ಸಣ್ಣ ವಯಸ್ಸಿನಲ್ಲಿಯೇ ತಲೆಗೂದಲು ಬಿಳಿಯಾಗುತ್ತಿದೆಯೇ? ಇಲ್ಲಿವೆ ಕಾರಣಗಳು

Update: 2021-04-10 14:35 GMT

ನಿಮ್ಮ ಬಾಹ್ಯನೋಟವು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಮತ್ತು ನಿಮ್ಮ ವ್ಯಕ್ತಿತ್ವ ಹಾಗೂ ನೀವು ಹೇಗೆ ಕಾಣುತ್ತೀರಿ ಎನ್ನುವುದು ಆತ್ಮವಿಶ್ವಾಸವನ್ನು ಒದಗಿಸುತ್ತದೆ. ಅತ್ಮವಿಶ್ವಾಸವುಳ್ಳ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಜನರು ತಾವು ಚೆನ್ನಾಗಿ ಕಾಣಲೆಂದು ಪ್ರಸಾದನಗಳ ರೂಪದಲ್ಲಿ ಕೃತಕ ರಾಸಾಯನಿಕಗಳನ್ನು ಬಳಸುತ್ತಾರೆ ಮತ್ತು ಅವುಗಳ ಹಾನಿಕಾರಕ ಪರಿಣಾಮಗಳನ್ನು ಕಡೆಗಣಿಸುತ್ತಾರೆ. ಇದು ಅಕಾಲ ನರೆ ಅಥವಾ ಕೂದಲು ಬಿಳಿಯಾಗುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಅಕಾಲ ನರೆ ಎಂದರೇನು?

ಅಕಾಲ ನರೆಯನ್ನು ರಾಸಾಯನಿಕ ಉತ್ಪನ್ನಗಳು,ಪ್ರಸಾದನ ವಸ್ತುಗಳು ಮತ್ತು ಅಪೌಷ್ಟಿಕತೆಯಿಂದಾಗಿ 20-25 ವರ್ಷ ತುಂಬುವ ಮೊದಲೇ ಕೂದಲು ಬಿಳಿಯಾಗುವುದು ಎಂದು ವ್ಯಾಖ್ಯಾನಿಸಬಹುದು. ಆನುವಂಶಿಕವಾಗಿಯೂ ಅಕಾಲ ನರೆ ಉಂಟಾಗುತ್ತದೆ. ಆರೋಗ್ಯಕರ ಕೂದಲು ಹರೆಯದಲ್ಲಿ ಒಳ್ಳೆಯ ಆರೋಗ್ಯವನ್ನು ಸೂಚಿಸುತ್ತದೆ. ಅಕಾಲ ನರೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ,ಆದರೆ ಇದಕ್ಕೆ ಕಾರಣವಿನ್ನೂ ಸ್ಪಷ್ಟವಾಗಿಲ್ಲ.

ಕೂದಲು ಏಕೆ ಬಿಳಿಯಾಗುತ್ತದೆ?

ಅಕಾಲ ನರೆ ಏಕೆ ಉಂಟಾಗುತ್ತದೆ ಎನ್ನುವುದನ್ನು ಚರ್ಮರೋಗ ತಜ್ಞ ಡಾ.ಕೆ.ಸ್ವರೂಪ್ ಅವರು ವಿವರಿಸಿದ್ದಾರೆ. ಅಕಾಲ ನರೆಗೆ ಹಲವಾರು ಕಾರಣಗಳಿದ್ದು,ಹೇರ್ ಜೆಲ್‌ಗಳು ಮತ್ತು ಕ್ರೀಮ್ ಇತ್ಯಾದಿಗಳಲ್ಲಿಯ ರಾಸಾಯನಿಕ ಬಣ್ಣ ಮುಖ್ಯ ಕಾರಣಗಳಲ್ಲೊಂದಾಗಿದೆ. ಆನುವಂಶಿಕತೆ ಇನ್ನೊಂದು ಪ್ರಮುಖ ಕಾರಣವಾಗುತ್ತದೆ. ಮೂಲತಃ ನಮ್ಮ ಶರೀರದಲ್ಲಿ ಚರ್ಮ ಕೋಶಗಳಿಗೆ ಹೊಂದಿಕೊಂಡು ಕೂದಲು ಕೋಶಕಗಳಂತಹ ಪುಟ್ಟ ಚೀಲಗಳಿರುತ್ತವೆ. ಇವುಗಳಲ್ಲಿರುವ ಮೆಲಾನಿನ್ ಕೂದಲಿಗೆ ಬಣ್ಣವನ್ನು ನೀಡುತ್ತದೆ. ಅವು ವರ್ಣದ್ರವ್ಯವನ್ನು ಕಳೆದುಕೊಂಡರೆ ಕೂದಲು ಬಿಳಿಯಾಗುತ್ತದೆ. ಕೂದಲು ಬಿಳಿಯಾಗುವುದಕ್ಕೆ ಇತರ ಕಾರಣಗಳೂ ಇವೆ.

