ಪಾರ್ಶ್ವವಾಯು (STROKE): ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ
ನಡೆದಾಡಲು ಕಷ್ಟಪಡುತ್ತಿರುವ ವಯಸ್ಸಾದ ವ್ಯಕ್ತಿ, ಮಾತನಾಡಲು ಸಾಧ್ಯವಾಗದ ಯುವತಿ, ದೃಷ್ಟಿಯನ್ನು ಕಳೆದುಕೊಂಡಿರುವ ಬಾಲಕ; ಇವು ಪಾರ್ಶ್ವವಾಯು ಪೀಡಿತರಾಗಿರುವ ಜನರಲ್ಲಿ ನಾವು ನೋಡುವ ವಿಭಿನ್ನ ಸ್ಥಿತಿಗಳಾಗಿವೆ. ಈ ವೈಕಲ್ಯಗಳನ್ನು ವಯಸ್ಸಾದವರು ಮತ್ತು ಎಳೆಯ ವಯಸ್ಸಿನವರು ಸಮಾನವಾಗಿ ಅನುಭವಿಸುತ್ತಿರುವುದನ್ನು ನೋಡಿದರೆ ಯಾರೂ ಮರುಗುತ್ತಾರೆ. ಅ.29ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪಾರ್ಶ್ವವಾಯು ಕುರಿತು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳೋಣ.
ಡಚ್ ತತ್ವಜ್ಞಾನಿ ಡೆಸಿಡೆರಿಯಸ್ ಎರಾಸ್ಮಸ್ ಅವರು ಹೇಳಿರುವ ‘ಚಿಕಿತ್ಸೆಗಿಂತ ತಡೆಗಟ್ಟುವುದು ಒಳ್ಳೆಯದು’ ಎಂಬ ಮಾತು ಸದಾಕಾಲಕ್ಕೂ ಪ್ರಸ್ತುತವಾಗಿದೆ. ಪಾರ್ಶ್ವವಾಯು ಸರಳವಾದ ಕ್ರಮಗಳಿಂದ ತಡೆಗಟ್ಟಬಹುದಾದ ರೋಗವಾಗಿದೆ, ಆದರೆ ಕಡೆಗಣಿಸಿದರೆ ಜೀವಮಾನದುದ್ದಕ್ಕೂ ಅಂಗವೈಕಲ್ಯಕ್ಕೆ ಗುರಿಯಾಗಬಹುದು. ಭಾರತದಲ್ಲಿ ಪ್ರತಿ ವರ್ಷ ಹದಿನೆಂಟು ಲಕ್ಷಕ್ಕೂ ಅಧಿಕ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಒಮ್ಮೆ ಪಾರ್ಶ್ವವಾಯುವಿನ ಆಘಾತವುಂಟಾದರೆ ಅದು ಇನ್ನೊಂದು ಅಥವಾ ಪುನರಪಿ ಆಘಾತಗಳುಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಶೇ.80ರಷ್ಟು ಪಾರ್ಶ್ವವಾಯು ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ. ಹೀಗಾಗಿ ಈ ರೋಗ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ನಾವು ಸಮಗ್ರ ಅರಿವನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ.
ಏನಿದು ಪಾರ್ಶ್ವವಾಯು?
ಮಿದುಳಿಗೆ ರಕ್ತಪೂರೈಕೆ ಸ್ಥಗಿತಗೊಂಡಾಗ ಪಾರ್ಶ್ವವಾಯು ಉಂಟಾಗುತ್ತದೆ. ಆಮ್ಲಜನಕ ಸಮೃದ್ಧ ರಕ್ತದ ಕೊರತೆಯಿಂದಾಗಿ ಮಿದುಳಿನ ಅಂಗಾಂಶದ ಜೀವಕೋಶಗಳು ಸಾಯುತ್ತವೆ. ಇದು ಮಿದುಳಿಗೆ ಹಾನಿ, ವೈಕಲ್ಯ ಮತ್ತು ಸಾವಿಗೆ ಕಾರಣವಾಗುತ್ತದೆ.
