ನೀವು ಮಧುಮೇಹಿಯಾಗಿದ್ದರೆ ಈ ಐದು ಆಹಾರಗಳನ್ನು ತಿನ್ನಲೇಬಾರದು

Update: 2021-04-09 19:07 GMT

ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ದೀರ್ಘಕಾಲಿಕ ಸ್ಥಿತಿಯಾಗಿದ್ದು,ಇತ್ತೀಚಿನ ಕೆಲವು ವರ್ಷಗಳಲ್ಲಿ ವಿಶ್ವಾದ್ಯಂತ ವಯಸ್ಕರನ್ನೂ, ಮಕ್ಕಳನ್ನೂ ಕಾಡುತ್ತಿದೆ. ನಮ್ಮ ಜೀವನಶೈಲಿಯು ನಮ್ಮ ಶರೀರದಲ್ಲಿಯ ಗ್ಲುಕೋಸ್ ಮಟ್ಟಗಳ ಮೇಲೆ ಪ್ರಮುಖ ಪ್ರಭಾವವನ್ನು ಹೊಂದಿದೆ. ಅತಿಯಾಗಿ ಕಾರ್ಬೊಹೈಡ್ರೇಟ್‌ಗಳ ಸೇವನೆಯು ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟಕ್ಕೆ ಮುಖ್ಯ ಕಾರಣಗಳಲ್ಲೊಂದಾಗಿದೆ ಮತ್ತು ಇದು ಕ್ರಮೇಣ ಮಧುಮೇಹಕ್ಕೆ ಕಾರಣವಾಗುತ್ತದೆ. ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯವನ್ನು ಅನುಸರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಅನಿಯಂತ್ರಿತ ಮಧುಮೇಹವು ಹೃದ್ರೋಗ,ಮೂತ್ರಪಿಂಡ ಕಾಯಿಲೆ,ಅಂಧತ್ವ ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ಆಹಾರಗಳ ಸೇವನೆಯು ರಕ್ತದಲ್ಲಿನ ಸಕ್ಕರೆ ಮತ್ತು ಗ್ಲುಕೋಸ್ ಮಟ್ಟಗಳನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ. ಇದು ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವಂತೆ ಮಧುಮೇಹಿಗಳಿಗೆ ತಜ್ಞರು ಸೂಚಿಸುತ್ತಾರೆ. ಹಣ್ಣುಗಳು,ತರಕಾರಿಗಳು,ಇಡಿಯ ಧಾನ್ಯಗಳು,ಕೊಬ್ಬುರಹಿತ ಡೇರಿ ಉತ್ಪನ್ನಗಳು ಮತ್ತು ಕಡಿಮೆ ಕೊಬ್ಬಿನ ಅಂಶವಿರುವ ಮಾಂಸ ಇಂತಹ ಆಹಾರಗಳಲ್ಲಿ ಸೇರಿವೆ. ಮಧುಮೇಹಿಗಳ ಆಹಾರದ ಕುರಿತು ಹೇಳುವುದಾದರೆ ಯಾವುದೇ ಆರೋಗ್ಯಕರ ಆಹಾರಕ್ರಮವು ಅವರಿಗೆ ಸೂಕ್ತವಾಗುತ್ತದೆ. ಮಧುಮೇಹಿಗಳು ಯಾವುದೇ ಆಹಾರ ಸೇವನೆಯನ್ನು ಸಂಪೂರ್ಣವಾಗಿ ನಿವಾರಿಸಬೇಕು ಎಂದೇನೂ ಇಲ್ಲ,ಆದರೆ ಕೆಲವು ಆಹಾರಗಳನ್ನು ನಿರ್ಬಂಧಿತ ಪ್ರಮಾಣಗಳಲ್ಲಿ ಸೇವಿಸಬೇಕು. ಎಲ್ಲ ಹಣ್ಣುಗಳು ಮತ್ತು ತರಕಾರಿಗಳನ್ನು ಮಧುಮೇಹಿಗಳು ಸೇವಿಸಬಹುದು,ಆದರೆ ಕಾರ್ಬೊಹೈಡ್ರೇಟ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳು ಮತ್ತು ಪ್ರೋಟಿನ್‌ಗಳನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಮತೋಲಿತ ಆಹಾರವು ಮುಖ್ಯವಾಗಿದೆ ಎನ್ನುತ್ತಾರೆ ಆಹಾರತಜ್ಞೆ ರಿತಿಕಾ ಸಮದಾರ್.

ಮಧುಮೇಹಿಗಳು ಸೇವಿಸಬಾರದ ಕೆಲವು ಆಹಾರಗಳ ಕುರಿತು ಮಾಹಿತಿಗಳಿಲ್ಲಿವೆ.....

* ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳು

ಮಧುಮೇಹಿಗಳು ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳನ್ನೊಳಗೊಂಡ ಆಹಾರಗಳಿಂದ ದೂರವಿರಬೇಕು. ಬ್ರೆಡ್,ಬಿಸ್ಕಿಟ್ ಮತ್ತು ಸಂಸ್ಕರಿತ ಹಿಟ್ಟಿನಿಂದ ತಯಾರಿಸಿದ ಖಾದ್ಯಗಳು ಇವುಗಳಲ್ಲಿ ಸೇರಿವೆ. ಮಧುಮೇಹಿಗಳು ಬಿಳಿಯ ಮೈದಾದಿಂದ ತಯಾರಾದ ಬ್ರೆಡ್‌ನ ಬದಲು ಇಡಿಯ ಗೋಧಿ ಅಥವಾ ಬಹುಧಾನ್ಯಗಳಿಂದ ತಯಾರಿಸಲಾದ ಬ್ರೆಡ್‌ನ್ನು ತಿನ್ನಬೇಕು. ಇದು ಒಟ್ಟಾರೆ ಆರೋಗ್ಯಕ್ಕೆ ಲಾಭದಾಯಕವಾಗಿದೆ ಮತ್ತು ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಸಂಸ್ಕರಿತ ಹಿಟ್ಟಿನಿಂದ ತಯಾರಾದ ಬ್ರೆಡ್ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುತ್ತದೆ.

