ನಿಫಾ ವೈರಸ್: ಮುನ್ನೆಚ್ಚರಿಕೆಯಿರಲಿ
ನಿಫಾ ವೈರಸ್ ಕೇರಳದಲ್ಲಿ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ. ಇತ್ತೀಚೆಗೆ ಕೊಝಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕನೊಬ್ಬ ನಿಫಾ ವೈರಸ್ ಸೋಂಕಿನ ಕಾರಣದಿಂದಲೇ ಮೃತಪಟ್ಟಿದ್ದಾನೆಂದು ವರದಿಗಳು ಬರುತ್ತಿವೆ.
ನಿಫಾ ವೈರಸ್, ಆರ್‌ಎನ್‌ಎ ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇದಕ್ಕೆ ಸೇರಿದ ವೈರಾಣು ಆಗಿದೆ. ನಿಫಾ ವೈರಾಣುಗಳು ಬಾವಲಿಗಳ ಮುಖಾಂತರ ಮನುಷ್ಯನಿಗೆ ಹರಡುವ ಕಾರಣದಿಂದಲೇ ಈ ವೈರಲ್ ಜ್ವರಕ್ಕೆ ‘ಬಾವಲಿ ಜ್ವರ’ ಎಂಬ ಅನ್ವರ್ಥ ನಾಮ ಬಂದಿದೆ. 1998ರಲ್ಲಿ ಮಲೇಶ್ಯದ ಒಂದು ಸಣ್ಣ ಹಳ್ಳಿಯಾದ ಕಾಮ್ಟಂಗ್ ಸುಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ ನಿಫಾ ವೈರಸ್ ಎಂದು ಕರೆಯಲಾಗಿತ್ತು. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ, ನೂರಾರು ಮಂದಿ ಅಸುನೀಗಿದ್ದರು. ಆಗ ರೋಗ ಪೀಡಿತ ಲಕ್ಷಾಂತರ ಹಂದಿಗಳನ್ನು ನಿರ್ಮೂಲನ ಮಾಡಿ ರೋಗವನ್ನು ಹತೋಟಿಗೆ ತರಲಾಗಿತ್ತು. 2001ರಲ್ಲಿ ಭಾರತ ದೇಶದ ಪಶ್ವಿಮ ಬಂಗಾಳದ ಸಿಲಿಗುರಿಯಲ್ಲಿ 66 ಮಂದಿಗೆ ಈ ರೋಗ ತಗಲಿತ್ತು ಮತ್ತು 45 ಮಂದಿ ಸಾವನ್ನಪ್ಪಿದ್ದರು. ಇದೇ ವರ್ಷ ಬಾಂಗ್ಲಾದೇಶದಲ್ಲಿ ಈ ರೋಗ ಉಲ್ಭಣಿಸಿ 56ರಲ್ಲಿ 50 ಮಂದಿ ಸಾವನ್ನಪ್ಪಿದರು. 2001 ರಿಂದ 2012ರವರೆಗೆ ಸುಮಾರು 17 ಬಾರಿ ಈ ಬಾವಲಿ ಜ್ವರ ಭಾರತ ಮತ್ತು ಬಾಂಗ್ಲಾ ದೇಶದಲ್ಲಿ ಕಾಣಿಸಿಕೊಂಡಿದ್ದು ಸುಮಾರು 280 ಮಂದಿಗೆ ಈ ಜ್ವರ ತಗಲಿ 211 ಮಂದಿ ಸಾವನ್ನಪ್ಪಿದ್ದಾರೆ ಎಂದು ದಾಖಲೆಗಳಲ್ಲಿ ಕಂಡು ಬಂದಿದೆ. ಹೀಗೆ ಮಲೇಶ್ಯ, ಬಾಂಗ್ಲಾ ದೇಶ, ಸಿಂಗಾಪುರ ಮತ್ತು ಭಾರತದಲ್ಲಿ ಕಳೆದ ಹಲವು ವರ್ಷಗಳಿಂದಲೂ ಈ ವೈರಾಣು ತೊಂದರೆ ನೀಡುತ್ತಲೇ ಇದೆ. ಮೂರು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಕೇರಳದಲ್ಲಿ ಕಾಣಿಸಿಕೊಂಡು ಸಾಕಷ್ಟು ಆತಂಕ ಸೃಷ್ಟಿಸಿದ್ದ ದ್ದ ನಿಫಾ ವೈರಸ್ ಇದೀಗ ಕೇರಳದಲ್ಲಿಯೇ ಮತ್ತೆ ಭಯ ಹುಟ್ಟಿಸಿದ್ದು, ಈಗಾಗಲೇ 11 ಮಂದಿಯಲ್ಲಿ ಈ ರೋಗಲಕ್ಷಣಗಳು ಕಂಡು ಬಂದಿವೆ. ಈಗಲೇ ಸಾಕಷ್ಟು ಮುಂಜಾಗೂರೂಕತೆ ತೆಗೆದುಕೊಳ್ಳದಿದ್ದಲ್ಲಿ ಬಹುಬೇಗ ಎಲ್ಲೆಡೆ ಪಸರಿಸುವ ಸಾಧ್ಯತೆ ಇರುವುದರಿಂದ ತಕ್ಷಣವೇ ಜನರು ಮತ್ತು ಸರಕಾರ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯವಿದೆ.
