ನಿಮಗೆ ಗೊತ್ತೇ? ಕೆಫೀನ್ ಹದಿಹರೆಯದವರಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ
ಈ ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲ. ಪ್ರತಿಯೊಂದೂ ತನ್ನದೇ ಆದ ಒಳಿತು ಮತ್ತು ಕೆಡುಕುಗಳನ್ನು ಹೊಂದಿದೆ. ಆಹಾರದ ವಿಷಯದಲ್ಲಿಯೂ ಹೀಗೆಯೇ,ನಾವು ಸೇವಿಸುವ ಆಹಾರವು ನಮಗೆ ಅರೋಗ್ಯಕರವಾದ ಮತ್ತು ನಮ್ಮ ಶರೀರದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಘಟಕಗಳನ್ನು ಹೊಂದಿರುತ್ತದೆ. ಆದರೆ ಅವುಗಳ ಅನುಪಾತ ಮತ್ತು ಸೇವನೆಯ ಪ್ರಮಾಣವು ನಮ್ಮ ಶರೀರವು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ಹದಿಹರೆಯದವರು ತಮ್ಮ ಬೆಳವಣಿಗೆಯ ಹಂತದಲ್ಲಿರುವುದರಿಂದ ಮತ್ತು ಕೆಫೀನ್ ಅನ್ನು ಒಳಗೊಂಡಿರುವ ಅನಾರೋಗ್ಯಕರ ಅಥವಾ ಜಂಕ್‌ಫುಡ್‌ಗಳನ್ನು ಸೇವಿಸುವ ಹವ್ಯಾಸವನ್ನು ಹೊಂದಿರುವುದರಿಂದ ಆಹಾರದಲ್ಲಿಯ ನಕಾರಾತ್ಮಕ ಪರಿಣಾಮಗಳಿಗೆ ಸುಲಭವಾಗಿ ಗುರಿಯಾಗುತ್ತಾರೆ.
ಕಾಫಿ ಮತ್ತು ಮೃದು ಪಾನೀಯಗಳ ಸೇವನೆಯು ಸಾಮಾನ್ಯವಾಗಿದ್ದು,ವಿಶ್ವಾದ್ಯಂತ ಸುಮಾರು ಶೇ.70ರಷ್ಟು ಜನರು ಇವುಗಳನ್ನು ಸೇವಿಸುತ್ತಾರೆ. ಇವುಗಳು ಕೆಫೀನ್ ಅನ್ನು ಒಳಗೊಂಡಿರುತ್ತವೆ. ಹದಿಹರೆಯದವರು ಕೆಫೀನ್‌ನತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಮತ್ತು ಒಂದಲ್ಲ ಒಂದು ರೀತಿಯಲ್ಲಿ ಕೆಫೀನ್‌ನ ವ್ಯಾಪಕ ಬಳಕೆದಾರರಾಗಿದ್ದಾರೆ.
ನಿಮಗೆ ಗೊತ್ತಿರಲಿಕ್ಕಿಲ್ಲ,ಕೆಫೀನ್ ಮಾದಕದ್ರವ್ಯವಾಗಿದ್ದು ಚಟವನ್ನು ಅಂಟಿಸುತ್ತದೆ. ಅದು ನೈಸರ್ಗಿಕವಾಗಿ ಹಲವಾರು ಸಸ್ಯಗಳ ಎಲೆಗಳು ಮತ್ತು ಬೀಜಗಳಲ್ಲಿರುತ್ತದೆ,ಆದರೆ ಹೆಚ್ಚಿನವುಗಳಲ್ಲಿ ನಗಣ್ಯ ಪ್ರಮಾಣದಲ್ಲಿರುವುದರಿಂದ ನಮಗೆ ಅದು ಗೊತ್ತಾಗುವುದಿಲ್ಲ. ಕೆಲವು ಪಾನೀಯಗಳಲ್ಲಿ ಮತ್ತು ಆಹಾರ ಪದಾರ್ಥಗಳಲ್ಲಿ ಬಳಕೆಗಾಗಿ ಅದನ್ನು ಕೃತಕವಾಗಿಯೂ ತಯಾರಿಸಲಾಗುತ್ತದೆ. ಕೆಫೀನ್ ತಕ್ಷಣಕ್ಕೆ ಶಕ್ತಿಯನ್ನು ಹೆಚ್ಚಿಸುವುದರಿಂದ ಮತ್ತು ದೀರ್ಘಸಮಯದವರೆಗೆ ಕ್ರಿಯಾಶೀಲರಾಗಿರಲು ನೆರವಾಗುವುದರಿಂದ ಹಲವರು ಅದನ್ನು ಸೇವಿಸುತ್ತಾರೆ. ಕೆಫೀನ್ ವ್ಯಕ್ತಿಯ ಮೂಡ್ ಅನ್ನೂ ಹೆಚ್ಚಿಸುತ್ತದೆ ಮತ್ತು ಕ್ರಮೇಣ ಚಟವಾಗಿ ಬದಲಾಗುತ್ತದೆ. ಸಾಮಾನ್ಯವಾಗಿ ಕಾಫಿ ಮತ್ತು ಮೃದುಪಾನೀಯಗಳ ಮೂಲಕ ಕೆಫೀನ್ ನಮ್ಮ ಶರೀರವನ್ನು ಸೇರುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಕೆಫೀನ್ ಸೇವನೆ ಪರವಾಗಿಲ್ಲ ಮತ್ತು ವಯಸ್ಕ ವ್ಯಕ್ತಿ ಅದನ್ನು ಸೇವಿಸಬಹುದು. ಆದರೆ ಹದಿಹರೆಯದವರು ಅದನ್ನು ಸೇವಿಸಕೂಡದು. ಕೆಫೀನ್ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತದೆ ಮತ್ತು ಅವರನ್ನು ಕೆಫೀನ್ ಉತ್ಪನ್ನಗಳ ದಾಸರನ್ನಾಗಿ ಮಾಡುತ್ತದೆ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಶ್ವೇತಾ ಝಾ.
