ಶುಶ್ರೂಷಾ ಅಧಿಕಾರಿಗಳ ಸೇವೆಗೆ ಬೆಲೆ ಸಿಗಲಿ

Update: 2021-05-12 06:29 GMT

ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವರ್ಷವನ್ನು 'Year of Nurse and Midwife' ಎಂದು ಘೋಷಿಸಿದೆ. ಇದಕ್ಕೆ ಕಾರಣ ಇಡೀ ಜಗತ್ತನ್ನು ಆರೋಗ್ಯದ ದಾರಿಯಲ್ಲಿ ಕೊಂಡೊಯ್ಯಲು ಶುಶ್ರೂಷಾ ಅಧಿಕಾರಿಯವರಿಂದ ಮಾತ್ರ ಸಾಧ್ಯವೆಂದು.

ಅದಕ್ಕೆ ತಕ್ಕಂತೆ ಕಳೆದ ವರ್ಷ ಕೋವಿಡ್-19 ಎಂಬ ಮಹಾಮಾರಿಯಿಂದ ಎಲ್ಲಾ ಶುಶ್ರೂಷಾ ಅಧಿಕಾರಿಗಳು ‘‘ಕೋವಿಡ್ ವಾರಿಯರ್’’ ಎಂದು ಕರೆಯಲ್ಪಟ್ಟರು. ಕಳೆದ ವರ್ಷ ನಮ್ಮ ಸರಕಾರವು ಮೇ-12ರ ಶುಶ್ರೂಷಕರ ದಿನದಂದು ‘ಶುಶ್ರೂಷಾ ಅಧಿಕಾರಿ’ ಎನ್ನುವ ಪದನಾಮವನ್ನು ಘೋಷಿಸಿ ಮಾನ್ಯ ಮಾಡಿದೆ. ಹಿಂದೆ ‘ನರ್ಸ್’ ಎನ್ನುವ ಪದವು ಎಷ್ಟೇ ಭಾರವಾಗಿದ್ದರೂ ಜನರ ದೃಷ್ಟಿಯಲ್ಲಿ ಮೇಲ್ಮಟ್ಟಕ್ಕೇರಿರಲಿಲ್ಲ. ಈಗ ‘ಶುಶ್ರೂಷಾ ಅಧಿಕಾರಿ’ ಎಂದು ಕರೆಯಲ್ಪಡುವ ಕಾರಣ ಈ ವೃತ್ತಿಗೆ ಇನ್ನಷ್ಟು ಬೆಲೆ ಸಿಕ್ಕಿದಂತಾಗಿದೆ. ಶುಶ್ರೂಷಾ ಅಧಿಕಾರಿಗಳು ರೋಗಿಗಳ ಸೇವೆ ಹಾಗೂ ರೋಗ ತಡೆಗಟ್ಟುವ ದಿಸೆಯಲ್ಲಿ ಆಸ್ಪತ್ರೆಯ, ಸಮಾಜದ ಬೆನ್ನೆಲುಬಾಗಿ ದುಡಿಯುತ್ತಿದ್ದಾರೆ. ಇಂದಿನ ಕೋವಿಡ್-19 ಸಂದರ್ಭದಲ್ಲಿ ಶುಶ್ರೂಷಕರು ತಮ್ಮ ಜೀವವನ್ನು ಪಣಕ್ಕಿಟ್ಟು ಅದೆಷ್ಟೋ ರೋಗಿಗಳ ಜೀವವನ್ನು ಕಾಪಾಡಿದ್ದಾರೆ. ಶುಶ್ರೂಷಕರಿಗೆ ಜೀವ ವಿಜ್ಞಾನದ ಮೇಲೆ ತರಬೇತಿ, ಪರಿಣತಿಯ ಜೊತೆಗೆ ಹಲವರಲ್ಲಿ ಅನೇಕ ವರ್ಷಗಳ ಅನುಭವವೂ ಇರುವುದರಿಂದ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರು ತಮ್ಮ ಪ್ರೀತಿಪಾತ್ರರನ್ನೂ ಮರೆತು ಸೋಂಕಿತರ ಸೇವೆಯಲ್ಲಿ ಮಗ್ನರಾಗಿದ್ದಾರೆ.