ರೋಗದ ಲಕ್ಷಣಗಳು
ಎಲ್ಲಾ ವೈರಲ್ ಜ್ವರಗಳಲ್ಲಿ ಇರುವಂತೆ ಈ ಜ್ವರದಲ್ಲಿಯೂ ತ್ರೀವ್ರತರವಾದ ಜ್ವರ, ವಿಪರೀತ ತಲೆನೋವು, ವಾಂತಿ, ತಲೆಸುತ್ತು, ಮೈಕೈ ನೋವು ಇರುತ್ತದೆ. ರೋಗದ ತೀವ್ರತೆ ಜಾಸ್ತಿಯಾದಾಗ ಪ್ರಜ್ಞಾಹೀನತೆ ಮತ್ತು ಅಪಸ್ಮಾರದ ಅನುಭವ ಊಂಟಾಗುತ್ತದೆ. ಸುಮಾರು 6ರಿಂದ 12 ದಿವಸಗಳ ಕಾಲ ಈ ರೋಗದ ಲಕ್ಷಣ ಇರುತ್ತದೆ. ಕೊನೆಹಂತದಲ್ಲಿ ತಲೆ, ಮೆದುಳಿಗೂ ಹರಡುತ್ತದೆ ಮತ್ತು ಹೃದಯದ ಸ್ನಾಯುಗಳಿಗೆ ಹರಡಿ ಸ್ನಾಯುಗಳನ್ನು ಹಾಳುಗೆಡುವುತ್ತದೆ. ಮೆದುಳಿನ ಉರಿಯೂತ ಉಂಟಾಗುತ್ತದೆ. ವೈರಾಣು ದೇಹಕ್ಕೆ ಸೇರಿದ ಬಳಿಕ 5 ರಿಂದ 14 ದಿನಗಳ ಮೇಲೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಜ್ವರದ ತೀವ್ರತೆ ಜಾಸ್ತಿಯಾಗಿ 24 ರಿಂದ 48 ಗಂಟೆಗಳ ಒಳಗೆ ಕೋಮಾವಸ್ಥೆಗೆ ತಲುಪಬಹುದು. ಜ್ವರದ ತೀವ್ರತೆ ಜಾಸ್ತಿಯಾದಂತೆಲ್ಲ ವ್ಯಕ್ತಿ ತಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎನ್ನುವುದರ ಪರಿವೇ ಇಲ್ಲವಾಗಿ ತಾನಿರುವ ಜಾಗ ಮತ್ತು ವ್ಯಕ್ತಿಯನ್ನು ಗುರುತು ಹಿಡಿಯದಿರಲೂ ಬಹುದಲ್ಲದೆ, ಮತಿಭ್ರಮಣೆಗೊಳಗಾದಂತೆ ವರ್ತಿಸಲೂಬಹುದು. ಇದನ್ನು ಸಾಮಾನ್ಯ ಜ್ವರ ಎಂದು ಕಡೆಗಣಿಸಿದ್ದಲ್ಲಿ ಜೀವಕ್ಕೇ ಕುತ್ತು ತರಬಹುದು.
ಪತ್ತೆ ಹಚ್ಚುವುದು ಹೇಗೆ?