► ಒತ್ತಡ

ಜನರು ಒತ್ತಡ ಸಮಸ್ಯೆಗಳಲ್ಲಿದ್ದಾಗ ಕೂದಲು ಬಿಳಿಯಾಗುತ್ತದೆ ಎಂದು ನೀವು ಕೇಳಿರಬಹುದು. ಇದು ನಿಜ. ಹಲವಾರು ಸಮಸ್ಯೆಗಳಿಂದ ಉಂಟಾಗುವ ದೀರ್ಘಕಾಲಿಕ ಒತ್ತಡವು ಅಕಾಲದಲ್ಲಿ ಕೂದಲು ಬಿಳಿಯಾಗುವಂತೆ ಮಾಡುತ್ತದೆ. ನಿದ್ರೆಯ ಸಮಸ್ಯೆ,ಆತಂಕ,ಅಧಿಕ ರಕ್ತದೊತ್ತಡ,ಹಸಿವಿನಲ್ಲಿ ಬದಲಾವಣೆ ಇತ್ಯಾದಿಗಳು ಒತ್ತಡಕ್ಕೆ ಕಾರಣವಾಗುತ್ತವೆ.

ಒತ್ತಡವು ಕೂದಲು ಕೋಶಕಗಳಲ್ಲಿರುವ ಕಾಂಡ ಕೋಶಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡುತ್ತದೆ. ಇದು ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವಂತೆ ಮಾಡುತ್ತದೆ ಮತ್ತು ಈಗಾಗಲೇ ಬಿಳಿಗೂದಲು ಹೊಂದಿರುವವರಲ್ಲಿ ಅವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಉನ್ನತ ಹುದ್ದೆಗಳಲ್ಲಿರುವ ಹೆಚ್ಚಿನ ನಾಯಕರು ಒತ್ತಡದಲ್ಲಿರುತ್ತಾರೆ ಮತ್ತು ಅವರ ತಲೆಗೂದಲು ಬೇಗನೆ ಬಿಳಿಯಾಗಿರುತ್ತದೆ ಎನ್ನುವುದನ್ನು ನೀವು ಗಮನಿಸಿರಬಹುದು.

► ಆನುವಂಶಿಕತೆ

ವಂಶವಾಹಿಗಳು ಖಂಡಿತವಾಗಿಯೂ ನಮ್ಮ ಮೇಲೆ ಪ್ರಭಾವವನ್ನು ಹೊಂದಿರುತ್ತವೆ. ಇತರ ಆರೋಗ್ಯ ಸಮಸ್ಯೆಗಳಂತೆ ವಂಶವಾಹಿಗಳು ಯುವಪೀಳಿಗೆಗೆ ಅಕಾಲ ನರೆಯನ್ನೂ ದಾಟಿಸುತ್ತವೆ. ಹೆತ್ತವರಲ್ಲಿ ಯಾರಾದಲೂ ಸಣ್ಣ ವಯಸ್ಸಿನಲ್ಲಿಯೇ ಬಿಳಿ ತಲೆಗೂದಲು ಹೊಂದಿದ್ದರೆ ಮಕ್ಕಳೂ ಆ ಸಮಸ್ಯೆಯನ್ನು ಎದುರಿಸುವ ಅಪಾಯವು ಹೆಚ್ಚಾಗಿರುತ್ತದೆ.

