ಫೆ.14ರಿಂದ 19ರವರೆಗೆ ಉಡುಪಿ ಜಿಲ್ಲೆಯ ಪ್ರೌಢಶಾಲೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ
Update: 2022-02-13 04:50 GMT
ಉಡುಪಿ, ಫೆ.13: ಕೇಸರಿ ಶಾಲು-ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತ ಫೆ.14ರಿಂದ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. ಆದೇಶ ಹೊರಡಿಸಿದ್ದಾರೆ.
144 ಸೆಕ್ಷನ್ ನಡಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತಲ 200 ಮೀ. ವ್ಯಾಪ್ತಿಯಲ್ಲಿ ಫೆ.14ರ ಬೆಳಗ್ಗೆ 6ರಿಂದ ಫೆ.19ರ ಸಂಜೆ 6 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶದಂತೆ ಪ್ರೌಢಶಾಲೆಗಳ 200 ಮೀ. ವ್ಯಾಪ್ತಿಯಲ್ಲಿ ಕಾನೂನು ಭಂಗವನ್ನುಂಟು ಮಾಡುವ ಉದ್ದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದಕ್ಕೆ ನಿರ್ಬಂಧವಿರಲಿದೆ. ಸಾರ್ವಜನಿಕ ಮೆರವಣಿಗೆ, ರ್ಯಾಲಿ, ರಾಜಕೀಯ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.