ಹಲವಾರು ರೋಗಿಗಳು ಆಸ್ಪತ್ರೆಗಳಿಗೆ ಕೆಲವೊಂದು ಶುಶ್ರೂಷಕರನ್ನು ಹುಡುಕಿಕೊಂಡು ಬಂದು ದಾಖಲಾಗುವುದುಂಟು. ಯಾಕೆಂದರೆ ಆಸ್ಪತ್ರೆಯ ವೈದ್ಯರು ಬಂದು ತಪಾಸಣೆ ಮಾಡಿ ಹೋದ ನಂತರ ರೋಗಿಯ ಮುಂದಿನ ಎಲ್ಲಾ ಜವಾಬ್ದಾರಿಯು ಶುಶ್ರೂಷಾ ಅಧಿಕಾರಿಯದ್ದೇ ಆಗಿರುತ್ತದೆ. ರೋಗಿಯು ದಾಖಲಾದಾಗಿನಿಂದ ಬಿಡುಗಡೆಯಾಗುವ ತನಕ ಅವರ ಭೌತಿಕ ಆರೋಗ್ಯದ ಜೊತೆಗೆ ಅವರ ಮಾನಸಿಕ ಆರೋಗ್ಯವನ್ನೂ ಅವರಿಗೆ ಒದಗಿಸುವುದು ಶುಶ್ರೂಷಾ ಅಧಿಕಾರಿಯವರ ಜವಾಬ್ದಾರಿಯಾಗಿದೆ.

ಕೆಲವೊಂದು ಸಂದರ್ಭದಲ್ಲಿ ಶುಶ್ರೂಷಾ ಅಧಿಕಾರಿಯವರು ಕಠಿಣ ಪರಿಸ್ಥಿತಿಯನ್ನೆದುರಿಸಬೇಕಾಗುತ್ತದೆ. ಅವುಗಳೆಂದರೆ:
* ಅತಿಯಾದ ಕೆಲಸದೊತ್ತಡ.
* ರೋಗಿಗಳ ಸಂಖ್ಯೆ ಜಾಸ್ತಿ ಇದ್ದು, ಶುಶ್ರೂಷಾ ಅಧಿಕಾರಿಯವರ ಸಂಖ್ಯೆ ಕಡಿಮೆ ಇರುವುದು.
* ಔಷಧಿ ಮತ್ತು ಯಂತ್ರೋಪಕರಣದ ಕೊರತೆ.
* ಕೆಲವು ರೋಗಿಗಳ ಅಸಹಕಾರ.
* ಕೋವಿಡ್‌ನಂತಹ Disasters.
* ಕೆಲಸದ ಸಮಯ ಮೀರಿ ಶ್ರಮ ಪಡುವುದು ಇತ್ಯಾದಿ.

ಇಂತಹ ಸಂದರ್ಭಗಳಲ್ಲಿ ಉನ್ನತ ಮಟ್ಟದ ಸೇವೆ ನೀಡಲು ಶುಶ್ರೂಷಾ ಅಧಿಕಾರಿಯವರಿಗೆ ಕಷ್ಟಸಾಧ್ಯವಾಗುತ್ತದೆ. ಆದರೂ ಈ ಕೋವಿಡ್ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಸೇವೆಗೈಯುತ್ತಿದ್ದಾರೆ. ಇವರು ಯಾವ ವೈದ್ಯರಿಗೂ ಕಡಿಮೆಯೇನಲ್ಲ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದು ಎಷ್ಟೋ ಜನರ ಪ್ರಾಣ ಉಳಿಸುತ್ತಾರೆ. ಶುಶ್ರೂಷಾ ಅಧಿಕಾರಿಗಳು ಈ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ತಮ್ಮ ಮನೆ, ಮಕ್ಕಳು, ಸಂಸಾರ ಬಿಟ್ಟು ಆಸ್ಪತ್ರೆಯಲ್ಲೇ ಇದ್ದು ಸೇವೆ ನೀಡುತ್ತಿದ್ದಾರೆ. ಆದ್ದರಿಂದ ಇನ್ನಾದರೂ ನಮ್ಮ ಈ ವೃತ್ತಿಗೆ ತಕ್ಕುದಾದ ಗೌರವ ದೊರೆಯಬೇಕಾಗಿದೆ.

ಲೇಖಕಿ: ಮಹಾಲಕ್ಷ್ಮೀ ಬಿ. - ಕಾರ್ಯದರ್ಶಿ, ದ.ಕ. ಜಿಲ್ಲಾ ಶುಶ್ರೂಷಾ ಅಧಿಕಾರಿಗಳ ಸಂಘ ಮತ್ತು ಶುಶ್ರೂಷಾ ಅಧಿಕಾರಿ, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News