►ಥೈರಾಯ್ಡ್ ಸಮಸ್ಯೆ

ಹೈಪರ್‌ಥೈರಾಯ್ಡಿಸಂ ಅಥವಾ ಹೈಪೊಥೈರಾಯ್ಡಿಸಂ ಕೂದಲು ಅಕಾಲದಲ್ಲಿ ಬಿಳಿಯಾಗಲು ಕಾರಣವಾಗಬಲ್ಲದು. ಥೈರಾಯ್ಡ್ ಸಮಸ್ಯೆಯಿದ್ದಾಗ ಹಾರ್ಮೋನ್ ಬದಲಾವಣೆಗಳು ಉಂಟಾಗುತ್ತವೆ ಮತ್ತು ಇವು ಅಕಾಲಿಕ ನರೆಯನ್ನುಂಟು ಮಾಡುತ್ತವೆ.

► ವಿಟಾಮಿನ್ ಬಿ12 ಕೊರತೆ

ವಿಟಾಮಿನ್ ಬಿ12 ಆರೋಗ್ಯಕರ ಕೂದಲುಗಳು ಬೆಳೆಯುವಂತೆ ಮಾಡುತ್ತದೆ. ಶರೀರದಲ್ಲಿ ಈ ವಿಟಾಮಿನ್‌ನ ಕೊರತೆಯಿದ್ದಾಗ ಕೂದಲುಗಳು ಬಿಳಿಯಾಗುವ ಸಾಧ್ಯತೆಯಿರುತ್ತದೆ. ವಿಟಾಮಿನ್ ಬಿ12 ಕೊರತೆಯು ಹಾನಿಕಾರಕ ರಕ್ತಹೀನತೆಯೊಂದಿಗೂ ಗುರುತಿಸಿಕೊಂಡಿದೆ. ಈ ಸ್ಥಿತಿಯಲ್ಲಿ ವಿಟಾಮಿನ್‌ಗಳನ್ನು ಹೀರಿಕೊಳ್ಳಲು ಶರೀರಕ್ಕೆ ಸಾಧ್ಯವಾಗುವುದಿಲ್ಲ,ಹೀಗಾಗಿ ಆರೋಗ್ಯಕರ ರಕ್ತಕಣಗಳ ಉತ್ಪತ್ತಿಯಾಗುವುದಿಲ್ಲ ಮತ್ತು ಇದು ಶರೀರದಲ್ಲಿಯ ಕೂದಲು ಕೋಶಗಳಲ್ಲಿ ಆಮ್ಲಜನಕದ ಕೊರತೆಯನ್ನುಂಟು ಮಾಡುತ್ತದೆ. ಇದು ಮೆಲಾನಿನ್ ಉತ್ಪತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.

► ಧೂಮ್ರಪಾನ

ಧೂಮ್ರಪಾನವು ಶ್ವಾಸಕೋಶಗಳು ಮತ್ತು ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ಹೊಸ ವಿಷಯವೇನಲ್ಲ. ಆದರೆ ಅದರ ದುಷ್ಪರಿಣಾಮ ಅಷ್ಟಕ್ಕೇ ಸೀಮಿತವಾಗಿಲ್ಲ,ಧೂಮ್ರಪಾನವು ಕೂದಲಿಗೂ ಹಾನಿಕಾರಕವಾಗಿದೆ. ನಿಯಮಿತವಾಗಿ ಧೂಮ್ರಪಾನ ಮಾಡುವವರಲ್ಲಿ 30 ವರ್ಷ ತುಂಬುವ ಮೊದಲೇ ಬಿಳಿಗೂದಲುಗಳು ಕಾಣಿಸಿಕೊಳ್ಳುತ್ತವೆ. ಧೂಮ್ರಪಾನವು ರಕ್ತನಾಳಗಳನ್ನು ಸಂಕೋಚಿಸುತ್ತದೆ ಮತ್ತು ಇದು ಕೂದಲು ಕೋಶಕಗಳಿಗೆ ರಕ್ತದ ಹರಿವನ್ನು ತಗ್ಗಿಸುತ್ತದೆ. ಇದರಿಂದ ಕೂದಲುಗಳು ಉದುರಲಾರಂಭಿಸುತ್ತವೆ. ಅಲ್ಲದೆ ಸಿಗರೇಟ್‌ನಲ್ಲಿರುವ ವಿಷವಸ್ತುಗಳು ಕೂದಲು ಕೋಶಕಗಳಿಗೆ ಹಾನಿಯನ್ನುಂಟು ಮಾಡಿ,ಅಕಾಲ ನರೆಗೆ ಕಾರಣವಾಗುತ್ತವೆ.