ಸಾಮಾನ್ಯವಾಗಿ ಹದಿಹರೆಯದವರು ತಡರಾತ್ರಿಯವರೆಗೆ ಓದಲು ಮತ್ತು ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಕಾಫಿ ಅಥವಾ ಚಹಾವನ್ನು ಸೇವಿಸುತ್ತಾರೆ. ಕಾಫಿಗೆ ಹೋಲಿಸಿದರೆ ಚಹಾದಲ್ಲಿ ಕೆಫೀನ್ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ. ಹದಿಹರೆಯದವರು ಬೆಳವಣಿಗೆಯ ಹಂತದಲ್ಲಿರುವುದರಿಂದ ಅವರ ಶರೀರವು ಬೇಗನೇ ಕೆಫೀನ್‌ಗೆ ಹೊಂದಿಕೊಳ್ಳುತ್ತದೆ ಮತ್ತು ಅದರ ಗೀಳಿಗೆ ಅಂಟಿಕೊಳ್ಳುತ್ತದೆ. ಒಮ್ಮೆ ಗೀಳು ಅಂಟಿಕೊಂಡಿತೆಂದರೆ ಅವರಿಗೆ ಕೆಫೀನ್ ಸೇವಿಸದೆ ಯಾವುದರ ಮೇಲೂ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇದು ಕ್ರಮೇಣ ಅವರ ಮಾನಸಿಕ ಸ್ವಾಸ್ಥವನ್ನು ಕೆಡಿಸುತ್ತದೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಿಸುತ್ತದೆ.
ನಿದ್ರಾಹೀನತೆ,ಚಡಪಡಿಕೆ,ಹಿಂಜರಿಕೆ,ಉದ್ವೇಗ,ಸ್ವರದಲ್ಲಿ ಬದಲಾವಣೆ,ಜಠರಗರುಳು ನಾಳದಲ್ಲಿ ವ್ಯತ್ಯಯ,ಚಿಂತನೆ ಮತ್ತು ಮಾತಿನಲ್ಲಿ ಮುಖ್ಯ ವಿಷಯ ಕೈಬಿಡುವುದು,ಹೃದಯಸ್ಪಂದನಾಧಿಕ್ಯ ಇತ್ಯಾದಿ ಸಮಸ್ಯೆಗಳಿಗೆ ಅತಿಯಾದ ಕೆಫೀನ್ ಸೇವನೆಯು ಕಾರಣವಾಗುತ್ತದೆ.
ಸೇವನೆಯ ಕೆಲವೇ ನಿಮಿಷಗಳಲ್ಲಿ ಕೆಫೀನ್ ಶರೀರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಈ ಪರಿಣಾಮವು ಶರೀರದಲ್ಲಿ ಐದಾರು ಗಂಟೆಗಳ ಕಾಲ ಉಳಿದುಕೊಳ್ಳುತ್ತದೆ ಹಾಗೂ ಏಕಾಗ್ರತೆಯನ್ನು ಅರ್ಧಕ್ಕಿಳಿಸುತ್ತದೆ. ಕೆಫೀನ್ ಹದಿಹರೆಯದವರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ ಮತ್ತು ಇವು ಕ್ರಮೇಣ ಗಂಭೀರ ರೂಪಕ್ಕೆ ತಿರುಗಬಲ್ಲವು.