ಪಾರ್ಶ್ವವಾಯು ಎರಡು ವಿಧಗಳಲ್ಲಿ ಸಂಭವಿಸುತ್ತದೆ
1.ಇಷೆಮಿಕ್ ಸ್ಟ್ರೋಕ್: ಮಿದುಳಿಗೆ ರಕ್ತಪೂರೈಕೆಗೆ ನಿರ್ಬಂಧವುಂಟಾದಾಗ ಇದು ಸಂಭವಿಸುತ್ತದೆ. ಇದಕ್ಕೆ ಎಂಬಾಲಿಕ್ ಸ್ಟ್ರೋಕ್ (ಧಮನಿಬಂಧ) ಅಥವಾ ಥ್ರೊಂಬಾಟಿಕ್ ಸ್ಟ್ರೋಕ್ (ರಕ್ತ ಹೆಪ್ಪುಗಟ್ಟುವಿಕೆ) ಕಾರಣವಾಗುತ್ತದೆ.
ಎಂಬಾಲಿಕ್ ಸ್ಟ್ರೋಕ್: ಈ ವಿಧದಲ್ಲಿ ಶರೀರದ ಯಾವುದಾದರೂ ಭಾಗದಲ್ಲಿ (ಸಾಮಾನ್ಯವಾಗಿ ಹೃದಯದಲ್ಲಿ) ರಕ್ತದ ಕರಣೆಗಳು ಉಂಟಾಗುತ್ತವೆ ಮತ್ತು ಅವು ರಕ್ತದ ಮೂಲಕ ಮಿದುಳಿಗೆ ಸಾಗಿ ರಕ್ತನಾಳವನ್ನು ನಿರ್ಬಂಧಿಸುವ ಮೂಲಕ ಪಾರ್ಶ್ವವಾಯುವನ್ನುಂಟು ಮಾಡುತ್ತವೆ.
ಥ್ರೊಂಬಾಟಿಕ್ ಸ್ಟ್ರೋಕ್: ಇಲ್ಲಿ ಮಿದುಳಿಗೆ ರಕ್ತವನ್ನು ಪೂರೈಸುವ ಒಂದು ಅಥವಾ ಹೆಚ್ಚಿನ ಅಪಧಮನಿಗಳಲ್ಲಿ ತಡೆಯಿಂದಾಗಿ ರಕ್ತಪೂರೈಕೆಗೆ ನಿರ್ಬಂಧವುಂಟಾಗುತ್ತದೆ.
2. ಹೆಮರೇಜ್ ಸ್ಟ್ರೋಕ್: ಮಿದುಳಿನ ರಕ್ತನಾಳವು ಒಡೆದಾಗ ಹೆಮರೇಜ್ ಸ್ಟ್ರೋಕ್ ಸಂಭವಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಸೆರೆಬ್ರಲ್ ಅನಿಯುರಿಸಂ (ಮಿದುಳಿನ ರಕ್ತನಾಳಗಳ ಒಡೆತ) ಸೇರಿದಂತೆ ರಕ್ತನಾಳಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುವ ಹಲವಾರು ಸಮಸ್ಯೆಗಳಿಂದ ಹೆಮರೇಜ್ ಅಥವಾ ರಕ್ತಸ್ರಾವವು ಉಂಟಾಗುತ್ತದೆ.
ಅಪಾಯದ ಅಂಶಗಳು
ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಅಪಧಮನಿ ಕಾಠಿಣ್ಯ, ಧೂಮಪಾನ, ದೈಹಿಕ ನಿಷ್ಕ್ರಿಯತೆ, ಹೃತ್ಕರ್ಣದ ಕಂಪನ ಮತ್ತು ಬೊಜ್ಜು.
ಮುಖ್ಯವಾಗಿ ವೃದ್ಧಾಪ್ಯವು ಪಾರ್ಶ್ವವಾಯುವನ್ನು ಉಂಟು ಮಾಡುವ ಅಪಾಯದ ಅಂಶಗಳಲ್ಲೊಂದಾಗಿದೆ. ಆದರೂ ಈಗಿನ ಪೀಳಿಗೆಯ ಜೀವನಶೈಲಿಯಲ್ಲಿಯ ಬದಲಾವಣೆಗಳಿಂದಾಗಿ ಯುವಜನರಲ್ಲಿಯೂ ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಿವೆ. ಮಧ್ಯವಯಸ್ಕರಲ್ಲಿ ಅಪಾಯದ ಅಂಶಗಳನ್ನು ಗುರುತಿಸಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದಿರಬಹುದು. ಆದ್ದರಿಂದ ಈ ವಯೋಗುಂಪಿನವರು ಆಗಾಗ್ಗೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಲಕ್ಷಣಗಳು
FAST (Face,Arms,Speech,Time to call emergency) ಈ ನಾಲ್ಕು ಅಕ್ಷರಗಳು ಮತ್ತು ಅವುಗಳು ಸೂಚಿಸುವುದನ್ನು ನೆನಪಿನಲ್ಲಿಟ್ಟುಕೊಂಡರೆ ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮತ್ತು ಅವುಗಳಿಗೆ ಸ್ಪಂದಿಸುವುದು ಸುಲಭವಾಗುತ್ತದೆ.
