲಗಳ ನಡುವೆ...

Update: 2021-04-05 19:30 GMT

ನೀ ಮಾಯೆಯೊಳಗೊ, ನಿನ್ನೊಳಗೆ ಮಾಯೆಯೋ ಎಂದು ದಾಸರು ಹಾಡಿದ್ದಾರೆ. ಅದೇ ರೀತಿ ‘ನ್ಯುಮೋನಿಯಾ ಕೊರೋನದ ಒಳಗೋ ಅಥವಾ ಕೊರೋನ ನ್ಯುಮೋನಿಯಾದ ಒಳಗೋ?’ ಎಂದು ಇತ್ತೀಚೆಗೆ ಖಾಸಗಿ ವೈದ್ಯರೇ ಗೊಂದಲಕ್ಕೆ ಒಳಗಾಗಿದ್ದಾರೆ.

ಇದೇ ಫೆಬ್ರವರಿಯಲ್ಲಿ 65 ವರ್ಷ ದಾಟಿದ್ದ ನಮ್ಮ ಒಬ್ಬ ಸಂಬಂಧಿಗೆ ನ್ಯುಮೋನಿಯಾ ಆಗಿತ್ತು. ಅದನ್ನು ಇಬ್ಬರು ಡಾಕ್ಟರ್‌ಗಳು ದೃಢೀಕರಿಸಿದ್ದರು. ಆದರೆ ಕೊನೆಗೆ ಅವರನ್ನು ಒಂದು ದೊಡ್ಡ ಖಾಸಗಿ ಆಸ್ಪತ್ರೆಗೆ ಕೊಂಡು ಹೋದಾಗ ಅವರು ಇದು ‘ಕೊರೋನ ಸಂಬಂಧಿತ ನ್ಯುಮೋನಿಯಾ (ಕೊರೋನ ರಿಲೇಟೆಡ್ ನ್ಯುಮೋನಿಯಾ) ಎಂಬ ಹೊಸ ಹೆಸರು ಕೊಟ್ಟರು ಹಾಗೂ ಆರನೇ ದಿನ ಅವರ ಮೃತದೇಹ ಕೊಡುವಾಗ ಕೇವಲ ಪಿಪಿಇ ಕಿಟ್ ಮತ್ತು ಕನ್‌ಸ್ಯೂಮೇಬಲ್ ಎಂಬ ಹೆಸರಿನಲ್ಲಿ ತೊಂಬತ್ತು ಸಾವಿರ ರೂಪಾಯಿ ಕೂಡಿಸಿ ಕೇವಲ ಐದು ದಿನಕ್ಕೆ ಮೂರು ಲಕ್ಷದ ಬಿಲ್ ಜಡಿದಿದ್ದರು. ಅದನ್ನು ಇನ್ಶೂರೆನ್ಸ್ ಕಂಪೆನಿಯವರು ಮಾನ್ಯ ಮಾಡಲಿಲ್ಲ. ಕಾರಣ ಪ್ರತಿ ಪಿಪಿಇ ಕಿಟ್‌ಗೆ ಸರಕಾರ ನಿಗದಿ ಪಡಿಸಿದ್ದ ದರ ಕೇವಲ ರೂ.700, ಆದರೆ ಆಸ್ಪತ್ರೆಯವರು ಒಂದು ಪಿಪಿಇ ಕಿಟ್‌ಗೆ ರೂ.3,000 ದರ ಹಾಕಿದ್ದರು. ಅಂದರೆ ನಾಲ್ಕು ಪಟ್ಟು ಹೆಚ್ಚು. ಅದೇ ಪ್ರಕಾರ ಕನ್‌ಸ್ಯೂಮೇಬಲ್ ಎಂಬ ಹೆಸರಲ್ಲಿ ವಿವರಣೆ ಕೊಡದೆ ರೂ.30,000 ಬೇರೆ ಪೀಕಿಸಿದ್ದರು. ರೋಗಿ ಮತ್ತು ಸಂಬಂಧಿಕರು ಉನ್ನತ ವಿದ್ಯಾವಂತರಾಗಿದ್ದರೂ ಆಸ್ಪತ್ರೆ ಬಿಲ್‌ನಲ್ಲಿ ಇಷ್ಟೊಂದು ಮೋಸ! ಹಾಗಾದರೆ ಅವಿದ್ಯಾವಂತರನ್ನು ಇವರು ಅದೆಷ್ಟು ಸುಲಿಯುತ್ತಾರೋ ಏನೋ?

