ಚಳಿಗಾಲದಲ್ಲಿ ಸಂದುನೋವುಗಳಿಂದ ಪಾರಾಗಲು ಪರಿಣಾಮಕಾರಿ ಮಾರ್ಗಗಳು
ವಯಸ್ಸು ಏನೇ ಆಗಿರಲಿ,ಬಹಳಷ್ಟು ಜನರು ಚಳಿಗಾಲದಲ್ಲಿ ಸಂದು ಅಥವಾ ಕೀಲು ನೋವುಗಳ ಬಗ್ಗೆ ದೂರುತ್ತಿರುತ್ತಾರೆ. ಈ ನೋವಿಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ ಅದನ್ನು ವಿವರಿಸುವ ಕೆಲವು ಸಿದ್ಧಾಂತಗಳಿವೆ. ಚಳಿಗಾಲದಲ್ಲಿ ಶರೀರದ ಒಟ್ಟಾರೆ ಉಷ್ಣತೆಯನ್ನು ಕಾಯ್ದುಕೊಳ್ಳಲು ರಕ್ತವು ಕೈಕಾಲುಗಳಿಂದ ದೂರವಾಗಿ ಹರಿಯಬಹುದು ಮತ್ತು ಇದು ಸ್ನಾಯು ಮತ್ತು ಕೀಲು ನೋವುಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಮುಂಬೈನ ಎಸ್.ಎಲ್.ರಹೇಜಾ ಆಸ್ಪತ್ರೆಯ ಮೂಳೆತಜ್ಞ ಡಾ.ಸಿದ್ಧಾರ್ಥ ಎಂ.ಶಾ .
ವೈದ್ಯರು ಹೇಳುವಂತೆ ಕಡಿಮೆ ತಾಪಮಾನದಲ್ಲಿ ಸ್ನಾಯುಗಳೂ ಬಿಗಿದುಕೊಳ್ಳುತ್ತವೆ ಮತ್ತು ಇದು ಪೆಡಸಾಗುವಿಕೆ ಹಾಗೂ ನೋವಿಗೆ ಕಾರಣವಾಗುತ್ತದೆ. ವಾಯುಮಂಡಲದ ಒತ್ತಡದ ಕುಸಿತವು ಕೀಲುಗಳು,ಸ್ನಾಯುಗಳು ಮತ್ತು ಅಸ್ಥಿರಜ್ಜುಗಳ ಊತಕ್ಕೆ ಕಾರಣವಾಗುತ್ತದೆ ಮತ್ತು ಇದು ನೋವನ್ನುಂಟು ಮಾಡುತ್ತದೆ ಎನ್ನುವುದು ಇನ್ನೊಂದು ಸಿದ್ಧಾಂತವಾಗಿದೆ.
ಕೀಲುಗಳನ್ನು ಪೋಷಿಸುವ ಮತ್ತು ನಯಗೊಳಿಸುವ ಸೈನೋವಿಯಲ್ ದ್ರವವು ದಪ್ಪವಾಗುತ್ತದೆ ಮತ್ತು ಇದು ಸಂದುನೋವುಗಳಿಗೆ ಕಾರಣವಾಗಬಹುದು. ಅಲ್ಲದೆ ಕಡಿಮೆ ದೈಹಿಕ ಚಟುವಟಿಕೆಗಳು ಮತ್ತು ಸೂರ್ಯನ ಬಿಸಿಲಿಗೆ ಸೀಮಿತ ಒಡ್ಡುಕೊಳ್ಳುವಿಕೆಯೂ ವಿಟಾಮಿನ್ ಡಿ ಕೊರತೆಗೆ ಕಾರಣವಾಗಬಹುದು ಮತ್ತು ಇದು ನೋವು ಹಾಗೂ ಪೆಡಸಿಗೆ ಕಾರಣವಾಗುತ್ತದೆ ಎಂದು ಶಾ ಹೇಳಿದರು.
►►ಪರಿಹಾರ ಹೇಗೆ?
ಸಂದುನೋವಿನಿಂದ ಪಾರಾಗಲು ಡಾ.ಶಾ ಸೂಚಿಸಿರುವ ಸರಳ ಉಪಾಯಗಳಿಲ್ಲಿವೆ...
► ನಿಮ್ಮನ್ನು ಬೆಚ್ಚಗಿರಿಸಿಕೊಳ್ಳಿ: ಬಟ್ಟೆಗಳ ಸಾಕಷ್ಟು ಪದರಗಳು ಶರೀರದ ಉಷ್ಣತೆಯನ್ನು ಉಳಿಸಿಕೊಳ್ಳುತ್ತವೆ ಮತ್ತು ಸಂದುಗಳನ್ನು ಬೆಚ್ಚಗಿರಿಸುತ್ತವೆ. ಇದು ನೋವಿನಿಂದ ಪರಿಹಾರವನ್ನು ನೀಡುತ್ತದೆ.