ಕೆಫೀನ್ ಮಕ್ಕಳ ಬೆಳವಣಿಗೆ ಮತ್ತು ಮಿದುಳಿನಲ್ಲಿ ಸಂಪರ್ಕಗಳ ರೂಪುಗೊಳ್ಳುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತದೆ. ಹದಿಹರೆಯದಲ್ಲಿ ಶರೀರದಲ್ಲಿ ನರ ಸಂಪರ್ಕಗಳು ರೂಪುಗೊಳ್ಳುತ್ತವೆ ಮತ್ತು ದೃಢಗೊಳ್ಳುತ್ತವೆ. ಕೆಫೀನ್ ನರಕೋಶಗಳ ಸಾಮರ್ಥ್ಯವನ್ನು ತಗ್ಗಿಸುತ್ತದೆ.
ಕೆಫೀನ್ ಮಕ್ಕಳಲ್ಲಿ ನಿದ್ರಾಚಕ್ರಕ್ಕೆ ವ್ಯತ್ಯಯವನ್ನುಂಟು ಮಾಡುವ ಜೊತೆಗೆ ಮಿದುಳಿನ ಬೆಳವಣಿಗೆಯನ್ನು ವಿಳಂಬಿಸುತ್ತದೆ. ಮಕ್ಕಳು ದಿನಕ್ಕೆ 3-4 ಕಪ್ ಕಾಫಿ ಸೇವಿಸಿದಾಗ ಈ ಸ್ಥಿತಿಯುಂಟಾಗುತ್ತದೆ. ನಂತರದ ಬದುಕಿನಲ್ಲಿ ಅವರು ಪಾನೀಯಗಳನ್ನು ಇಷ್ಟಪಡತೊಡಗುತ್ತಾರೆ ಮತ್ತು ಈಗಾಗಲೇ ಕೆಫೀನ್ ಚಟ ಹೊಂದಿರುವುದರಿಂದ ಇನ್ನಷ್ಟು ಪ್ರಬಲವಾದ ಮಾದಕದ್ರವ್ಯ ಸೇವನೆಯನ್ನು ಬಯಸಬಹುದು.
ಕೆಫೀನ್ ಕ್ಯಾಲ್ಸಿಯಂ ಕೊರತೆಯನ್ನೂ ಉಂಟುಮಾಡಬಹುದು. ಅತಿಯಾದ ಕೆಫೀನ್ ಸೇವನೆ ಕ್ರಮೇಣ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಅಸ್ಥಿರಂಧ್ರತೆಯ ಅಪಾಯಕ್ಕೂ ಗುರಿಮಾಡಬಹುದು.
ಕೆಫೀನ್ ಹೃದಯದ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಲ್ಲದು. ಕೆಫೀನ್ ಜೊತೆಗೆ ಪ್ರತಿವರ್ತಿಸುವ ಔಷಧಿಯೊಂದಿಗೆ ಅದನ್ನು ಸೇವಿಸಿದರೆ ಅದು ಕೆಲವು ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಫೀನ್ ಅನ್ನು ಒಳಗೊಂಡಿರುವ ಪೂರಕಗಳ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯಗಳಿಗೆ ಗುರಿಯಾಗಿಸುತ್ತದೆ.
ಒಮ್ಮೆ ಕೆಫೀನ್‌ಗೆ ದಾಸರಾದರೆ ಅದನ್ನು ಬಿಡುವುದು ಕಷ್ಟವಾಗುತ್ತದೆ. ಕೆಫೀನ್ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವ ಹೆಚ್ಚಿನವರಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ,ಹೀಗಾಗಿ ಅದನ್ನು ಬಿಡುವುದು ಇನ್ನೂ ಕಷ್ಟವಾಗುತ್ತದೆ. ತಲೆನೋವು,ಬಳಲಿಕೆ,ನಿದ್ರೆಯ ಮಂಪರು,ಏಕಾಗ್ರತೆಗೆ ಭಂಗ,ಕೆಲಸಗಳನ್ನು ಪೂರ್ಣಗೊಳಿಸುವುದು ಕಷ್ಟವಾಗುವುದು, ಕೆರಳುವಿಕೆ, ಖಿನ್ನತೆ, ಆತಂಕ, ಫ್ಲೂದಂತಹ ಲಕ್ಷಣಗಳು ಮತ್ತು ಗ್ರಹಣ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಇವು ಇಂತಹ ಕೆಲವು ಸಮಸ್ಯೆಗಳಾಗಿವೆ.
* ಪುರು ಬನ್ಸಾಲ್
ಶ್ವೇತಾ ಝಾ,ಪೌಷ್ಟಿಕಾಂಶ ತಜ್ಞೆ
ಕೃಪೆ: onlymyhealth.com