ರೋಗ ಪೀಡಿತ ವ್ಯಕ್ತಿಯ ಮೂಗಿನ ಮತ್ತು ಗಂಟಲಿನಲ್ಲಿ ಸ್ರವಿಸಿದ ದ್ರವ್ಯವನ್ನು ಪಿಸಿಆರ್ ಪರೀಕ್ಷೆ ಮುಖಾಂತರ ವೈರಾಣು ಪತ್ತೆಯನ್ನು ಮಾಡುತ್ತಾರೆ. ಮೆದುಳಿನ ದ್ರವ(ಸಿಎಸ್‌ಎಫ್), ರಕ್ತ, ಮೂತ್ರದಿಂದಲೂ ವೈರಾಣುವನ್ನು ಪತ್ತೆ ಹಚ್ಚಬಹುದು. ಕೊನೆ ಹಂತದಲ್ಲೂ ಉಔಐಖಅ ಪರೀಕ್ಷೆ ಮತ್ತು ನಿಫಾ ವೈರಾಣುಗಳ ವಿರುದ್ಧ ಉತ್ಪತ್ತಿಯಾದ ಐಜಎ ಹಾಗೂ ಐಜ ಎಂಬ ಆ್ಯಂಟಿಬಾಡಿಗಳನ್ನು ಕಂಡುಹಿಡಿದು ರೋಗ ಪತ್ತೆ ಹಚ್ಚಲಾಗುತ್ತದೆ.
ಚಿಕಿತ್ಸೆ ಹೇಗೆ?
ಎಲ್ಲಾ ಜ್ವರಗಳಿಗೆ ಚಿಕಿತ್ಸೆ ನೀಡಿದಂತೆ, ಜ್ವರವನ್ನು ನಿಯಂತ್ರಿಸಲಾಗುತ್ತದೆ. ಹೆಚ್ಚು ದ್ರವಾಹಾರ ನೀಡಿ ರೋಗಿಗೆ ನಿರ್ಜಲೀಕರಣವಾಗದಂತೆ ತಡೆಯಲಾಗುತ್ತದೆ. ವೈರಸ್ ತಗಲಿದ 2 ದಿನಗಳ ಒಳಗೆ ಪ್ರಾಥಮಿಕ ಚಿಕಿತ್ಸೆ ಪಡೆದರೆ ರೋಗಿ ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗ ಬಹುಬೇಗನೆ ಇತರರಿಗೆ ಹರಡುವುದರಿಂದ ರೋಗಿಯನ್ನು ಬೇರೆಯೇ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಯಾರ ಸಂಪರ್ಕಕ್ಕೂ ಬಾರದಂತೆ ನೋಡಿಕೊಳ್ಳಲಾಗುತ್ತದೆ. ವೈದ್ಯರು ಮತ್ತು ದಾದಿಯರು ವಿಶೇಷ ಮುತುವರ್ಜಿ ವಹಿಸಬೇಕು ಇಲ್ಲವಾದಲ್ಲಿ ವೈದ್ಯರಿಗೂ ರೋಗ ಹರಡಬಹುದು. ಕೈಗವಸು, ಮುಖದ ಮಾಸ್ಕ್ ಮತ್ತು ತಲೆಗವಚ ಧರಿಸಿಯೇ ರೋಗಿಯನ್ನು ಸ್ಪರ್ಶಿಸತಕ್ಕದ್ದು. ಆದಷ್ಟು ಬೇಗ ರೋಗವನ್ನು ಪತ್ತೆ ಹಚ್ಚಿ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿರಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಜೀವಕ್ಕೆ ಬರುವ ಕುತ್ತನ್ನು ತಪ್ಪಿಸಬಹುದು.
ತಡೆಗಟ್ಟುವುದು ಹೇಗೆ?
* ನಿಫಾ ವೈರಾಣು ಸೋಂಕಿತ ವ್ಯಕ್ತಿಯಿಂದ ದೂರವಿರಬೇಕು. ಸ್ಪರ್ಶ, ದೈಹಿಕ ಸಂಪರ್ಕ ಮಾಡಬಾರದು.
* ಪ್ರತಿ ಬಾರಿಯೂ ಶಂಕಿತ ವ್ಯಕ್ತಿಯನ್ನು ಮುಟ್ಟಿದ ಬಳಿಕ ಸೋಪಿನ ದ್ರಾವಣ ಬಳಸಿ ಕೈ ಚೆನ್ನಾಗಿ ತೊಳೆಯಬೇಕು.
* ಎಲ್ಲೆಂದರಲ್ಲಿ ಸೀನಬೇಡಿ. ಸೀನುವಾಗ ಮುಖಕ್ಕೆ ಕರವಸ್ತ್ರವನ್ನು ಅಡ್ಡವಾಗಿ ಹಿಡಿಯಬೇಕು. ಎಲ್ಲೆಂದರಲ್ಲಿ ಎರ್ರಾಬಿರ್ರಿಯಾಗಿ ಉಗುಳಬೇಡಿ. ಹೀಗೆ ಮಾಡುವುದರಿಂದ ರೋಗ ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ.
