ಉಡುಪಿ; ಪೋಕ್ಸೋ ಪ್ರಕರಣದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ಉಡುಪಿ, ಮಾ.7: ಏಳು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿ ಮಗುವಿನ ಜನ್ಮ ನೀಡುವಂತೆ ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಇಂದು 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಬಾಗಲಕೋಟೆಯ ಮಲ್ಲಪ್ಪ ಸಿದ್ದಪ್ಪ ಚಲವಾದಿ (45) ಶಿಕ್ಷೆಗೆ ಗುರಿಯಾಗಿರುವ ಆರೋಪಿ.
2015ರಲ್ಲಿ ಉಡುಪಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮಲ್ಲಪ್ಪ, ಅಪ್ರಾಪ್ತೆಯನ್ನು ಪುಸಲಾಯಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಇದರಿಂದ ಆಕೆ ಗರ್ಭಿಣಿ ಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು ಎಂದು ದೂರಲಾಗಿದೆ.
ಬಳಿಕ ಆರೋಪಿ ಆಕೆಯನ್ನು ಗೋವಾ ಮುಂತಾದ ಕಡೆಗಳಿಗೆ ಕರೆದುಕೊಂಡು ಹೋಗಿ ನಂತರ ಆಕೆ ಮತ್ತು ಮಗುವನ್ನು ಬಾಗಲಕೋಟೆಯಲ್ಲಿ ಬಿಟ್ಟು ತಲೆ ಮರೆಸಿಕೊಂಡಿದ್ದನು. ಈ ವಿಚಾರ ತಿಳಿದ ಬಾಗಲಕೋಟೆಯ ಮಹಿಳಾ ರಕ್ಷಣಾ ಘಟಕವು ಕೂಡಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿತು.
ಈ ಪ್ರಕರಣವು ಸ್ಥಳದ ಆಧಾರದ ಮೇಲೆ ಉಡುಪಿ ಮಹಿಳಾ ಠಾಣೆಗೆ ವರ್ಗಾವಣೆಗೊಂಡಿದ್ದು, ಪ್ರಕರಣದ ತನಿಖೆ ಮುಂದುವರೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಪೊಲೀಸ್ ನಿರೀಕ್ಷಕ ನವೀನ್ ಚಂದ್ರ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 43 ಸಾಕ್ಷಿದಾರರ ಪೈಕಿ 18 ಮಂದಿಯ ವಿಚಾರಣೆ ನಡೆಸಲಾಗಿತ್ತು. ಸಂತ್ರಸ್ತೆ ಯುವತಿ ಸಹಿತ ಪ್ರಮುಖ ಸಾಕ್ಷಿಗಳು ಅಭಿಯೋಜನೆಗೆ ಪರ ಸಾಕ್ಷಿ ನುಡಿದಿದ್ದವು.
ನೊಂದ ಬಾಲಕಿ ಮತ್ತು ಆರೋಪಿ ಹಾಗೂ ಆಕೆಗೆ ಜನಿಸಿದ ಮಗುವಿನ ಡಿಎನ್‌ಎ ವರದಿ ಕೂಡ ಅಭಿಯೋಜನೆಗೆ ಪೂರಕವಾಗಿದ್ದು, ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿದೆ.
ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳ ಸಜೆ ವಿಧಿಸಲಾಗಿದೆ. ನೊಂದ ಬಾಲಕಿಗೆ ಪರಿಹಾರ 5 ಲಕ್ಷ ರೂ. ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಅಭಿಯೋಜನೆ ಪರವಾಗಿ ವಾದಿಸಿದ್ದರು.