ಹೊರ ಜಿಲ್ಲೆಗಳಿಂದ ಭತ್ತ ಖರೀದಿಗೆ ಅನುಮತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ: ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ
ಉಡುಪಿ, ಜ.14: ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯ ಸ್ಥಳೀಯ ಕುಚ್ಚಲಕ್ಕಿ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಯ ಭತ್ತವನ್ನು ಜಿಲ್ಲೆಯ ಬಹುತೇಕ ರೈತರು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿದ್ದು, ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಈ ಭತ್ತವನ್ನು ರಾಜ್ಯದ ಬೇರೆ ಜಿಲ್ಲೆಗಳಿಂದ ಖರೀದಿಸುವ ಕುರಿತಂತೆ ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನ ನೀಡಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಿಂದ ವೀಡಿಯೋ ಮೂಲಕ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿಯನ್ನು ನೀಡುವ ಕುರಿತಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರ, ಭತ್ತ ಸಾಮಾನ್ಯ ದರ 1,940 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ 1,960 ರೂ. ದರ ನಿಗದಿಪಡಿಸಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಸ್ಥಳೀಯ ಕುಚ್ಚಲಕ್ಕಿ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಸ್ಥಳೀಯವಾಗಿ ಖರೀದಿಸಿ, ಸಂಸ್ಕರಿಸಿ, ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ಬಳಸಲು ಅನುಮತಿ ನೀಡಿದೆ. ಇದು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದು, ಸ್ಥಳೀಯ ರೈತರಿಗೆ ಸಹ ತಮ್ಮ ಬೆಳೆಗೆ ಉತ್ತಮ ದರ ಪಡೆಯಲು ಸಾಧ್ಯವಾಗಿದೆ ಎಂದರು.
ಆದರೆ ಪ್ರಸ್ತುತ ವರ್ಷದಲ್ಲಿ ಕೇಂದ್ರದ ಆದೇಶ ಬರುವ ವೇಳೆಗೆ ಜಿಲ್ಲೆಯ ಬಹುತೇಕ ರೈತರು ತಾವು ಬೆಳೆದ ಭತ್ತವನ್ನು ಮಾರಾಟ ಮಾಡಿದ್ದು, ಇದರಿಂದ ಸ್ಥಳೀಯವಾಗಿ ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡಲು ಭತ್ತದ ಕೊರತೆಯಾಗುವುದರಿಂದ, ಇದೇ ತಳಿಯನ್ನು ಬೆಳೆದಿರುವ ರಾಜ್ಯದ ಶಿವಮೊಗ್ಗ, ಮಂಡ್ಯ, ಮೈಸೂರು ಮತ್ತಿತರ ಜಿಲ್ಲೆಗಳಿಂದ ಬೆಂಬಲ ಬೆಲೆ ಖರೀದಿಗೆ ಅನುಮತಿ ನೀಡುವ ಬಗ್ಗೆ ತಕ್ಷಣವೇ ಕೇಂದ್ರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಜಿಲ್ಲೆಯ ರೈತರು ತಮ್ಮಲ್ಲಿನ ಭತ್ತವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಫ್ರೂಟ್ಸ್ ತಂತ್ರಾಂಶದಲ್ಲಿ ತಕ್ಷಣದಿಂದಲೇ ನೊಂದಣಿ ಮಾಡಿ ಕೊಳ್ಳುವಂತೆ ತಿಳಿಸಿದ ಸಚಿವರು, ಭತ್ತವನ್ನು ಸಂಸ್ಕರಿಸುವ ಕುರಿತಂತೆ ಸ್ಥಳೀಯ ಅಕ್ಕಿ ಗಿರಣಿಗಳ ಮಾಲಕರೊಂದಿಗೆ ಶೀಘ್ರದಲ್ಲಿ ಚರ್ಚೆ ನಡೆಸುವಂತೆ ಆಹಾರ ಇಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಲ್ಲಿ ವರ್ಷಕ್ಕೆ ಅಗತ್ಯವಿರುವ ಸ್ಥಳಿಯ ಭತ್ತದ ಪ್ರಮಾಣ, ಇಲ್ಲಿ ಬೆಳೆಯುವ ಭತ್ತದ ಪ್ರಮಾಣ, ಕೊರತೆಯಾಗುವ ಭತ್ತದ ಪ್ರಮಾಣ ಮತ್ತು ಹೊರ ಜಿಲ್ಲೆಗಳಿಂದ ಖರೀದಿಗೆ ಅಗತ್ಯವಿರುವ ಭತ್ತದ ಪ್ರಮಾಣದ ಕುರಿತು ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಿಸುವಂತೆಯೂ ಅವರು ಸೂಚನೆ ನೀಡಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ರೈತರಿಂದ ಸಂಗ್ರಹಿಸುವ ಭತ್ತವನ್ನು ಸಂಗ್ರಹಿಸಿಡಲು ಮತ್ತು ಅದನ್ನು ಅಕ್ಕಿಯನ್ನಾಗಿ ಮಾರ್ಪಡಿಸಿ, ಪಡಿತರ ವ್ಯವಸ್ಥೆ ಯಲ್ಲಿ ವಿತರಿಸಲು ಜಿಲ್ಲೆಯಲ್ಲಿಯೇ ದಾಸ್ತಾನು ಮಾಡಲು ಅಗತ್ಯವಿರುವ ಸುಸಜ್ಜಿತ ಖಾಯಂ ಅಕ್ಕಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸೂಕ್ತ ಸ್ಥಳ ಗುರುತಿಸಿ,ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಕೋಟ ಅಧಿಕಾರಿಗಳಿಗೆ ತಿಳಿಸಿದರು.
ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ರೈತರು ಬೆಳೆದ ಭತ್ತವನ್ನು ಸ್ಥಳೀಯವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸುವುದರಿಂದ ರೈತರಿಗೂ ಲಾಭವಾಗುವ ಜೊತೆಗೆ ಸ್ಥಳೀಯ ಪಡಿತರ ಚೀಟಿದಾರರಿಗೆ ಉತ್ತಮ ಗುಣಮಟ್ಟದ ಕುಚ್ಚಲಕ್ಕಿಯನ್ನು ನೀಡಬಹುದಾಗಿದೆ. ಇದರಿಂದ ಮುಂದಿನ ದಿನದಲ್ಲಿ ರೈತರಿಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲು ಉತ್ತೇಜನ ದೊರೆಯುತ್ತದೆ ಎಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅವಿಭಜಿತ ದ.ಕ. ಜಿಲ್ಲೆಯ ಜನತೆಯ ಬಹು ವರ್ಷಗಳ ಈ ಬೇಡಿಕೆಯನ್ನು ಈಡೇರಿಸಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ನಡಹಳ್ಳಿ, ಉಪಾಧ್ಯಕ್ಷ ಕಿರಣ್ ಕೊಡ್ಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ನಿರ್ದೇಶಕಿ ಶಮ್ಲಾ ಇಕ್ಬಾಲ್, ಉಡುಪಿ ಜಿಪಂ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಆಹಾರ ಇಲಾಖೆ ಉಪನಿರ್ದೇಶಕ ಮೊಹಮದ್ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.