F: (Face) ಮುಖ ಜೋತು ಬೀಳುವುದು. ಪೀಡಿತ ವ್ಯಕ್ತಿಯನ್ನು ಮುಗುಳ್ನಗುವಂತೆ ಸೂಚಿಸಿ ಮುಖದ ಒಂದು ಪಾರ್ಶ್ವವು ಜೋತು ಬಿದ್ದಿದೆಯೇ ಎನ್ನುವುದನ್ನು ಪತ್ತೆ ಹಚ್ಚಬಹುದು.
A:(Arms) ತೋಳುಗಳಲ್ಲಿ ನಿಶ್ಶಕ್ತಿ. ಎರಡೂ ತೋಳುಗಳನ್ನು ಮೇಲಕ್ಕೆತ್ತುವಂತೆ ವ್ಯಕ್ತಿಗೆ ಸೂಚಿಸಿ. ಒಂದು ತೋಳು ಕೆಳಕ್ಕೆ ಜಗ್ಗುತ್ತಿದೆಯೇ ಎನ್ನುವುದನ್ನು ಗಮನಿಸಿ.
S:(Speech) ಮಾತನಾಡಲು ತೊಂದರೆ. ಸರಳವಾದ ವಾಕ್ಯವನ್ನು ಉಚ್ಚರಿಸುವಂತೆ ವ್ಯಕ್ತಿಗೆ ಸೂಚಿಸಿ. ಆತ ತೊದಲುತ್ತಿದ್ದಾನೆಯೇ ಎನ್ನುವುದನ್ನು ಗಮನಿಸಿ.
T:(Time to call emergency) ತುರ್ತು ಸೇವೆಗೆ ಕರೆ ಮಾಡುವ ಸಮಯ. ವ್ಯಕ್ತಿಯು ಮೇಲಿನ ಯಾವುದೇ ಲಕ್ಷಣವನ್ನು ತೋರಿಸುತ್ತಿದ್ದರೆ ತಕ್ಷಣವೇ ತುರ್ತು ಸೇವೆಗೆ ಕರೆ ಮಾಡಿ.
ಏಕಾಏಕಿ ತಲೆ ತಿರುಗುವುದು, ಸಮತೋಲನ ನಷ್ಟ ಮತ್ತು ನಡೆದಾಡಲು ಕಷ್ಟವಾಗುವುದು, ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದಿಢೀರ್ ದೃಷ್ಟಿನಾಶ, ಯಾವುದೇ ಕಾರಣವಿಲ್ಲದೆ ಹಠಾತ್ ತೀವ್ರ ತಲೆನೋವು, ಮುಖ, ತೋಳು ಅಥವಾ ಕಾಲಿನಲ್ಲಿ, ವಿಶೇಷವಾಗಿ ಶರೀರದ ಒಂದು ಪಾರ್ಶ್ವದಲ್ಲಿ ಹಠಾತ್ ಮರಗಟ್ಟುವಿಕೆ ಅಥವಾ ನಿಶ್ಶಕ್ತಿ, ಇತರರನ್ನು ಅರ್ಥಮಾಡಿಕೊಳ್ಳುವಲ್ಲಿ ಹಠಾತ್ ಗೊಂದಲ ಅಥವಾ ತೊಂದರೆ ಇವು ಪಾರ್ಶ್ವವಾಯುವಿನ ಇತರ ಲಕ್ಷಣಗಳಲ್ಲಿ ಸೇರಿವೆ.
ರೋಗನಿರ್ಣಯ ಹೇಗೆ ?