* ಘನೀಕೃತ ಆಹಾರಗಳು

ಘನೀಕೃತ ಆಹಾರಗಳು ಅತಿಯಾದ ಪ್ರಮಾಣದಲ್ಲಿ ಪಿಷ್ಟವನ್ನು ಒಳಗೊಂಡಿರುತ್ತವೆ. ಪಿಷ್ಟವು ಆಹಾರದ ರುಚಿ ಮತ್ತು ಸ್ವರೂಪವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ತಾಜಾ ಆಗಿರಿಸುತ್ತದೆ. ಆದರೆ ಪಿಷ್ಟವು ವಾಸ್ತವದಲ್ಲಿ ಪಾಲಿಮರ್‌ನ ಗ್ಲುಕೋಸ್ ಸರಪಳಿಯಾಗಿದೆ ಮತ್ತು ನಮ್ಮ ಶರೀರವು ಈ ಗ್ಲುಕೋಸ್ ಜೀರ್ಣಗೊಳ್ಳುವ ಮೊದಲೇ ಅದನ್ನು ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚುತ್ತದೆ ಮತ್ತು ಇದು ಮಧುಮೇಹಿಗಳಿಗೆ ಹಾನಿಕಾರಕವಾಗುತ್ತದೆ. ಮಧುಮೇಹಿಗಳು ರೋಗದ ಕೌಟುಂಬಿಕ ಇತಿಹಾಸವನ್ನು ಹೊಂದಿದ್ದರೆ ಘನೀಕೃತ ಆಹಾರಗಳಿಂದ ದೂರವಿರಬೇಕು. ಅಲ್ಲದೆ ಘನೀಕೃತ ಆಹಾರಗಳು ನಮ್ಮ ಶರೀರಕ್ಕೆ ಆರೋಗ್ಯಕರವೂ ಅಲ್ಲ.

* ಸಕ್ಕರೆ

 ಸಕ್ಕರೆಯ ಖಾದ್ಯಗಳು ಮತ್ತು ಪಾನೀಯಗಳು ಇನ್ಸುಲಿನ್ ಮಟ್ಟಗಳನ್ನು ತ್ವರಿತವಾಗಿ ಹೆಚ್ಚಿಸುತ್ತವೆ ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಕಾಫಿ ಅಥವಾ ಚಹಾಕ್ಕೆ ಸಕ್ಕರೆಯನ್ನು ಬೆರೆಸಿಕೊಂಡು ಸೇವಿಸುವುದಾದರೂ ಅದು ವೈದ್ಯರು ಸೂಚಿಸಿರುವಂತೆ ಸಣ್ಣ ಪ್ರಮಾಣದಲ್ಲಿರಬೇಕು. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಯಥೇಚ್ಛ ನೀರನ್ನು ಮತ್ತು ಅಧಿಕ ಸಕ್ಕರೆಯನ್ನು ಒಳಗೊಂಡ ಆಹಾರಗಳ ಬದಲು ಇತರ ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

* ಕರಿದ ಆಹಾರಗಳು

ಕರಿದ ಆಹಾರಗಳು ಅಧಿಕ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ ಮಧುಮೇಹಿಗಳು ಹಾಗೂ ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸುವವರು ಇವುಗಳ ಸೇವನೆಯನ್ನು ತಪ್ಪಿಸಬೇಕು. ಕರಿದ ಆಹಾರಗಳು ಉರಿಯೂತವನ್ನು ಪ್ರಚೋದಿಸುತ್ತವೆ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ. ಹೀಗಾಗಿ ಫ್ರೆಂಚ್ ಫ್ರೈ ಮತ್ತು ಪಕೋಡಾದಂತಹ ಕರಿದ ಆಹಾರಗಳ ಸೇವನೆಯನ್ನು ಮಧುಮೇಹಿಗಳು ಸಾಧ್ಯವಾದಷ್ಟು ನಿವಾರಿಸಬೇಕು.

* ಜ್ಯೂಸ್

ಮಧುಮೇಹಿಗಳಿಗೆ ಸಕ್ಕರೆ ಬೆರೆತ ಪಾನೀಯಗಳು ಅತ್ಯಂತ ಕೆಟ್ಟದ್ದಾಗಿವೆ. ಜ್ಯೂಸ್‌ಗಳು ಬಹಳಷ್ಟು ಕಾರ್ಬೊಹೈಡ್ರೇಟ್‌ಗಳು ಮತ್ತು ಸಕ್ಕರೆಯನ್ನು ಒಳಗೊಂಡಿರುವುದರಿಂದ ಅವುಗಳ ಸೇವನೆಯನ್ನು ಮಧುಮೇಹಿಗಳು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಜ್ಯೂಸ್‌ಗಳ ಬದಲು ಗ್ರೀನ್ ಟೀಯಂತಹ ಆರೋಗ್ಯಕರ ಪರ್ಯಾಯ ಪಾನೀಯಗಳನ್ನು ಸೇವಿಸಬಹುದು.

* ನವ್ಯಾ ಖರಬಂದಾ

* ಪೂರಕ ಮಾಹಿತಿ

ರಿತಿಕಾ ಸಮದಾರ್

ಆಹಾರ ತಜ್ಞೆ

* ಕೃಪೆ: Onlymyhealth

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News