► ನಿಯಮಿತ ವ್ಯಾಯಾಮ: ನಿಯಮಿತವಾಗಿ ವ್ಯಾಯಾಮ ಮಾಡುವುದು ನಿಮ್ಮ ಕೀಲುಗಳನ್ನು ಮೃದುವಾಗಿರಿಸಲು ಮತ್ತು ನಮ್ಯತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದು ಕೀಲುಗಳನ್ನು ನಯಗೊಳಿಸಲು ನೆರವಾಗುತ್ತದೆ ಮತ್ತು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಗಾಯಗಳನ್ನು ತಡೆಯಲು ವ್ಯಾಯಾಮಕ್ಕೆ ಮುನ್ನ ವಾರ್ಮ್ ಅಪ್ ಮಾಡಿಕೊಳ್ಳಲು ಮರೆಯಬೇಡಿ.
► ಆರೋಗ್ಯಕರ ಶರೀರ ತೂಕ: ಚಳಿಗಾಲದಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಮತ್ತು ಕಡಿಮೆ ದೈಹಿಕ ಚಟುವಟಿಕೆಗಳು ಶರೀರದ ತೂಕ ಹೆಚ್ಚಲು ಕಾರಣವಾಗುತ್ತವೆ. ಇದು ಮಂಡಿಗಳಿಂತಹ ಪ್ರಮುಖ ಕೀಲುಗಳ ಮೇಲಿನ ಭಾರವನ್ನು ಹೆಚ್ಚಿಸುತ್ತದೆ ಮತ್ತು ಸಂದುನೋವಿಗೆ ಅಥವಾ ಇದ್ದ ನೋವು ಹೆಚ್ಚಾಗಲು ಕಾರಣವಾಗುತ್ತದೆ. ಶರೀರದ ತೂಕವನ್ನು ಇಳಿಸಿಕೊಳ್ಳುವುದು ನೋವನ್ನು ತಡೆಯಲು ನೆರವಾಗುತ್ತದೆ.
► ಜಲೀಕರಣ ಮತ್ತು ಸಮತೋಲಿತ ಆಹಾರ: ನಿರ್ಜಲೀಕರಣವು ಬಳಲಿಕೆ ಮತ್ತು ಸ್ನಾಯುನೋವಿಗೆ ಕಾರಣವಾಗಬಲ್ಲದು. ಸಾಕಷ್ಟು ದ್ರವಗಳನ್ನು ಸೇವಿಸುವುದು ಅಗತ್ಯ. ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿರುವ ಆರೋಗ್ಯಕರ ಸಮತೋಲಿತ ಆಹಾರವು ಮೂಳೆ ಮತ್ತು ಕೀಲುಗಳ ಆರೋಗ್ಯಕ್ಕೆ ಮುಖ್ಯವಾಗಿದೆ. ಅತಿಯಾಗಿ ಉಪ್ಪು, ಸಕ್ಕರೆ, ಸಂಸ್ಕರಿತ ಕಾರ್ಬೊಹೈಡ್ರೇಟ್ಗಳು ಮತ್ತು ಸಂಸ್ಕರಿತ ಆಹಾರಗಳ ಸೇವನೆಯಿಂದ ದೂರವಿರಿ. ನಿಮ್ಮ ಆಹಾರದ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ದೊರೆಯುತ್ತಿಲ್ಲ ಎಂದು ನೀವು ಭಾವಿಸಿದ್ದರೆ ಪೂರಕಗಳ ಸೇವನೆಯ ಕುರಿತು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.
► ಶಾಖದ ಬಳಕೆ: ಹಾಟ್ ವಾಟರ್ ಬ್ಯಾಗ್ ಅಥವಾ ಇಲೆಕ್ಟ್ರಿಕ್ ಹೀಟಿಂಗ್ ಪ್ಯಾಡ್ ಮೂಲಕ ನೋಯುತ್ತಿರುವ ಕೀಲುಗಳಿಗೆ ಶಾಖ ನೀಡುವುದು ನೋವನ್ನು ಶಮನಿಸುತ್ತದೆ. ಬಿಸಿನೀರಿನ ಸ್ನಾನವೂ ಸ್ನಾಯುಗಳ ವಿಶ್ರಾಂತಿಗೆ ನೆರವಾಗುತ್ತದೆ. ತೀವ್ರ ಗಾಯಗಳು ಅಥವಾ ಉಳುಕುಗಳಿದ್ದರೆ ಮಂಜುಗಡ್ಡೆಯ ಪ್ಯಾಕ್ ಬಳಸಬೇಕು,ಶಾಖವನ್ನಲ್ಲ.