ಪ್ರಾಥಮಿಕವಾಗಿ ರೋಗಿಯಲ್ಲಿಯ ಲಕ್ಷಣಗಳು ಮತ್ತು ಕ್ಲಿನಿಕಲ್ ತಪಾಸಣೆಗಳ ಆಧಾರದಲ್ಲಿ ಪಾರ್ಶ್ವವಾಯುವನ್ನು ನಿರ್ಣಯಿಸಲಾಗುತ್ತದೆ. ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಮೂಲಕ ರೋಗವನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಇಸಿಜಿ, 2ಡಿ ಇಕೋ ಮತ್ತು ನೆಕ್ ವೆಸಲ್ ಡಾಪ್ಲರ್ ಇವು ಅಗತ್ಯವಾಗಬಹುದಾದ ಇತರ ಪರೀಕ್ಷೆಗಳಲ್ಲಿ ಸೇರಿವೆ.
ಚಿಕಿತ್ಸೆ
ಪಾರ್ಶ್ವವಾಯು ಪ್ರಕರಣದಲ್ಲಿ ‘ಸಮಯವು ಮಿದುಳು’ ಆಗಿದೆ. ಕೆಲವೇ ನಿಮಿಷಗಳಿಂದ ಗಂಟೆಗಳ ಅವಧಿಯಲ್ಲಿ ಪಾರ್ಶ್ವವಾಯು ವ್ಯಕ್ತಿಗೆ ಶಾಶ್ವತ ಹಾನಿಯನ್ನುಂಟು ಮಾಡಬಹುದು. ನೀವು ಎಷ್ಟು ಬೇಗ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತೀರಿ ಎನ್ನುವುದನ್ನು ರೋಗಕ್ಕೆ ಚಿಕಿತ್ಸೆ ಮತ್ತು ಫಲಿತಾಂಶವು ಅವಲಂಬಿಸಿರುತ್ತದೆ. ಸಾಧ್ಯವಾದಷ್ಟು ಶೀಘ್ರ ಚಿಕಿತ್ಸೆಯು ಮಿದುಳಿಗೆ ಹಾನಿಯ ಪ್ರಮಾಣವನ್ನು ಕನಿಷ್ಠಗೊಳಿಸುತ್ತದೆ ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಚಿಕಿತ್ಸೆಯು ಪಾರ್ಶ್ವವಾಯುವಿನ ವಿಧ (ಇಷೆಮಿಕ್ ಅಥವಾ ಹೆಮರೇಜ್)ವನ್ನು ಸಹ ಅವಲಂಬಿಸಿರುತ್ತದೆ.
ಪಾರ್ಶ್ವವಾಯುವನ್ನು ತಡೆಯುವುದು ಹೇಗೆ ?
ಹಲವಾರು ಕ್ರಮಗಳ ಮೂಲಕ ಪಾರ್ಶ್ವವಾಯುವನ್ನು ತಡೆಗಟ್ಟಬಹುದು. ಆರೋಗ್ಯಕರ ಆಹಾರ ಸೇವನೆ ಮುಖ್ಯವಾಗಿದೆ. ಆಹಾರದಲ್ಲಿ ಉಪ್ಪು ಕಡಿಮೆಯಿರಲಿ. ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸಿ.
ನಿಯಮಿತ ದೈಹಿಕ ಚಟುವಟಿಕೆಗಳು ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ ಹಾಗೂ ಹೃದಯ ಮತ್ತು ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತವೆ. 18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಬೇಕು. ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ದೂರವಿರಿ.
ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮತ್ತು ಬೊಜ್ಜಿನಂತಹ ಜೀವನಶೈಲಿ ರೋಗಗಳಿಗಾಗಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಇವುಗಳಲ್ಲಿ ಯಾವುದೇ ಒಂದು ರೋಗವು ಇದೆಯೆಂದಾದರೆ ವೈದ್ಯರ ಚಿಕಿತ್ಸಾ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿ.
ಡಾ. ಸಲ್ಮಾ ಸುಹಾನ
ಅಸಿಸ್ಟೆಂಟ್ ಪ್ರೊಫೆಸರ್, ಡಿಪಾರ್ಟ್‌ಮೆಂಟ್ ಆಫ್ ನ್ಯೂರೋಲಜಿ, ಯೆನೆಪೊಯ ವೈದ್ಯಕೀಯ ಕಾಲೇಜು, ದೇರಳಕಟ್ಟೆ.
ಕನ್ಸಲ್ಟಂಟ್ ನ್ಯೂರೋಲಜಿಸ್ಟ್, ಮೆಡಿ-ನರ್ವ್, ಮಂಗಳೂರು