* ರೋಗ ಪೀಡಿತ ಪ್ರದೇಶಕ್ಕೆ ಪ್ರಯಾಣ ಮಾಡುವುದು ಒಳ್ಳೆಯದಲ್ಲ.
* ರೋಗ ಪೀಡಿತ ವ್ಯಕ್ತಿಯನ್ನು ಬೇರೆಯೇ ಆದ ಕೋಣೆಯಲ್ಲಿರಿಸಿ ಬೇರೆಯವರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು.
* ಶಂಕಿತ ರೋಗಪೀಡಿತ ಹಂದಿಗಳ ನಿರ್ಮೂಲನ ಮಾಡಬೇಕು.
* ಜ್ವರ ಬಂದಾಗ ನಿರ್ಲಕ್ಷಿಸದೆ ಕೂಡಲೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು.
* ಹಣ್ಣನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ತಿನ್ನಬೇಕು. ಹಸಿ ಹಣ್ಣನ್ನು ತಿನ್ನುವುದರ ಬದಲು ಹಣ್ಣನ್ನು ಚೆನ್ನಾಗಿ ಬೇಯಿಸಿ ಬಳಸಬೇಕು. ದೋಷಪೂರಿತ ಖರ್ಜೂರ ಹಣ್ಣು, ನೆಲದ ಮೇಲೆ ಬಿದ್ದ ಹಣ್ಣುಗಳು ಮತ್ತು ಬಾವಲಿ ಹಾಗೂ ಇತರ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬೇಡಿ.
* ಪಾಮ್ ಆಯಿಲ್ ಬಳಸುವವರು ಚೆನ್ನಾಗಿ ಕುದಿಸಬೇಕು.
* ನಿಫಾ ವೈರಾಣುವನ್ನು ತುಂಬಾ ಸುಲಭವಾಗಿ ಬ್ಲೀಚಿಂಗ್ ಮತ್ತು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ನಾಶಪಡಿಸಬಹುದು. ಈ ರೋಗ ತಡೆಗಟ್ಟಲು ಯಾವುದೇ ಲಸಿಕೆ ಇಲ್ಲದ ಕಾರಣ ರೋಗ ಬರದಂತೆ ಮುಂಜಾಗರೂಕತೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.
ಹೇಗೆ ಹರಡುತ್ತದೆ?
* ರೋಗ ಸೋಂಕಿತ ವ್ಯಕ್ತಿಯ ದೈಹಿಕ ಸಂಪರ್ಕ, ಸ್ಪರ್ಶದಿಂದ ವೈರಾಣು ಹರಡುತ್ತದೆ.
* ವೈರಾಣು ಹೊಂದಿರುವ ಬಾವಲಿಗಳು ಸ್ಪರ್ಶಿಸಿದ ಹಣ್ಣು ಹಂಪಲಿನಿಂದಲೂ ಹರಡುತ್ತದೆ.
* ವೈರಾಣು ಸೋಂಕಿತ ಹಂದಿಯಿಂದಲೂ ವೈರಾಣು ಹರಡುತ್ತದೆ.
* ಬಾವಲಿ ತಿಂದ ಹಣ್ಣುಗಳನ್ನು ಹಂದಿ ಮತ್ತು ಕುದುರೆ ತಿಂದಾಗ ವೈರಾಣು ಅವುಗಳಿಗೆ ಹರಡುತ್ತದೆ. ಹಂದಿ ಮಾಂಸ ಸೇವನೆ ಅಥವಾ ಸೋಂಕು ತಗಲಿರುವ ಹಂದಿ, ಕುದುರೆಗಳ ಸಾಕಣೆಯಿಂದಲೂ ಮನುಷ್ಯನಿಗೆ ವೈರಾಣು ಹರಡುತ್ತದೆ. * ಸೋಂಕು ತಗಲಿದ ವ್ಯಕ್ತಿಯ ಜೊತೆ ಸಂಪರ್ಕ ಬೆಳೆಸಿದಾಗ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ರೋಗ ಪೀಡಿತ ವ್ಯಕ್ತಿಯನ್ನು ವಿಶೇಷವಾದ ಕೋಣೆಗಳಲ್ಲಿರಿಸಿ ಬೇರೆ ಯಾರ ಸಂಪರ್ಕಕ್ಕೆ ಬರದಂತೆ ತಡೆಯುವುದು ಅತೀ ಅವಶ್ಯಕ. ರೋಗಿಯಿಂದ ವೈದ್ಯರಿಗೆ ಮತ್ತು ದಾದಿಯರಿಗೂ ಈ ರೋಗ ಹರಡುವ ಸಾಧ್ಯತೆ ಇದೆ.