ಕಳೆದ ವಾರ ನಮ್ಮ ಮತ್ತೊಬ್ಬ ಪರಿಚಯದ ವ್ಯಕ್ತಿಗೆ ಕೊರೋನ ಆಗಿತ್ತು. ಅವರನ್ನು ಅದೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಆಸ್ಪತ್ರೆಯವರು ಅದು ಕೊರೋನ ಎಂದು ಒಪ್ಪಿಕೊಂಡರು. ಆದರೆ ನಂತರ ‘‘ಇವರಿಗೆ ಕೊರೋನ ಲಸಿಕೆಯ ಡೋಸ್ 10 ದಿನಗಳ ಹಿಂದೆ ನಿಮ್ಮದೇ ಆಸ್ಪತ್ರೆಯಲ್ಲಿ ಕೊಡಲಾಗಿತ್ತು, ಆದರೂ ಕೊರೋನ ಬಂದಿದ್ದು ಹೇಗೆ?’’ ಎಂದು ರೋಗಿಯ ಸಂಬಂಧಿಕರು ಪ್ರಶ್ನಿಸಿದಾಗ ಡಾಕ್ಟರುಗಳು ಒಮ್ಮೆಲೇ ರಾಗ ಬದಲಿಸಿ- ಇಲ್ಲ ಇಲ್ಲ, ಇದು ಬರೀ ನ್ಯುಮೋನಿಯಾ ಎಂದು ಹೇಳಿದರು. ಅಂದರೆ ಲಸಿಕೆ ಕೊಟ್ಟು ಕೊರೋನ ಬಂದರೆ ಅದು ನ್ಯುಮೋನಿಯಾ! ಒಂದು ವೇಳೆ ಲಸಿಕೆ ಕೊಡದೆ ಇದ್ದಾಗ ಕೇವಲ ನ್ಯುಮೋನಿಯಾ ಆದರೂ ಅದು ‘ಕೊರೋನ ರಿಲೇಟೆಡ್ ನ್ಯುಮೋನಿಯಾ’ ಎಂದು ಹೇಳಿ ಆಸ್ಪತ್ರೆಯವರು ಸುಲಿಗೆಗೆ ಅವಕಾಶ ಮಾಡಿಕೊಳ್ಳುತ್ತಾರೇನೋ? ನಿಜವಾಗಿ ಕೊರೋನ ಮತ್ತು ನ್ಯುಮೋನಿಯಾ ಎರಡೂ ಒಂದೇ ತರದ ರೋಗ ಲಕ್ಷಣ ಹೊಂದಿವೆ. ಎರಡರಲ್ಲಿಯೂ ಉಸಿರಾಟದ ತೊಂದರೆ ಉಂಟಾಗುತ್ತದೆ ಹಾಗೂ ಪುಪ್ಪಸದಲ್ಲಿ ಕಫ ತುಂಬಿಕೊಂಡು ಶ್ವಾಸಕೋಶದ ಇನ್‌ಫೆಕ್ಷನ್ ಆಗುತ್ತದೆ. ಇವೆರಡೂ ರೋಗಗಳು ಒಂದೇ ನಾಣ್ಯದ ಎರಡು ಮುಖಗಳು. ಆದರೆ ನ್ಯುಮೋನಿಯಾ ಹೆಚ್ಚು ಮಾರಕ!

