ಹಲ್ಲುಗಳು ಬಿಳಿಯಾಗಬೇಕೇ? ಆಯುರ್ವೇದದಲ್ಲಿದೆ ಉಪಾಯ

Update: 2022-01-29 13:16 GMT

ನಾವೆಲ್ಲ ನಮ್ಮ ಚರ್ಮ ಮತ್ತು ಕೂದಲಿನ ಬಗ್ಗೆ ಹೆಚ್ಚಿನ ಮೋಹವನ್ನು ಹೊಂದಿದ್ದೇವೆ, ಆದರೆ ಹಲ್ಲುಗಳತ್ತ ಗಮನ ನೀಡುವುದಿಲ್ಲ ಮತ್ತು ತನ್ಮೂಲಕ ಹಲ್ಲುಗಳ ಆರೋಗ್ಯವನ್ನು ಕಡೆಗಣಿಸುತ್ತೇವೆ. ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗುವುದು ಎಷ್ಟು ಮುಖ್ಯವೋ ಮನೆಯಲ್ಲಿ ನಮ್ಮ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೂ ಅಷ್ಟೇ ಮುಖ್ಯವಾಗಿದೆ.

ಆಯುರ್ವೇದ ತಜ್ಞೆ ಡಾ.ದೀಕ್ಷಾ ಭಾವಸಾರ ಅವರು ಹಲ್ಲುಗಳ ನೈರ್ಮಲ್ಯಕ್ಕೆ ನೆರವಾಗಬಲ್ಲ ಕೆಲವು ಸರಳ ಪರಿಹಾರಗಳನ್ನು ತನ್ನ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಸೂಚಿಸಿದ್ದಾರೆ. ಬೋನಸ್: ಈ ಪರಿಹಾರಗಳು ಹಲ್ಲುಗಳನ್ನು ಬಿಳಿಯಾಗಿಸಲೂ ನೆರವಾಗುತ್ತವೆ.

ಐದು ಪರಿಣಾಮಕಾರಿ ನೈಸರ್ಗಿಕ ಆಯುರ್ವೇದ ಟಿಪ್ಸ್ ಇಲ್ಲಿವೆ:

►ಆಯಿಲ್ ಪುಲ್ಲಿಂಗ್ (Oil pulling): ಬಾಯಿಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಮುಕ್ಕಳಿಸುವುದನ್ನು ಆಯಿಲ್ ಪುಲ್ಲಿಂಗ್ ಎಂದು ಕರೆಯಲಾಗುತ್ತದೆ. ಅದು ವಸಡುಗಳು ಮತ್ತು ಹಲ್ಲುಗಳಲ್ಲಿಯ ಸೂಕ್ಷ್ಮಾಣುಜೀವಿಗಳನ್ನು ನಿರ್ಮೂಲನಗೊಳಿಸುತ್ತದೆ. ಬಾಯಿ ಹುಣ್ಣುಗಳನ್ನು ಶಮನಗೊಳಿಸುವ ಜೊತೆಗೆ ಬಾಯಿಯ ಸ್ನಾಯುಗಳಿಗೆ ವ್ಯಾಯಾಮವನ್ನೂ ನೀಡುತ್ತದೆ ಮತ್ತು ಅವುಗಳನ್ನು ಬಲಗೊಳಿಸುತ್ತದೆ.

►ಬೇವಿನ ಮತ್ತು ಕರಿಜಾಲಿ ಕಡ್ಡಿಗಳಿಂದ ಹಲ್ಲುಜ್ಜಿ

ಬೇವು ಮತ್ತು ಕರಿಜಾಲಿ ಸೂಕ್ಷ್ಮಜೀವಿ ನಿಗ್ರಹ ಗುಣವನ್ನು ಹೊಂದಿವೆ. ಈ ಮರಗಳ ರೆಂಬೆಯಿಂದ ಕಡ್ಡಿಗಳನ್ನು ಮಾಡಿಕೊಂಡು ಅವುಗಳನ್ನು ಅಗಿಯುತ್ತ ಹಲ್ಲುಜ್ಜುತ್ತಿದ್ದರೆ ಬ್ಯಾಕ್ಟೀರಿಯಾ ನಿರೋಧಕ ರಾಸಾಯನಿಕಗಳು ಬಿಡುಗಡೆಗೊಳ್ಳುತ್ತವೆ ಮತ್ತು ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.

►ನಾಲಿಗೆಯ ಸ್ವಚ್ಛತೆ ಕಾಯ್ದುಕೊಳ್ಳಿ

ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ. ಪಾಚಿ ಸಂಗ್ರಹಗೊಳ್ಳಲು ನೆರವಾಗುವ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುವ ಎಲ್ಲ ವಿಷವಸ್ತುಗಳನ್ನು ಟಂಗ್ ಕ್ಲೀನರ್ ಬಳಸುವ ಮೂಲಕ ನಿವಾರಿಸಬಹುದು.

►ಹರ್ಬಲ್ ರಿನ್ಸ್ ಬಳಸಿ

ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು 'ಮೌತ್ ರಿನ್ಸ್'(mouth rinse) ಬಳಸುವಂತೆ ಹೆಚ್ಚಿನ ದಂತವೈದ್ಯರು ಸೂಚಿಸುತ್ತಾರೆ. ಡಾ. ಭಾವಸಾರ ಹೇಳುವಂತೆ ತ್ರಿಫಲ ಅಥವಾ ಯಷ್ಟಿಮಧುವಿನಿಂದ ತಯಾರಿಸಿದ ಕಷಾಯ ಅತ್ಯುತ್ತಮ ಮೌತ್ ರಿನ್ಸರ್ ಆಗಿದೆ. ಇದು ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳುವ ಜೊತೆಗೆ ಬಾಯಿಹುಣ್ಣುಗಳ ನಿವಾರಣೆಗೆ ನೆರವಾಗುತ್ತದೆ.

►ದಿನಕ್ಕೆರಡು ಬಾರಿ ಹಲ್ಲುಜ್ಜಿ

ಪ್ರತಿ ಊಟದ ನಂತರ,ವಿಶೇಷವಾಗಿ ಚಾಕೊಲೇಟ್ಗಳಂತಹ ಅಂಟು ಆಹಾರ ವಸ್ತುಗಳನ್ನು ಸೇವಿಸಿದ ಬಳಿಕ ಹಲ್ಲುಗಳನ್ನು ಕಡ್ಡಾಯವಾಗಿ ಉಜ್ಜಬೇಕು. ದಿನಕ್ಕೆ ನಾಲ್ಕೈದು ಸಲ ಹಲ್ಲುಗಳನ್ನು ಉಜ್ಜುವುದು ಕಾರ್ಯಸಾಧ್ಯವಲ್ಲ,ಹೀಗಾಗಿ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ,ಹೀಗೆ ಕನಿಷ್ಠ ಎರಡು ಸಲ ಹಲ್ಲುಗಳನ್ನು ಉಜ್ಜುವುದು ಸಮಸ್ಯೆಯೇನಲ್ಲ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News