► ಸ್ವರಕ್ಷಿತ ರೋಗಗಳು

 ಸಾಮಾನ್ಯವಾಗಿ ಆಟೋಇಮ್ಯೂನ್ ಅಥವಾ ಸ್ವರಕ್ಷಿತ ರೋಗಗಳು ಕಾಣಿಸಿಕೊಳ್ಳುವುದು ಕಡಿಮೆ,ಆದರೆ ಈ ರೋಗವುಂಟಾದಾಗ ಅದು ಶರೀರದ ಸ್ವಂತ ಕೋಶಗಳನ್ನೇ ಕೊಲ್ಲುತ್ತದೆ. ಶರೀರದ ರೋಗ ನಿರೋಧಕ ವ್ಯವಸ್ಥೆಯು ತನ್ನದೇ ಜೀವಕೋಶಗಳ ಮೇಲೆ ದಾಳಿ ನಡೆಸುವ ಸ್ಥಿತಿಯನ್ನು ಸ್ವರಕ್ಷಿತ ರೋಗವೆಂದು ಕರೆಯಲಾಗುತ್ತದೆ. ಇದು ಕೂದಲುಗಳಿಗೆ ಬಣ್ಣ ನೀಡುವ ವರ್ಣದ್ರವ್ಯವನ್ನು ನಷ್ಟಗೊಳಿಸಿ ಅಕಾಲ ನರೆಗೆ ಕಾರಣವಾಗಬಲ್ಲದು.

 ಕೆಲವೊಮ್ಮೆ ನೆತ್ತಿಯ ನಿರ್ದಿಷ್ಟ ಭಾಗದಲ್ಲಿ ಬಿಳಿಯ ಕೂದಲುಗಳು ಕಾಣಿಸಿಕೊಳ್ಳುತ್ತವೆ ಮತ್ತು ಎದ್ದು ಕಾಣುತ್ತವೆ. ಈ ಸ್ಥಿತಿಯನ್ನು ಪೋಲಿಯೊಸಿಸ್ ಎಂದು ಕರೆಯಲಾಗುತ್ತದೆ. ಇದು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿಯೂ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಮೆಲಾನಿನ್ ಪ್ರಮಾಣವು ತುಂಬ ಕಡಿಮೆಯಾಗಿರುತ್ತದೆ ಅಥವಾ ಪೀಡಿತ ಕೂದಲಿನ ಬೇರುಗಳಲ್ಲಿ ಅದು ಇರುವುದೇ ಇಲ್ಲ.

 ಪೊಲಿಯೋಸಿಸ್ ವ್ಯಕ್ತಿಯ ಆರೋಗ್ಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಅದರೆ ಜನರು ಅದನ್ನು ಮುಚ್ಚಿಕೊಳ್ಳಲು ಹೇರ್‌ಡೈಗಳು,ಹ್ಯಾಟ್‌ಗಳನ್ನು ಬಳಸುತ್ತಾರೆ ಮತ್ತು ಇದರಿಂದಾಗಿ ಪೋಲಿಯೊಸಿಸ್ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಬೆಳಕಿನ ವಕ್ರೀಭವನದಿಂದಾಗಿ ಕೂದಲುಗಳು ಕೆಲವೊಮ್ಮೆ ಬಿಳಿಯಾಗಿ ಕಾಣಿಸುತ್ತವೆ,ಆದರೆ ವಾಸ್ತವದಲ್ಲಿ ಅವು ಬೂದುಬಣ್ಣದ್ದಾಗಿರುತ್ತವೆ.

►ಪುರು ಬನ್ಸಾಲ್

► ಪೂರಕ ಮಾಹಿತಿ

►ಕೃಪೆ: onlymyhealth.com

Writer - ಡಾ.ಕೆ.ಸ್ವರೂಪ್

contributor

Editor - ಡಾ.ಕೆ.ಸ್ವರೂಪ್

contributor

Similar News