ನ್ಯುಮೋನಿಯಾ ಆದ 100 ರೋಗಿಗಳಲ್ಲಿ 25 ರೋಗಿಗಳು ಸಾಯುತ್ತಾರೆ, ಆದರೆ ಕೊರೋನ ಆದ 100 ರೋಗಿಗಳಲ್ಲಿ ಕೇವಲ ಇಬ್ಬರು ರೋಗಿಗಳು ಸಾಯಬಹುದು. ಈ ಎರಡೂ ರೋಗಗಳು ಸೋಂಕು ರೋಗಗಳು. ಅಂದರೆ ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತವೆ. ಆದರೂ ಕೊರೋನಕ್ಕೆ ಚಿಕಿತ್ಸೆ ಕೊಡಲು ಡಾಕ್ಟರ್ ಮತ್ತು ನರ್ಸ್‌ಗಳಿಗೆ ದಿನಕ್ಕೆ ರೂ. 20 ಸಾವಿರ ಮೊತ್ತದ ಪಿಪಿಇ ಕಿಟ್ ಬೇಕಂತೆ, ಆದರೆ ನ್ಯುಮೋನಿಯಾದ ಚಿಕಿತ್ಸೆಗೆ ಪಿಪಿಇ ಕಿಟ್ ಬೇಡವಂತೆ! ಏನಿದು ವಿಚಿತ್ರ? ಭಾರತದಲ್ಲಿ ಹಿಂದಿನ ಒಂದು ವರ್ಷದಲ್ಲಿ ಕೊರೋನದಿಂದ ಸತ್ತವರು 1,65,000. ಆದರೆ ನ್ಯುಮೋನಿಯಾದಿಂದ ಇದೇ ಅವಧಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಕ್ಷಯರೋಗ (ಟಿಬಿ) ಎಲ್ಲಕ್ಕಿಂತ ವೇಗವಾಗಿ ಸೋಂಕು ಹರಡುವ ರೋಗ.

ಆದರೂ ಕ್ಷಯದ ಚಿಕಿತ್ಸೆ ಮಾಡುವ ಡಾಕ್ಟರ್ ನರ್ಸ್‌ಗಳಿಗೆ ಯಾವುದೇ ಪಿಪಿಇ ಕಿಟ್ ಬೇಡವಂತೆ. ಕಳೆದ ಒಂದು ದಶಕದಿಂದಲೂ ಕ್ಷಯ ಮತ್ತು ನ್ಯುಮೋನಿಯಾದಿಂದ ಪ್ರತಿ ವರ್ಷ ತಲಾ ಎರಡು ಲಕ್ಷ ಜನ ಭಾರತದಲ್ಲಿ ಸಾಯುತ್ತಿದ್ದಾರೆ, ಆದರ ಬಗ್ಗೆ ಭಾರತ ಸರಕಾರಕ್ಕೆ ಅಥವಾ ವಿಶ್ವ ಆರೋಗ್ಯ ಸಂಸ್ಥೆಗೆ ಕಳವಳವೇ ಇಲ್ಲ. ಕಾರಣ ಈ ರೋಗಗಳು ಹೆಚ್ಚಾಗಿ ಕಾಡುವುದು ಬಡವರನ್ನು. ಆದರೆ ಕೊರೋನ ಶ್ರೀಮಂತರನ್ನೂ ಕಾಡುತ್ತದೆ, ಅದಕ್ಕಾಗಿ ಕೊರೋನ ಕುರಿತು ಸರಕಾರಕ್ಕೆ ಇಷ್ಟೊಂದು ಆತಂಕವೇ? ಸರಕಾರದ ಆದೇಶದಂತೆ ಉಸಿರಾಟದ ತೊಂದರೆ ಇದ್ದು, ಬೇರೆ ರೋಗಗಳಿಂದ ಸತ್ತವರನ್ನೂ ಕೊರೋನ ಗುಂಪಿನಲ್ಲಿಯೇ ಸೇರಿಸುವುದರಿಂದ ಭಾರತದಲ್ಲಿ ಕೊರೋನದಿಂದಾದ ಮರಣದ ಸಂಖ್ಯೆ 1,65,000 ಮುಟ್ಟಿದೆ ಎನ್ನಲಾಗುತ್ತಿದೆ. ನಿಜವಾಗಿ ನೈಜ ಕೊರೋನದಿಂದ ಸತ್ತವರು ಕೆಲವೇ ಸಾವಿರ ಇರಬಹುದು ಅಷ್ಟೇ. ಈಗ ಮತ್ತೆ ಕೊರೋನ ಸೋಂಕು ಹೆಚ್ಚುತ್ತಿದೆ ಎಂದು ಭಯ ಹುಟ್ಟಿಸಲಾಗುತ್ತಿದೆ. ಇದರ ಹಿಂದೆ ಯಾವ ಗುಪ್ತ ಅಜೆಂಡಾ ಇದೆಯೋ... ಜನರನ್ನು ದೇವರೇ ಕಾಪಾಡಬೇಕು.

Writer - ಹರೀಶ್ ಎಂ. ರೈ, ಉಡುಪಿ

contributor

Editor - ಹರೀಶ್ ಎಂ. ರೈ, ಉಡುಪಿ

contributor

Similar News